• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಗಸ್ಟ್ 05: ಕರ್ನಾಟಕದ ಜಿಲ್ಲೆಗಳ ಸಂಕ್ಷಿಪ್ತ ಸುದ್ದಿಗಳು

By ಒನ್ಇಂಡಿಯಾ ಡೆಸ್ಕ್
|
Google Oneindia Kannada News

ಕರ್ನಾಟಕ, ಆಗಸ್ಟ್ 05: ಕರ್ನಾಟಕದಲ್ಲಿ ಇಂದು ವಿವಿಧ ಜಿಲ್ಲೆಗಳಲ್ಲಿ ಹಲವು ಘಟನೆಗಳು ನಡೆದಿದ್ದು, ಅವುಗಳ ಸಂಕ್ಷಿಪ್ತ ವರದಿ ಇಲ್ಲಿದೆ.

ಶಿಕ್ಷಕಿಯೊಬ್ಬರ ಚಿನ್ನದ ಸರ ಕದ್ದು ಸಿಕ್ಕಿಬಿದ್ದ
ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರ ಮಗ ಶಿಕ್ಷಕಿಯೊಬ್ಬರ ಚಿನ್ನದ ಸರ ಕದ್ದು ಪರಾರಿಯಾದ ನಂತರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಆಗಸ್ಟ್ 4ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‍ನ ವಿದ್ಯಾದಾಯಿನಿ ಪ್ರೌಢಶಾಲೆಯ ಶಿಕ್ಷಕಿ ವಿದ್ಯಾ ಎಂಬುವರು ಮನೆಯಿಂದ ಸ್ಕೂಲಿಗೆ ನಡೆದುಕೊಂಡು ಹೋಗುತ್ತಿದ್ದಾಗ ಶ್ರೇಯಸ್ ಎಂಬುವನು ವಿದ್ಯಾ ಅವರ ಕುತ್ತಿಗೆಯಲ್ಲಿದ್ದ ಬಂಗಾರದ ಸರವನ್ನು ಕಸಿದು ಪರಾರಿಯಾಗಿದ್ದ.

ತ್ವರಿತ ಕಾರ್ಯಾಚರಣೆ ಮಾಡಿದ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಯ ಜಾಡು ಹಿಡಿದು ಬಂಧಿಸಿದ್ದು, ಈತ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಶಾಂತಿಪುರದ ಕೆ.ಎಸ್. ಶ್ರೇಯಸ್ ಬಿನ್ ಕೃಷ್ಣಪ್ಪ ಬಂಧಿತ ಆರೋಪಿಯಾಗಿದ್ದಾನೆ. ಆರೋಪಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆಯ ಮಗ ಎಂಬುದು ತಿಳಿದು ಬಂದಿದೆ. ಆರೋಪಿಯ ಜಾಕೆಟ್ ಒಳಗೆ ಅಡಗಿಸಿಟ್ಟುಕೊಂಡಿದ್ದ ಚಿನ್ನದ ಸರವನ್ನು ಪೊಲೀಸರು ವಶಪಡಿಸಿಕೊಂಡು ಸದ್ಯ ಆರೋಪಿಯನ್ನು ಬಂಧಿಸಲಾಗಿದೆ.

ಮೇಕೆದಾಟು ಯೋಜನೆಗೆ ತಮಿಳುನಾಡು ಧೋರಣೆ ಖಂಡನೆ
ಮೇಕೆದಾಟು ಅಣೆಕಟ್ಟು ಯೋಜನೆಗೆ ತಮಿಳುನಾಡು ಧೋರಣೆ ಖಂಡಿಸಿ ಜನತಾ ಪಾರ್ಟಿ ವತಿಯಿಂದ ಮೇಕೆದಾಟು ಯೋಜನೆಯ ನಿರ್ಮಾಣ ಸ್ಥಳದ ಸಮೀಪ ಪ್ರತಿಭಟನೆ ನಡೆಸಲಾಯಿತು.

ರಾಮನಗರ ಜಿಲ್ಲೆ‌ ಕನಕಪುರ ತಾಲೂಕಿನಲ್ಲಿರುವ ಮೇಕೆದಾಟಿನಲ್ಲಿ ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆಗೆ ನಿರಂತರವಾಗಿ ತಡೆ ಮಾಡುತ್ತಿದೆ. ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ವಿರುದ್ಧ ಘೋಷಣೆ ಕೂಗಿ ಆಕ್ರೋಶ‌ ವ್ಯಕ್ತಪಡಿಸಲಾಯಿತು.

ಅಣ್ಣಾಮಲೈ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ತಮ್ಮ ಆಕ್ರೋಶ ಹೊರಹಾಕಿದರು. ಈ ಮೇಕೆದಾಟಿನಲ್ಲಿ ಸರ್ಕಾರ ಬೃಹತ್‌ ಆಣೆಕಟ್ಟು ಮಾಡುವ ಯೋಜನೆಯಲ್ಲಿದೆ. ಒಂದು ವೇಳೆ ಈ ಮೇಕೆದಾಟು ಯೋಜನೆ ಅನುಷ್ಠಾನಗೊಂಡರೆ, ಬಯಲು ಸೀಮೆ ಜಿಲ್ಲೆಗಳ ಜನರಿಗೆ ಕುಡಿಯುವ ನೀರಿನ ಬವಣೆಗೆ ಶಾಶ್ವತ ಪರಿಹಾರ ದೊರೆಯಲಿದೆ.

ಉದ್ದೇಶಿತ ಮೇಕೆದಾಟು ಆಣೆಕಟ್ಟು ನಿರ್ಮಾಣವಾದರೆ ತಳ ಮಟ್ಟದಲ್ಲಿ 352 ಮೀಟರ್, ತುಂಬಿ ಹರಿಯುವಾಗ 440 ಮೀಟರ್ ಹಾಗೂ ಅತಿ ಹೆಚ್ಚಿನದಾಗಿ 441 ಮೀಟರ್ ನೀರಿನ ಹರಿವನ್ನು ಶೇಖರಿಸುವಷ್ಟು ಸಾಮರ್ಥ್ಯ ಹೊಂದಿದಲಿದೆ.

ಚನ್ನಪಟ್ಟಣ ಸಿ.ಪಿ. ಯೋಗೇಶ್ವರ್ ಆಗಮನ
ಸಚಿವ ಸ್ಥಾನ ಕೈತಪ್ಪಿದ ಹಿನ್ನಲೆಯಲ್ಲಿ ಸಿ.ಪಿ. ಯೋಗೇಶ್ವರ್ ಗುರುವಾರ ಸ್ವಕ್ಷೇತ್ರ ಚನ್ನಪಟ್ಟಣದ ನಿವಾಸಕ್ಕೆ ಆಗಮಿಸಿದರು. ತಮ್ಮ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಜೊತೆ ಯೋಗೇಶ್ವರ್ ಚರ್ಚಿಸಿದರು.

ಇದೇ ವೇಳೆ ಯೋಗೆಶ್ವರ್‌ಗೆ ಜೈಕಾರ ಹಾಕುವ ಮೂಲಕ ಕಾರ್ಯಕರ್ತರು ಆತ್ಮಸ್ಥೈರ್ಯ ತುಂಬಿದರು. ಈ ಹಿಂದೆ ಯಡಿಯೂರಪ್ಪ ಸರ್ಕಾರದಲ್ಲಿ ಪ್ರವಾಸೋದ್ಯಮ ಸಚಿವರಾಗಿದ್ದ ಯೋಗೇಶ್ವರ್‌ಗೆ ಬಸವರಾಜ ಬೊಮ್ಮಾಯಿ ಸಂಪುಟದಿಂದ ಕೈ ಬಿಡಲಾಗಿದೆ.

ಇಡಿ ದಾಳಿ ರಾಜಕೀಯ ಪ್ರೇರಿತವಲ್ಲ
ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ನಿವಾಸದ ಮೇಲೆ ಇಡಿ ದಾಳಿ ರಾಜಕೀಯ ಪ್ರೇರಿತ ಎಂದು ಹೇಳುವುದು ಸರಿಯಲ್ಲ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ಸುತ್ತೂರು ಮಠದಲ್ಲಿ ಈ ಬಗ್ಗೆ ಮಾತನಾಡಿದ ಸಚಿವ ಮಾಧುಸ್ವಾಮಿ, "ಜಮೀರ್‌ಗೆ ಬೇಕಾದಷ್ಟು ವ್ಯವಹಾರ ಇದೆ. ಅವರು ಬ್ಯುಸಿನೆಸ್ ಕ್ಲಾಸ್ ಜನ. ಅವರೇನೂ ನನ್ನ ರೀತಿ ಹಳ್ಳಿಯಲ್ಲಿ ಇರುವ ಶಾಸಕರಾ? ಐಟಿ, ಇಡಿ ದಾಳಿಯನ್ನು ರಾಜಕೀಯ ಪ್ರೇರಿತ ಅಂತಾ ಹೇಳುವುದು ಸರಿಯಲ್ಲ. ಸಿದ್ದರಾಮಯ್ಯನಂತವರು ಈ ರೀತಿ ಹೇಳುವುದು ತಪ್ಪು,'' ಎಂದು ತಿಳಿಸಿದರು.

"ಹಾಗೆಯೇ ಕಾಂಗ್ರೆಸ್‌ನವರು ತಮ್ಮ ಆಡಳಿತ ಕಾಲದಲ್ಲಿ ಐಟಿ, ಇಡಿಗಳನ್ನು ದುರುಪಯೋಗ ಪಡಿಸಿಕೊಂಡಿರಬಹುದು ಇವತ್ತು ಅದೇ ಆಗುತ್ತಿದೆ ಎಂದು ಅವರು ಅಂದುಕೊಂಡಿದ್ದಾರೆ. ವ್ಯವಹಾರದ ಲೆಕ್ಕ ಪತ್ರಗಳಲ್ಲಿ ಅನುಮಾನ ಬಂದಾಗ ಈ ರೀತಿ ದಾಳಿ ಸಹಜ. ದಾಳಿಯೇ ತಪ್ಪು ಎಂದರೇ ಹೇಗೇ?''

"ಸ್ವಾಯತ್ತ ಸಂಸ್ಥೆಗಳು ಅವರ ಕೆಲಸ ಅವರು ಮಾಡಬಾರದಾ? ಇದು ರಾಜಕೀಯ ದಾಳಿಯಲ್ಲ. ಲೆಕ್ಕದ ಅನುಮಾನ ಇದ್ದಾಗ ಪರಿಶೀಲನೆಗೆ ಬಂದಿರುತ್ತಾರೆ. ಜಮೀರ್ ಲೆಕ್ಕ ಪತ್ರ ಸರಿ ಇಟ್ಟು ಕೊಂಡಿದ್ದರೆ ಅದನ್ನು ತೋರಿಸುತ್ತಾರೆ ಅಷ್ಟೆ. ಇದಕ್ಕೆ ಬೇರೆ ರೀತಿಯ ಬಣ್ಣ ಬೇಡ,'' ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.

ಕಾರಿಂಜೇಶ್ವರ ದೇವಸ್ಥಾನದಲ್ಲಿ ತೀರ್ಥಸ್ನಾನ ನಿಷೇಧ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಜಿಲ್ಲಾಡಳಿತ ಸರಕಾರದ ನಿರ್ದೇಶನದಂತೆ ಧಾರ್ಮಿಕ ಕಾರ್ಯಕ್ರಮಗಳನ್ನು ರದ್ದುಪಡಿಸಿದ್ದು, ಬಂಟ್ವಾಳ ತಾಲೂಕು ಮಹತೋಭಾರ ಕಾರಿಂಜೇಶ್ವರ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆ ಪ್ರಯುಕ್ತ ನಡೆಯುವ ತೀರ್ಥಸ್ನಾನವನ್ನು ನಿಷೇಧಿಸಲಾಗಿದೆ ಎಂದು ದೇವಸ್ಥಾನದ ಆಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

"ಆ.8 ರಂದು ಆಟಿ ಅಮಾವಾಸ್ಯೆಯಂದು ಭಕ್ತಾಧಿಗಳು ಇಲ್ಲಿನ ಗದಾ ತೀರ್ಥದಲ್ಲಿ ತೀರ್ಥಸ್ನಾನ ನಡೆಸಿ ವಿಶೇಷ ಪೂಜೆ ಸಲ್ಲಿಸುವ ಸಂಪ್ರದಾಯವಿದ್ದು, ಆದರೆ ಕೊರೊನಾ ನಿಯಂತ್ರಣಕ್ಕಾಗಿ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಿರುವುದರಿಂದ ತೀರ್ಥಸ್ನಾನಕ್ಕೆ ಅವಕಾಶ ಇಲ್ಲ. ನಿಯಮ ಪಾಲನೆ ಅನುಷ್ಠಾನಕ್ಕೆ ಆ ದಿನದಂದು ಗದಾ ತೀರ್ಥದ ಸುತ್ತ ಪೊಲೀಸ್ ಬಂದೋಬಸ್ತ್ ಇರುವುದು. ಭಕ್ತಾಧಿಗಳ ಸಹಕಾರ ಅಗತ್ಯ," ಎಂದು ಆಡಳಿತಾಧಿಕಾರಿ ನೋಣಯ್ಯ ನಾಯ್ಕ್ ತಿಳಿಸಿದ್ದಾರೆ.

ಸಚಿವ ಸ್ಥಾನಕ್ಕಿಂತ ಪಕ್ಷ ದೊಡ್ಡದು
"ಸಚಿವ ಸಂಪುಟದಲ್ಲಿ ಸ್ಥಾನ ಸಿಗುವ ನಿರೀಕ್ಷೆ ಇತ್ತು, ಆದರೆ ನಿರೀಕ್ಷೆ ಹುಸಿಯಾಗಿದೆ. ಹಾಗೆಂದು ಪಕ್ಷಕ್ಕೆ ಮುಜುಗರ ತರುವಂತಹ ಯಾವುದೇ ಕೆಲಸ ಮಾಡುವುದಿಲ್ಲ. ಸಚಿವ ಸ್ಥಾನಕ್ಕಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ದೇಶ ದೊಡ್ಡದು. ಪಕ್ಷ ಹೇಳಿದಂತೆ ಕೆಲಸ ಮಾಡುತ್ತೇನೆ," ಎಂದು ಚಿತ್ರದುರ್ಗ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಹೇಳಿದರು.

   ಜೋಪಾನ...ಈ ರಾಜ್ಯಗಳಲ್ಲಿ ಮೂರು ದಿನ ರಣಭೀಕರ ಮಳೆ | Oneindia Kannada

   ಬೆಂಗಳೂರಿನಿಂದ ಆಗಮಿಸಿದ ಅವರು ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಭೇಟಿ ಮಾಡಿದ ಸುದ್ದಿಗಾರರ ಜೊತೆ ಮಾತನಾಡಿ, "ಕೇಂದ್ರ ಸಚಿವ ಸಂಪುಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಎಲ್ಲ ವರ್ಗದವರಿಗೂ ಸಾಮಾಜಿಕ ನ್ಯಾಯದಡಿ ಸ್ಥಾನ ನೀಡಿದ್ದಾರೆ. ಆದರೆ ರಾಜ್ಯ ಸಚಿವ ಸಂಪುಟ ನೋಡಿದರೆ ಆಶ್ಚರ್ಯ ಹುಟ್ಟಿಸುವಂತಿದೆ. ಕೇವಲ ಕೆಲವೇ ವರ್ಗಗಳಿಗೆ ಮಾತ್ರ ಸ್ಥಾನ ನೀಡಲಾಗಿದೆ. ಇದನ್ನು ನೋಡಿದ ಇತರೆ ವರ್ಗದ ಜನರಿಗೆ ನಾವು ಕೇವಲ ಚುನಾವಣೆಯಲ್ಲಿ ಮತ ಹಾಕಲು ಮಾತ್ರ ಬೇಕೇ ಎಂಬ ಅನುಮಾನ ಮೂಡುತ್ತದೆ," ಎಂದು ಹೇಳಿದರು.

   English summary
   Karnataka district news Roundup (5th August 2021) - Stay up-to-date with politics, climate, infrastructure, & education in Bangalore, Mysore, Shivamogga and other Karnataka districts. Capture every aspect of Karnataka district news only on Kannada Oneindia.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X