ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಿತಾ ಕುಮಾರಸ್ವಾಮಿ ಫೋನ್ ಕರೆಗಳ ಕದ್ದಾಲಿಕೆ; ಎಚ್ ಡಿಕೆಗೆ ನೋಟಿಸ್ ಸಾಧ್ಯತೆ

By ಅನಿಲ್ ಆಚಾರ್
|
Google Oneindia Kannada News

ಬೆಂಗಳೂರು, ಅಕ್ಟೋಬರ್ 3: ರಾಜ್ಯ ರಾಜಕಾರಣದಲ್ಲಿ ಸುನಾಮಿ ಎಬ್ಬಿಸಿರುವ ಫೋನ್ ಕದ್ದಾಲಿಕೆ ಪ್ರಕರಣದ ವ್ಯಾಪ್ತಿ ಜಾಸ್ತಿ ಆಗುತ್ತಲೇ ಇದೆ. ಇದೀಗ ಬಂದಿರುವ ಮಾಹಿತಿ ಪ್ರಕಾರ, ರಾಜ್ಯದ ಏಳು ಪ್ರಮುಖ ಮಠಾಧೀಶರ ಫೋನ್ ಕರೆಗಳನ್ನು ಕದ್ದಾಲಿಕೆ ಮಾಡಲಾಗಿದೆ. ಮೊದಲಿಗೆ ಆದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದ ಸ್ವಾಮೀಜಿ ಫೋನ್ ಕದ್ದಾಲಿಕೆ ಆದ ಬಗ್ಗೆ ಸುದ್ದಿ ಇತ್ತು.

ಆದರೆ, ಈಗ ಬಯಲಾಗಿರುವ ಮಾಹಿತಿ ಪ್ರಕಾರ: ಮೈಸೂರಿನ ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ತುಮಕೂರಿನ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಬಾಳೆಹೊನ್ನೂರಿನ ರಂಭಾಪುರಿ ಸ್ವಾಮೀಜಿ, ಕನಕ ಗುರು ಪೀಠದ ನಿರಂಜನಾನಂದ ಸ್ವಾಮೀಜಿ, ಚಿತ್ರದುರ್ಗದ ಮಾದಾರ ಚನ್ನಯ್ಯ ಸ್ವಾಮೀಜಿ, ಕೂಡಲ ಸಂಗಮದ ಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ಬೋವಿ ಗುರು ಪೀಠದ ಸಿದ್ದೇಶ್ವರ ಸ್ವಾಮೀಜಿ ಫೋನ್ ಕರೆಗಳು ಕದ್ದಾಲಿಸಲಾಗಿದೆ ಎನ್ನಲಾಗುತ್ತಿದೆ.

ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಎಚ್. ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಈ ಏಳು ಮಠಗಳ ಸ್ವಾಮೀಜಿ ಫೋನ್ ಕರೆಗಳನ್ನು ಕದ್ದಾಲಿಸಲಾಗಿದೆ ಎಂಬುದು ಸಿಬಿಐನ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂಬುದು ಮೂಲಗಳಿಂದ ಬಂದಿರುವ ಮಾಹಿತಿ.

ಎಚ್ಡಿಕೆ ಬಿಡದ ಫೋನ್ ಟ್ಯಾಪಿಂಗ್ ಭೂತ: ಆದಿಚುಂಚನ ಶ್ರೀ ಹೆಸರು ಸ್ಮಗ್ಲರ್ ಲಿಸ್ಟ್ ನಲ್ಲಿ ಬಂದಿದ್ದು ಹೀಗೆ?ಎಚ್ಡಿಕೆ ಬಿಡದ ಫೋನ್ ಟ್ಯಾಪಿಂಗ್ ಭೂತ: ಆದಿಚುಂಚನ ಶ್ರೀ ಹೆಸರು ಸ್ಮಗ್ಲರ್ ಲಿಸ್ಟ್ ನಲ್ಲಿ ಬಂದಿದ್ದು ಹೀಗೆ?

600ಕ್ಕೂ ಹೆಚ್ಚು ವ್ಯಕ್ತಿಗಳ ಫೋನ್ ಕರೆಯನ್ನು ಕದ್ದಾಲಿಕೆ ಮಾಡಲಾಗಿದ್ದು, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರ ಅತ್ಯಾಪ್ತರಂತಿದ್ದ ಇಬ್ಬರ ನಿರ್ದೇಶನದ ಮೇರೆಗೆ ಅಧಿಕಾರಿಗಳು ಫೋನ್ ಕದ್ದಾಲಿಸಿದ್ದಾರೆ ಎಂದು ತಿಳಿದುಬಂದಿದೆ.

ಮಠಗಳ ಸ್ವಾಮೀಜಿಗಳೇ ಟಾರ್ಗೆಟ್

ಮಠಗಳ ಸ್ವಾಮೀಜಿಗಳೇ ಟಾರ್ಗೆಟ್

ಕರ್ನಾಟಕದಲ್ಲಿರುವ ಬಹುತೇಕ ಎಲ್ಲ ಸಮುದಾಯದ ನಾಯಕರು ತಮ್ಮ ಮಠಾಧೀಶರ ಜೊತೆ ಒಡನಾಟ ಇಟ್ಟುಕೊಂಡಿರುವುದು ಗುಟ್ಟಾಗಿ ಉಳಿದಿಲ್ಲ. ಒಕ್ಕಲಿಗ ಸಮುದಾಯದ ಪರಮೋಚ್ಚ ಧಾರ್ಮಿಕ ಮುಖಂಡರಾದ ಆದಿಚುಂಚನಗಿರಿ ಪೀಠದ ನಿರ್ಮಲಾನಂದನಾಥ ಸ್ವಾಮೀಜಿ ಜೊತೆ ಆ ಸಮುದಾಯದ ಶಾಸಕರು ಸಂಪರ್ಕ ಹೊಂದಿದ್ದರು. ಮಠಕ್ಕೆ ಯಾವ- ಯಾವ ಸಚಿವರು, ಶಾಸಕರು, ಅಧಿಕಾರಿಗಳು ಹಾಗೂ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು ಭೇಟಿ ನೀಡುತ್ತಾರೆ, ಇದರ ಹಿನ್ನೆಲೆಯನ್ನು ಅರಿತುಕೊಳ್ಳಲು ಶ್ರೀಗಳ ದೂರವಾಣಿ ಕರೆಯನ್ನು ಕದ್ದಾಲಿಕೆ ಮಾಡಲಾಗಿತ್ತು ಎಂದು ತಿಳಿದುಬಂದಿದೆ.

ಎಚ್ ಡಿಕೆ, ರೇವಣ್ಣ ಕಾರ್ಯವೈಖರಿಗೆ ಬೇಸರ

ಎಚ್ ಡಿಕೆ, ರೇವಣ್ಣ ಕಾರ್ಯವೈಖರಿಗೆ ಬೇಸರ

ಜೆಡಿಎಸ್ ನ ಕೆಲವು ಶಾಸಕರು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹಾಗೂ ಸಚಿವ ಎಚ್. ಡಿ. ರೇವಣ್ಣ ಅವರ ಕಾರ್ಯ ವೈಖರಿಗೆ ಬೇಸತ್ತು ಶ್ರೀಗಳ ಜೊತೆ ಅನೌಪಚಾರಿಕವಾಗಿ ಮಾತನಾಡಿದ್ದು ಹಾಗೂ ಸರ್ಕಾರದ ಅಳಿವು- ಉಳಿವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವುದು ಕದ್ದಾಲಿಕೆಯಲ್ಲಿ ಬಹಿರಂಗಗೊಂಡಿತ್ತು. ಇಂಥ ಬೆಳವಣಿಗೆಯಿಂದ ಎಚ್ಚೆತ್ತುಕೊಂಡ ಸರ್ಕಾರದ ಮುಖ್ಯಸ್ಥರು, ಕರ್ನಾಟಕದ ಏಳು ಮಠಾಧೀಶರ ಫೋನ್ ಕರೆಗಳನ್ನು ಕದ್ದಾಲಿಸಲು ಅಂದಿನ ಸಿಸಿಬಿ ಮುಖ್ಯಸ್ಥರೊಬ್ಬರಿಗೆ ಸರ್ಕಾರದಿಂದಲೇ ಸೂಚನೆ ಬಂದಿತ್ತು ಎನ್ನಲಾಗಿದೆ.

ಕುಮಾರಸ್ವಾಮಿ ಆಪ್ತರ ಚಲನವಲನದ ಮೇಲೆ ಕಣ್ಣು

ಕುಮಾರಸ್ವಾಮಿ ಆಪ್ತರ ಚಲನವಲನದ ಮೇಲೆ ಕಣ್ಣು

ತುಮಕೂರಿನಲ್ಲಿರುವ ಸಿದ್ದಗಂಗಾ ಮಠಕ್ಕೆ ಪಕ್ಷಾತೀತವಾಗಿ ಎಲ್ಲ ಜನಪ್ರತಿನಿಧಿಗಳು ಭೇಟಿ ನೀಡಿ, ಶ್ರೀಗಳಿಂದ ಆರ್ಶೀವಾದ ಪಡೆಯುವುದು ಸಾಮಾನ್ಯ. ಇಲ್ಲಿ ಕೆಲವು ರಾಜಕೀಯ ಚರ್ಚೆಗಳು ನಡೆಯಬಹುದೆಂಬ ಹಿನ್ನೆಲೆಯಲ್ಲಿ ಅಂದಿನ ಸರ್ಕಾರದ ಕಳ್ಳಗಿವಿ ಈ ಮಠದ ಮೇಲೆ ಬಿದ್ದಿತ್ತು. ಮೈಸೂರಿನ ಸುತ್ತೂರಿನಲ್ಲಿರುವ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಪ್ರಭಾವಿಗಳಾಗಿದ್ದರಿಂದ ಇಲ್ಲಿಯೂ ರಾಜಕೀಯ ಚಟುವಟಿಕೆಗಳು ನಡೆಯಬಹುದೆಂಬ ಹಿನ್ನೆಲೆಯಲ್ಲಿ ಈ ಮಠದ ಶ್ರೀಗಳ ಫೋನ್ ಕರೆಗಳ ಬಗ್ಗೆ ನಿಗಾ ಇಡುವಂತೆ ಸೂಚನೆ ಕೊಡಲಾಗಿತ್ತು. ಇದೀಗ ಸಿಬಿಐನಿಂದ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರ ಇಬ್ಬರು ಆಪ್ತರ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಯಾವುದೇ ಸಂದರ್ಭದಲ್ಲೂ ಇವರಿಬ್ಬರು ಹಾಗೂ ಸಂಬಂಧಿಕರ ನಿವಾಸಗಳ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಅನಿತಾ ಕುಮಾರಸ್ವಾಮಿ ದೂರವಾಣಿ ಕದ್ದಾಲಿಕೆ?

ಅನಿತಾ ಕುಮಾರಸ್ವಾಮಿ ದೂರವಾಣಿ ಕದ್ದಾಲಿಕೆ?

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಅವರ ಸಂಪೂರ್ಣ ವ್ಯವಹಾರವನ್ನು ಈ ಇಬ್ಬರೇ ನಿಭಾಯಿಸುತ್ತಿದ್ದರು. ದೂರವಾಣಿ ಕರೆಗಳನ್ನು ಕದ್ದಾಲಿಸಲು ಇವರಿಂದಲೂ ಪೊಲೀಸ್ ಇಲಾಖೆಗೆ ಸೂಚನೆ ಹೋಗಿತ್ತೆಂಬ ಮಾಹಿತಿ ಇದೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕುಮಾರಸ್ವಾಮಿ ಅವರ ಪತ್ನಿ ಹಾಗೂ ಶಾಸಕಿ ಅನಿತಾಕುಮಾರಸ್ವಾಮಿ ದೂರವಾಣಿ ಕರೆಯನ್ನು ಸಹ ಕದ್ದಾಲಿಕೆ ಮಾಡಲಾಗಿತ್ತು ಎಂಬ ಆರೋಪವೂ ಕೇಳಿಬಂದಿದೆ. ಆದರೆ ಯಾವ ಕಾರಣಕ್ಕಾಗಿ ಇವರ ದೂರವಾಣಿ ಕರೆಗಳನ್ನು ಕದ್ದಾಲಿಕೆ ಮಾಡಲಾಗಿತ್ತು ಎಂಬುದು ಮೀನಿನ ಹೆಜ್ಜೆಯಷ್ಟೇ ನಿಗೂಢವಾಗಿ ಉಳಿದಿದೆ. ಈ ಪ್ರಕರಣದಲ್ಲಿ ಸಿಬಿಐ ಇನ್ನೂ ಕೆಲವರಿಗೆ ಖೆಡ್ಡಾ ತೋಡಲು ಸಜ್ಜಾಗಿದೆ. ಮೂಲಗಳ ಪ್ರಕಾರ, ವಿಚಾರಣೆಗೆ ಹಾಜರಾಗುವಂತೆ ಎಚ್. ಡಿ. ಕುಮಾರಸ್ವಾಮಿ ಅವರಿಗೆ ಯಾವುದೇ ಸಂದರ್ಭದಲ್ಲೂ ನೋಟಿಸ್ ಜಾರಿಯಾಗುವ ಸಾಧ್ಯತೆ ಇದೆ.

English summary
According to CBI sources, MLA Anita Kumaraswamy phone tapped. 7 seers phone calls tapped. Here is the complete details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X