ಸಾವು ಬಾಯ್ತೆರೆದು ಕಾಯುತಿದೆ... ಎಚ್ಚರ!

Posted By:
Subscribe to Oneindia Kannada

ಗದಗ, ಏಪ್ರಿಲ್ 12: ತೊದಲು ನುಡಿವ ಪುಟ್ಟ ಮಕ್ಕಳು, ಬೆವರು ಸುರಿಸಿ ದುಡಿವ ಕಾರ್ಮಿಕರು ಎಂಬ ಯಾವ ಭೇದವಿಲ್ಲದೆ ಕಣ್ತಪ್ಪಿ ಬಳಿ ಬಂದವರನ್ನೆಲ್ಲ ತನ್ನೊಡಲಲ್ಲಿ ಬೀಳಿಸಿಕೊಳ್ಳುವ ಕೊಳವೆ ಬಾವಿಯ ಕಥೆ ನಿಜಕ್ಕೂ ಘೋರ!

ಕಳೆದ ಹತ್ತು ವರ್ಷದ ಈಚೆಗೆ ಕೊಳವೆ ಬಾವಿಗೆ ಬಿದ್ದು ಹತರಾದವರನ್ನು ಲೆಕ್ಕ ಇಟ್ಟವರ್ಯಾರು? ಮುಗ್ಧ ಜೀವವೊಂದು ನೂರಾರು ಅಡಿ ಆಳದಲ್ಲಿ ಸಿಕ್ಕಿ ವಿಲವಿಲ ಒದ್ದಾಡುವಂತೆ ಮಾಡುವ ಈ ಕೊಳವೆ ಬಾವಿ ಎಂಬ ಮೃತ್ಯಕೂಪಗಳ ದಾಹ ಇನ್ನೆಷ್ಟು ಜನರನ್ನು ಬಲಿತೆಗೆದುಕೊಂಡ ಮೇಲೆ ನೀಗೀತೋ! [ಗದಗದಲ್ಲಿ ಕೊಳವೆ ಬಾವಿಗೆ ಬಿದ್ದ ಇಬ್ಬರು ಕಾರ್ಮಿಕರು]

ಇಂದು (ಏಪ್ರಿಲ್ಲ್ 12) ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದು, ದುರಂತ ಸಾವು ಕಂಡ ಶಂಕರಪ್ಪ ಬಾಣದ್ (30), ಮತ್ತು ಬಸವರಾಜ್ (32) ಅವರ ಜೀವಜ್ಯೋತಿ ಆರದಿರಲಿ ಎಂದು ಇಡೀ ರಾಜ್ಯವೂ ಪ್ರಾರ್ಥಿಸುತ್ತಿತ್ತು. ಆದರೆ ಯಾರ ಪ್ರಾರ್ಥನೆಯೂ ಫಲಿಸದೆ ಇಬ್ಬರು ಕಾರ್ಮಿಕರೂ ದುರಂತ ಅಂತ್ಯ ಕಂಡಿದ್ದಾರೆ. ಇಂಥ ಸಂದರ್ಭದಲ್ಲಿ ಕಳೆದ ಕೆಲ ವರ್ಷಗಳಲ್ಲಿ ಸಂಭವಿಸಿದ ಕೊಳವೆ ಬಾವಿ ದುರಂತವನ್ನೊಮ್ಮೆ ಅವಲೋಕಿಸುವುದು ಸಂದರ್ಭೋಚಿತವಾದೀತು.

ಆರಿದ್ದ ಸಂ'ದೀಪ'

ಆರಿದ್ದ ಸಂ'ದೀಪ'

ರಾಯಚೂರಿನ 8 ವರ್ಷದ ಬಾಲಕ ಸಂದೀಪ, ಆಟವಾಡುತ್ತಿದ್ದ ವೇಳೆ 34 ಅಡಿ ಆಳದ ಕೊಳವೆ ಬಾವಿಗೆ ಬಿದ್ದು, ಸತತ 54 ಗಂಟೆಗಳ ಕಾರ್ಯಾಚರಣೆಯ ನಂತರವೂ ಕೊನೆಯುಸಿರೆಳೆದಿದ್ದ. ಈ ಘಟನೆ ನಡೆದದ್ದು 2007 ಏಪ್ರಿಲ್ 27ರಂದು. ಘಟನೆ ನಡೆದ ಕೆಲವು ದಿನ ಕೊಳವೆ ಬಾವಿಗಳಿಂದ ಸಂಭವಿಸಬಹುದಾದ ಅಪಾಯಗಳ ಕುರಿತು ಚರ್ಚೆಯಾದರೂ ಆ ಚರ್ಚೆ ಹೆಚ್ಚು ಕಾಲ ಮುಂದುವರಿಯಲಿಲ್ಲ.[ಕೊಳವೆಬಾವಿಯಾಳಗೆ 48ಗಂಟೆ! : ಪಾಪ... ಸಂದೀಪ...]

ಬದುಕಲಿಲ್ಲ ಕಾಂಚನಾ, ತಿಮ್ಮಣ್ಣ

ಬದುಕಲಿಲ್ಲ ಕಾಂಚನಾ, ತಿಮ್ಮಣ್ಣ

ಇದಾಗಿ ಎರಡು ವರ್ಷದ ನಂತರ, ಅಂದರೆ ಆಗಸ್ಟ್ 31, 2009 ರಲ್ಲಿ ವಿಜಯಪುರದ ದೇವರನಿಂಬಗಿಯಲ್ಲಿ 152 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ ಕಾಂಚನಾ ಎಂಬ ಬಾಲಕಿ. ಸತತ ಒಂದು ವಾರದ ಕಾರ್ಯಾಚರಣೆಯ ನಂತರೂ ಬದುಕಿಸಲಾಗದೆ ಅಸುನೀಗಿದ್ದಳು. ಈ ಘಟನೆಯ ನಂತರ ಅನುಪಯುಕ್ತ ಕೊಳವೆ ಬಾವಿಗಳನ್ನು ಮುಚ್ಚುವಂತೆ ವಿಜಯಪುರದ ಆಗಿನ ಉಸ್ತುವಾರಿ ಸಚಿವರಾಗಿದ್ದ ಗೋವಿಂದ ಕಾರಜೋಳ ಆದೇಶಿಸಿದ್ದರು. ನಂತರ 2014 ರ ಆಗಸ್ಟ್ 9 ರಂದು ಬಾದಾಮಿಯಲ್ಲಿ ತಿಮ್ಮಣ್ಣ ಎಂಬ ಆರು ವರ್ಷದ ಬಾಲಕ ಸಹ ಕೊಳವೆ ಬಾವಿಯಲ್ಲಿ ಬಿದ್ದು ಮೃತನಾಗಿದ್ದ.[ಜಿಲ್ಲೆಯ ಕೊಳವೆ ಬಾವಿ ಮುಚ್ಚಲು ಆದೇಶ]

ಸಾವಿನ ಕೆನ್ನಾಲಿಗೆಯಿಂದ ಪಾರಾದ ಬಾಲೆ!

ಸಾವಿನ ಕೆನ್ನಾಲಿಗೆಯಿಂದ ಪಾರಾದ ಬಾಲೆ!

ಕೊಳವೆ ಬಾವಿಯಲ್ಲಿ ಬಿದ್ದ ಶೇ.95 ರಷ್ಟು ಮಂದಿ ಸಾವಿಗೀಡಾಗುವುದು ಖಂಡಿತ. ಆಮ್ಲಜನಕದ ಕೊರತೆ, ಭಯ, ನೂರಾರು ಅಡಿ ಆಳದ ಕತ್ತಲಲ್ಲಿ ಎಂಥ ಧೈರ್ಯವಂತನ ಜಂಘಾಬಲವೇ ಉಡುಗಿಹೋಗುವುದು ಸಾಮಾನ್ಯ. ಅಂಥಾದ್ದರಲ್ಲಿ ಜೂನ್ 27, 2015 ರಂದು 32 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ ರಾಜಸ್ತಾನದ ಸುನಿತಾ ಯಾದವ್ ಎಂಬ 5 ವರ್ಷದ ಬಾಲಕಿ ಒಂದು ದಿನದ ಕಾರ್ಯಾಚರಣೆಯ ನಂತರ ಪವಾಡ ಸದೃಶವಾಗಿ ಬದುಕಿದ್ದಳು. [ಕೊಳವೆ ಬಾವಿ ದುರಂತ : ಮರುಹುಟ್ಟು ಪಡೆದ ರಾಜಸ್ಥಾನ ಬಾಲೆ]

ಕೊಳವೆ ಬಾವಿಯ ದಾಹ ತೀರೋದ್ಯಾವಾಗ?

ಕೊಳವೆ ಬಾವಿಯ ದಾಹ ತೀರೋದ್ಯಾವಾಗ?

ಆಂಧ್ರಪ್ರದೇಶ, ಮಧ್ಯಪ್ರದೇಶ, ಗುಜರಾತ್ ಹೀಗೆ ಬೇರೆ ಬೇರೆ ರಾಜ್ಯಗಳಲ್ಲೂ ಕೊಳವೆ ಬಾವಿಯಲ್ಲಿ ಬಿದ್ದು ಪುಟ್ಟ ಪುಟ್ಟ ಮಕ್ಕಳು ಸಾವಿಗೀಡಾದ ಹಲವು ಘಟನೆಗಳು ನಡೆದಿವೆ. ಇಷ್ಟೆಲ್ಲ ಆದರೂ, ನಿರುಪಯುಕ್ತ ಕೊಳವೆ ಬಾವಿಗಳನ್ನು ಮುಚ್ಚಲೇ ಬೇಕೆಂದು ಸುಪ್ರೀಂ ಕೋರ್ಟ್ ಮಾರ್ಗಸೂಚಿಯಲ್ಲೇ ಉಲ್ಲೇಖಿಸಿದ್ದರೂ ಕೊಳವೆ ಬಾವಿ ದುರಂತಗಳು ಮಾತ್ರ ನಿಲ್ಲುತ್ತಿಲ್ಲ. ಒಂದು ಜೀವದ ಬೆಲೆ ಇಷ್ಟೆಲ್ಲ ಅಗ್ಗಾನಾ ಎಂದು ಪ್ರಶ್ನಿಸಬೇಕಾದ ಪರಿಸ್ಥಿತಿ ತಲೆದೂರಿದೆ.[ಬಾವಿ ಕೊರೆತ : ಸುಪ್ರೀಂಕೋರ್ಟ್ ಮಾರ್ಗದರ್ಶಿ ಸೂತ್ರಗಳು]

ಅನುಮತಿ ಇಲ್ಲದೆ ಕೊಳವೆ ಬಾವಿ ತೋಡಿದರೆ ದಂಡ

ಅನುಮತಿ ಇಲ್ಲದೆ ಕೊಳವೆ ಬಾವಿ ತೋಡಿದರೆ ದಂಡ

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರಕಾರ ಕರ್ನಾಟಕದಲ್ಲಿ ಒಟ್ಟು 25 ಲಕ್ಷ ಕೊಳವೆ ಬಾವಿಗಳಿವೆ. ಕರ್ನಾಟಕ ಅಂತರ್ಜಲ ಕಾಯ್ದೆ -2011 ರ ಪ್ರಕಾರ ಅನುಮತಿಯಿಲ್ಲದೆ ಕೊಳವೆ ಬಾವಿ ತೆಗೆಯುವುದು ಶಿಕ್ಷಾರ್ಹ ಅಪರಾಧ. ಈ ಅಪರಾಧಕ್ಕೆ 6 ತಿಂಗಳ ಜೈಲು ಶಿಕ್ಷೆ ಮತ್ತು 5000 ರೂ. ದಂಡ ವಿಧಿಸಲಾಗುತ್ತದೆ.[ಕೊಳವೆ ಬಾವಿ ಮುಚ್ಚದಿದ್ದರೆ ಪೊಲೀಸ್ ಕೇಸ್]

ಉಚ್ಚನ್ಯಾಯಾಲಯದ ಎಚ್ಚರಿಕೆ

ಉಚ್ಚನ್ಯಾಯಾಲಯದ ಎಚ್ಚರಿಕೆ

ಪದೇ ಪದೇ ನಡೆಯುತ್ತಿದ್ದ ಕೊಳವೆ ಬಾವಿ ದುರಂತದ ಗಂಭೀರತೆಯನ್ನು ಅರಿತುಕೊಂಡ ಕರ್ನಾಟಕ ಉಚ್ಚ ನ್ಯಾಯಾಲಯ ಇಂತಹ ದುರಂತ ನಡೆದಾಗ ಸ್ಥಳೀಯ ಜಿಲ್ಲಾ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ, ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ದಂಡ ವಸೂಲಿ ಮಾಡಿ ಎಂದು 2014 ರ ಆಗಸ್ಟ್ ತಿಂಗಳಿನಲ್ಲೇ ಮೌಖಿಕ ಆದೇಶ ನೀಡಿತ್ತು. ಆದರೆ ಇಂದಿಗೂ ನಿರುಪಯುಕ್ತ ಕೊಳವೆ ಬಾವಿಗಳು ಅಮಾಯಕರ ಜೀವಕ್ಕಾಗಿ ಬಾಯ್ತೆರೆದು ಕುಳಿತಿರುವುದು ದುರಂತವೇ ಸರಿ.[ಕೊಳೆವೆ ಬಾವಿ ದುರಂತ ಏಕೆ ತಡೆಯಲಾಗುತ್ತಿಲ್ಲ?]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
After tragic end of two men who fell into a borewell in Savadi village, Rona taluk, Gadag district, Lot of stories related to such incident naturally come to the mind. Here are the some incidents which melt our heart.
Please Wait while comments are loading...