ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಕು-ಲೀಲಾ ಪ್ರಕರಣ : ನ್ಯಾಯ ಯಾವಾಗ?

|
Google Oneindia Kannada News

Akku-Leela
ಉಡುಪಿ, ಡಿ. 9 : ಕರ್ನಾಟಕದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಉಡುಪಿಯ ಅಕ್ಕು ಹಾಗೂ ಲೀಲಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ನಾಲ್ಕು ವರ್ಷಗಳಾದರೂ ಪಾಲಿಸದ ಶಿಕ್ಷಣ ಇಲಾಖೆ ಅಧಿಕಾರಿಗಳು ಸದ್ಯ ನ್ಯಾಯಾಂಗ ನಿಂದನೆ ಎದುರಿಸಲು ಸಜ್ಜಾಗಿದ್ದಾರೆ. ಕೋರ್ಟ್ ಆದೇಶದಂತೆ ಅಕ್ಕು-ಲೀಲಾ ಅವರ ವೇತನ ಬಿಡುಗಡೆ ಮಾಡುವಂತೆ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಎಸ್.ಬಿ.ಪಟಗಾರ್ ಆದೇಶ ನೀಡಿದ್ದಾರೆ. ಆದರೆ, 42 ವರ್ಷಗಳವೇತನ ಬಾಕಿ ಉಳಿಸಿಕೊಳ್ಳಲಾಗಿದೆ.

ಅಕ್ಕು ಹಾಗೂ ಲೀಲಾ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಅರ್ಜಿಯ ವಿಚಾರಣೆ ನಡೆಸಿ 2010ರಲ್ಲಿ ಆದೇಶ ನೀಡಿದ ಸುಪ್ರೀಂ ಕೋರ್ಟ್ ಅಕ್ಕು ಹಾಗೂ ಲೀಲಾರ ಸೇವೆಯನ್ನು ಖಾಯಂಗೊಳಿಸಿ ಅವರ ಸೇವೆಗೆ 1971 ರಿಂದಲೂ ಪೂರ್ಣ ವೇತನ ನೀಡುವಂತೇ ಸರ್ಕಾರಕ್ಕೆ ಸೂಚನೆ ನೀಡಿತ್ತು.

ಈ ಆದೇಶ ಪ್ರಕಟಗೊಂಡು ನಾಲ್ಕು ವರ್ಷಗಳು ಕಳೆದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಸುಪ್ರೀಂಕೋರ್ಟ್ ಆದೇಶವನ್ನು ಪಾಲನೆ ಮಾಡಿಲ್ಲ. ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನವು ಈ ಕುರಿತು ಮಾಧ್ಯಮಗಳಲ್ಲಿ ಹಲವು ಲೇಖನಗಳನ್ನು ಪ್ರಕಟಿಸಿ, ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸಲು ಪ್ರಯತ್ನಿಸಿತು. ಇದರಿಂದ ಎಚ್ಚೆತ್ತಕೊಂಡ ಅಧಿಕಾರಿಗಳು 1998 ರಿಂದ 2003ರ ಮಾರ್ಚ್ ತಿಂಗಳ ವರೆಗಿನ ಮೂಲ ವೇತನದ ಆಧಾರದಲ್ಲಿ ಐದು ವರ್ಷಗಳ ವೇತನ ನೀಡುವಂತೆ ಆದೇಶಿಸಿದ್ದಾರೆ.

ಆದರೆ, ಅಕ್ಕು-ಲೀಲಾರವರು ನೀಡಿರುವ ಹಿಂದಿನ ಸೇವೆಯನ್ನು ಖಾಯಂಗೊಳಿಸುವ ಯಾವುದೇ ಕ್ರಮವನ್ನು ಅಧಿಕಾರಿಗಳು ಕೈಗೊಂಡಿಲ್ಲ ಮತ್ತು ಕಳೆದ 42 ವರ್ಷಗಳ ಸೇವಾವಧಿಯಲ್ಲಿ ಬಾಕಿ ಉಳಿಸಿಕೊಂಡಿರುವ ವೇತನ ಬಿಡುಗಡೆ ಮಾಡಿಲ್ಲ. ಸದ್ಯ ಈ ವಿಚಾರ ಪುನಃ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಅಧಿಕಾರಿಗಳು ನ್ಯಾಯಾಂಗ ನಿಂದನೆ ಅಡಿ ಬಂಧನದ ಭೀತಿ ಎದುರಿಸುತ್ತಿದ್ದಾರೆ.

ಕಳೆದ ಜೂನ್ ತಿಂಗಳಲ್ಲಿ ಈ ಕುರಿತು ಸುಪ್ರೀಂ ಕೋರ್ಟಿನಲ್ಲಿ ನ್ಯಾಯಾಂಗ ನಿಂದನೆ ದೂರು ದಾಖಲಾಗಿದೆ. ಕೋರ್ಟ್ ತೀರ್ಪನ್ನು ಪಾಲಿಸುವಂತೆ ಸೆಪ್ಟಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಕೋರ್ಟ್ ಕಾಲಾವಕಾಶ ನೀಡಿದ್ದರೂ, ಶಿಕ್ಷಣ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಸದ್ಯ ಅಂತಿಮ ಎಚ್ಚರಿಕೆಯನ್ನು ನೀಡಲಾಗಿದ್ದು, ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಹಾಗೂ ಸಂಬಂಧಿತ ಅಧಿಕಾರಿಗಳ ಬಂಧನವಾಗುವ ಸಾಧ್ಯತೆ ಇದೆ.

ಅಕ್ಕು-ಲೀಲಾ ಪ್ರಕರಣ : ಅಕ್ಕು ಮತ್ತು ಲೀಲಾ ಶಿಕ್ಷಣ ಇಲಾಖೆ ನಡೆಸುವ ಉಡುಪಿಯ ಸರ್ಕಾರಿ ಹೆಣ್ಣುಮಕ್ಕಳ ತರಬೇತಿ ಕೇಂದ್ರದಲ್ಲಿ ಸುಮಾರು 40 ವರ್ಷಗಳಿಂದ ತಾತ್ಕಾಲಿಕ ನೆಲೆಯಲ್ಲಿ ತಿಂಗಳಿಗೆ ಕೇಲವ 15 ರೂಪಾಯಿ ಮೂಲ ವೇತನದಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು, 2011ರಲ್ಲಿ ನಿವೃತ್ತಿಯಾದರು.

ತಮ್ಮ ಸೇವೆಯನ್ನು ಖಾಯಂಗೊಳಿಸಿ ಹಾಗೂ ಇತರ ನೌಕರರಂತೇ ತಮಗೆ ಪೂರ್ಣ ವೇತನ ನೀಡಿರಿ ಎಂದು ಅಕ್ಕು - ಲೀಲಾ ಮಾಡಿದ ಎಲ್ಲಾ ಮನವಿಗಳನ್ನು ಸರ್ಕಾರ ಕಸದ ಬುಟ್ಟಿಗೆ ಹಾಕಿತ್ತು. 1984ರ ಮೊದಲು ನಿರಂತರವಾಗಿ 10 ವರ್ಷಗಳಿಗಿಂತಲೂ ಹೆಚ್ಚಿನ ಅವಧಿಗೆ ಸೇವೆ ನೀಡಿದ ಎಲ್ಲಾ ತಾತ್ಕಾಲಿಕ ನೌಕರರನ್ನು ಖಾಯಂಗೊಳಿಸಬೇಕು ಎಂಬ ಆದೇಶವನ್ನು ಸರ್ಕಾರ ಪಾಲಿಸದೆ ಅಕ್ಕು-ಲೀಲಾರ ಸೇವೆಯನ್ನು ಖಾಯಂಗೊಳಿಸಿರಲಿಲ್ಲ.

1998ರಲ್ಲಿ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ನೆರವಿನೊಂದಿಗೆ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಗೆ ದೂರು ನೀಡಿದ್ದ ಅಕ್ಕು -ಲೀಲಾ ರನ್ನು ಇಲಾಖೆ ಸೇವೆಯಿಂದಲೇ ವಜಾ ಮಾಡಿತು. ಸಂಬಳ ಪಡೆಯದೇ ಇದ್ದರು ಅಕ್ಕು -ಲೀಲಾ ತಮ್ಮ ಸೇವೆಯನ್ನು ತಪ್ಪದೇ ನಿರ್ವಹಿಸುತ್ತಿದ್ದರು. 2003ರಲ್ಲಿ ಈ ಪ್ರಕರಣದಲ್ಲಿ ತೀರ್ಪು ನೀಡಿದ ನ್ಯಾಯಮಂಡಳಿ ಇವರ ಸೇವೆಯನ್ನು ಖಾಯಂಗೊಳಿಸಿತು ಮತ್ತು 1971 ರಿಂದಲೂ ಅವರಿಗೆ ಇತರರಂತೆ ವೇತನ ಪಾವತಿಸಲು ಆದೇಶಿಸಿತ್ತು.

ಈ ಆದೇಶವನ್ನು ಪ್ರಶ್ನಿಸಿ, ಕರ್ನಾಟಕ ಸರ್ಕಾರ ಹೈಕೋರ್ಟ್ ಮೊರೆ ಹೋಗಿತ್ತು. ಆದರೆ, ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಹೈಕೋರ್ಟ್, 2004ರಲ್ಲಿ ಅಧೀನ ನ್ಯಾಯಾಲಯದ ಆದೇವನ್ನು ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ, ಸುಪ್ರೀಂಕೋರ್ಟ್ ಗೆ ಹೋದ ಸರ್ಕಾರಕ್ಕೆ ಅಲ್ಲೂ ಮುಖಭಂಗವಾಗಿತ್ತು.

English summary
In a very disgraceful case of Akku-Leela from Udupi which has made the entire country bow in shame, the officials of Karnataka Government who failed to follow Supreme Court orders even after 4 years are now trying to escape punishment for contempt of court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X