• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಗಸ್ಟ್ 03: ಕರ್ನಾಟಕದ ಜಿಲ್ಲಾ ಸುದ್ದಿಗಳ ರೌಂಡ್‌ಅಪ್

By ಒನ್ಇಂಡಿಯಾ ಡೆಸ್ಕ್
|
Google Oneindia Kannada News

ಕರ್ನಾಟಕದಲ್ಲಿ ಇಂದು ವಿವಿಧ ಜಿಲ್ಲೆಗಳಲ್ಲಿ ಹಲವು ಘಟನೆಗಳು ನಡೆದಿದ್ದು, ಅವುಗಳ ಸಂಕ್ಷಿಪ್ತ ವರದಿ ಇಲ್ಲಿದೆ.

ಕಡವೆ ಬೇಟೆ, ಇಬ್ಬರ ಬಂಧನ, ಮೂವರು ಪರಾರಿ

ಚಿಕ್ಕಮಗಳೂರು ತಾಲೂಕಿನ ಮುತ್ತೋಡಿ ಪ್ರಾದೇಶಿಕ ಅರಣ್ಯ ವಲಯದ ವ್ಯಾಪ್ತಿಯಲ್ಲಿ ಕಡವೆ ಬೇಟೆಯಾಡಿದ ಐದು ಜನ ಆರೋಪಿಗಳಲ್ಲಿ ಇಬ್ಬರನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಯಶಸ್ವಿಯಾಗಿದ್ದು, ಮತ್ತೆ ಮೂವರು ಪರಾರಿಯಾಗಿದ್ದಾರೆ.

ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಡವೆ ಬೇಟೆಯಾಡುತ್ತಿದ್ದ ಕಳವಾಸೆ ಗ್ರಾಮದ ಗಣೇಶ್, ಪ್ರಕಾಶ್ ಎಂಬುವರನ್ನು ಬಂಧಿಸಿದ್ದು, ಉಳಿದ ಮೂರು ಜನ ಪ್ರಮುಖ ಆರೋಪಿಗಳಾದ ಗಿಡ್ಡ, ಮಂಜ, ಸಂಪತ್ ಪರಾರಿಯಾಗಿದ್ದಾರೆ. ಆರೋಪಿಗಳು ಶಿಕಾರಿ ಮಾಂಸವನ್ನು ತುಮಕೂರಿನಲ್ಲಿ ಮಾರಾಟ ಮಾಡುವ ಜಾಲದ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ. ಬಂಧಿತರಿಂದ ಐದು ಕೆಜಿ ಕಡವೆ ಮಾಂಸ ವನ್ನು ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಕ್ರಾಂತಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮುದ್ದಣ್ಣ, ವಲಯ ಅರಣ್ಯಾಧಿಕಾರಿ ಕಿರಣ್ ಕಾರತಂಗಿ, ವನ್ಯಜೀವಿ ಪರಿಪಾಲಕ ವೀರೇಶ್, ಅರಣ್ಯ ಅಧಿಕಾರಿಗಳಾದ ಸಲೀಂ ಸತೀಶ್ ಅರಣ್ಯ ರಕ್ಷಕರಾದ ರಾಜೇಶ್, ಸ್ವಾಮಿ ದೀಕ್ಷಿತ್, ರಾಮಯ್ಯ ವಾಹನ ಚಾಲಕ ಅಣ್ಣಪ್ಪ ಇದ್ದರು.

ಶಿವಮೊಗ್ಗ- ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ ಬಂದ್

ಕಳೆದ 15 ದಿನಗಳ ಹಿಂದೆ ಶಿವಮೊಗ್ಗ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ ಹಲವೆಡೆ ಸೇತುವೆ, ರಸ್ತೆ ಕುಸಿದಿವೆ. ಹೀಗಾಗಿ ಸೇತುವೆ ರಸ್ತೆ ಕುಸಿದಿರುವ ಸ್ಥಳಕ್ಕೆ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹೊಸನಗರದಿಂದ ನಾಗೋಡಿ ಮಾರ್ಗವಾಗಿ ಕೊಲ್ಲೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 766(ಸಿ)ರಲ್ಲಿ ಬರುವ ನಗರ- ಚಿಕ್ಕಪೇಟೆ ಮಧ್ಯದ ಸೇತುವೆ ಕುಸಿದಿದೆ. ಶಿವಮೊಗ್ಗ, ತೀರ್ಥಹಳ್ಳಿ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ವಿಹಂಗಮ ನರ್ಸರಿ ತಿರುವಿನಿಂದ ಭಾರತೀಪುರ ತಿರುವಿನವರೆಗೆ ರಸ್ತೆ ಕುಸಿದಿರುವುದರಿಂದ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಿ, ಪರ್ಯಾಯ ಮಾರ್ಗಗಳಲ್ಲಿ ಸಂಚಾರಕ್ಕೆ ಶಿವಮೊಗ್ಗ ಜಿಲ್ಲಾಧಿಕಾರಿ ತಾತ್ಕಾಲಿಕ ಆದೇಶ ಹೊರಡಿಸಿದ್ದಾರೆ.

ಶಿವಮೊಗ್ಗ ಮಾರ್ಗದಿಂದ ಕುಂದಾಪುರ ಮತ್ತು ಕುಂದಾಪುರದಿಂದ- ಶಿವಮೊಗ್ಗಕ್ಕೆ ಸಂಚರಿಸುವ ಭಾರೀ ವಾಹನಗಳು ಶಿವಮೊಗ್ಗ- ಸಾಗರ-ಹೊನ್ನಾವರ(ಎನ್‌ಎಚ್- 69) ಮಾರ್ಗ ಬಳಸಬಹುದು. ಶಿವಮೊಗ್ಗದಿಂದ ಉಡುಪಿ- ಮಂಗಳೂರು ಮತ್ತು ಮಂಗಳೂರಿನಿಂದ ಉಡುಪಿ, ಶಿವಮೊಗ್ಗಕ್ಕೆ ಸಂಚರಿಸುವ ಭಾರೀ ವಾಹನಗಳು ಶಿವಮೊಗ್ಗ-ಕೊಪ್ಪ- ಕಾರ್ಕಳ- ಮಂಗಳೂರು (ಎನ್‌ಎಚ್ 57, 65 ಮತ್ತು ಎನ್‌ಎಚ್ 169) ಮಾರ್ಗ ಬಳಸಬಹುದು.

ಟಿಬೇಟಿಯನ್ ಕಾಲೋನಿಯಲ್ಲಿ ಕೊರೊನಾ ಪ್ರಕರಣ ಹೆಚ್ಚಳ

ಚಾಮರಾಜನಗರ ಜಿಲ್ಲೆಯ ಟಿಬೇಟಿಯನ್ ಕಾಲೋನಿಯಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗಿದ್ದು, ಇದರಿಂದ ಕೊರೊನಾ ಮೂರನೇ ಅಲೆಯ ಆತಂಕ ಎದುರಾಗಿದೆ.

ಕಳೆದ ಒಂದು ವಾರದಲ್ಲಿ ಟಿಬೇಟಿಯನ್ ಕಾಲೋನಿಯ 39 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಒಡೆಯರ್ ಪಾಳ್ಯ ಸಮೀಪದ ಟಿಬೇಟಿಯನ್ ಕಾಲೋನಿ ನಿವಾಸಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಟಿಬೆಟಿಯನ್ಸ್ ವಾಸಿಸುತ್ತಿರುವ ಕಾಲೋನಿ ಇದಾಗಿದ್ದು, ಶೇ.100 ರಷ್ಟು ಜನ ವ್ಯಾಕ್ಸಿನ್ ಪಡೆದಿದ್ದಾರೆ.

ಓಲೇಕಾರ್‌ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹ

ಹಾವೇರಿ ಕ್ಷೇತ್ರದ ಶಾಸಕ ನೆಹರು ಓಲೇಕಾರ್‌ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಇಬ್ಬರು ಅಭಿಮಾನಿಗಳು ನೀರಿನ ಟ್ಯಾಂಕ್ ಏರಿದ ಘಟನೆ ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದ ಬಳಿ ನಡೆದಿದೆ.

ನೀರಿನ ಟ್ಯಾಂಕ್ ಏರಿದ ನೆಹರು ಓಲೇಕಾರ್ ಅಭಿಮಾನಿಗಳನ್ನು ಭೀಮನಗೌಡ ಮತ್ತು ಚಂದ್ರಶೇಖರ್ ಎಂದು ಗುರುತಿಸಲಾಗಿದ್ದು, ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಹತ್ತಿಮತ್ತೂರು ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ.

ಪ್ರಯಾಣಿಕರ ಸಂಖ್ಯೆ ತೀವ್ರ ಇಳಿಮುಖಗೊಂಡಿದೆ

ಕೇರಳದಲ್ಲಿ ಭಾರೀ ಪ್ರಮಾಣದಲ್ಲಿ ಕೊರೊನಾ ಹೆಚ್ಚಳ ಹಿನ್ನಲೆ ಚಾಮರಾಜನಗರ ಜಿಲ್ಲೆಯ ಗಡಿ ಮೂಲಕ ಎರಡೂ ರಾಜ್ಯಗಳ ನಡುವೆ ಸಂಚರಿಸುವ ಪ್ರಯಾಣಿಕರ ಸಂಖ್ಯೆಯಲ್ಲಿ ತೀವ್ರ ಇಳಿಮುಖವಾಗಿದೆ. ಈ ಹಿನ್ನಲೆಯಲ್ಲಿ ಚಾಮರಾಜನಗರ ಜಿಲ್ಲೆಯಿಂದ ಕೇರಳಕ್ಕೆ ಕೆಎಸ್‍ಆರ್ ಟಿಸಿ ಬಸ್ ಸಂಚಾರ ಸ್ಥಗಿತಗೊಂಡಿದೆ.

   ಭಾರತ-ಪಾಕ್ ನಡುವೆ ಶತೃತ್ವ ಬೆಳೆಯೋದಕ್ಕೆ ಈ ಅಂಶಗಳೇ ಕಾರಣ | Oneindia Kannada

   ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಿಂದ ಕೇರಳದ ಸುಲ್ತಾನ್ ಬತೇರಿ, ಕಲ್ಪೆಟ್ಟ, ಕ್ಯಾಲಿಕಟ್, ತ್ರಿಶೂರು ಮೊದಲಾದ ಕಡೆ ಕೆಎಸ್‍ಆರ್‌ಟಿಸಿ ಬಸ್‌ಗಳು ಸಂಚರಿಸುತ್ತಿದ್ದವು. ಆದರೆ ಪ್ರಯಾಣಿಕರೇ ಬಾರದ ಕಾರಣ ಬಸ್ ಸಂಚಾರ ಸ್ಥಗಿತಗೊಳಿಸಿದ್ದೇವೆ ಎಂದು ಕೆಎಸ್‍ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ ಕೇರಳದ ಬಸ್‌ಗಳು ಸಹ ಕರ್ನಾಟಕದ ಸಂಚಾರ ನಿಲ್ಲಿಸಿವೆ.

   English summary
   Karnataka district news Roundup (3rd August 2021) - Stay up-to-date with politics, climate, infrastructure, & education in Bangalore, Mysore, Shivamogga and other Karnataka districts. Capture every aspect of Karnataka district news only on Kannada Oneindia.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X