ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರದ ತಪ್ಪಿನಿಂದ ಸಾರ್ವಜನಿಕರಿಗೆ ಹೊಡೆದಿದ್ದು ಹೇಗೆ ಕರೆಂಟ್ ಶಾಕ್; ಆಪ್ ಹೇಳಿದ ಕಥೆ!

|
Google Oneindia Kannada News

ಬೆಂಗಳೂರು, ಏಪ್ರಿಲ್ 5: ಕರ್ನಾಟಕದಲ್ಲಿ ಏಪ್ರಿಲ್ 1ರಿಂದಲೇ ಜಾರಿಗೆ ಬರುವಂತೆ ವಿದ್ಯುತ್ ದರದಲ್ಲಿ 35 ಪೈಸೆ ಏರಿಕೆ ಮಾಡಿರುವ ಸರ್ಕಾರದ ನಿರ್ಧಾರವನ್ನು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಕಠುವಾಗಿ ಟೀಕಿಸಿದ್ದಾರೆ.

ಮಂಗಳವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಈಗಾಗಲೇ ಬೆಲೆ ಏರಿಕೆ, ಉದ್ಯೋಗ ನಷ್ಟ ಹಾಗೂ ಲಾಕ್‌ಡೌನ್‌ ಸಂಕಷ್ಟದಿಂದ ತತ್ತರಿಸಿರುವ ಜನರಿಗೆ ವಿದ್ಯುತ್‌ ದರ ಏರಿಕೆ ಮೂಲಕ ಸರ್ಕಾರವು ಕರೆಂಟ್‌ ಶಾಕ್‌ ನೀಡುತ್ತಿದೆ ಎಂದು ಸಿಡಿಮಿಡಿಗೊಂಡಿದ್ದಾರೆ.

Power tariff in Karnataka; ವಿದ್ಯುತ್ ದರ ಎಷ್ಟು ಹೆಚ್ಚಳವಾಗಿದೆ? Power tariff in Karnataka; ವಿದ್ಯುತ್ ದರ ಎಷ್ಟು ಹೆಚ್ಚಳವಾಗಿದೆ?

"ಕಳೆದ ಒಂದೂವರೆ ವರ್ಷದಲ್ಲಿ ವಿದ್ಯುತ್‌ ದರವನ್ನು ಮೂರನೇ ಸಲ ಏರಿಕೆ ಮಾಡಲಾಗುತ್ತಿದೆ. ಮಹಾರಾಷ್ಟ್ರ ಬಿಟ್ಟರೆ ಕರ್ನಾಟಕವೇ ಅತಿಹೆಚ್ಚು ವಿದ್ಯುತ್‌ ಉತ್ಪಾದನೆ ಮಾಡುತ್ತಿದೆ. ಆದರೂ ಇಲ್ಲಿ ಪದೇ ಪದೆ ಬೆಲೆ ಏರಿಕೆ ಮಾಡಿ ಜನಸಾಮಾನ್ಯರನ್ನು ಹೈರಾಣಾಗಿಸಲಾಗುತ್ತಿದೆ ಎಂದು ಪೃಥ್ವಿ ರೆಡ್ಡಿ ದೂಷಿಸಿದ್ದಾರೆ.

Karnataka: AAP State President Pruthvi Reddy Criticized Power Tariff rise

ದೆಹಲಿಯಲ್ಲಿ 200 ಯುನಿಟ್ ವಿದ್ಯುತ್ ಉಚಿತ:

ದೇಶದಲ್ಲಿ ಅತಿಹೆಚ್ಚು ವಿದ್ಯುತ್ ಉತ್ಪಾದಿಸುವ ರಾಜ್ಯಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಕರ್ನಾಟಕದಲ್ಲಿ ಪದೇ ಪದೆ ವಿದ್ಯುತ್ ದರವನ್ನು ಏರಿಕೆ ಮಾಡಲಾಗುತ್ತಿದೆ. ಆದರೆ ಆಮ್ ಆದ್ಮಿ ಪಕ್ಷ ಅಧಿಕಾರದಲ್ಲಿ ಇರುವ ದೆಹಲಿಯಲ್ಲಿ ಪ್ರತಿ ತಿಂಗಳು ಒಂದು ಮನೆಗೆ 200 ಯೂನಿಟ್ ವರೆಗೂ ವಿದ್ಯುತ್ ಅನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ಪೃಢ್ವಿ ರೆಡ್ಡಿ ಪ್ರಸ್ತಾಪಿಸಿದರು. ಅಲ್ಲದೇ ನಮ್ಮ ರಾಜ್ಯದಲ್ಲಿ ದರ ಏರಿಕೆಗೆ ಕಡಿವಾಣ ಹಾಕಲು ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ" ಎಂದು ಕಿಡಿ ಕಾರಿದರು.

ಸರ್ಕಾರದ ತಪ್ಪಿಗೆ ಜನರ ಮೇಲೇಕೆ ಹೊರೆ?:

"ಕೋವಿಡ್‌ನಿಂದಾಗಿ 2 ವರ್ಷಗಳ ಕಾಲ ಶೇ. 40ಕ್ಕಿಂತಲೂ ಹೆಚ್ಚಿನ ಕೈಗಾರಿಕೆಗಳು ಸ್ಥಗಿತಗೊಂಡಿದ್ದವು. ಅವು ವಿದ್ಯುತ್ ಬಳಸದಿದ್ದರೂ ಕನಿಷ್ಠ ವಿದ್ಯುತ್‌ ದರವನ್ನು ಪಾವತಿಸಿದ್ದವು. ಇದರಿಂದಾಗಿ 2 ವರ್ಷಗಳ ಕಾಲ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಉಚಿತವಾಗಿ ಹಣ ಸಿಕ್ಕಿದೆ. ಆದರೆ ವಿದ್ಯುತ್‌ ಪೂರೈಕೆಯಲ್ಲಿ ಅನಗತ್ಯ ವೆಚ್ಚಗಳ ಏರಿಕೆ, ಸರಬರಾಜು ನಿರ್ವಹಣೆಯಲ್ಲಿ ನಿರ್ಲಕ್ಷ್ಯ, ಸರ್ಕಾರಿ ಸಂಸ್ಥೆಗಳಿಂದ ಬರಬೇಕಾದ 511 ಕೋಟಿ ರೂ. ಶುಲ್ಕ ವಸೂಲಿಯಲ್ಲಿ ವಿಫಲ ಸೇರಿದಂತೆ ಅನೇಕ ಕಾರಣಗಳಿಂದ ವಿದ್ಯುತ್‌ ಸರಬರಾಜು ಕಂಪನಿಗಳು ನಷ್ಟ ಅನುಭವಿಸುತ್ತಿವೆ. ರಾಜ್ಯ ಸರ್ಕಾರದ ತಪ್ಪಿನಿಂದಾಗುತ್ತಿರುವ ಈ ನಷ್ಟವನ್ನು ಗ್ರಾಹಕರ ಮೇಲೆ ಹೊರಿಸುವುದು ಸರಿಯಲ್ಲ" ಎಂದು ಪೃಥ್ವಿ ರೆಡ್ಡಿ ತಿಳಿಸಿದರು.

Karnataka: AAP State President Pruthvi Reddy Criticized Power Tariff rise

ಹೊರ ರಾಜ್ಯಗಳಿಗೆ ಅಗ್ಗದ ದರದಲ್ಲಿ ವಿದ್ಯುತ್ ಪೂರೈಕೆ:

"ರಾಜ್ಯದ ಜನರಿಂದ ದುಬಾರಿ ಶುಲ್ಕ ಪಡೆಯುವ ರಾಜ್ಯ ಸರ್ಕಾರವು ಹೊರ ರಾಜ್ಯಗಳಿಗೆ ಮಾತ್ರ ಅಗ್ಗದ ದರದಲ್ಲಿ ವಿದ್ಯುತ್‌ ಪೂರೈಸುತ್ತಿದೆ ಎಂದು ಆಮ್‌ ಆದ್ಮಿ ಪಾರ್ಟಿ ಮುಖಂಡ ಪ್ರಕಾಶ್‌ ನೆಡುಂಗಡಿ ದೂಷಿಸಿದರು. ಒಂದು ಯೂನಿಟ್‌ಗೆ ಕೇವಲ 2.38 ರೂಪಾಯಿಯಂತೆ ಬೇರೆ ರಾಜ್ಯಗಳಿಗೆ ವಿದ್ಯುತ್‌ ಮಾರಾಟ ಮಾಡಲಾಗುತ್ತಿದೆ. ಇದರ ಜೊತೆಗೆ ಕೇಂದ್ರ ಸರ್ಕಾರದ ವಿದ್ಯುತ್‌ ಉತ್ಪಾದನಾ ಘಟಕಗಳಿಂದ ರಾಜ್ಯವು ವಿದ್ಯುತ್‌ ಖರೀದಿಸದಿದ್ದರೂ ನಿರ್ದಿಷ್ಟ ಶುಲ್ಕವನ್ನು ಪಾವತಿಸಬೇಕಾಗಿದೆ. ಇದರಿಂದಾಗಿ ಗ್ರಾಹಕರು ಹೆಚ್ಚು ದರವನ್ನು ಪಾವತಿಸಬೇಕಾಗಿದೆ ಎಂದರು.

ಉಡುಪಿ ಪವರ್‌ ಲಿಮಿಟೆಡ್‌ಗೆ ಭಾರೀ ಮೊತ್ತ:

ಕರ್ನಾಟಕದ ಎಸ್ಕಾಂ ಇಲಾಖೆಯಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ. ಕಳೆದ 2021-22ರಲ್ಲಿ ಅದಾನಿ ಪವರ್‌ ಲಿಮಿಟೆಡ್‌ ಭಾಗವೇ ಆಗಿರುವ ಉಡುಪಿ ಪವರ್‌ ಲಿಮಿಟೆಡ್‌ಗೆ ಶೇ. 40ರಷ್ಟು ಹೆಚ್ಚು ಅಂದರೆ ಯೂನಿಟ್‌ ಗೆ 6.80 ರೂಪಾಯಿಯನ್ನು ಸರ್ಕಾರವೇ ನೀಡಿದೆ," ಎಂದು ಆಮ್‌ ಆದ್ಮಿ ಪಾರ್ಟಿ ಮುಖಂಡ ಪ್ರಕಾಶ್‌ ನೆಡುಂಗಡಿ ಆರೋಪಿಸಿದರು.

ಕರ್ನಾಟಕದಲ್ಲಿ ಪ್ರತಿ ಯೂನಿಟ್‌ಗೆ 35 ಪೈಸೆ ಏರಿಕೆ:

ರಾಜ್ಯದ ಎಲ್ಲಾ ಎಸ್ಕಾಂಗಳು ಪ್ರತಿ ಯೂನಿಟ್‌ಗೆ ಸರಾಸರಿ 1.85 ರೂ. ಹೆಚ್ಚಳ ಮಾಡಲು ಮನವಿ ಮಾಡಿದ್ದವು. ಕೆಇಆರ್‌ಸಿ ವಿದ್ಯುತ್ ದರ ಹೆಚ್ಚಳದ ಬಗ್ಗೆ ಜನರ ಅಭಿಪ್ರಾಯ, ಎಸ್ಕಾಂಗಳ ಪ್ರಸ್ತಾವನೆ, ಹಿಂದಿನ ವರ್ಷದ ನಷ್ಟ ಮುಂತಾದವುಗಳನ್ನು ಪರಿಗಣಿಸಿ ಪ್ರತಿ ಯೂನಿಟ್‌ಗೆ 35 ಪೈಸೆ ದರ ಹೆಚ್ಚಳಕ್ಕೆ ಅನುಮತಿ ನೀಡಿದೆ. ಪ್ರತಿ ಯೂನಿಟ್‌ಗೆ 5 ಪೈಸೆಗಳ ಇಂಧನ ಶುಲ್ಕ ಹಾಗೂ ಪ್ರತಿ ಹೆಚ್.ಪಿ/ ಕಿ. ವಾ/ ಕೆ. ವಿ. ಎ.ಗೆ 10 ರಿಂದ 30 ರೂ. ತನಕ ನಿಗದಿತ ಶುಲ್ಕಗಳನ್ನು ಹೆಚ್ಚಳ ಮಾಡಲು ಅನುಮೋದಿಸಲಾಗಿದೆ. ಇದರಿಂದಾಗಿ ಶೇ 4.33ರಷ್ಟು ದರ ಏಕೆಯಾಗಿದೆ. ಅಂದರೆ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳಿಗೂ ಅನ್ವಯವಾಗುವಂತೆ ಸರಾಸರಿ 35 ಪೈಸೆ ಹೆಚ್ಚಳವಾಗಿದೆ ಎಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಹಂಗಾಮಿ ಅಧ್ಯಕ್ಷ ಮಂಜುನಾಥ್ ಸೋಮವಾರ ಪ್ರಕಟಿಸಿದರು.

Recommended Video

ಕೋಡಿ ಮಠದ ಸ್ವಾಮಿಗಳು 2022ರ ಭವಿಷ್ಯ ನುಡಿದಿದ್ದಾರೆ | Oneindia Kannada

English summary
Karnataka: AAP State President Pruthvi Reddy Criticized Power Tariff rise.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X