ಜಲ್ಲಿಕಟ್ಟು ಆಯ್ತು, ಕಂಬಳಕ್ಕೆ ಕನ್ನಡಿಗರು ಒಂದಾಗಬೇಕು: ಶಾಮ್
ಬೆಂಗಳೂರು, ಜನವರಿ 28: ಜಲ್ಲಿಕಟ್ಟು ಆಚರಣೆಗಾಗಿ ತಮಿಳರು ಒಂದಾಗಿದ್ದು ಎಲ್ಲರಿಗೂ ತಿಳಿದಿರುವ ವಿಷಯ. ಈಗ ಕರ್ನಾಟಕದಲ್ಲಿ ಕಂಬಳಕ್ಕಾಗಿ ಹೋರಾಟ ಆರಂಭವಾಗಿದೆ. ಕನ್ನಡಿಗರೇ ಒಂದಾಗಿ ಎಂದು ಒನ್ ಇಂಡಿಯಾ ಕನ್ನಡ ಸಂಪಾದಕ ಎಸ್ಕೆ ಶಾಮಸುಂದರ ಅವರು ತಮ್ಮ ಸಂಥಿಂಗ್ ವಿತ್ ಶಾಮ್ ವಿಡಿಯೋ ಸರಣಿಯಲ್ಲಿ ಹೇಳಿದ್ದಾರೆ.
ಪ್ರಮುಖವಾಗಿ ಇವತ್ತಿನ ಟಾಪಿಕ್ ಕಂಬಳ, ಕರಾವಳಿ ಪ್ರದೇಶದಲ್ಲಿ ಜನಪ್ರಿಯವಾಗಿದೆ. ಕಂಬಳ ಮಾಡಬೇಕಾ? ಬೇಡ್ವಾ? ಇದು ನಮ್ಮ ಹಕ್ಕು ಎಂಬ ಚಳವಳಿ ಆರಂಭವಾಗಿದೆ. ತಮಿಳುನಾಡಿನಲ್ಲಿ ಜಲ್ಲಿಕಟ್ಟಿಗಾಗಿ ನಡೆದ ಜನಾಂದೋಲನ ಕಂಬಳಕ್ಕೆ ಪ್ರೇರಣೆ ಏಕಾಗಬಾರದು ಎಂಬ ಪ್ರಶ್ನೆ ಎದ್ದಿದೆ.[ಕಂಬಳ ಇರಲಿ, ಪನಿಕುಲ್ಲನೆ ಬೇಡ: ದೇವನೂರು ಮಹಾದೇವ]
ಜಲ್ಲಿಕಟ್ಟು ಹೋರಾಟಕ್ಕೆ ಆರ್ ಜೆ ಬಾಲಾಜಿ ಬಂದರು, ವಿದ್ಯಾರ್ಥಿ ಸಮೂಹವೇ ಮರೀನಾ ಬೀಚ್ ನಲ್ಲಿ ಸೇರಿತು. ಡಿಎಂಕೆ, ಪಿಎಂಕೆ ಎಲ್ಲಾ ರಾಜಕೀಯ ಪಕ್ಷಗಳು ಸೇರಿದವು, ನಂತರ ವಿಶಾಲ್, ಸಿಂಬು ಬಂದರು, ಜಲ್ಲಿಕಟ್ಟು ಥೀಮ್ ಇರೋ ಸಿನಿಮಾ ಮಾಡಿದ ಕಮಲ್ ಹಾಸನ್ ಬಂದರು. ರಜನಿ ಕಾಂತ್ ಬರುತ್ತಿದ್ದಂತೆ ಪ್ರತಿಭಟನೆ ಕಾವೇರಿತು, ಸರ್ಕಾರ ಕೂಡಾ ಜನಾದೇಶಕ್ಕೆ ತಲೆಬಾಗಿತು. ಈ ರೀತಿ ಆಂದೋಲನ, ಒಗ್ಗಟ್ಟು ನಮ್ಮಲ್ಲಿ ಏಕೆ ಸಾಧ್ಯವಿಲ್ಲ ಎಂಬ ಪ್ರಶ್ನೆ ಎದ್ದಿದೆ.[ಹಿಂಸೆರಹಿತ ಕಂಬಳಕ್ಕೆ ಪೇಜಾವರ ಶ್ರೀಗಳ ಬೆಂಬಲ]
ಕೋರ್ಟ್ ಆದೇಶ ಪಾಲಿಸುತ್ತಿದ್ದೇವೆ, ಕಂಬಳಕ್ಕೆ ವಿಶೇಷ ಕಾನೂನು ತರಲಾಗುವುದು ಎಂದು ಸರ್ಕಾರ ಹೇಳುತ್ತಿದೆ. ಕಂಬಳ ಏಕೆ ಕರಾವಳಿಗೆ ಮಾತ್ರ ಸೀಮಿತವಾಗಬೇಕು? ಕರ್ನಾಟಕದ ಸಾಂಸ್ಕೃತಿಕ ಆಂದೋಲನವಾಗಬಾರದು ಎಂದು ಶಾಮ್ ಪ್ರಶ್ನಿಸಿದ್ದಾರೆ. ಕಂಬಳ ಎಂದರೇನು? ಕಂಬಳದ ಕಿಂಗ್ ಎನಿಸಿಕೊಂಡಿರುವ ನಾಗರಾಜ ಬಗ್ಗೆ ಮುಂದಿನ ವಿಡಿಯೋಗಳಲ್ಲಿ ಮಾತನಾಡಲಿದ್ದಾರೆ.[ಸಾಮಾಜಿಕ ತಾಣಗಳಲ್ಲಿ ಕಂಬಳದ್ದೇ ಹವಾ ಗುರು]