ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಕಲಚೇತನನನ್ನು ಸ್ವಾವಲಂಬಿಯಾಗಿ ಮಾಡಿದ ಅನ್ನಭಾಗ್ಯ

By Prasad
|
Google Oneindia Kannada News

ಬೆಂಗಳೂರು, ಜು. 5 : ಕಾಂಗ್ರೆಸ್ ಸರಕಾರ ಆರಂಭಿಸಿರುವ ಮಹತ್ವಾಕಾಂಕ್ಷಿ ಯೋಜನೆ 'ಅನ್ನಭಾಗ್ಯ' ದುರುಪಯೋಗ ಆಗುತ್ತಿದೆ, ಬಡವರು ದುಡಿಮೆಯನ್ನು ಮರೆಯುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದರೂ, ಹಲವಾರು ಬಡವರು ಇದರ ಪ್ರಯೋಜನವನ್ನು ಪಡೆದು ಬರಿದಾದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ.

'ಅನ್ನಭಾಗ್ಯ' ಯೋಜನೆಯ ಲಾಭವನ್ನು ಪಡೆದ ಫಲಾನುಭವಿಗಳು ತಮ್ಮ ಜೀವನಗಾಥೆಯನ್ನು ವಿವರಿಸುವ ಸರಣಿಯನ್ನು ಕರ್ನಾಟಕ ವಾರ್ತಾ ಇಲಾಖೆ ವಿಶೇಷ ಸರಣಿಯನ್ನು ಪ್ರಾರಂಭಿಸಿದೆ. ಈ ಸರಣಿಯ ಐದನೇ ಭಾಗ ಇಲ್ಲಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದ ವಿಕಲಚೇತನ ಯುವಕ ವಿನೋದ್ ಗುನಗಿ ಅವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಅವರ ಅನಿಸಿಕೆಯನ್ನು ಅವರ ಮಾತುಗಳಲ್ಲಿಯೇ ಓದಿರಿ.

Annabhagya special series : Story of Karwar youth

ನನ್ನ ಹೆಸರು ವಿನೋದ್ ಗುನಗಿ. ಈಗ ನನಗೆ 34 ವರ್ಷ. ನಾನು ಹೈಸ್ಕೂಲ್‌ನಲ್ಲಿರುವಾಗಲೇ ತಂದೆ ತಾಯಿಯನ್ನು ಕಳೆದುಕೊಂಡಿದ್ದೇನೆ. ಹುಟ್ಟಿನಿಂದಲೇ ನನಗೆ ನರದೌರ್ಬಲ್ಯವಿದೆ. ನನ್ನ ಎರಡೂ ಕಾಲುಗಳು ಮೊದಲಿನಿಂದಲೂ ಸಂಪೂರ್ಣ ಬಲಹೀನವಾಗಿವೆ. ಮಂಗಳೂರಿನ ದೊಡ್ಡ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿದಾಗ ಇದು ಪೋಲಿಯೊ ಅಲ್ಲ, ನರಕ್ಕೆ ಸಂಬಂಧಿಸಿದ ರೋಗ ಎಂದು ಡಾಕ್ಟರ್ ಹೇಳಿದ್ದಾರೆ. ಈಗ ನೋಡಿದರೆ ಕಾಲಿನ ರೀತಿಯ ಬಲಹೀನತೆ ನನ್ನ ಕೈಗಳಿಗೂ ಉಂಟಾಗುತ್ತಿದೆ. ನನ್ನ ವೈಯಕ್ತಿಕ ಕೆಲಸಗಳನ್ನು ಮಾಡಲು ಪರದಾಡುವಂತಾಗಿದೆ.

ನಾನು ಕಷ್ಟಪಟ್ಟು ಪದವಿ ಮುಗಿಸಿದ್ದೇನೆ. ಕಾಲೇಜಿನ ದಿನಗಳಲ್ಲಿ ನಾಟಕಗಳಲ್ಲಿ ಪಾರ್ಟು ಮಾಡುತ್ತಿದ್ದೆ. ನಾನು ಅಭಿನಯಿಸಿದ್ದ, ವೀಲ್ ಚೇರ್‌ನಲ್ಲಿ ಆಗಮಿಸುವ ವಿಲನ್ ಪಾತ್ರ ಬಹುಮಂದಿಯ ಮೆಚ್ಚುಗೆಗೆ ಪಾತ್ರವಾಗಿತ್ತು. ನಾನು ಮಣ್ಣಿನಲ್ಲಿ ದೇವರ ನೂರಾರು ಮೂರ್ತಿಗಳನ್ನು ಮಾಡಿದ್ದೇನೆ. ನೋಡಿ, ಇಲ್ಲಿರುವ ಗಣಪತಿ, ಕೃಷ್ಣ, ರಾಘವೇಂದ್ರ ಸ್ವಾಮಿ ಮೂರ್ತಿಯನ್ನು ನಾನೇ ಮಾಡಿದ್ದು. ಆದರೆ ಈಗ ನನ್ನ ಎರಡೂ ಕೈಗಳು ನಿಧಾನಕ್ಕೆ ಸ್ವಾಧೀನ ಕಳೆದುಕೊಳ್ಳುತ್ತಿವೆ. ಅತ್ತಿತ್ತ ಚಲಿಸಬೇಕಾದರೆ ತೆವಳಿಕೊಂಡೇ ಹೋಗಬೇಕಾದ ಪರಿಸ್ಥಿತಿಯಿದೆ. ಬಹುಪಾಲು ಹಾಸಿಗೆಯೇ ನನ್ನ ಸಂಗಾತಿ.

ನನಗೆ ಸರ್ಕಾರದಿಂದ ಒಂದು ಸಾವಿರ ರೂಪಾಯಿ ಅಂಗವಿಕಲ ವೇತನ ದೊರೆಯುತ್ತಿದೆ. ನನ್ನ ಹೆಸರಿನಲ್ಲಿ ಅಂತ್ಯೋದಯ ಕಾರ್ಡ್ ಇದೆ. ಇದೀಗ ಸರ್ಕಾರ ಒಂದು ರೂಪಾಯಿಗೆ ಅಕ್ಕಿ ನೀಡಲು ಆರಂಭಿಸಿದ ಬಳಿಕ 29 ರೂಪಾಯಿಗೆ 29 ಕೆಜಿ ಅಕ್ಕಿ ಸಿಗುತ್ತಿದೆ. ಸಕ್ಕರೆ, ಸೀಮೆಎಣ್ಣೆ, ಗೋಧಿ ಎಲ್ಲಾ ಸೇರಿ ರೇಷನ್‌ಗೆ ತಿಂಗಳಿಗೆ ಸುಮಾರು 100 ರೂಪಾಯಿ ವೆಚ್ಚವಾಗುತ್ತಿದೆ. ನನ್ನ ಅಕ್ಕ ಇಲ್ಲೇ ಪಕ್ಕದಲ್ಲಿ ಮನೆ ಮಾಡಿಕೊಂಡಿರುವುದು ನನಗೆ ನೆರವಾಗಿದೆ. ಆಕೆಯೂ ಅಂಗವಿಕಲೆ. ನನ್ನ ರೇಷನ್ ಸಾಮಾಗ್ರಿಗಳನ್ನು ಆಕೆಗೆ ನೀಡುತ್ತೇನೆ. ಆಕೆ ಊಟ ಸಿದ್ಧಪಡಿಸಿ ಕಳುಹಿಸುತ್ತಾಳೆ.

ನನ್ನ ಕೈ ಕಾಲುಗಳು ಸ್ವಾಧೀನ ಕಳೆದುಕೊಂಡಿದ್ದರೂ, ಯಾರದೇ ಹಂಗಿನಲ್ಲಿ ಬದುಕುವ ಅಗತ್ಯ ನನಗಿಲ್ಲ. ಆರ್ಥಿಕವಾಗಿ ನಾನು ಸ್ವಾವಲಂಬಿ. ಊಟಕ್ಕಾಗಿ ಬೇರೆಯವರ ಮುಂದೆ ಕೈಚಾಚುವ ಪರಿಸ್ಥಿತಿ ಇಲ್ಲ. ಮನೆಯಲ್ಲಿ ಏನೂ ಇಲ್ಲದಿದ್ದರೂ ಗಂಜಿ ಕುಡಿದು ಬದುಕಬಹುದು. ಇತರರಿಗೆ ಹೊರೆಯಾಗದೆ ಸ್ವಾಭಿಮಾನದಿಂದ ಬದುಕಬಹುದು. ಅನ್ನಭಾಗ್ಯ ಯೋಜನೆ ನನ್ನಲ್ಲಿ ಈ ಆತ್ಮವಿಶ್ವಾಸ ಮೂಡಿಸಿದೆ. ದೈಹಿಕವಾಗಿ ನಾನು ಪರಾವಲಂಬಿಯಾಗಿದ್ದರೂ, ಮಾನಸಿಕವಾಗಿ ಸ್ವಾವಲಂಬಿಯಾಗಲು ಇದರಿಂದ ಸಾಧ್ಯವಾಗಿದೆ. [ದುಬೈ ಕುರಿಗಾಹಿಯನ್ನು ಹುಟ್ಟೂರಿಗೆ ಕರೆ ತಂದ ಅನ್ನಭಾಗ್ಯ]

ಕೆಲವು ತಿಂಗಳ ಹಿಂದೆ ನಗರಸಭೆಯ ಸಬ್ಸಿಡಿ ನೆರವಿನಿಂದ ಇಲ್ಲಿ ಮನೆಗೆ ತಾಗಿಕೊಂಡೇ ಒಂದು ಸಣ್ಣ ಮೊಬೈಲ್ ರಿಪೇರಿ ಅಂಗಡಿ ಆರಂಭಿಸಿದ್ದೇನೆ. ಅದರಿಂದ ಸ್ವಲ್ಪ ಆದಾಯ ಬರುತ್ತಿದೆ. ಆದರೆ ಪ್ರತಿ ತಿಂಗಳು ಅಂಗಡಿಯ ಸಾಲದ ಮೊತ್ತವನ್ನು ಕಟ್ಟುವುದು ಕಷ್ಟವಾಗುತ್ತಿದೆ. ದೈಹಿಕ ನ್ಯೂನತೆ ಕಾರಣ ಹೆಚ್ಚು ಹೊತ್ತು ಅಂಗಡಿಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ದೈನಂದಿನ ರೇಷನ್‌ಗೆ ಹೆಚ್ಚಿನ ಮೊತ್ತವನ್ನು ವೆಚ್ಚ ಮಾಡುವ ಅಗತ್ಯ ಇಲ್ಲದ ಕಾರಣ ಬೇರೆ ಸಣ್ಣಪುಟ್ಟ ಅಗತ್ಯಗಳಿಗೆ ಹಣ ಹೊಂದಿಸುವುದು ಕಷ್ಟವಾಗುತ್ತಿಲ್ಲ.

ವಿನೋದ್ ಗುನಗಿ, ಗುನಗಿವಾಡ, ಕಾರವಾರ, ಉತ್ತರಕನ್ನಡ ಜಿಲ್ಲೆ
ಮೊ.96869 21488

English summary
Human interest story : Vinod Gunagi a handicapped youth from Karwar, Uttara Kannada, beneficiary of Annabhagya project started by Karnataka govt, shares his feelings and how he is leading life independently.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X