ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೊಂದಲಗಳ ನಡುವೆ ಹೊಯ್ಸಳ ಉತ್ಸವಕ್ಕೆ ಭರದ ಸಿದ್ಧತೆ

By Mahesh
|
Google Oneindia Kannada News

ಹಾಸನ, ಜ.4: ಕಲೆ, ಸಂಸ್ಕೃತಿ, ಸಾಹಿತ್ಯ, ಕ್ರೀಡಾಕೂಟಗಳ ಆಯೋಜನೆ ಮೂಲಕ ಹಾಸನ ಜಿಲ್ಲೆ ಸದ್ಯದ ವೈವಿಧ್ಯಮಯ ಚಟುವಟಿಕೆಗಳ ತಾಣವಾಗಿದೆ. ಇದರ ಬೆನ್ನಲ್ಲೇ ಸರಾಗವಾಗಿ ಕಾರ್ಯಕ್ರಮಗಳು ಆಯೋಜನೆಗೊಳ್ಳುವ ನಿರೀಕ್ಷೆ ಇದ್ದರೂ ಅಪಸ್ವರಗಳು ಎತ್ತರದ ದನಿಯಲ್ಲಿ ಕೇಳಿ ಬರುತ್ತಿವೆ.

18ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳೇ ಗೈರು ಹಾಜರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ, ಹಿರಿಯ ಪತ್ರಕರ್ತ ಪಾಟೀಲ್ ಪುಟ್ಟಪ್ಪ, ಸಂಸದ ಬಿ ಶ್ರೀರಾಮುಲು ಅವರು ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು. ಇನ್ನೊಂದೆಡೆ ಹಾಸನ ಜಿಲ್ಲೆ ಶ್ರವಣಬೆಳಗೊಳದಲ್ಲಿ ಆಯೋಜನೆಗೊಂಡಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆಗೆ ಸರ್ಕಾರದಿಂದ ಇನ್ನೂ ಹಣಕಾಸಿನ ನೆರವು ಸಿಕ್ಕಿಲ್ಲ ಎಂದು ಸ್ವಾಗತ ಸಮಿತಿ ಆರೋಪಿಸಿದೆ.

ಹೊಯ್ಸಳ ಉತ್ಸವದ ಗೊಂದಲ: ಜ.8ರಿಂದ ಬೇಲೂರಿನಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿದೆ. ಜಿಲ್ಲೆಯ ಕಲೆ, ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸಿದ ಹೊಯ್ಸಳ ಸಾಮ್ರಾಜ್ಯದ ಗರಿಮೆಯನ್ನು ಎತ್ತಿ ಹಿಡಿಯಲು ಈ ಉತ್ಸವ ನಡೆಸಲಾಗುತ್ತದೆ ಎಂದು ಶಾಸಕ ವೈಎನ್ ರುದ್ರೇಶ್ ಗೌಡ ಹೇಳಿದ್ದಾರೆ.

ಕಾರ್ಯಕ್ರಮ ವಿವರ : ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದಿಂದ ಹೊಯ್ಸಳ ಜ್ಯೋತಿ ಹೊರಡಲಿದ್ದು ಮೆರವಣಿಗೆ ಮೂಲಕ ಬೇಲೂರಿನ ಚನ್ನಕೇಶವ ದೇಗುಲ ತಲುಪಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಚ್ ಸಿ ಮಹದೇವಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಮಾರೋಪ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸಲಿದ್ದಾರೆ.

ಅದರೆ, ಶಿಲ್ಪಕಲೆ, ಸಾಹಿತ್ಯ ಅಷ್ಟೇ ಅಲ್ಲದೆ ಹೊಯ್ಸಳರ ಕಾಲದಲ್ಲಿ ಹೆಚ್ಚು ಪ್ರಚಲಿತವಾಗಿದ್ದ ಜನಪ್ರಿಯತೆ ಪಡೆದುಕೊಂಡ ಭರತನಾಟ್ಯ ಕಲೆಗೆ ಈ ಬಾರಿಯ ಹೊಯ್ಸಳ ಉತ್ಸವದಲ್ಲಿ ಅವಕಾಶ ನೀಡಿಲ್ಲ ಎಂಬ ಕೊರಗನ್ನು ಕಲಾವಿದರು ತೋಡಿಕೊಂಡಿದ್ದಾರೆ.

ಇನ್ನೊಂದೆಡೆ ಕನ್ನಡ ಚಲನಚಿತ್ರ ಕಲಾವಿದ ಸಾಧು ಕೋಕಿಲ ಅವರ ಹಾಸ್ಯ ರಸ ಮಂಜರಿಗೆ 10 ಲಕ್ಷ ರು ನೀಡಿರುವ ಜಿಲ್ಲಾಡಳಿತ, ಹಿಂದಿ ಗಾಯಕ ಶಾನ್ ಅವರಿಗೆ 25 ಲಕ್ಷ ರು ನೀಡಿ ಕರೆಸಿಕೊಳ್ಳುತ್ತಿರುವುದಕ್ಕೆ ಕಲಾ ತಜ್ಞರಾದ ಶ್ರೀವತ್ಸ ವಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Hoysala Utsava

ಕ್ರೀಡಾಕೂಟ: ಹೊಯ್ಸಳ ಉತ್ಸವದ ಅಂಗವಾಗಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಹಾಸನ ಮತ್ತು ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಾಫ್ ಮ್ಯಾರಾಥಾನ್ ರೇಸ್ (ಸೌಹಾರ್ದ ಓಟ) ರಂಗೋಲಿ ಸ್ಪರ್ಧೆ, ರಾಗಿ ಮುದ್ದೆ ತಿನ್ನುವ ಸ್ಪರ್ಧೆ ಮತ್ತು ಪ್ಯಾರಾ ಸೈಲಿಂಗ್ ಆಯೋಜಿಸಲಾಗಿದೆ.

ಕಾರ್ಯಕ್ರಮಗಳ ವಿವರ:
1. ಹಾಫ್ ಮ್ಯಾರಾಥಾನ್ ರೇಸ್ (ಸೌಹಾರ್ದ ಓಟ) : ಜನವರಿ 7, 2015ರಂದು ಬೆಳಿಗ್ಗೆ 7 ಘಂಟೆಗೆ ಜಿಲ್ಲಾ ಕ್ರೀಡಾಂಗಣದಿಂದ ಹಾಸನ ನಗರದಲ್ಲಿ ಸುಮಾರು 3ಕಿ.ಮೀ.ವರೆಗೆ ಏರ್ಪಡಿಸಲಾಗಿದೆ.

* ಭಾಗವಹಿಸಿ ವಿಜೇತರಾದವರಿಗೆ 1ರಿಂದ 5ನೇಸ್ಥಾನದವರೆಗೆ ನಗದು ರೂಪದಲ್ಲಿ ಬಹುಮಾನ (ತಲಾ 5,000ರೂ.ಗಳಿಂದ 1,000ರೂ.ಗಳವರೆಗೆ ಎರಡೂ ವಿಭಾಗ), ಪ್ರಮಾಣ ಪತ್ರಗಳನ್ನು ನೀಡಲಾಗುವುದು.

2. ರಾಗಿ ಮುದ್ದೆ ತಿನ್ನುವ ಸ್ಪರ್ಧೆ: ದಿನಾಂಕ 9 ಶುಕ್ರವಾರ ಮಧ್ಯಾಹ್ನ 1 ಘಂಟೆಗೆ ಹಾಸನಾಂಬ ಕಲಾ ಕ್ಷೇತ್ರದ ಆವರಣ.
* ನಾಟಿ ಕೋಳಿ ಸಾಂಬರ್/ ಸೊಪ್ಪಿನ ಸಾರು ಮತ್ತು ಮುದ್ದೆಯನ್ನು ತಿಂದು ವಿಜೇತರಾದವರಿಗೆ 1ರಿಂದ 3ನೇ ಸ್ಥಾನದವರೆಗೆ ನಗದು ರೂಪದಲ್ಲಿ ಬಹುಮಾನ (ತಲಾ 10,000ರೂ. 7,000ರೂ. & 5,000ರೂ.ಗಳವರೆಗೆ) ಪ್ರಮಾಣ ಪತ್ರಗಳನ್ನು ನೀಡಲಾಗುವುದು
* ರಾಗಿ ಮುದ್ದೆ ಸ್ಫರ್ಧೆಯಲ್ಲಿ ಭಾಗವಹಿಸುವವರು ರೂ.200/-ಗಳನ್ನು ಪಾವತಿಸಿ ನೊಂದಣಿ ಮಾಡಿಕೊಳ್ಳುವುದು.

3. ರಂಗೋಲಿ ಸ್ಪರ್ಧೆ: ದಿ.10 ಶನಿವಾರ ಬೆಳಗ್ಗೆ 11-30 ಘಂಟೆಗೆ ಸ್ಲೇಟರ್ಸ್ ಹಾಲ್‍ನಿಂದ ಮಿಷನ್ ಆಸ್ಪತ್ರೆವರೆಗೆ ಹಾಸನ
* ವಿಜೇತರಿಗೆ 1ರಿಂದ 3ನೇಸ್ಥಾನದವರೆಗೆ ನಗದು ರೂಪದಲ್ಲಿ ಬಹುಮಾನ (ತಲಾ 3,000ರೂ. 2,000ರೂ. & 1,000ರೂ.ಗಳವರೆಗೆ) & ಪ್ರಮಾಣ ಪತ್ರಗಳನ್ನು ನೀಡಲಾಗುವುದು
* ಭಾಗವಹಿಸುವ ಸ್ಪರ್ಧಿಗಳು ಬೇಕಾದ ಪರಿಕರಗಳನ್ನು ತಾವೇ ತರತಕ್ಕದ್ದು

4. ಪ್ಯಾರಾ ಸೈಲ್ಲಿಂಗ್: ದಿ.9 ರಿಂದ 11ರವರೆಗೆ ಹಾಸನ ವಿಮಾನ ನಿಲ್ದಾಣ ಬೂವನಹಳ್ಳಿ
* ಸ್ಫರ್ಧೆಯಲ್ಲಿ ಭಾಗವಹಿಸುವವರು ರೂ.250/-ಗಳನ್ನು ಪಾವತಿಸಿ ನೊಂದಣಿ ಮಾಡಿಕೊಳ್ಳುವುದು ಎಂದು ಹೊಯ್ಸಳ ಉತ್ಸವದ ವಿಶೇಷ ಸಮಿತಿಯ ಅಧ್ಯಕ್ಷರು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಕಾಂತರಾಜು ವಿ.ಎಂ. ಇವರು ತಿಳಿಸಿದ್ದಾರೆ.

English summary
Hoysala Utsav, will be held from January 8 at Belur, The district administration has invited popular Hindi singer Shaan to conduct musical night but has disappointed art lovers of Hassan. Meanwhile Various sport event including a Marathon will be conducted in Hassan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X