ಸಿದ್ದರಾಮಯ್ಯನವರು ದೇಣಿಗೆ ಕೊಡಬಾರದು ಎಂದು ಹೇಳಬಾರದಲ್ಲವೇ: ಪೇಜಾವರ ಶ್ರೀಗಳ ವಿಶೇಷ ಸಂದರ್ಶನ
ಇತ್ತೀಚಿನ ದಿನಗಳಲ್ಲಿ ಬಹುದೊಡ್ಡ ಅಭಿಯಾನ ಎಂದೇ ಕರೆಯಲ್ಪಟ್ಟ ಅಯೋಧ್ಯೆಯಲ್ಲಿನ ರಾಮ ಮಂದಿರ ನಿರ್ಮಾಣದ ನಿಧಿ ಅಭಿಯಾನದ ದಕ್ಷಿಣ ಭಾರತದ ನೇತೃತ್ವ ವಹಿಸಿಕೊಂಡಿದ್ದವರು ಉಡುಪಿ ಪೇಜಾವರ ಮಠದ ಶ್ರೀಗಳಾದ ವಿಶ್ವಪ್ರಸನ್ನ ತೀರ್ಥರು.
'ಒನ್ಇಂಡಿಯಾ' ಜೊತೆಗಿನ ಸಂದರ್ಶನದಲ್ಲಿ ಶ್ರೀಗಳು, ನಿಧಿ ಅಭಿಯಾನದ ವೇಳೆ ಕೆಲವು ರಾಜಕೀಯ ಮುಖಂಡರ ನೀಡಿದ ಹೇಳಿಕೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ. ಇದರ ಜೊತೆಗೆ, ಪೇಜಾವರ ಹಿರಿಯ ಶ್ರೀಗಳ ಸ್ಮರಣಾರ್ಥ ಸ್ಮೃತಿವನ ನಿರ್ಮಾಣದ ವಿಚಾರದ ಬಗ್ಗೆಯೂ ಮಾತನಾಡಿದ್ದಾರೆ. ಶ್ರೀಗಳ ಸಂದರ್ಶನದ ಪ್ರಮುಖ ಅಂಶ ಹೀಗಿದೆ:
ಪ್ರ: ನಿಧಿ ಸಂಗ್ರಹ ಅಭಿಯಾನದ ವೇಳೆ ಹಿಂದೂ ಧರ್ಮ ಪ್ರಚಾರದ ಬಗ್ಗೆ ನಿಮಗೆ ಸಿಕ್ಕ ಉತ್ತರವೇನು?
ಶ್ರೀಗಳು: ಒಬ್ಬರು ಒಂದು ಲಕ್ಷ ಕೊಡುವ ಬದಲು, ಸಾವಿರ ರೂಪಾಯಿ ರೀತಿಯಲ್ಲಿ ಹಲವರು ದೇಣಿಗೆ ನೀಡಿದರೆ, ಈ ಅಭಿಯಾನ ಕಾರ್ಯಕ್ರಮ ನಮ್ಮದು ಎನ್ನುವುದು ಭಕ್ತರಲ್ಲಿ ಬಲವಾಗಿ ಬೇರೂರುತ್ತದೆ. ಮಂದಿರ ನಿರ್ಮಾಣ ಮಾತ್ರ ಮುಖ್ಯ ಉದ್ದೇಶವಲ್ಲ. ಈ ಮಂದಿರ ನಮ್ಮದು ಎನ್ನುವ ಅಭಿಮಾನ ಮೊದಲು ಹುಟ್ಟಬೇಕು. ಹಾಗಾಗಿ, ಎಲ್ಲರ ಪಾಲ್ಗೊಳ್ಳುವಿಕೆಯ ಅವಶ್ಯಕತೆಯಿದೆ.

ಮಂದಿರ ನಿರ್ಮಾಣಕ್ಕೆ ಅಂದಾಜು ಮೊತ್ತ 2,500 ಕೋಟಿ ಸಂಗ್ರಹವಾಗಿದೆ
ಪ್ರ: ಹಿಂದೂ ಧರ್ಮವನ್ನು ಒಗ್ಗೂಡಿಸುವಲ್ಲಿ ಈ ಅಭಿಯಾನ ಎಷ್ಟರ ಮಟ್ಟಿಗೆ ಸಹಕಾರಿಯಾಗಿದೆ?
ಶ್ರೀಗಳು: ಹೀಗಂತೂ ಒಂದನ್ನು ಗಮನಿಸಿದ್ದೇವೆ. ವಿಶ್ವಸ್ಥ ಮಂಡಳಿ ಒಂದು ಕರೆಗೆ ಪ್ರಪಂಚದಲ್ಲಿ ಎಲ್ಲಡೆ ಭಕ್ತರು ಸ್ಪಂದಿಸಿದ್ದಾರೆ. ಸ್ವಲ್ಪ ಸಮಯದಲ್ಲೇ ಇಷ್ಟು ದೊಡ್ಡ ಮೊತ್ತದ ನಿಧಿಯ ಸಂಗ್ರಹವಾಗಿದೆ ಎಂದರೆ ಜನರಿಗೆ ಇರುವ ಶ್ರದ್ದಾಭಕ್ತಿಯನ್ನು ಇದರಲ್ಲಿ ನೋಡಬಹುದು. ಅಂದಾಜು ಮೊತ್ತ 2,500 ಕೋಟಿ ಸಂಗ್ರಹವಾಗಿದೆ.

ಬಳ್ಳಾರಿ, ತುಮಕೂರು ಭಾಗದ ದಲಿತರ ಕೇರಿಯಲ್ಲಿ ನಿಧಿ ಅಭಿಯಾನ
ಪ್ರ: ಬಳ್ಳಾರಿ, ತುಮಕೂರು ಭಾಗದ ದಲಿತರ ಕೇರಿಗೆ ನಿಧಿ ಅಭಿಯಾನಕ್ಕೆ ಹೋದಾಗ ಅವರುಗಳ ಪ್ರತಿಕ್ರಿಯೆ ಹೇಗಿತ್ತು?
ಶ್ರೀಗಳು: ಅಲ್ಲಿಗೆ ಮಾತ್ರವಲ್ಲ, ಎಲ್ಲಾ ಕಡೆಗೂ ಹೋಗಿದ್ದೇವೆ. ಶ್ರೀರಾಮಚಂದ್ರನ ವ್ಯಕ್ತಿತ್ವವನ್ನು ನೋಡಿ ಎಲ್ಲರೂ ಸ್ವಾಗತಿಸಿದ್ದಾರೆ. ಈ ಕಾರ್ಯ ಆಗಬೇಕಾಗಿರುವಂತದ್ದು, ನಮ್ಮ ಸೇವೆ ಸದಾ ಇದೆ ಎಂದು ಎಲ್ಲರೂ ಹೃತ್ಪೂರ್ವಕವಾಗಿ ಇದನ್ನು ಸ್ವಾಗತಿಸಿದ್ದಾರೆ ಮತ್ತು ಜೊತೆಗೆ ನಿಂತಿದ್ದಾರೆ.

ಸಿದ್ದರಾಮಯ್ಯ, ಕುಮಾರಸ್ವಾಮಿ
ಪ್ರ: ಅಯೋಧ್ಯೆ ಮಂದಿರಕ್ಕೆ ದುಡ್ಡು ನೀಡುವುದಿಲ್ಲ, ನಮ್ಮ ಊರಿನ ದೇವಾಲಯಕ್ಕೆ ದುಡ್ಡು ನೀಡುತ್ತೇನೆ ಎನ್ನುವ ಸಿದ್ದರಾಮಯ್ಯನವರ ಹೇಳಿಕೆಗೆ ನಿಮ್ಮ ಪ್ರತಿಕ್ರಿಯೆ?
ಶ್ರೀಗಳು: ಅದು ಅವರ ವ್ಯಕ್ತಿಗತ ಹೇಳಿಕೆ. ನಾವು ಅದನ್ನು ಪ್ರಶ್ನಿಸುವುದಕ್ಕೆ ಹೋಗುವುದಿಲ್ಲ. ಮತ್ತೊಬ್ಬರು ಕೊಡಬಾರದು ಎಂದು ಅವರು ಹೇಳಬಾರದಲ್ಲವೇ. ಅವರ ನಿಲುವನ್ನು ವ್ಯಕ್ತ ಪಡಿಸಲು ಅವರು ಸ್ವತಂತ್ರರು. ನಾವು ಯಾರಿಗೂ ಕೊಡಲೇಬೇಕೆಂದು ಒತ್ತಾಯಿಸಲಿಲ್ಲ.
ಪ್ರ: ಈ ವಿಚಾರದಲ್ಲಿ ಕುಮಾರಸ್ವಾಮಿಯವರ ಹೇಳಿಕೆಯ ಬಗ್ಗೆ ನಿಮ್ಮ ಅಭಿಪ್ರಾಯ?
ಶ್ರೀಗಳು: ಟ್ರಸ್ಟಿನ ಸದಸ್ಯನಾಗಿ ಕುಮಾರಸ್ವಾಮಿಯವರು ಆಕ್ಷೇಪ ವ್ಯಕ್ತ ಪಡಿಸಿದಾಗ, ನಾವು ಉತ್ತರ ಕೊಡಬೇಕಾಗಿತ್ತು. ಸಮಾಜಕ್ಕೆ ತಪ್ಪು ಸಂದೇಶ ಹೋಗಬಾರದು ಎನ್ನುವ ನಿಟ್ಟಿನಲ್ಲಿ ನಾವು ಪ್ರತಿಕ್ರಿಯೆ ನೀಡಿದ್ದೆವು.

ಮೀಸಲಾತಿ ವಿಚಾರದಲ್ಲಿ ಪೀಠಾಧಿಪತಿಗಳ ನೇತೃತ್ವ
ಪ್ರ: ಮೀಸಲಾತಿ ವಿಚಾರದಲ್ಲಿ ಪೀಠಾಧಿಪತಿಗಳು ಆ ಹೋರಾಟದ ನೇತೃತ್ವವನ್ನು ವಹಿಸಿಕೊಳ್ಳುವುದು ಸರಿಯೇ?
ಶ್ರೀಗಳು: ಎಲ್ಲಾ ಸಮುದಾಯದವರಿಗೂ ಮುಂದೆ ಬರಬೇಕು ಎನ್ನುವ ಅಪೇಕ್ಷೆ ಸಹಜ. ಅದಕ್ಕೊಂದು ಸಮರ್ಥವಾದ ನೇತೃತ್ವ ಸಿಕ್ಕಾಗ ಮಾತ್ರ ಬೇಡಿಕೆಗಳು ಈಡೇರುವ ಸಾಧ್ಯತೆ ಹೆಚ್ಚು. ಹಾಗಾಗಿ, ಪೀಠಾಧಿಪತಿಗಳು ಇಂತಹ ಹೋರಾಟದ ನೇತೃತ್ವ ವಹಿಸಿಕೊಳ್ಳುವುದರಲ್ಲಿ ತಪ್ಪಿಲ್ಲ ಎನ್ನುವುದು ನಮ್ಮ ಅಭಿಪ್ರಾಯ.

ನಿಧಿ ಅಭಿಯಾನದ ವಿಚಾರದಲ್ಲಿ ತಮ್ಮ ಮರೆಯಲಾಗದ ನೆನಪು
ಪ್ರ: ನಿಧಿ ಅಭಿಯಾನದ ವಿಚಾರದಲ್ಲಿ ತಮ್ಮ ಮರೆಯಲಾಗದ ನೆನಪು?
ಶ್ರೀಗಳು: ಎಲ್ಲೂ ಸಂಘರ್ಷಕ್ಕೆ ಎಡೆ ನೀಡದೇ ಭಕ್ತರು ದೇಣಿಗೆಯನ್ನು ನೀಡಿದ್ದಾರೆ. ಏನು ತಮ್ಮಲ್ಲಿ ಇದೆಯೋ ಅದನ್ನು ಮಂದಿರ ನಿರ್ಮಾಣಕ್ಕೆ ನೀಡಿದ್ದಾರೆ. ಶ್ರೀರಾಮನ ಮೇಲೆ ಜನರಿಗೆ ಇರುವ ಭಾವ ಇದರಿಂದ ಪ್ರಕಟವಾಗುತ್ತದೆ.