ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಸಿಡಿದೆದ್ದ ಮೂಲ ಬಿಜೆಪಿ ಶಾಸಕರು?

|
Google Oneindia Kannada News

ಬೆಂಗಳೂರು, ಫೆ. 02: ಎಲ್ಲವೂ ಸರಿಯಾಗಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದರೂ, ಬಿಜೆಪಿಯಲ್ಲಿ ಭಿನ್ನಮತ ಹೆಚ್ಚಾಗುತ್ತಿದೆ. ಇದೀಗ ಮೂಲ ಬಿಜೆಪಿ ಶಾಸಕರು ಸಂಘಟಿತರಾಗುತ್ತಿದ್ದು, ನಿನ್ನೆ ವಿಧಾನಸೌಧದಲ್ಲಿ ಸಭೆ ಸೇರಿ ಚರ್ಚೆ ನಡೆಸಿದ್ದಾರೆ. ಇದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಾಗಿದ್ದು, ಈ ಹಿಂದೆ ಅಸಮಾಧಾನಿತ ಶಾಸಕರನ್ನು ನಿರ್ಲಕ್ಷ ಮಾಡಿದಂತೆ, ನಿನ್ನೆ ಸಭೆ ಸೇರಿದ್ದ ಶಾಸಕರನ್ನು ನಿರ್ಲಕ್ಷ ಮಾಡಿದರೆ, ಯಡಿಯೂರಪ್ಪ ಸರ್ಕಾರಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಕಳೆದ ಹಲವು ದಶಕಗಳಿಂದ ಪಕ್ಷವನ್ನು ಕಟ್ಟಿ, ತಾವೂ ಬೆಳೆದಿರುವ ಸಂಘ ಪರಿವಾರದ ಹಿನ್ನೆಲೆಯ ಶಾಸಕರು ಸಭೆ ಮಾಡಿರುವುದು ನೇರವಾಗಿ ಯಡಿಯೂರಪ್ಪ ಅವರ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಂತಾಗಿದೆ.

Recommended Video

ರಾಜ್ಯ ರಾಜಕೀಯದಲ್ಲಿ 'ಡಿನ್ನರ್' ಪಾಲಿಟಿಕ್ಸ್..! | Oneindia Kannada

ಪ್ರಮುಖವಾಗಿ 2023 ರಲ್ಲಿ ನಡೆಯುವ ವಿಧಾನಸಭೆ ಚುನಾವಣೆ ಕುರಿತು ಶಾಸಕರು ಚರ್ಚೆ ಮಾಡಿದ್ದಾರೆ. ರಾಜ್ಯ ಸರ್ಕಾರದ ಕಾರ್ಯವೈಖರಿ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ಪಕ್ಷ ನಿಷ್ಠ ಬಿಜೆಪಿ ಶಾಸಕರು ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ.

ಈ ಮಧ್ಯೆ ದಿಢೀರ್ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿಯ ಎಲ್ಲ ಶಾಸಕರನ್ನು ಇಂದು ಭೋಜನಕೂಟಕ್ಕೆ ಆಹ್ವಾನಿಸಿದ್ದಾರೆ.

ಹಾರ್ಡ್‌ಕೋರ್ ಬಿಜೆಪಿ ಶಾಸಕರು

ಹಾರ್ಡ್‌ಕೋರ್ ಬಿಜೆಪಿ ಶಾಸಕರು

ಬಹಿರಂಗ ಹೇಳಿಕೆಗಳನ್ನು ಕೊಡುವ ಶಾಸಕರು ಸಭೆ ಸೇರಿದ್ದರೆ ಅದಕ್ಕೆ ಸಿಎಂ ಯಡಿಯೂರಪ್ಪ ಅವರು ಅಷ್ಟೊಂದು ಮಹತ್ವ ಕೊಡುತ್ತಿರಲಿಲ್ಲ. ಆದರೆ ನಿನ್ನೆ ಸಭೆ ಸೇರಿದ್ದವರು ಹಾರ್ಡ್‌ಕೋರ್ ಬಿಜೆಪಿ ಶಾಸಕರು ಎಂಬುದು ಯಡಿಯೂರಪ್ಪ ಅವರ ಆತಂಕಕ್ಕೆ ಕಾರಣವಾಗಿದೆ. ನಿನ್ನೆ ಮಧ್ಯಾಹ್ನ ಭೋಜನಕೂಟದ ನೆಪದಲ್ಲಿ ಸಭೆ ಸೇರಿದ್ದ ಬಿಜೆಪಿಯ 14 ಹಾರ್ಡ್‌ಕೋರ್ ಶಾಸಕರು ಚರ್ಚೆ ನಡೆಸಿದ್ದಾರೆ. ಜೊತೆಗೆ ಗೌಪ್ಯ ಸ್ಥಳದ ಬದಲಾಗಿ ಶಕ್ತಿಕೇಂದ್ರ ವಿಧಾನಸೌಧದಲ್ಲೇ ಸಭೆ ಸೇರುವ ಮೂಲಕ ಹೈಕಮಾಂಡ್ ಹಾಗೂ ಯಡಿಯೂರಪ್ಪ ಅವರಿಗೆ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.

ಪ್ರಧಾನಿ ಮೋದಿ ಮಾದರಿ ಇಲ್ಲ!

ಪ್ರಧಾನಿ ಮೋದಿ ಮಾದರಿ ಇಲ್ಲ!

ಸಭೆ ಸೇರಿದ್ದ ಶಾಸಕರು ಪ್ರಮುಖವಾಗಿ ಆರು ವಿಷಯಗಳ ಬಗ್ಗೆ ಸಭೆ ನಡೆಸಿದ್ದಾರೆ. ಮೊದಲನೇಯದಾಗಿ ಕೇಂದ್ರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮಾದರಿಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಆಡಳಿತ ಆಗುತ್ತಿಲ್ಲ ಎಂಬುದು. ಎರಡನೆಯದಾಗಿ ಸೈದ್ಧಾಂತಿಕ ನಿಲುವು ಸರ್ಕಾರದ ಆಡಳಿತದಲ್ಲಿ ಪ್ರತಿಫಲಿಸಬೇಕು. ಆದರೆ ಸಿಎಂ ಯಡಿಯೂರಪ್ಪ ಅವರ ಸರ್ಕಾರದಲ್ಲಿ ಸೈದ್ದಾಂತಿಕ ನಿಲುವು ಕಾಣುತ್ತಿಲ್ಲ.

ಮೂರನೆಯದಾಗಿ ಸಚಿವ ಸಂಪುಟದಲ್ಲಿ ಸಾಮಾಜಿಕ ನ್ಯಾಯವೇ ಇಲ್ಲ. ನಾಲ್ಕನೆ ವಿಷಯ ನಿಗಮ-ಮಂಡಳಿಗಳಿಗೆ ಕಾರ್ಯಕರ್ತರಿಗೆ ಅವಕಾಶವೇ ಇಲ್ಲ. ನಿಗಮ ಮಂಡಳಿಗಳ ನೇಮಕಾತಿಯಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ. ಐದನೇ ವಿಷಯ ಪಕ್ಷದಲ್ಲಿ ಹಿರಿಯರ ನಿರಂತರ ಕಡೆಗಣನೆ ಆಗುತ್ತಿದೆ ಎಂಬುದು ಹಾಗೂ ಆರನೇ ವಿಷಯ ಅತ್ಯಂತ ಪ್ರಮುಖವಾಗಿದ್ದು, 2023ರ ಚುನಾವಣೆ ವೇಳೆಗೆ ಎರಡನೇ ಹಂತದ ನಾಯಕರ ಬೆಳವಣಿಗೆ ಆಗಬೇಕು ಎಂದು ಹೈಕಮಾಂಡ್ ಗಮನಕ್ಕೆ ತರಲು ತೀರ್ಮಾನ ಮಾಡಲಾಗಿದೆ.

ಇನ್ನೊಂದು ಸುತ್ತಿನ ಸಭೆ ಬಳಿಕ

ಇನ್ನೊಂದು ಸುತ್ತಿನ ಸಭೆ ಬಳಿಕ

ಆರು ವಿಚಾರಗಳ ಬಗ್ಗೆ ಚರ್ಚೆ ನಡೆಸಿರುವ ಮೂಲ ಬಿಜೆಪಿ ಶಾಸಕರು, ಇನ್ನೊಂದು ಸುತ್ತಿನ ಸಭೆ ಬಳಿಕ ವರಿಷ್ಠರ ಗಮನ ಸೆಳೆಯುವ ಬಗ್ಗೆ ತೀರ್ಮಾನ ಮಾಡಿದ್ದಾರೆ. ಇಂದು ರಾತ್ರಿ ಸಿಎಂ ಕರೆದಿರುವ ಭೋಜನಕೂಟಕ್ಕೆ ಹೋಗಬೇಕೋ ಬೇಡವೋ ಎಂಬಬುದರ ಬಗ್ಗೆ ಸಭೆ ಸೇರಿದ್ದ ಶಾಸಕರು ಇನ್ನೂ ತೀರ್ಮಾನಿಸಿಲ್ಲ.


ಈ ವಿಧಾನ ಮಂಡಳ ಅಧಿವೇಶನದ ಬಳಿಕ ಮತ್ತೊಮ್ಮೆ ಸಭೆ ಸೇರಿ ಎಲ್ಲ ವಿಷಯಗಳನ್ನು ದೆಹಲಿ ಮಟ್ಟದಲ್ಲಿ ಪಕ್ಷದ ವರಿಷ್ಠರ ಗಮನಕ್ಕೆ ತರಲು ಸಭೆಯಲ್ಲಿ ಶಾಸಕರು ನಿರ್ಧಾರ ಮಾಡಿದ್ದಾರೆ. ಹೀಗಾಗಿ ಈ ಅಸಮಾಧಾನ ಬಿಜೆಪಿಯಲ್ಲಿ ದೊಡ್ಡ ಮಟ್ಟದ ಬದಲಾವಣೆಗೆ ಕಾರಣವಾಗಲಿದೆ ಎನ್ನಲಾಗುತ್ತಿದೆ.

ಪತ್ರ ಬರೆದಿದ್ದ ವಿ. ಸುನಿಲ್ ಕುಮಾರ್

ಪತ್ರ ಬರೆದಿದ್ದ ವಿ. ಸುನಿಲ್ ಕುಮಾರ್

ಕಳೆದ ಡಿಸೆಂಬರ್ 1, 2020 ರಂದು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಪತ್ರ ಬರೆದಿದ್ದ ಸರ್ಕಾರದ ಮುಖ್ಯ ಸಚೇತಕ, ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಅವರು ಈ ಆರು ವಿಷಯಗಳನ್ನು ಪತ್ರದಲ್ಲಿ ಪ್ರಸ್ತಾಪಿಸಿದ್ದರು. ನಿಗಮ ಮಂಡಳಿಗಳಿಗೆ ನೇಮಕಾತಿ, ಪ್ರಧಾನಿ ಮೋದಿ ಮಾದರಿಯ ಆಡಳಿತ ಕುರಿತಂತೆ ತಮ್ಮ ಅನಿಸಿಕೆಗಳನ್ನು ಹೇಳಿಕೊಳ್ಳಲು ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಪತ್ರದಲ್ಲಿ ಸುನೀಲ್ ಕುಮಾರ್ ಒತ್ತಾಯಿಸಿದ್ದರು. ಇದೀಗ ಆ ಪತ್ರದ ಮುಂದುವರೆದ ಭಾಗವಾಗಿ 14 ಶಾಸಕರು ಸಭೆ ಸೇರಿ ಚರ್ಚೆ ನಡೆಸಿದ್ದಾರೆ. ಹೀಗಾಗಿ ಈ ಬೆಳವಣಿಗೆ ಮುಂದಿನ ಹಂತದಲ್ಲಿ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆಗೆ ನಾಂದಿ ಆಗಲಿದೆ.

ವಿಧಾನಸೌಧದಲ್ಲಿ ನಡೆದ ಭೋಜನಕೂಟದ ಬಳಿಕ ಉತ್ತರ ಕರ್ನಾಟಕದ ಶಾಸಕ ಮಿತ್ರರಿಗೆ ಕಾರ್ಲ ಕಜೆ ಅಕ್ಕಿಯ ವಿಶೇಷತೆ ತಿಳಿಸಿ ಮಧ್ಯಾಹ್ನದ ಊಟ ಇಂದು ವಿಧಾನಸೌಧದಲ್ಲಿ ಮಾಡಲಾಯಿತು ಎಂದು ಸರ್ಕಾರದ ಮುಖ್ಯ ಸಚೇತಕ ವಿ. ಸುನಿಲ್ ಕುಮಾರ್ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

English summary
The 14 BJP MLAs of the origin BJP met in the Vidhanasoudha to draw attention to the High Commond of performance of the Yeddyurappa government. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X