ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರ ಜಮೀನು ವಶ: ಶಾಸಕ ಶಾಮನೂರು ಮಗ ಬಕ್ಕೇಶ್ ವಿರುದ್ಧ ಲೋಕಾಯುಕ್ತರಿಗೆ ದೂರು

|
Google Oneindia Kannada News

ಬಳ್ಳಾರಿ, ಸೆಪ್ಟೆಂಬರ್ 25: ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಮಗ ಎಸ್‌ಎಸ್ ಬಕ್ಕೇಶ್ ಅವರ ಮಾಲೀಕತ್ವದ ಮೆ/ಎಸ್ಎಸ್ ಶುಗರ್ಸ್ ಕಂಪೆನಿ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ದುಗ್ಗಾವತಿ ಗ್ರಾಮದಲ್ಲಿ ರೈತರ ಸಾಗುವಳಿ ಜಮೀನನ್ನು ಅಕ್ರಮವಾಗಿ ವಶಪಡಿಸಿಕೊಂಡಿದೆ ಎಂದು ಲೋಕಾಯುಕ್ತರಿಗೆ ದೂರು ನೀಡಲಾಗಿದೆ.

ಲೋಕಾಯುಕ್ತ ನ್ಯಾ. ವಿಶ್ವನಾಥ್ ಶೆಟ್ಟಿ ಅವರಿಗೆ ಬರೆದಿರುವ ಪತ್ರದಲ್ಲಿ ದುಗ್ಗಾವತಿ ಗ್ರಾಮದ ಯೋಗೀಶ್ ಎಂಬುವವರು ಎಸ್‌ಎಸ್ ಶುಗರ್ಸ್ ಕಂಪೆನಿ ಮಾಲೀಕ ಬಕ್ಕೇಶ್ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮತ್ತು ರೈತರಿಗೆ ಜಮೀನು ಮರಳಿ ಕೊಡಿಸುವಂತೆ ಮನವಿ ಮಾಡಿದ್ದಾರೆ. ಜತೆಗೆ ದಾವಣಗೆರೆ ಮತ್ತು ಬೆಂಗಳೂರಿನ ಕೆಐಎಡಿಬಿ ವಿಶೇಷ ಭೂ ಸ್ವಾಧೀನಾಧಿಕಾರಿಗಳ ವಿರುದ್ಧ ಕೂಡ ಕ್ರಮ ಜರುಗಿಸುವಂತೆ ಕೋರಿದ್ದಾರೆ. ಅವರ ಪತ್ರದ ಸಂಪೂರ್ಣ ವಿವರ ಇಲ್ಲಿದೆ.

ಸರ್ವೆ ನಂಬರ್ 236/ಸಿರ ಪೈಕಿ 113 ಎಕರೆ 71 ಸೆಂ. ಜಮೀನನ್ನು 1980-81 ರಿಂದಲೂ ದುಗ್ಗಾವತಿ ಗ್ರಾಮದ ರೈತರು ಸಾಗುವಳಿ ಮಾಡಿಕೊಂಡು ಬಂದಿರುತ್ತಾರೆ. ಸದರಿ ಜಮೀನನ್ನು 1995- 96ನೇ ವರ್ಷದಲ್ಲಿ ಪಟ್ಟಾಕ್ಕಾಗಿ ರೈತರು ಅರ್ಜಿ ಸಲ್ಲಿಸಿದ್ದರು. 1998-99ನೇ ವರ್ಷದಲ್ಲಿ ಭೂ ರಹಿತ ದಲಿತರು ಹಾಗೂ ರೈತರಿಗೆ ಕಂದಾಯ ಇಲಾಖೆ ಸಾಗುವಳಿ ಆಧಾರದ ಮೇಲೆ ಸರ್ಕಾರ ಭೂಮಿ ಮಂಜೂರು ಮಾಡಿದ್ದು, ಪಟ್ಟಾ ಕೂಡ ನೀಡಿರುತ್ತದೆ.

ದಾವಣಗೆರೆ; ಆಶ್ರಯ ಮನೆ ಅರ್ಜಿ‌ಗೆ ಶಾಸಕರ ಮನೆ ಮುಂದೆ ಜಮಾಯಿಸಿದ ಜನದಾವಣಗೆರೆ; ಆಶ್ರಯ ಮನೆ ಅರ್ಜಿ‌ಗೆ ಶಾಸಕರ ಮನೆ ಮುಂದೆ ಜಮಾಯಿಸಿದ ಜನ

ಅದರಂತೆ ಎಲ್ಲಾ ರೈತರು ಸದರಿ ಭೂಮಿಯಲ್ಲಿ ಜೀವನೋಪಾಯಕ್ಕಾಗಿ ರಾಗಿ, ಮೆಕ್ಕೆಜೋಳ ಮತ್ತಿತರ ಧಾನ್ಯಗಳನ್ನು ಬೆಳೆಯುವ ಮೂಲಕ ಕೃಷಿ ಚಟುವಟಿಕೆ ಮಾಡಿಕೊಂಡು ಬರುತ್ತಿದ್ದರು. 1985ರಲ್ಲಿ ಸಣ್ಣ ನೀರಾವರಿ ಇಲಾಖೆ ತುಂಗಭದ್ರಾ ನದಿಯಿಂದ ಇದೇ ಭೂಮಿಗೆ ನೀರಾವರಿ ಸೌಲಭ್ಯವನ್ನು ಸಹ ಕಲ್ಪಿಸಿತ್ತು. ಸದರಿ ಜಮೀನಿನ ಪಹಣಿಗಳು ರೈತರ ಹೆಸರಿನಲ್ಲಿಯೇ ಇವೆ ಎಂದು ತಿಳಿಸಿದ್ದಾರೆ.

ಜಮೀನು ಬಿಟ್ಟುಕೊಡದೆ ಮೋಸ

ಜಮೀನು ಬಿಟ್ಟುಕೊಡದೆ ಮೋಸ

ದಾವಣಗೆರೆಯ ಮಾಜಿ ಸಚಿವ, ಹಾಲಿ ಶಾಸಕರಾದ ಶ್ಯಾಮನೂರು ಶಿವಶಂಕರಪ್ಪ ಅವರ ಪುತ್ರ, ಎಸ್.ಎಸ್. ಶುಗರ್ಸ್ ಸಕ್ಕರೆ ಕಾರ್ಖಾನೆ ಮಾಲೀಕ ಎಸ್.ಎಸ್. ಬಕ್ಕೇಶ್, "ನಿಮ್ಮ ಜಮೀನು ಸಕ್ಕರೆ ಕಾರ್ಖಾನೆಗೆ ಅಗತ್ಯವಿದ್ದು, ಅದನ್ನು 20 ವರ್ಷಗಳ ಅವಧಿಗೆ ಲೀಸ್‌ಗೆ ನೀಡಿದರೆ, ನಿಮ್ಮ ಭೂಮಿಯನ್ನು ಅಭಿವೃದ್ಧಿಪಡಿಸಿ ಲೀಸ್ ಅವಧಿ ಮುಗಿದ ಬಳಿಕ ವಾಪಸು ನೀಡುವುದಾಗಿ ನಂಬಿಸಿ ಕೆಲವು ರೈತರಿಂದ ಕರಾರು ಮಾಡಿಕೊಂಡಿರುತ್ತಾರೆ. ಕೃಷಿ ಭೂಮಿ ನೀಡಲು ಒಪ್ಪದ ಅನಕ್ಷರಸ್ಥ ರೈತರಿಂದ ಬಲವಂತದಿಂದ ಬರೆಸಿಕೊಂಡಿರುತ್ತಾರೆ. ಆದರೆ, ಲೀಸ್‌ಗೆ ನೀಡಿದ್ದ ಅವಧಿ 2017-18ನೇ ವರ್ಷಕ್ಕೆ ಮುಗಿದಿದ್ದು, ಸಾಗುವಳಿ ಜಮೀನು ಮೂಲ ರೈತರಿಗೆ ಬಿಟ್ಟು ಕೊಡದೆ ಮೋಸ ಮಾಡಿರುತ್ತಾರೆ.

"ಬಿಜೆಪಿ ಅಧಿಕಾರಕ್ಕೆ ಬಂದರೂ ಬಹಳ‌ ದಿನ‌ ಉಳಿಯಲ್ಲ, ಅತೃಪ್ತರು ಉಳಿಯಲು ಬಿಡಲ್ಲ"

ನಿಯಮ ಬಾಹಿರ ಸ್ವಾಧೀನ

ನಿಯಮ ಬಾಹಿರ ಸ್ವಾಧೀನ

ಶ್ಯಾಮನೂರು ಶಿವಶಂಕರಪ್ಪ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು, ರೈತರಿಂದ ಲೀಸ್‌ಗೆ ಪಡೆದುಕೊಂಡ ಭೂಮಿಯನ್ನು ದಾವಣಗೆರೆ ಕೈಗಾರಿಕಾ ಪ್ರದೇಶ ಅಭಿವೃದ್ಧಿ ವಿಶೇಷ ಭೂ ಸ್ವಾಧೀನ ಅಧಿಕಾರಿಗಳಿಗೆ ಒಪ್ಪಿಸಿರುತ್ತಾರೆ. ದಾವಣಗೆರೆ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವಿಶೇಷ ಭೂ ಸ್ವಾಧೀನ ಅಧಿಕಾರಿಗಳು ಶಾಮೀಲಾಗಿ, ಲೀಸ್‌ಅನ್ನೇ ಮುಂದಿಟ್ಟುಕೊಂಡು, ರೈತರ ಅನುಮತಿ ಪಡೆಯದೇ, ಕಾನೂನುಬಾಹಿರ ಭೂ ಸ್ವಾಧೀನ ಪ್ರಕ್ರಿಯೆ ಮಾಡಿಸಿಕೊಂಡು ಅಕ್ರಮ ಎಸಗಿರುತ್ತಾರೆ. ಭೂ ಸ್ವಾಧೀನ ಪ್ರಾಥಮಿಕ ಅಧಿಸೂಚನೆ ಹೊರಡಿಸದೇ, ಯಾವುದೇ ಪತ್ರಿಕಾ ಪ್ರಕಟಣೆ ನೀಡದೆಯೇ ನಿಯಮ ಬಾಹಿರವಾಗಿ ಸ್ವಾಧೀನ ಪ್ರಕ್ರಿಯೆ ಮಾಡಿರುತ್ತಾರೆ. ಈ ಕುರಿತು ಮಾಹಿತಿ ಹಕ್ಕು ಅಧಿನಿಯಮದಡಿ ದಾಖಲೆಗಳನ್ನು ಕೇಳಿದಾಗ, ಕೆಐಎಡಿಬಿ ಭೂ ಸ್ವಾಧೀನಕ್ಕೆ ಸಂಬಂಧಪಟ್ಟಂತೆ ಯಾವುದೇ ದಾಖಲೆಗಳು ಇಲ್ಲ ಎಂದು ಕೆಐಎಡಿಬಿ ಅಧಿಕಾರಿಗಳು ಉತ್ತರ ನೀಡಿದ್ದಾರೆ.

ಮಾಹಿತಿ ಹಕ್ಕಿನಲ್ಲಿ ದಾಖಲೆಯೇ ಇಲ್ಲ

ಮಾಹಿತಿ ಹಕ್ಕಿನಲ್ಲಿ ದಾಖಲೆಯೇ ಇಲ್ಲ

ದಾವಣಗೆರೆ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವಿಶೇಷ ಭೂ ಸ್ವಾಧೀನ ಅಧಿಕಾರಿಗಳು ಸದರಿ ಜಮೀನಿನ ಸ್ವಾಧೀನಕ್ಕೆ ಹೊರಡಿಸಿರುವ ಪ್ರಾಥಮಿಕ ಅಧಿಸೂಚನೆ, ಅಂತಿಮ ಅಧಿಸೂಚನೆ, ರೈತರಿಗೆ ನೋಟಿಸ್ ನೀಡಿರುವ ಪ್ರತಿ, ರೈತರಿಗೆ ಪರಿಹಾರ ವಿತರಣೆ ಚೆಕ್ ವಿವರಗಳನ್ನು ಮಾಹಿತಿ ಹಕ್ಕು ಅಧಿನಿಯಮದಡಿ ಕೇಳಿದಾಗ ಯಾವುದೇ ದಾಖಲೆಗಳು ಇಲ್ಲದಿರುವುದು ಬೆಳಕಿಗೆ ಬಂದಿದೆ.

ದಾಖಲೆಗಳನ್ನು ತಿರುಚಿದ ಅಧಿಕಾರಿಗಳು

ದಾಖಲೆಗಳನ್ನು ತಿರುಚಿದ ಅಧಿಕಾರಿಗಳು

ಲೀಸ್‌ಗೆ ಪಡೆದಿದ್ದ ಭೂಮಿಯನ್ನು ಉದ್ದೇಶಪೂರ್ವಕವಾಗಿ ಕಬಳಿಸುವ ಹುನ್ನಾರ ನಡೆಸಿ ಶಾಸಕ ಶ್ಯಾಮನೂರು ಶಿವಶಂಕರಪ್ಪ, ಅವರ ಪುತ್ರ ಎಸ್.ಎಸ್. ಬಕ್ಕೇಶ್, ಎಸ್.ಎಸ್. ಶುಗರ್ಸ್ ಆಡಳಿತ ಮಂಡಳಿ ಅಕ್ರಮ ಎಸಗಿದ್ದಾರೆ. ಲೀಸ್‌ಗೆ ಪಡೆದ ಭೂಮಿಯನ್ನು ದಾವಣಗೆರೆ ಕೆಐಎಡಿಬಿಗೆ ನೀಡಿ, ಅಧಿಕಾರಿಗಳು ಶಾಮೀಲಾಗಿ ದಾಖಲೆಗಳನ್ನು ತಿರುಚಿ ರೈತರ ಹೆಸರಿನಲ್ಲಿರುವ ಭೂಮಿಯ ಒಡೆತನದ ಹಕ್ಕನ್ನು ಬದಲಿಸಿದ್ದಾರೆ. ಸರ್ವೆ ನಂ 236/ಸಿ ರಲ್ಲಿರುವ ದುಗ್ಗಾವತಿ ಗ್ರಾಮಸ್ಥರ ರೈತರ ಭೂಮಿಯು ಕೆಐಎಡಿಬಿ- ಬೆಂಗಳೂರು ಅವರ ಹೆಸರಿಗೆ ವರ್ಗಾವಣೆಯಾಗಿದ್ದು, ಕೆಐಎಡಿಬಿ ಮೂಲಕ 2017 ರಲ್ಲಿ ಎಸ್.ಎಸ್. ಶುಗರ್ಸ್‌ಗೆ ಮಂಜೂರು ಮಾಡಿ ನೂರಾರು ಕೋಟಿ ಮೌಲ್ಯದ ರೈತರ ಭೂಮಿಯನ್ನು ಕಬಳಿಕೆ ಮಾಡಿದ್ದಾರೆ.

ಲೀಸ್‌ಗೆ ರೈತರಿಂದ ಪಡೆದ ಭೂಮಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಕೆಐಎಡಿಬಿ ಅಧಿಕಾರಿಗಳ ಶಾಮೀಲಿನಿಂದ 113 ಎಕರೆ ಭೂಮಿಯನ್ನು ಕಬಳಿಸಿರುವ ಎಸ್.ಎಸ್. ಶುಗರ್ಸ್ ಮಾಲೀಕ ಎಸ್. ಎಸ್. ಬಕ್ಕೇಶ್, ಶಾಮನೂರು ಶಿವಶಂಕರಪ್ಪ, ಕೆಐಎಡಿಬಿ ಅಧಿಕಾರಿಗಳು ಎಸಗಿರುವ ಅಕ್ರಮ ಕುರಿತು ತನಿಖೆಗೆ ಆದೇಶಿಸಿ ರೈತರಿಗೆ ನ್ಯಾಯ ಒದಗಿಸಿಕೊಡುವಂತೆ ತಮ್ಮಲ್ಲಿ ಕೋರುತ್ತೇವೆ.

ಸಾಗುವಳಿ ಜಮೀನಿಗೆ ವಿಷಯ ನೀರು

ಸಾಗುವಳಿ ಜಮೀನಿಗೆ ವಿಷಯ ನೀರು

ವಿಶೇಷವೆಂದರೆ, ಶ್ಯಾಮನೂರು ಶಿವಶಂಕರಪ್ಪ ಒಡೆತನದ ಸಕ್ಕರೆ ಕಾರ್ಖಾನೆ ಇರುವ ಜಾಗಕ್ಕೂ, ರೈತರ ಸಾಗುವಳಿ ಭೂಮಿಗೂ ಸುಮಾರು 3 ಕಿ.ಮೀ. ಅಂತರವಿದ್ದು, ಲೀಸ್‌ಗೆ ಪಡೆದ ಜಾಗವನ್ನು ಯಾವುದೇ ರೀತಿ ಅಭಿವೃದ್ಧಿಪಡಿಸಿಲ್ಲ. ಬದಲಿಗೆ ಸಣ್ಣ ನೀರಾವರಿ ಇಲಾಖೆಯಿಂದ ಸದರಿ ಭೂಮಿಗೆ ಕಲ್ಪಿಸಿದ್ದ ನೀರಾವರಿ ಸೌಲಭ್ಯದ ಸರ್ಕಾರಿ ಪೈಪ್‌ಲೈನ್‌ನಲ್ಲಿ ಸಕ್ಕರೆ ಕಾರ್ಖಾನೆಯ ವಿಷಪೂರಿತ ನೀರನ್ನು ಕೃಷಿ ಜಮೀನಿಗೆ ಬಿಟ್ಟು ದ್ರೋಹ ಎಸಗಿರುತ್ತಾರೆ. ಅಲ್ಲದೇ ಸಣ್ಣ ನೀರಾವರಿ ಇಲಾಖೆ ಕಲ್ಪಿಸಿದ್ದ ನೀರಾವರಿ ಸೌಲಭ್ಯದ ಪೈಪ್‌ಲೈನ್ ಅಕ್ರಮವಾಗಿ ದುರ್ಬಳಕೆ ಮಾಡಿಕೊಂಡು ಅದರ ಮೂಲಕವೇ ವಿಷ ಫೂರಿತ ನೀರು ಬಿಡುಗಡೆ ಮಾಡಿ, ಅಭಿವೃದ್ಧಿ ನೆಪದಲ್ಲಿ ಲೀಸ್‌ಗೆ ಪಡೆದಿದ್ದ ಭೂಮಿಗೆ ಬಿಟ್ಟು, ಪರಿಸರವನ್ನು ಸಂಪೂರ್ಣ ಹಾಳು ಮಾಡಿರುತ್ತಾರೆ.

ರೈತರಿಗೆ ನ್ಯಾಯ ಕೊಡಿಸಿ

ರೈತರಿಗೆ ನ್ಯಾಯ ಕೊಡಿಸಿ

ಹೀಗೆ ಕೈಗಾರಿಕೆ ಹೆಸರಿನಲ್ಲಿ ಕೃಷಿ ಭೂಮಿಯನ್ನು ಲೀಸ್‌ಗೆ ಪಡೆದು ಯಾವುದೇ ಅಭಿವೃದ್ಧಿ ಪಡಿಸದೇ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೆಐಎಡಿಬಿ ಅಧಿಕಾರಿಗಳ ಮೇಲೆ ಒತ್ತಡ ಹಾಕಿ 136 ಎಕರೆ ರೈತರ ಭೂಮಿಯನ್ನು ಸಂಪೂರ್ಣವಾಗಿ ಕಬಳಿಸಿದ್ದಾರೆ. ಅಲ್ಲದೇ ಕಾರ್ಖಾನೆಗೆ ರೈತರ ಭೂಮಿ ಅಗತ್ಯವಿಲ್ಲದಿದ್ದರೂ, ಕಬಳಿಕೆಯ ಉದ್ದೇಶದಿಂದ ತುಂಗಭದ್ರಾ ನೀರು ಹರಿಯುತ್ತಿದ್ದ ಸಣ್ಣ ನೀರಾವರಿ ಇಲಾಖೆಯ ಪೈಪ್‌ಲೈನನ್ನು ಸಂಪೂರ್ಣ ಸ್ಥಗಿತಗೊಳಿಸಿ ಸಕ್ಕರೆ ಕಾರ್ಖಾನೆ ವಿಷ ಪೂರಿತ ನೀರು ಹರಿಸಿ ಗ್ರಾಮಸ್ಥರು ಗ್ರಾಮವನ್ನೇ ತ್ಯಜಿಸುವ ಹುನ್ನಾರ ನಡೆಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಜರುಗಿಸದ ಕಾರಣ, ಉನ್ನತ ಮಟ್ಟದ ತನಿಖೆಗೆ ಆದೇಶಿಸಿ ರೈತರ ಬದುಕಿಗೆ ಆಧಾರವಾಗಿರುವ ಜಮೀನನ್ನು ಬಿಡಿಸಿಕೊಟ್ಟು ನ್ಯಾಯ ಒದಗಿಸಿಕೊಡಬೇಕೆಂದು ತಮ್ಮಲ್ಲಿ ಮನವಿ ಮಾಡುತ್ತೇವೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

English summary
Villagers of Ballari Duggavati has written a complaint to Lokayukta against MLA Shamanuru Shivashankarappa's son SS Bakkesh's owned SS Sugars company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X