ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

22 ರೂಪಾಯಿ, SSLC ಪರೀಕ್ಷೆ, ಆಳ್ವಾಸ್ ಶಿಕ್ಷಣ ಸಂಸ್ಥೆ: ಅವಕಾಶ ತಪ್ಪಿಸಿಕೊಂಡ ಗ್ರೀಷ್ಮಾ ನಾಯಕ್

|
Google Oneindia Kannada News

ಬೆಂಗಳೂರು, ಜು. 16: ವಿದ್ಯಾರ್ಥಿಗಳಿಂದ ಲಕ್ಷಾಂತರ ರೂಪಾಯಿ ಶುಲ್ಕ ಪಡೆಯುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಹಣದಾಸೆಗೆ ಮರೆಯಾದ ಮಾನವೀಯತೆಗೆ ವಿದ್ಯಾರ್ಥಿನಿಯೊಬ್ಬಳ ಶೈಕ್ಷಣಿಕ ಭವಿಷ್ಯವೇ ಮಂಕಾಗಿರುವುದು ಬೆಳಕಿಗೆ ಬಂದಿದೆ. ಮೂಡುಬಿದರೆ ಆಳ್ವಾಸ್ ರೆಸಿಡೆನ್ಸಿಯಲ್ ಶಾಲೆ ವಿದ್ಯಾರ್ಥಿನಿ ಕೇವಲ 22 ರೂಪಾಯಿ ಪರೀಕ್ಷಾ ಶುಲ್ಕ ಭರಿಸಿಲ್ಲ. ಹೀಗಾಗಿ ಆಕೆಗೆ ಇದೇ ಜುಲೈ 19 ಹಾಗೂ 22 ರಂದು ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವುದನ್ನೆ ನಿರಾಕರಿಸಲಾಗಿದೆ.

ಇಡೀ ಪ್ರಕರಣದ ಸಮಗ್ರ ಮಾಹಿತಿ ಇಲ್ಲಿದೆ.

ಮೂಡುಬಿದರೆ ಆಳ್ವಾಸ್ ಶಾಲೆ ವಿದ್ಯಾರ್ಥಿನಿ

ಮೂಡುಬಿದರೆ ಆಳ್ವಾಸ್ ಶಾಲೆ ವಿದ್ಯಾರ್ಥಿನಿ

ರಾಜ್ಯದ ಪ್ರಭಾವಿ ಶಿಕ್ಷಣ ಸಂಸ್ಥೆಗಳಲ್ಲೊಂದಾಗಿರುವ ಮೂಡುಬಿದರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಶಾಲೆಯ ವಿದ್ಯಾರ್ಥಿನಿಯೊಬ್ಬಳಿಗೆ ಎಸ್‌ಎಸ್ಎಲ್‌ಸಿ ಪರೀಕ್ಷೆ ಬರೆಯಲು ಅವಕಾಶ ತಪ್ಪಿದೆ. ಮೂಲತಃ ತುಮಕೂರು ಜಿಲ್ಲೆಯ ಕೊರಟಗೆರೆಯ ಗ್ರೀಷ್ಮ ನಾಯಕ್ ಎನ್. ಎಂಬುವರೆ ಪರೀಕ್ಷೆ ಬರೆಯುವುದರಿಂದ ವಂಚಿತಳಾಗಿರುವ ವಿದ್ಯಾರ್ಥಿನಿ. ಈ ಬಗ್ಗೆ ಸ್ವತಃ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರಿಗೆ ಆ ವಿದ್ಯಾರ್ಥಿನಿ ಎರಡು ಬಾರಿ ಮನವಿ ಮಾಡಿಕೊಂಡಿದ್ದರೂ ಯಾವುದೇ ಪ್ರಯೋಜವಾಗಿಲ್ಲ.

ಕಳೆದ ಡಿಸೆಂಬರ್ 2020ರಲ್ಲಿಯೇ ಈ ವಿದ್ಯಾರ್ಥಿನಿ ಇ-ಮೇಲ್ ಮೂಲಕ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿರುದ್ಧ ದೂರು ಕೊಟ್ಟಿದ್ದರು. ಜೊತೆಗೆ ನಿನ್ನೆ(ಜು.15)ಯೂ ಕೂಡ ತನ್ನ ಸಮಸ್ಯೆಯನ್ನು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರ ಗಮನಕ್ಕೆ ತಂದಿದ್ದಾರೆ. ಆ ವಿದ್ಯಾರ್ಥಿನಿ ಅತ್ಯಂತ ಪ್ರತಿಭಾವಂತೆ ಎಂಬುದೂ ಕೂಡ ಗಮನಿಸಬೇಕಾದ ಅಂಶ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ವಿದ್ಯಾರ್ಥಿನಿ ಮಾಡಿಕೊಂಡಿದ್ದ ಮನವಿ ಯಥಾವತ್ತಾಗಿ ಮುಂದಿದೆ.

ಪರೀಕ್ಷೆ ಬರೆಯಲು ಅವಕಾಶ ಕೊಡಿಸಿ

ಪರೀಕ್ಷೆ ಬರೆಯಲು ಅವಕಾಶ ಕೊಡಿಸಿ

"10 ನೇ ತರಗತಿ ಪರೀಕ್ಷೆ ಬರೆಯಲು ಅವಕಾಶ ಕೋರಿ ಎಂದು ಮನವಿ ಆರಂಭಿಸಿರುವ ಗ್ರೀಷ್ಮ, ಸರ್ ನನ್ನ ಹೆಸರು ಗ್ರೀಷ್ಮ ನಾಯಕ್ ಎನ್. ಕೊರಟಗೆರೆಯ ಹನುಮಂತಪುರ ನಿವಾಸಿ. ಮೂಡಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ 20/21ನೇ ಸಾಲಿನ 10 ನೇ ತರಗತಿ (ST) ವಿಧ್ಯಾರ್ಥಿನಿ. ಕಳೆದ ವರ್ಷದ ಶಾಲಾ ಶುಲ್ಕ (ವಸತಿ ಮತ್ತು ಊಟದ್ದು) ಬಾಕಿಯಿರುವುದಕ್ಕೆ ನನ್ನನ್ನು ಶಾಲೆಗೆ ಸೇರಿಸಿಲ್ಲ. ಯಾವುದೇ ರಿಯಾಯಿತಿ ಬೇಡ, ಸಮಯ ಕೊಟ್ಟರೆ ಸಾಕು ದಯಮಾಡಿ ಪಾವತಿಸುತ್ತಾರೆ ಪೋಷಕರು. 9ನೇ ತರಗತಿಯಲ್ಲಿ ನನ್ನ ಫಲಿತಾಂಶ ಶೇಕಡಾ 96ರಷ್ಟಿದೆ. 10 ನೇ ತರಗತಿ ಪರೀಕ್ಷೆ ಬರೆಯಲು ಅವಕಾಶ ಕೊಡಿಸಿ" ಎಂದು ಮನವಿ ಮಾಡಿ ಕೊಂಡಿದ್ದಳು.

ಆ ವಿದ್ಯಾರ್ಥಿನಿ ಗ್ರೀಷ್ಮ ಅವರ ಮನವಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಗಮನಕ್ಕೆ ಬಂದಿತ್ತು. ಅದಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಕೊಟ್ಟಿರುವ ಪ್ರತಿಕ್ರಿಯೆ ಮುಂದಿದೆ.

'ನಾನೇ ಗ್ರೀಷ್ಮ ಜೊತೆ ಮಾತನಾಡಿದ್ದೇನೆ'

'ನಾನೇ ಗ್ರೀಷ್ಮ ಜೊತೆ ಮಾತನಾಡಿದ್ದೇನೆ'

ವಿದ್ಯಾರ್ಥಿನಿಯ ಮನವಿಗೆ ಸ್ಪಂಧಿಸಿದ್ದ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು, ಒಂದೇ ಮಾತಿನಲ್ಲಿ ಆ ವಿದ್ಯಾರ್ಥಿನಿಯ ಇಡೀ ಸಮಸ್ಯೆಯನ್ನು ಪರಿಹರಿಸಿದ್ದರು. ತಮ್ಮ ವಾಟ್ಸ್‌ ಆ್ಯಪ್‌ ಗ್ರೂಪ್‌ನಲ್ಲಿ ಪ್ರತಿಕ್ರಿಯೆ ಕೊಟ್ಟಿದ್ದ ಅವರು, "ನಾನೇ ಗ್ರೀಷ್ಮ ಜೊತೆ ಮಾತನಾಡಿದ್ದೇನೆ. ಪರಿಹಾರ ಸೂಚಿಸಿದ್ದೇನೆ" ಎಂದು ಸ್ಪಷ್ಟನೆ ಕೊಟ್ಟಿದ್ದರು. ಹೀಗಾಗಿ ಆ ವಿದ್ಯಾರ್ಥಿನಿಗೆ ನ್ಯಾಯ ಸಿಕ್ಕು ಪರೀಕ್ಷೆ ಬರೆಯುವಂತಾಯಿತು ಎಂದು ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ಪಡೆಯಲು ಅವಳ ಮೊಬೈಲ್‌ಗೆ 'ಒನ್‌ಇಂಡಿಯಾ ಕನ್ನಡ' ಕರೆ ಮಾಡಿದಾಗ ಅಘಾತ ಕಾಯ್ದಿತ್ತು. ಆ ವಿದ್ಯಾರ್ಥಿನಿ ಜೊತೆಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾತನಾಡಿದ್ದರು, ಆದರೆ ಸಮಸ್ಯೆ ಮಾತ್ರ ಪರಿಹಾರವಾಗಿರಲಿಲ್ಲ. ಅಷ್ಟಕ್ಕೂ ಸಚಿವ ಸುರೇಶ್ ಕುಮಾರ್ ಆ ವಿದ್ಯಾರ್ಥಿನಿಗೆ ಹೇಳಿದ್ದೇನು? ಮುಂದಿದೆ.

ಈಗ ಬೇಡ ಮುಂದೆ ಪರೀಕ್ಷೆ!

ಈಗ ಬೇಡ ಮುಂದೆ ಪರೀಕ್ಷೆ!

"ಹೌದು, ನಮ್ಮ ಮಗಳು ಗ್ರೀಷ್ಮ ಜೊತೆಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಮಾತನಾಡಿದ್ದಾರೆ. ಆದರೆ ಈಗಲ್ಲ, ಮುಂದಿನ ತಿಂಗಳು ಆಗಷ್ಟ್‌ ತಿಂಗಳಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವಂತೆ ಹೇಳಿದ್ದಾರೆ. ಆಗಷ್ಟ್‌ ತಿಂಗಳಿನಲ್ಲಿ ಸಪ್ಲಿಮೆಂಟರಿ ಪರೀಕ್ಷೆ ಇರುತ್ತದೆ. ಆಗ ಪರೀಕ್ಷೆ ಬರೆಯಬಹುದು. ಯಾವುದಕ್ಕೂ ಧೈರ್ಯ ಕಳೆದುಕೊಳ್ಳಬೇಡ ಎಂದು ಹೇಳಿದ್ದಾರೆ" ಎಂದು ವಿದ್ಯಾರ್ಥಿನಿ ಗ್ರಷ್ಮ ತಂದೆ ನರಸಿಂಹಮೂರ್ತಿ ಅವರು 'ಒನ್‌ಇಂಡಿಯಾ ಕನ್ನಡ'ಕ್ಕೆ ಮಾಹಿತಿ ಕೊಟ್ಟರು. "ಜೊತೆಗೆ ಆಗಷ್ಟ್‌ ತಿಂಗಳಿನಲ್ಲಿ ಮತ್ತೆ ಪರೀಕ್ಷೆ ಇದೆಯಾ ಸರ್?" ಎಂದು ಮುಗ್ಧತೆಯಿಂದ ಮರು ಪ್ರಶ್ನೆ ಮಾಡಿದರು.

ಹೀಗಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರ ಸೂಚನೆಯ ಬಳಿಕವೂ ವಿದ್ಯಾರ್ಥಿನಿ ಪರೀಕ್ಷೆ ಬರೆಯುವುದನ್ನು ತಪ್ಪಿಸಿದ್ದು ಯಾಕೆ? ಅದಕ್ಕೆ ಬೇರೆನಾದರೂ ಕಾರಣ ಇದೆಯಾ ಎಂಬ ಪ್ರಶ್ನೆಗೆ ಶಿಕ್ಷಣ ಇಲಾಖೆ ಉತ್ತರಿಸಬೇಕಿದೆ. ಈ ಬಗ್ಗೆ ಸುರೇಶ್ ಕುಮಾರ್ ಅವರು ಈ ಕುರಿತು ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ.

ಡಿಸೆಂಬರ್‌ನಲ್ಲಿಯೇ ಶಿಕ್ಷಣ ಸಚಿವರ ಗಮನಕ್ಕೆ

ಡಿಸೆಂಬರ್‌ನಲ್ಲಿಯೇ ಶಿಕ್ಷಣ ಸಚಿವರ ಗಮನಕ್ಕೆ

ಕಳೆದ ಒಂದೂವರೆ ವರ್ಷಗಳಿಂದ ಶಾಲಾ-ಕಾಲೇಜುಗಳನ್ನು ತೆರೆಯಲು ಸರ್ಕಾರ ಅನುಮತಿ ಕೊಟ್ಟಿಲ್ಲ. ಆದರೆ ಕೊರೊನಾ ವೈರಸ್ ಸಂಕಷ್ಟದ ಕಾಲದಲ್ಲಿ ಆಳ್ವಾಸ್ ರೆಸಿಡೆನ್ಸಿಯಲ್ ಶಾಲೆ ನಡೆದಿದೆ ಎಂಬ ಮಾಹಿತಿ ಬಂದಿದೆ. ಅದಕ್ಕೆ ವಿದ್ಯಾರ್ಥಿನಿ ಈ ಹಿಂದೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಮಾಡಿದ್ದ ಇ-ಮೇಲ್‌ನಲ್ಲಿ ದಾಖಲೆಯಿದೆ.

ಕಳೆದ ಡಿಸೆಂಬರ್ ತಿಂಗಳಿನಲ್ಲಿ ತನ್ನ ಸಮಸ್ಯೆಯನ್ನು ಶಿಕ್ಷಣ ಸಚಿವರ ಗಮನಕ್ಕೆ ತಂದಿದ್ದ ವಿದ್ಯಾರ್ಥಿನಿ ಗ್ರೀಷ್ಮ ಅವರು, ಇ-ಮೇಲ್ ಮೂಲಕ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿರುದ್ಧ ದೂರು ಕೊಟ್ಟಿದ್ದರು. "ನಮ್ಮ ಶಾಲೆಯವರು ಸಂಪೂರ್ಣ ಶುಲ್ಕ ತುಂಬಲು ಕೇಳುತ್ತಿದ್ದಾರೆ. ಫೀಸ್ ತುಂಬಲು ನಮಗೆ ಸಮಯಾವಕಾಶ ಕೊಡಿಸಿ ಸರ್. ಯಾವುದೇ ರಿಯಾಯತಿ ನಮಗೆ ಬೇಡ. ಕಷ್ಟದಲ್ಲಿದ್ದೇವೆ, ನಮಗೆ ಸಮಯ ಕೊಡಿಸುವ ಸಹಾಯ ಮಾಡಿ" ಎಂದು ವಿನಂತಿಸಿಕೊಂಡಿದ್ದಳು. ಆ ದೂರು ಆಧರಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸುರೇಶ್ ಕುಮಾರ್ ಸೂಚಿಸಿದ್ದರು. ಆದರೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಆಲ್ವಾಸ್ ಶಾಲೆ ವಿದ್ಯಾರ್ಥಿಯನಿಯ ನೋಂದಣಿ ಮಾಡಿಸಿಲ್ಲ ಎಂಬುದು ಗಮನಿಸಬೇಕಾದ ಅಂಶ.

ಕೇವಲ 22 ರೂ.ಗಳಿಗೆ ಭವಿಷ್ಯ ಮಂಕು!

ಕೇವಲ 22 ರೂ.ಗಳಿಗೆ ಭವಿಷ್ಯ ಮಂಕು!

ವಿದ್ಯಾರ್ಥಿನಿ ತನ್ನ 9ನೇ ತರಗತಿಯ ಶಾಲಾ ಶುಲ್ಕದಲ್ಲಿ ಸ್ವಲ್ಪ ಹಣವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನಕ್ಕೆ ಭರಿಸಬೇಕಾಗಿತ್ತು. ಆದರೆ ಕೊರೊನಾವೈರಸ್ ಲಾಕ್‌ಡೌನ್ ನಿಂದಾಗಿ ಶುಲ್ಕ ಭರಿಸಲು ಆಗಿರಲಿಲ್ಲ. ಈ ಮಧ್ಯೆ ಶೇಕಡಾ 96 ಅಂಕಗಳನ್ನು ಪಡೆದು 9ನೇ ತರಗತಿಯನ್ನೂ ವಿದ್ಯಾರ್ಥಿನಿ ಪಾಸ್ ಮಾಡಿದ್ದಳು. ಹೀಗಾಗಿ ಸರ್ಕಾರದ ಸುತ್ತೊಲೆಯಂತೆ 9ನೇ ತರಗತಿ ಪಾಸ್ ಆಗಿರುವ ಎಲ್ಲ ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಬರೆಸುವ ಜವಾಬ್ದಾರಿ ಮೂಡುಬಿದರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಶಾಲೆಯ ಮೇಲೂ ಇತ್ತು.

ಇನ್ನು ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕವಿಲ್ಲ. ಆದರೆ ಆ ಸಮುದಾಯದ ವಿದ್ಯಾರ್ಥಿಗಳು 22 ರೂಪಾಯಿ ಲ್ಯಾಮಿನೇಶನ್ ಫೀಯನ್ನು ಕೊಡಬೇಕು. ಹೀಗಾಗಿ ಶಿಕ್ಷಣ ಇಲಾಖೆಯ ಮಾರ್ಗಸೂಚಿಯಂತೆ ವಿದ್ಯಾರ್ಥಿನಿ ಭರಿಸಬೇಕಾಗಿದ್ದ ಹಣ ಕೇವಲ 22 ರೂಪಾಯಿಗಳು ಮಾತ್ರ.

ಅಷ್ಟು ಹಣವನ್ನು ವಿದ್ಯಾರ್ಥಿನಿ ಭರಿಸದೇ ಇದ್ದಲ್ಲಿ ಪ್ರತಿಷ್ಠಿತ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಶಾಲೆಯೆ ಭರಿಸಿ ಆಮೇಲೆ ವಿದ್ಯಾರ್ಥಿನಿಯಿಂದ ಪಡೆಯಬಹುದಾಗಿತ್ತು. ಜೊತೆಗೆ ಸಂಪೂರ್ಣ ಶುಲ್ಕವನ್ನು ಭರಿಸಲು ಸಮಯಾವಕಾಶ ಬೇಕು ಎಂದು ವಿದ್ಯಾರ್ಥಿನಿ ಲಿಖಿತ ಪತ್ರವನ್ನೂ ಶಾಲೆಗೆ ಕೊಟ್ಟಿದ್ದಳು. ಅದ್ಯಾವುದಕ್ಕೂ ಆಳ್ವಾಸ್ ಶಾಲೆ ಮನ್ನಣೆ ಕೊಟ್ಟಿಲ್ಲ ಎಂಬುದು ವಿದ್ಯಾರ್ಥಿನಿಯ ತಂದೆ ನರಸಿಂಹ ಮೂರ್ತಿ ಅವರ ಆರೋಪ. ಈ ಬಗ್ಗೆ ಶಿಕ್ಷಣ ಇಲಾಖೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕಾಗಿದೆ.

Recommended Video

ಕುತೂಹಲ ಮೂಡಿಸಿರುವ ಪ್ರಶಾಂತ್ ಹಾಗು ಸೋನಿಯಾ ಗಾಂಧಿ ಭೇಟಿ! | Oneindia Kannada
ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಆಗ್ರಹ

ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಆಗ್ರಹ

ಸರ್ಕಾರದ ಆದೇಶಗಳ ಹೊರತಾಗಿಯೂ ಎಸ್‌ಎಸ್ಎಲ್‌ಸಿ ವಿದ್ಯಾರ್ಥಿನಿ ಗ್ರೀಷ್ಮಾ ಪರೀಕ್ಷೆ ಬರೆಯುವುದರಿಂದ ವಂಚಿತಳಾಗಿದ್ದಾಳೆ. ತನ್ನದಲ್ಲದ ತಪ್ಪಿದೆ ಒಂದು ವರ್ಷ ಹಿಂದೆ ಉಳಿಯಬೇಕಾಗಿದೆ. ಇಡೀ ಪ್ರಕರಣದ ಕುರಿತು ರಾಜ್ಯ ಶಿಕ್ಷಣ ಇಲಾಖೆ ಸಮಗ್ರ ತನಿಖೆ ನಡೆಸುವ ಅಗತ್ಯವಿದೆ. ಇದೇ ರೀತಿ ಎಷ್ಟು ವಿದ್ಯಾರ್ಥಿಗಳಿಗೆ ತೊಂದರೆ ಆಗಿದೆ ಎಂಬುದನ್ನು ಸ್ಪಷ್ಟಪಡಿಸುವ ಜವಾಬ್ದಾರಿ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರ ಮೇಲಿದೆ.

ಇಡೀ ಪ್ರಕರಣದ ಕುರಿತು ಮೂಡುಬಿದರೆ ಆಳ್ವಾಸ್ ರೆಸಿಡೆನ್ಸಿಯಲ್ ಶಾಲೆಯ ಪ್ರತಿಕ್ರಿಯೆ ಪಡೆಯಲು ಹಲವು ಬಾರಿ ಸ್ಥಿರ ದೂರವಾಣಿ ಸಂಖ್ಯೆಗೆ ಕರೆ ಮಾಡಿ 'ಒನ್‌ಇಂಡಿಯಾ ಕನ್ನಡ' ಪ್ರಯತ್ನಿಸಿತು. ಆದರೆ ದೂರವಾಣಿ ಕರೆಯನ್ನು ಸ್ವೀಕರಿಸಲಿಲ್ಲ. ಹೀಗಾಗಿ ಇಡೀ ಪ್ರಕರಣದ ಕುರಿತು ಇನ್ನೂ ಆಳ್ವಾಸ್ ರೆಸಿಡೆನ್ಸಿಯಲ್ ಶಾಲೆಯ ಪ್ರತಿಕ್ರಿಯೆಗಾಗಿ ಕಾಯಲಾಗುತ್ತಿದೆ.

ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿಗೆ ಮಣಿದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆಯೋಜಿಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಅದು ನಿಜವಲ್ಲ ಎಂದು ಸಾಬೀತು ಮಾಡಲು ವಿದ್ಯಾರ್ಥಿನಿ ಗ್ರೀಷ್ಮಗೆ ಆಗಿರುವ ಅನ್ಯಾಯದ ಕುರಿತು ತನಿಖೆ ನಡೆಯಬೇಕಿದೆ. ಇಡೀ ಪ್ರಕರಣದ ಬಗ್ಗೆ ತನಿಖೆ ನಡೆಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆದೇಶ ಮಾಡಬೇಕಾಗಿದೆ. ಅದೇ ಆಶಯದಲ್ಲಿ ಇಡಿ ಮಾಡಿಮ ಶಿಕ್ಷಣ ಪ್ರೇಮಿಗಳು ಹಾಗೂ ವಿದ್ಯಾರ್ಥಿಗಳು ಇದ್ದಾರೆ. ಯಡಿಯೂರಪ್ಪ ಅವರು ಆ ಭರವಸೆಯನ್ನು ಕಳೆದುಕೊಳ್ಳದಿರಲಿ ಎಂದು ಆಶಿಸೋಣ!

English summary
A student of the prestigious Moodabidre Alvas Residential School has deprived of writing the SSLC exam as she did not pay the exam fee. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X