ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಪ್ಟಂಬರ್‌ನಲ್ಲಿ ಮಹತ್ವದ ವಿಧಾನ ಮಂಡಲ ಅಧಿವೇಶನ ಕರೆದ ಸಿಎಂ ಬೊಮ್ಮಾಯಿ!

|
Google Oneindia Kannada News

ಬೆಂಗಳೂರು, ಆ. 19: ರಾಜ್ಯ ವಿಧಾನ ಮಂಡಲ ಅಧಿವೇಶನ ನಡೆಸಲು ರಾಜ್ಯ ಸರ್ಕಾರ ಕೊನೆಗೂ ಮುಂದಾಗಿದೆ. ಕಳೆದ ಜೂನ್ ತಿಂಗಳಿನಲ್ಲಿಯೇ ವಿಧಾನ ಮಂಡಲ ಮಳೆಗಾಲದ ಅಧಿವೇಶನ ನಡೆಯಬೇಕಿತ್ತು. ಆದರೆ ಕೊರೊನಾ ವೈರಸ್ ಸಂಕಷ್ಟದ ಹಿನ್ನೆಲೆಯಲ್ಲಿ ಸದನ ನಡೆಸದಿರಲು ಸರ್ಕಾರ ತೀರ್ಮಾನಿಸಿತ್ತು. ಹೀಗಾಗಿ ಮೂರು ತಿಂಗಳು ತಡವಾಗಿ ಮಳೆಗಾಲದ ಅಧಿವೇಶನವನ್ನು ಬೆಂಗಳೂರಿನಲ್ಲಿ ನಡೆಸಲು ರಾಜ್ಯ ಬಿಜೆಪಿ ಸರ್ಕಾರ ನಿರ್ಧಾರ ಮಾಡಿದೆ.

ಬೆಂಗಳೂರಿನಲ್ಲಿ ವಿಧಾನ ಮಂಡಲ ಅಧಿವೇಶನ ನಡೆಸಲು ತೀರ್ಮಾನ ಮಾಡಿರುವುದರಿಂದ ಮತ್ತೆ ಬೆಳಗಾವಿಗೆ ಈ ಸಲವೂ ಅಧಿವೇಶನದ ಭಾಗ್ಯ ಸಿಕ್ಕಿಲ್ಲ. ಇದೂ ಕೂಡ ಉಭಯ ಸದನಗಳಲ್ಲಿ ಚರ್ಚೆಯಾಗುವ ಸಾಧ್ಯತೆಗಳಿವೆ. ಜೊತೆಗೆ ಸರ್ಕಾರದ ವೈಫಲ್ಯ, ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆಯಿಂದ ರಾಜ್ಯದ ಜನರಿಗೆ ಪ್ರವಾಹ ಹಾಗೂ ಕೊರೊನಾ ಸಂಕಷ್ಟಕ್ಕೆ ಸಂಬಂಧಿಸಿದಂತೆ ಎದುರಾದ ಸಮಸ್ಯೆಗಳು, ಸರ್ಕಾರದ ಹಗರಣಗಳು, ಸಚಿವರ ಮೇಲಿನ ಭ್ರಷ್ಟಾಚಾರ ಆರೋಪಗಳು, ಸೇರಿದಂತೆ ಹಲವು ವಿಷಯಗಳ ಕುರಿತು ಎರಡೂ ಸದನಗಳಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು ಈಗಾಗಲೇ ತಯಾರಿ ಮಾಡಿಕೊಂಡಿವೆ.

ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿಯಲ್ಲಿ ಈವರೆಗೂ ಸಂತ್ರಸ್ತರಿಗೆ ಸರ್ಕಾರದ ಪರಿಹಾರ ಸಿಗದಿರುವುದು ಕೂಡ ಸದನದಲ್ಲಿ ಪ್ರಮುಖವಾಗಿ ಚರ್ಚೆಗೆ ಬರಲಿದೆ. ಅದರೊಂದಿಗೆ ವಿಧಾನ ಮಂಡಲದಲ್ಲಿ ಯಾವ ಯಾವ ವಿಚಾರಗಳು ಚರ್ಚೆಗೆ ಬರಲಿವೆ? ಯಾವ ಸಚಿವರ ಭ್ರಷ್ಟಾಚಾರಗಳನ್ನು ವಿಪಕ್ಷಗಳು ಕಲೆ ಹಾಕಿವೆ? ಅಧಿವೇಶನ ಎಷ್ಟು ದಿನಗಳ ಕಾಲ ನಡೆಯಲಿದೆ? ಈ ಎಲ್ಲ ವಿವರಗಳು ಮುಂದಿವೆ.

ಅಧಿವೇಶನ ಯಾವಾಗ ಆರಂಭವಾಗಲಿದೆ?

ಅಧಿವೇಶನ ಯಾವಾಗ ಆರಂಭವಾಗಲಿದೆ?

ವಿಧಾನ ಮಂಡಲ ಮಳೆಗಾಲದ ಅಧಿವೇಶನವನ್ನು ಸೆಪ್ಟಂಬರ್ 13 ರಿಂದ 24ರವರೆಗೆ 10 ದಿನಗಳ ಕಾಲ ವಿಧಾನ ಮಂಡಲ ಅಧಿವೇಶನ ನಡೆಸಲು ಗುರುವಾರ ನಡೆದ ರಾಜ್ಯ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಕಳೆದ ಫೆಬ್ರವರಿಯಲ್ಲಿ ವರ್ಷದ ಮೊದಲ ಅಧಿವೇಶನ ಹಾಗೂ ಬಜೆಟ್ ಅಧಿವೇಶನಗಳು ಒಂದೇ ಸಲಕ್ಕೆ ನಡೆದಿದ್ದವು. ಜೊತೆಗೆ ಆಗ ಹಣಕಾಸು ಸಚಿವರಾಗಿದ್ದ ಯಡಿಯೂರಪ್ಪ ಅವರು ಬಜೆಟ್ ಮಂಡನೆ ಮಾಡಿದ್ದರು.

ಆಗಲೂ 10 ದಿನಗಳ ಕಾಲ ಅಧಿವೇಶನ ನಡೆಸಲಾಗಿತ್ತು. ಜೊತೆಗೆ ಒಂದೇ ದಿನದಲ್ಲಿ ಎಲ್ಲಾ 30 ಇಲಾಖೆಗಳ ಬಜೆಟ್ ಅನುದಾನ ಸೇರಿದಂತೆ ಹಲವು ವಿಧೇಯಕಗಳಿಗೆ ಅಂಗೀಕಾರ ಪಡೆಯಲಾಗಿತ್ತು. ಆದರೆ ಈ ಬಾರಿಯ ಅಧಿವೇಶನದಲ್ಲಿ ಸರ್ಕಾರಕ್ಕೆ ಹಲವು ಸವಾಲುಗಳಿವೆ.

ಆರೋಗ್ಯ ಇಲಾಖೆ ಖರೀದಿ ಹಗರಣ!

ಆರೋಗ್ಯ ಇಲಾಖೆ ಖರೀದಿ ಹಗರಣ!

ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಿಂದ ಮಾಡಲಾಗಿರುವ ಪಿಪಿಇ ಕಿಟ್‌ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಈಗಾಗಲೇ ಕಾಂಗ್ರೆಸ್ ನಾಯಕರು ಹಲವು ಬಾರಿ ಆರೋಪಿಸಿದ್ದಾರೆ. ಈ ವಿಷಯ ಈ ಬಾರಿಯ ಅಧಿವೇಶನದಲ್ಲಿ ಎರಡೂ ಸದನಗಳಲ್ಲಿ ಚರ್ಚೆಗೆ ಬರಲಿದೆ. ಕೊರೊನಾ ವೈರಸ್ ಲಸಿಕೆ ಕೊಡುವಲ್ಲಿಯೂ ಸರ್ಕಾರ ವಿಫಲವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವರು ಆರೋಪಿಸಿದ್ದಾರೆ. ಹೀಗಾಗಿ ಈವರಗೆ ರಾಜ್ಯ ಸರ್ಕಾರ ಕೊಟ್ಟಿರುವ ಲಸಿಕೆ ವಿವರದ ಬಗ್ಗೆಯೂ ಕಾವೇರಿದ ಚರ್ಚೆ ಎರಡೂ ಸದನಗಳಲ್ಲಿ ನಡೆಯುವುದು ಖಚಿತವಾಗಿದೆ.

ಎರಡು ವರ್ಷಗಳಿಂದಲೂ ಪ್ರವಾಹ ಸಂತ್ರಸ್ತರಿಗೆ ಪರಿಹಾರವಿಲ್ಲ!

ಎರಡು ವರ್ಷಗಳಿಂದಲೂ ಪ್ರವಾಹ ಸಂತ್ರಸ್ತರಿಗೆ ಪರಿಹಾರವಿಲ್ಲ!

ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಪ್ರವಾಹ ಪರಿಸ್ಥಿತಿ ಬಂದಿದೆ. ಆದರೆ ಕಳೆದ ಎರಡು ವರ್ಷಗಳ ಹಿಂದೆಯೂ ಘೊಷಣೆ ಮಾಡಿದ್ದಂತೆ ಆಗಿನ ಸಿಎಂ ಯಡಿಯೂರಪ್ಪ ಪರಿಹಾರ ಹಂಚಿಕೆ ಮಾಡಿಲ್ಲ.

ಜೊತೆಗೆ ಈ ವರ್ಷದ ಪ್ರವಾಹ ಸಂತ್ರಸ್ತರಿಗೂ ಸರ್ಕಾರ ಸಮರ್ಪಕ ಪರಿಹಾರ ಕೊಟ್ಟಿಲ್ಲ ಎಂದು ಆರೋಪಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದರು . ಹೀಗಾಗಿ ಪ್ರವಾಹ ಪರಿಸ್ಥಿತಿಯ ಕುರಿತು ವಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲಿವೆ.

ಸದನದಲ್ಲಿ ಅನಾವರಣವಾಗಲಿದೆ ಮೊಟ್ಟೆ ಹಗರಣ!

ಸದನದಲ್ಲಿ ಅನಾವರಣವಾಗಲಿದೆ ಮೊಟ್ಟೆ ಹಗರಣ!

ರಾಜ್ಯ ಸರ್ಕಾರದ ಸಚಿವರ ಭ್ರಷ್ಟಾಚಾರ ಆರೋಪಗಳ ಬಗ್ಗೆಯೂ ಪ್ರಮುಖವಾಗಿ ಕಾಂಗ್ರೆಸ್ ನಾಯಕರು ಪ್ರಸ್ತಾಪ ಮಾಡಲಿದ್ದಾರೆ. ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಸಮಾಜ ಕಲ್ಯಾಣ ಸಚಿವೆಯಾಗಿದ್ದ ಶಶಿಕಲಾ ಜೊಲ್ಲೆ ಅವರು ಮೊಟ್ಟೆ ಸರಬರಾಜಿಗೆ ಟೆಂಡರ್ ಹಾಕಲು ಲಂಚ ಪಡೆದಿದ್ದಾರೆ ಎಂದು ಖಾಸಗಿ ಸುದ್ದಿವಾಹಿನಿ ಆರೋಪಿಸಿತ್ತು. ಅದಕ್ಕೆ ಸಂಬಂಧಿಸಿದಂತೆ ಸ್ಟಿಂಗ್ ಆಪರೇಶನ್ ಪ್ರಸಾರ ಮಾಡಿತ್ತು. ಬಳಿಕ ಮತ್ತೆ ಶಶಿಕಲಾ ಜೊಲ್ಲೆ ಇದೀಗ ಬೊಮ್ಮಾಯಿ ಸಂಪುಟದಲ್ಲಿ ಮುಜರಾಯಿ ಸಚಿವರಾಗಿದ್ದಾರೆ. ಹೀಗಾಗಿ ಈ ವಿಚಾರ ಕೂಡ ತೀವ್ರ ಚರ್ಚೆಗೆ ಕಾರಣವಾಗಲಿದೆ.

ಒಟ್ಟಾರೆ ಹಲವು ವಿಚಾರಗಳು ಈ ಸಲದ ವಿಧಾನ ಮಂಡಲ ಅಧಿವೇಶನದಲ್ಲಿ ಚರ್ಚೆಗೆ ಬರಲಿವೆ. ಸಚಿವರಾಗಿ ಈಗಾಗಲೇ ಹಲವು ಸದನಗಳನ್ನು ಎದುರಿಸಿರುವ ಬಸವರಾಜ ಬೊಮ್ಮಾಯಿ ಅವರು ಸಚಿವರಾಗಿ ಹೇಗೆ ನಿಭಾಯಿಸಿಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

English summary
Karnataka Assembly session 2021 dates : cabinet decided to conduct session from Sep 13 for 10 days. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X