ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೊಡ್ಡಗೌಡ್ರು ಮುದ್ದೆಯನ್ನಲ್ಲ ಜನರನ್ನೇ ನುಂಗಿದ್ದಾರೆ!

By Srinath
|
Google Oneindia Kannada News

ಬೆಂಗಳೂರು, ಫೆ.25: ರಾಜ್ಯ ವಿಧಾನಸಭೆಯ ಮೇಲ್ಮನೆ/ಕೆಳಮನೆಗಳಲ್ಲಿ ಸದನ ಸ್ವಾರಸ್ಯಗಳಿಗೆ ಎಂದೂ ಕೊರತೆಯಾಗಿಲ್ಲ. ಸದಾ ತಮ್ಮ ಅನುಭವಾಮೃತ ಹರಿಯಬಿಡುವ ವೈಎಸ್ವಿ ದತ್ತಾ ಅವರು ನಿನ್ನೆ ವಿಧಾನಸಭೆಯಲ್ಲಿ ವಿಷಯವೊಂದನ್ನು ಸೀರಿಯಸ್ಸಾಗಿಯೇ ಮಂಡಿಸಿದ್ದಾರಾದರೂ ಅದು ಲಘುಹಾಸ್ಯಕ್ಕೆ ತಿರುಗಿದೆ.

ತಮ್ಮ ಜಾತ್ಯಾತೀತ ಪಕ್ಷದ ಪ್ರಶ್ನಾತೀತ ನಾಯಕ ದೇವೇಗೌಡರ ಬಗ್ಗೆ ಮತ್ತು ಅವರು ಮುದ್ದೆ (finger millet balls) ತಿನ್ನುವ ಬಗ್ಗೆ ವೈಎಸ್ವಿ ದತ್ತಾ ಅವರು ಹೆಮ್ಮೆಯಿಂದ ಹೇಳಲು ಹೊರಟಾಗ ಅಂತಹ ಸಮಯಕ್ಕೇ ಕಾಯುತ್ತಿದ್ದ ಕೆಲ ನಾಯಕರು ಗೌಡರ ವಿಷಯದಲ್ಲಿ ನುಂಗಿಕೊಂಡಿದ್ದ ಸಿಟ್ಟುಸೆಡವನ್ನು ಹೊರಹಾಕಿ, ಹಗುರವಾದರು.

ಇದೇ ವೇಳೆ, ಸಿಎಂ ಸಿದ್ದು ಸಂಪುಟದಲ್ಲಿ ಸಚಿವೋತ್ತಮ ಎಸಿಕೊಂಡಿರುವ ಆರೋಗ್ಯ ಸಚಿವ ಯುಟಿ ಖಾದರ್ ಅವರು ಪಕ್ಷಾತೀತವಾಗಿ ಎಲ್ಲ ಶಾಸಕರಿಗೂ ಪಂಚಕರ್ಮ ಮಾಡಿಸುವುದಾಗಿ ಘೋಷಿಸಿದ್ದಾರೆ. ಅದಾದನಂತರ, ಸಿದ್ದು ಗಡ್ಡವನ್ನು (ಚರ್ಚೆಗೆ) ಎಳೆದ ಪ್ರಸಂಗವೂ ನಡೆದಿದೆ.

ದೇವೇಗೌಡರು ಮತ್ತು ರಾಗಿಮುದ್ದೆ ಬಗ್ಗೆ ಪುಂಖಾನುಪುಂಖ ಕಥೆ

ದೇವೇಗೌಡರು ಮತ್ತು ರಾಗಿಮುದ್ದೆ ಬಗ್ಗೆ ಪುಂಖಾನುಪುಂಖ ಕಥೆ

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಮತ್ತು ರಾಗಿಮುದ್ದೆ ಬಗ್ಗೆ ಪುಂಖಾನುಪುಂಖ ಕಥೆಗಳಿಗೇನೂ ಕೊರತೆಯಿಲ್ಲ. ಅದರ ಬಗ್ಗೆಯೇ ನಿನ್ನೆ ವೈಎಸ್ವಿ ದತ್ತಾರು ಮಾತನಾಡುತ್ತಾ 'ಅದು 1995-96ರ ದಿನಗಳು, ಅಂದರೆ ಗೌಡರು ಪ್ರಧಾನಿಯಾಗಿದ್ದ ದಿನಗಳು. ಆ ಸಂದರ್ಭದಲ್ಲಿ ಐಎಎಫ್ ಅಧಿಕಾರಿಗಳು ಭಾರತಕ್ಕೆ ಸಾಲ ನೀಡುವ ಸಂಬಂಧ ಚರ್ಚೆಗೆ ಬಂದಿದ್ದರು. ಆಗ ಗೌಡರು ಊಟಕ್ಕೆಂದು ತಮ್ಮ ಮುಂದೆ ತಟ್ಟೆ ಹಾಕಿಕೊಂಡು ಕುಳಿತಿದ್ದರು. ಎಂದಿನಂತೆ, ತಟ್ಟೆಯಲ್ಲಿ ರಾಗಿ ಮುಂದೆ ಕುಳಿತಿತ್ತು' ಆದರೆ ಐಎಎಫ್ ಅಧಿಕಾರಿಗಳ ಕಣ್ಣು ಆ ಮುದ್ದೆ ಮೇಲೆ ನೆಟ್ಟಿತ್ತು. ಗೌಡರು ಅದನ್ನು ಅಗೆದು ನುಂಗುತ್ತಾರೋ, ಅಥವಾ ಹಾಗೆಯೇ ಗುಳುಂ ಎಂದು ನುಂಗಿತ್ಥಾರೋ?' ಎಂದು ಕುತೂಹಲದಿಂದ ನೋಡುತ್ತಿದ್ದರು' ಎಂದು ದತ್ತಾ ಹೇಳುತ್ತಿದ್ದಂತೆ

ಗೌಡರು ಏನೇನು ನುಂಗಿದ್ದಾರೆ? ಬಿಡಿಸಿ ಹೇಳಿ- ಬಿಆರ್ ಪಾಟೀಲ

ಗೌಡರು ಏನೇನು ನುಂಗಿದ್ದಾರೆ? ಬಿಡಿಸಿ ಹೇಳಿ- ಬಿಆರ್ ಪಾಟೀಲ

ಮುದ್ದೆ ನುಂಗುವ ವಿಷಯದಲ್ಲಿ ಮಧ್ಯೆ ಬಾಯಿಹಾಕಿದ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು 'ನನಗೆ ಮುದ್ದೆ ತಿನ್ನೋಕೆ ಬರೋಲ್ಲ. ನಾನಂತೂ ಅಗಿದಗಿದೆ ತಿನ್ನೋದು' ಎಂದು ಬಾಯಿ ಚಪ್ಪರಿಸಿದರು.

ಆಗ ದಿಢಿಗ್ಗನೆ ಎದ್ದು ನಿಂತ ಕೆಜೆಪಿಯ ಶಾಸಕ ಬಿ ಆರ್ ಪಾಟೀಲ ಅವರು ದೇವೇಗೌಡರು ಏನೇನು ನುಂಗಿದ್ದಾರೆ? ಅದನ್ನು ಸ್ವಲ್ಪ ಬಿಡಿಸಿ ಹೇಳಿ ಎಂದು ದತ್ತಾಗೆ ದುಂಬಾಲು ಬಿದ್ದರು. ಪ್ರಶ್ನೆಯಲ್ಲಿನ ಒಳಾಂತರ್ಯ ಅರಿತ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಮುಖ್ಯ ಸಚೇತಕ ಅಶೋಕ್ ಪಟ್ಟಣ ಅವರು 'ಗೌಡರು ಬಹಳ ಜನ ಲೀಡರುಗಳನ್ನು ನುಂಗಿದ್ದಾರೆ. ಅದರ ಬಗ್ಗೆಯೂ ವಸಿ ಹೇಳಿ' ಎಂದು ಕಾಲೆಳೆದರು.

ಇದಕ್ಕೆ ಜೆಡಿಎಸ್ ಶಾಶಕರು ಸಹಜವಾಗಿಯೇ ಆಕ್ರೋಶ ವ್ಯಕ್ತಪಡಿಸಿದರು. ಮಾಜಿ ಪ್ರಧಾನಿಯ ಬಗ್ಗೆ ಹೀಗೆಲ್ಲಾ ಮಾತನಾಡುವುದು ತರವಲ್ಲ ಎಂದು ಗುಡುಗಿದರು. ಇವರಿಬ್ಬರ ಹೇಳಿಕೆಯನ್ನು ಕಡತದಿಂದ ತೆಗೆದುಹಾಕಬೇಕು ಎಂದು ಒತ್ತಾಯಿಸಿದರು. ಆದರೆ ಸ್ಪೀಕರ್ ಅದಕ್ಕೆ ಸೊಪ್ಪು ಹಾಕಲಿಲ್ಲ. ಇದರಿಂದ ವೈಎಸ್ವಿ ದತ್ತಾ ಸಹ ಸಿಟ್ಟಾಗಿದ್ದರು.

ಇನ್ನು, ಸಿದ್ದರಾಮಯ್ಯ ಕುರುಚಲು ಗಡ್ಡಕ್ಕೆ ಕೈಹಾಕುವುದಾದರೆ

ಇನ್ನು, ಸಿದ್ದರಾಮಯ್ಯ ಕುರುಚಲು ಗಡ್ಡಕ್ಕೆ ಕೈಹಾಕುವುದಾದರೆ

ಕ್ರಾಂತಿಕಾರಿ ವಿಚಾರಧಾರೆ ಮತ್ತು ತಮ್ಮ ವಿಶಿಷ್ಟ ವ್ಯಕ್ತಿತ್ವಕ್ಕೆ ನಿದರ್ಶನವಾಗಿ ಮೊಗದ ಮೇಲೆ ಸದಾ ಕುರುಚಲು ಗಡ್ಡವನ್ನು ಹೊತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇತ್ತೀಚೆಗೆ ಗಡ್ಡ ತೆಗೆದು ಟ್ರಿಮ್ ಮಾಡಿಸಿಕೊಳ್ಳುತ್ತಿದ್ದಾರೆ. ಇದೂ ಸಹ, ಕೆಜೆಪಿಯಲ್ಲಿ ಉಳಿದುಕೊಂಡಿರುವ ಇಬ್ಬರು ಶಾಸಕರ ಪೈಕಿ ಒಬ್ಬರಾದ ಬಿಆರ್ ಪಾಟೀಲ ಅವರ ಗಮನ ಸೆಳೆದಿದೆ.

ಮಾಜಿ ಪ್ರಧಾನಿ ದಿವಂಗತ ಚಂದ್ರಶೇಖರ್, ಲಿನಿನ್ ಸೇರಿದಂತೆ ಹಲವು ಕ್ರಾಂತಿಕಾರಿ ಗಡ್ಡಧಾರಿಗಳು, ಅದೇ ವಿಚಾರಧಾರೆಯ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗುತ್ತಿದ್ದಂತೆ ತಮ್ಮ ಗಡ್ಡ ತೆಗೆಸಿದ್ದಾರೆ ಏಕೆ? ಇದರರ್ಥ ಏನು? ಎಂಬ ಬಿಲಿಯನ್ ಡಾಲರ್ ಪ್ರಶ್ನೆಯನ್ನು ಸದನದ ಮುಂದಿಟ್ಟರು.

ಗಡ್ಡ ಬೆಳ್ಳಗಾಗಿತ್ತು. ಅದ್ಕೇ ಬೋಳ್ಸಿಬಿಟ್ಟೆ- ಸಿದ್ದರಾಮಯ್ಯ

ಗಡ್ಡ ಬೆಳ್ಳಗಾಗಿತ್ತು. ಅದ್ಕೇ ಬೋಳ್ಸಿಬಿಟ್ಟೆ- ಸಿದ್ದರಾಮಯ್ಯ

ಇದಕ್ಕೆ ಶಿಸ್ತಾಗಿ ಉತ್ತರಿಸಿದ ಸಿದ್ದರಾಮಯ್ಯನವರು 'ಎಲ್ಲವೂ ಬೆಳ್ಳಗಾಗಿದ್ದವು. ಅದಕ್ಕೇ ಬೋಳಿಸಿಬಿಟ್ಟೆ' ಎಂದು ಕ್ಲುಪ್ತವಾಗಿ ಹೇಳಿದರು.

ಆದರೂ ಸುಮ್ಮನಾಗದ ಬಿಆರ್, ಬೆಳ್ಳಗಾಗಿದ್ದರೆ ಥರಹೇವಾರಿ ಬಣ್ಣ ಬಳಸಿಕೊಳ್ಳಬಹುದಿತ್ತು. ಆದರೆ ಗಡ್ಡವನ್ನೇ ತೆಗೆಸಿಬಿಟ್ಟಿದ್ದೀರಿ. ಇದರಿಂದ ನಿಮ್ಮಲ್ಲಿದ್ದ ಕ್ರಾಂತಿಕಾರಿ ವಿಚಾರಧಾರೆ ಮರೆಯಾದ ಭಾವನೆ ಮೂಡುತ್ತಿದೆ ಎಂದು ಸಿದ್ದುಗೆ ಮತ್ತೊಮ್ಮೆ ಗುದ್ದುಕೊಟ್ಟರು.

ಆರೋಗ್ಯ ಸಚಿವರಿಂದ ಶಾಸಕರಿಗೆ ಆರೋಗ್ಯಕರ ಸುದ್ದಿ

ಆರೋಗ್ಯ ಸಚಿವರಿಂದ ಶಾಸಕರಿಗೆ ಆರೋಗ್ಯಕರ ಸುದ್ದಿ

ಪತ್ರಿಕೆಗಳಲ್ಲಿ ಆಗಾಗ ತುಣುಕು ಸುದ್ದಿಯಾಗಿ ಉಚಿತ ಪಂಚಕರ್ಮ ಶಿಬಿರ ಎಂಬುದನ್ನು ನೋಡಿರುತ್ತೀರಿ. ಆದರೆ ಶಾಸಕರೆನಿಸಿಕೊಂಡವರಿಗೆ ಅಲ್ಲಿಗೆಲ್ಲಾ ಹೋಗಿ ಆರೋಗ್ಯ ಸುಧಾರಿಸಿಕೊಳ್ಳುವ ಕರ್ಮ ಇರುವುದಿಲ್ಲ. ಆದರೆ ಬೇರೆಲ್ಲಿ ಹೋಗುವುದು? ಇದನ್ನು ಅರ್ಥ ಮಾಡಿಕೊಂಡಿರುವ ಆರೋಗ್ಯ ಸಚಿವ ಖಾದರ್ ಅವರು ಶಾಸಕರ ಭವನದಲ್ಲೇ ಪಂಚಕರ್ಮ ಚಿಕಿತ್ಸೆ ವ್ಯವಸ್ಥೆ ಮಾಡಲು ಮುಂದಾಗಿದ್ದಾರೆ.

ಶಾಸಕರ ಭವನದಲ್ಲಿ ಶಾಸಕರಿಗಾಗಿ ಪಂಚಕರ್ಮ ಚಿಕಿತ್ಸೆ ನೀಡಲು 40 ಲಕ್ಷ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಕೊಠಡಿ ನಿರ್ಮಾಣ ಮಾಡಲಾಗಿದೆ. ಅದರಲ್ಲಿ ಅದಾಗಲೇ ಅಗತ್ಯ ಉಪಕರಣಗಳನ್ನೂ ಅಳವಡಿಸಲಾಗಿದೆ. ಇದಕ್ಕಾಗಿ ಅರ್ಹ, ತಜ್ಞ ವೈದ್ಯರ ನೇಮಕಾತಿ ನಡೆದಿದೆ. ಇನ್ನೊಂದು ತಿಂಗಳಲ್ಲಿ ಇಲ್ಲಿ ಪಂಚಕರ್ಮ ಚಿಕಿತ್ಸೆ ಪ್ರಾರಂಭಿಸಲಾಗುವುದು ಎಂದು ಆರೋಗ್ಯ ಸಚಿವರು ಶಾಸಕರಿಗೆ ಆರೋಗ್ಯಕರ ಸುದ್ದಿಯನ್ನು ನೀಡಿದರು.

English summary
Bangalore- Yesterday the State assembly interestinglu discussed the topic whether ex Prime Minister HD Deve Gowda eats ragi mudde (finger millet balls) or swallows. JDS MLA YSV Datta had raised the issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X