ಸಂಪುಟ ದರ್ಜೆ ಸಚಿವರಾಗಿ 7 ಶಾಸಕರ ಪ್ರಮಾಣ ವಚನ!
ಬೆಂಗಳೂರು, ಜ. 13: ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮೊದಲ ಬಾರಿ ಪೂರ್ಣ ಪ್ರಮಾಣದ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದಿದೆ. ರಾಜಭವನದಲ್ಲಿ ಇಂದು (ಜ.13) ಮಧ್ಯಾಹ್ನ 3.50ಕ್ಕೆ 7 ನೂತನ ಸಚಿವರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಪುಟ ಸೇರುವುದರೊಂದಿಗೆ ಸದ್ಯ ಸಚಿವರ ಸಂಖ್ಯೆ 33ಕ್ಕೆ ಏರಿಕೆಯಾಗಿದೆ. ಒಂದು ಸಚಿವ ಸ್ಥಾನವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಖಾಲಿ ಇಟ್ಟು ಕೊಂಡಿದ್ದಾರೆ.
ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ವಜೂಭಾಯಿ ವಾಲಾ ಅವರು ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣವಚನವನ್ನು 7 ಜನರಿಗೆ ಬೋಧನೆ ಮಾಡಿದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ಸಚಿವ ಸಂಪುಟದ ಹಲವು ಸಹೋದ್ಯೋಗಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಹಾಗೂ ಮಹದೇವಪುರ ಶಾಸಕ ಅರವಿಂದ್ ಲಿಂಬಾವಳಿ ಅವರು ದೇವರ ಹೆಸರಿನಲ್ಲಿ, ಸುಳ್ಯ ಶಾಸಕ ಎಸ್. ಅಂಗಾರ ಅವರು ದೇವರ ಹೆಸರಿನಲ್ಲಿ, ಬೀಳಗಿ ಶಾಸಕ ಮುರುಗೇಶ್ ನಿರಾಣಿ ಅವರು ದೇವರು ಮತ್ತು ರೈತರ ಹೆಸರಿನಲ್ಲಿ, ವಿಧಾನ ಪರಿಷತ್ ಸದಸ್ಯರಾದ ಎಂಟಿಬಿ ನಾಗರಾಜ್ ಅವರು ದೇವರ ಹೆಸರಿನಲ್ಲಿ, ಆರ್. ಶಂಕರ್ ಅವರು ದೇವರ ಹೆಸರಿನಲ್ಲಿ, ಸಿ.ಪಿ. ಯೋಗೇಶ್ವರ್ ಅವರು ದೇವರು ಹಾಗೂ ರೈತರ ಹೆಸರಿನಲ್ಲಿ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಬಳಿಕ ನೂತನ ಸಚಿವರನ್ನು ರಾಜ್ಯಪಾಲರು ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅಭಿನಂದಿಸಿದರು.