• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅರಕಲಗೂಡು ಸಂಚಾರಿ ಸುವ್ಯವಸ್ಥೆಗೆ ಕ್ಯಾಮೆರಾ ಕಣ್ಣು

By ಅರಕಲಗೂಡು ಜಯಕುಮಾರ್
|

ಅರಕಲಗೂಡು, ಮೇ 11 : ಇಚ್ಛಾಶಕ್ತಿಯಿದ್ದರೆ ಸಮಾಜಕ್ಕೆ ಒಳಿತಾಗುವ ಕೆಲಸವನ್ನು ಸರಾಗವಾಗಿ ಮಾಡಬಹುದು. ಆ ಮೂಲಕ ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡಬಹುದು ಎಂಬುದಕ್ಕೆ ಅರಕಲಗೂಡು ಪೊಲೀಸರು ಮುನ್ನುಡಿ ಬರೆದಿದ್ದಾರೆ. ಹಾಸನ ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ಸಾರ್ವಜನಿಕ ಸಹಭಾಗಿತ್ವದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿಕೊಂಡ ಏಕೈಕ ತಾಲೂಕು ಕೇಂದ್ರ ಎಂಬ ಹೆಗ್ಗಳಿಕೆಗೆ ಅರಕಲಗೂಡು ಪಟ್ಟಣ ಪಾತ್ರವಾಗಿದೆ.

ಹಾಸನ ಜಿಲ್ಲೆಯ ಅರೆಮಲೆನಾಡು ತಾಲೂಕು ಎಂದೆ ಗುರುತಿಸಲ್ಪಡುವ ಅರಕಲಗೂಡು, ಮೈಸೂರು ಹಾಗೂ ಮಡಿಕೇರಿ ಜಿಲ್ಲೆಗಳಿಗೆ, ಜಿಲ್ಲೆಯ ಗಡಿ ಪ್ರದೇಶವಾಗಿ ಗುರುತಿಸಲ್ಪಟ್ಟಿದೆ. ಸಕಲೇಶಪುರ-ಕೊಡ್ಲಿಪೇಟೆ, ಸಕಲೇಶಪುರ-ಶನಿವಾರಸಂತೆ ಮೂಲಕ ಅರಕಲಗೂಡು ಪ್ರವೇಶಿಸಿ ಬೆಂಗಳೂರು ಇಲ್ಲವೇ ಮಡಿಕೇರಿ-ವಿರಾಜಪೇಟೆ ಮೂಲಕ ಕೇರಳಕ್ಕೆ ಸಾಗಿ ಹೋಗುವ ಅವಕಾಶ ಇರುವುದರಿಂದ ಅಪರಾಧಿಗಳಿಗೆ ಒಂದು ಕಾಲಕ್ಕೆ ಸ್ವರ್ಗವಾಗಿತ್ತು!

ದಶಕಗಳ ಹಿಂದೆ ಜಂಗಲ್ ವುಡ್, ಬೀಟೆ, ತೇಗ ಗಂಧದ ಮರಗಳ ಅಕ್ರಮ ಸಾಗಾಣಿಕೆ ಈ ಮಾರ್ಗದಲ್ಲಿ ಅವ್ಯಾಹತವಾಗಿ ನಡೆದದ್ದುಂಟು. ಅಷ್ಟೇ ಅಲ್ಲ ಹಲವಾರು ಭಾರಿ ಅಂತಾರಾಜ್ಯ ದರೋಡೆಕೋರರು ಇಲ್ಲಿ ಸರಣಿ ಅಪರಾಧಗಳನ್ನು ಎಸಗಿ ತಪ್ಪಿಸಿಕೊಂಡು ಹೋದ ಉದಾಹರಣೆಯಿದೆ. ತಾಲೂಕಿನ ಮೂಲಕ ಸಾಗಿ ಹೋಗುವ ಸಿಮೆಂಟು, ಅಕ್ಕಿ ಇತ್ಯಾದಿ ಸಾಗಾಣಿಕೆ ವಾಹನಗಳನ್ನು ದರೋಡೆಕೋರರು ದೋಚಿದ ನಿದರ್ಶನಗಳಿವೆ. ಸರಣಿಯೋಪಾದಿಯಲ್ಲಿ ಮನೆಗಳ ದರೋಡೆ ನಡೆದಿರುವುದು ಉಂಟು.

ಇಷ್ಟೇ ಅಲ್ಲ ಪಟ್ಟಣದಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಸಾಗುವ ವಾಹನಗಳು ಅಪಘಾತ ಎಸಗಿ ಸಾವು ನೋವುಗಳಿಗೆ ಕಾರಣವಾಗಿವೆ, ವೇಗವಾಗಿ ಸಂಚರಿಸುವ ಪುಂಡ ಪೋಕರಿಗಳು ಅನಾಹುತ ಸೃಷ್ಟಿಸಿದ್ದಾರೆ. ರಾತ್ರಿಯ ವೇಳೆ ಬಸ್ ಕಾಯುವವರಿಗೆ ದುಷ್ಕರ್ಮಿಗಳು ತೊಂದರೆ ನೀಡಿದ ಪ್ರಕರಣಗಳಿವೆ. ಇಂತಹ ಸಂದಿಗ್ಧಗಳನ್ನು ಅದೆಷ್ಟೋ ಬಾರಿ ಅರಕಲಗೂಡು ಠಾಣಾ ಪೋಲೀಸರು ಎದುರಿಸಿದ್ದಾರೆ.

ಹೀಗಿರುವಲ್ಲಿ ಜಿಲ್ಲೆಗೆ ವರ್ಷಗಳ ಹಿಂದೆ ಹೊಸದಾಗಿ ಜಿಲ್ಲಾ ಎಸ್ ಪಿ ಆಗಿ ಅಧಿಕಾರಕ್ಕೆ ಬಂದ ರವಿ ಡಿ ಚನ್ನಣ್ಣನವರ್ ಜಿಲ್ಲೆಯ ಸಂಚಾರ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಲು ಹೊಸತಾಗಿ ಯೋಜನೆಯನ್ನು ರೂಪಿಸಿದರು. ಪ್ರತೀ ತಾಲೂಕು ಕೇಂದ್ರಗಳಿಗೆ ತೆರಳಿ ಜನ ಸಂಪರ್ಕ ಸಭೆ ನಡೆಸಿದರು. ಹೀಗೆ ಅರಕಲಗೂಡು ತಾಲೂಕಿನಲ್ಲೂ ಜನಸಂಪರ್ಕ ಸಭೆ ನಡೆದಾಗ ಅಲ್ಲಿ ಪ್ರಮುಖವಾಗಿ ಕೇಳಿ ಬಂದಿದ್ದು ಪಟ್ಟಣದ ಸಂಚಾರಿ ಅವ್ಯವಸ್ಥೆಯ ದೂರುಗಳು, ಸಂಚಾರ ನಿಯಮ ಉಲ್ಲಂಘನೆಯ ದೂರುಗಳು. ಆ ಸಂದರ್ಭ ಪಟ್ಟಣದ ಠಾಣಾಧಿಕಾರಿಯಾಗಿದ್ದ ಪಿಎಸ್ಐ ರೇವಣ್ಣಗೆ ಸಂಚಾರಿ ಸುವ್ಯವಸ್ಥೆ ಯೋಜನೆ ರೂಪಿಸುವಂತೆ ಸೂಚನೆ ನೀಡಿದ ಎಸ್ ಪಿ ರವಿ ಚನ್ನಣ್ಣನವರ್ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು.

ಸಮಗ್ರ ಯೋಜನೆ ರೂಪಿಸಿದ ಪಿಎಸೈ : ಸಂಚಾರ ಸುವ್ಯವಸ್ಥೆಗೆ ಸಮಗ್ರ ಯೋಜನೆಯನ್ನು ರೂಪಿಸಿದ ರೇವಣ್ಣ ಮೊದಲಿಗೆ ರಸ್ತೆಗಳ ಮಧ್ಯೆ ಡಿವೈಡರ್ ಗಳನ್ನು ಹಾಕಿಸಿದರು. ವೇಗವಾಗಿ ವಾಹನಗಳು ಸಾಗುವ ಕಡೆಗಳಲ್ಲೆಲ್ಲ ಲೋಕೋಪಯೋಗಿ ಇಲಾಖೆಯ ಸಲಹೆ ಪಡೆದು ತಾಂತ್ರಿಕ ತಡೆಗಳನ್ನು ಹಾಕಿಸಿದರು. ಸಾರ್ವಜನಿಕರಿಗೆ ಅರಿವು ಮೂಡಿಸುವ ಸಂಚಾರಿ ನಿಯಮಗಳ ಫಲಕಗಳನ್ನು ದೊಡ್ಡದಾಗಿ ಪ್ರದರ್ಶಿಸುವಂತೆ ನೋಡಿಕೊಂಡರು. ಸಿಬ್ಬಂದಿಯ ಕೊರತೆಯ ನಡುವೆಯೂ ಹೋಂಗಾರ್ಡಗಳ ಹೆಚ್ಚುವರಿ ಸೇವೆ ಪಡೆದು ಪ್ರಮುಖ ವೃತ್ತಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಯಿತು. ಅನಕೃ ವೃತ್ತದಲ್ಲಿ ಸಂಚಾರಿ ನಿಯಮ ಉಲ್ಲಂಘಿಸುವವರನ್ನು ಎಚ್ಚರಿಸಲು ಪೋಲೀಸರು ಮೈಕ್ ಮೂಲಕ ಮಾಹಿತಿ ನೀಡುವ ಯೋಜನೆಯನ್ನು ಆರಂಭಿಸಿದ ಹೆಗ್ಗಳಿಕೆಗೆ ರೇವಣ್ಣ ಪಾತ್ರರಾದರು.

ನಂತರದ್ದು ಸಂಚಾರಕ್ಕೆ ವ್ಯಾಪಕ ಅಡ್ಡಿ ಉಂಟು ಮಾಡುತ್ತಿದ್ದ ಪುಟ್ ಪಾತ್ ತೆರವು ಕಾರ್ಯಾಚರಣೆ. ಸಂಚಾರ ಉಲ್ಲಂಘಿಸಿ ರಸ್ತೆಯಲ್ಲೆ ನಿಲ್ಲುತ್ತಿದ್ದ ಗೂಡ್ಸ್ ವಾಹನಗಳ ತೆರವು, ಸಾಗಾಣಿಕೆ ವಾಹನಗಳ ನಿಲ್ದಾಣಕ್ಕೆ ಪ್ರತ್ಯೇಕ ನಿಲ್ದಾಣ, ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಒಮ್ಮುಖ ವಾಹನ ನಿಲುಗಡೆ, ನಿಲುಗಡೆಗೆ ಸಂಬಂಧಿಸಿದಂತೆ ಫಲಕಗಳ ಅಳವಡಿಕೆ ಮಾಡಲಾಯಿತು. ನಂತರ ಶಾಲಾ ಕಾಲೇಜುಗಳಿಗೆ ತೆರಳಿ ಸಂಚಾರಿ ನಿಯಮದ ಕುರಿತು ಸ್ವತಃ ಮಾಹಿತಿ ನೀಡುತ್ತಿದ್ದ ಪಿಎಸ್ಸೈ ರೇವಣ್ಣ ಸಂತೆ, ಜಾತ್ರೆ ದಿನಗಳಲ್ಲಿ ಸಾರ್ವಜನಿಕವಾಗಿ ಸಭೆಗಳನ್ನು ನಡೆಸುವ ತಿಳಿವಳಿಕೆ ನೀಡುವ ಪ್ರಯತ್ನ ಮಾಡಿದರು.

ಸಿಸಿಟಿವಿ ಕ್ಯಾಮೆರಾ ಅಳವಡಿಕೆ : ಸಂಚಾರ ವ್ಯವಸ್ಥೆ ನಿಯಂತ್ರಣಕ್ಕೆ ಸಿಗುತ್ತಿದ್ದಂತೆಯೇ ಅನಕೃ ವೃತ್ತ ಹಾಗೂ ಪಟ್ಟಣದ ಪ್ರಮುಖ ಪ್ರದೇಶಗಳಲ್ಲಿ ಸಿಸಿ ಕೆಮೆರಾಗಳನ್ನು ಹಾಕಿದರೆ, ಕಡಿಮೆ ಪೊಲೀಸ್ ಸಿಬ್ಬಂದಿ ಇರುವುದರಿಂದ ಹೆಚ್ಚು ಅನುಕೂಲವಾಗುವುದು ಎಂಬ ಅಂಶವನ್ನು ಮನಗಂಡ ಪಿಎಸ್ಸೈ ರೇವಣ್ಣ, ಎಸ್ ಪಿ ಅನುಮತಿ ಪಡೆದು ಸಾರ್ವಜನಿಕ ಸಹಕಾರದೊಂದಿಗೆ ಸಿಸಿ ಕೆಮೆರಾ ಅಳವಡಿಕೆಗೆ ಮುಂದಾದರು. ಪಿಸ್ಸೈ ಮಾಡಿದ ಮನವಿಗೆ ಸ್ಪಂದಿಸಿದ ಪಟ್ಟಣದ ಚಿನ್ನ ಬೆಳ್ಳಿ ಅಂಗಡಿ ವರ್ತಕರು ಮತ್ತು ಜನಪ್ರತಿನಿಧಿಗಳು ಸ್ವಯಂ ಪ್ರೇರಿತವಾಗಿ ಧನ ಸಹಾಯ ಮಾಡಿದರು.

ಹೀಗೆ ಸಂಗ್ರಹವಾಗಿದ್ದು 2.20 ಲಕ್ಷ ನಗದು. ಈ ಹಣದಲ್ಲಿ 7 ಸಿಸಿ ಕ್ಯಾಮೆರಾಗಳನ್ನು ಪಟ್ಟಣದ 5 ಸ್ಥಳಗಳಲ್ಲಿ ಅಳವಡಿಲಾಗಿದೆ. ಅನಕೃ ವೃತ್ತದಲ್ಲಿ ನಾಲ್ಕು ಕ್ಯಾಮೆರಾಗಳು ಅಳವಡಿಕೆಯಾಗಿದ್ದು ಅಲ್ಲಿ ಸಂಧಿಸುವ ರಸ್ತೆಗಳ 100 ಮೀ. ಉದ್ದ ದೃಶ್ಯಗಳನ್ನು ಸೆರೆ ಹಿಡಿಯುತ್ತಿದೆ. ಹಾಗೆಯೇ ಪೇಟೆ ಮುಖ್ಯ ರಸ್ತೆಯಿಂದ ಸಾಗುವ ದ್ವಿಪಥ ರಸ್ತೆಯ ಮೇಲೆ ಕಣ್ಣಿಡಲು 30 ಮೀ. ಎತ್ತರದ ಕಂಬವನ್ನು ಸ್ಥಾಪಿಸಿದ್ದು 500 ಮೀ. ಜೂಮಿಂಗ್ ಲೆನ್ಸ್ ನ ಕೆಮೆರಾ ಹಾಕಲಾಗಿದೆ. ಪೇಟೆ ಮುಖ್ಯ ರಸ್ತೆಯ ಮಸೀದಿ ವೃತ್ತದ ಬಳಿ ತಿರುಗುವ ಜೂಮಿಂಗ್ ಲೆನ್ಸ್ ಕೆಮೆರಾ ಕಾರ‍್ಯಾಚರಣೆ ನಡೆಸುತ್ತಿದೆ.

ಕೋಟೆ ದೊಡಮ್ಮ ವೃತ್ತ, ಮಲ್ಲಿಪಟ್ಟಣ ರಸ್ತೆಯ ಎಚ್ಎನ್ ನಂಜೇಗೌಡ ವೃತ್ತದ ಬಳಿಯು ತಿರುಗುವ ಜೂಮಿಂಗ್ ಲೆನ್ಸ್ ಸಿಸಿ ಕ್ಯಾಮೆರಾ ಅಳವಡಿಕೆಯಾಗಿ ಕಾರ್ಯಾಚರಿಸುತ್ತಿದೆ. ದಿನದ 24 ಗಂಟೆಯೂ ಕ್ಯಾಮೆರಾಗಳು ಕಾರ್ಯಾಚರಿಸುವಂತೆ ಯುಪಿಎಸ್ ಅನ್ನು ಅಳವಡಿಸಲಾಗಿದೆ, ಕ್ಯಾಮೆರಾಗಳಿಗೆ ರಕ್ಷಣಾ ಕವಚಗಳನ್ನು ಅಳವಡಿಸುವ ಕೆಲಸವೂ ಪ್ರಗತಿಯಲ್ಲಿದೆ. ಸಿಸಿ ಕ್ಯಾಮೆರಾಗಳ ನಿಯಂತ್ರಣ ಕೊಠಡಿಯನ್ನು ಪಟ್ಟಣದ ಪೊಲೀಸ್ ಠಾಣೆಯಲ್ಲಿ ತೆರೆಯಲಾಗಿದೆ.

ಒಟ್ಟಾರೆಯಾಗಿ ಸುಗಮ ಸಂಚಾರಿ ವ್ಯವಸ್ಥೆ ಶ್ರಮಿಸಿದ ಪಟ್ಟಣ ಠಾಣೆಯ ಪಿಎಸ್ಸೈ ರೇವಣ್ಣ, ಪೇದೆಗಳಾದ ಬೈರೇಶ್, ಪ್ರಕಾಶ್, ನಿಂಗರಾಜು ಪ್ರಶಂಸೆಗೆ ಪಾತ್ರವಾಗಿದ್ದಾರೆ. 2 ತಿಂಗಳು ಪ್ರಾಯೋಗಿಕವಾಗಿ ಕಾರ‍್ಯಾಚರಿಸಿದ ಸಿಸಿ ಕ್ಯಾಮೆರಾ ವ್ಯವಸ್ಥೆಯ ಕುರಿತು ಸಾರ್ವತ್ರಿಕವಾಗಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಮೊನ್ನೆ ಪಟ್ಟಣದ ಠಾಣೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಹೆಚ್ಚುವರಿ ಎಸ್ ಪಿ ಹೊಳೆನರಸೀಪುರ ವೃತ್ತದ ಡಾ|| ಭೀಮಾಶಂಕರ ಗುಳೇದ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಪಟ್ಟಣದ ಪೊಲೀಸರು ಸುಗಮ ಸಂಚಾರ ವ್ಯವಸ್ಥೆಯ ಮಾದರಿ ಯೋಜನೆ ಸಾಕಾರವಾಗಿಸಿದ್ದಕ್ಕೆ ಅಭಿನಂದಿಸಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
CCTV cameras have been installed in Arkalgud taluk in Hassan district with public private participation by district police. This is being done to curb criminal activities in particular, which is rampant in taluk. The credit goes to PSI Revanna. A report by Arkalgud Jayakumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more