ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಸರ್ಕಾರಕ್ಕೆ ವರುಷ: ಕೋವಿಡ್ ಜೊತೆಗೆ ಎದುರಿಸಿದ ಸವಾಲುಗಳು!

|
Google Oneindia Kannada News

ಬೆಂಗಳೂರು, ಜುಲೈ 22: ಮೈತ್ರಿ ಸರ್ಕಾರದ ಪತನದ ಬಳಿಕ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರ್ಕಾರಕ್ಕೆ ಒಂದು ವರ್ಷ ತುಂಬುತ್ತಿದೆ. ಇದೇ ಜುಲೈ 26, 2020ಕ್ಕೆ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಒಂದು ವರ್ಷವಾಗಲಿದೆ. ಮೈತ್ರಿ ಸರ್ಕಾರದ 17 ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದರೊಂದಿಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಆಮೇಲೆ ಹಲವು ಸವಾಲುಗಳನ್ನು ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎದುರಿಸಿದ್ದಾರೆ.

Recommended Video

America ನಂತರ Indiaದಲ್ಲಿ ಅತಿ ಹೆಚ್ಚು Covid test | Oneindia Kannada

ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿದೆ. ಈ ಒಂದು ವರ್ಷದಲ್ಲಿ ಬಿಜೆಪಿ ಸರ್ಕಾರ ಕಲ್ಲುಮುಳ್ಳುಗಳಿಂದ ಕೂಡಿದ ಹಾದಿಯಲ್ಲಿಯೆ ನಡೆದಿದೆ ಎಂದರೆ ಉತ್ಪ್ರೇಕ್ಷೆ ಆಗಲಿಕ್ಕಿಲ್ಲ. ಯಾಕೆಂದರೆ ಅನೇಕ ಸವಾಲುಗಳು ರಾಜ್ಯ ಬಿಜೆಪಿ ಸರ್ಕಾರಕ್ಕೆ ಎದುರಾಗಿವೆ. ಯಡಿಯೂರಪ್ಪ ಅವರು ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆಯೆ ಒಂದರ‌ ಮೇಲೊಂದರಂತೆ ಸವಾಲುಗಳು ಎದುರಾಗಿವೆ. ಆರಂಭದ ಅತಿವೃಷ್ಟಿ, ಸರ್ಕಾರದ ಭವಿಷ್ಯ ನಿರ್ಧರಿಸಿದ ಉಪಚುನಾವಣೆ, ಸಂಪುಟ ವಿಸ್ತರಣೆಯ ನಂತರ ಇದೀಗ ಕೊರೊನಾ ವೈರಸ್ ಮಹಾಮಾರಿ ರಾಜ್ಯ ಸರ್ಕಾರ ಎದುರಿಸಿದ ಹಾಗೂ ಎದುರಿಸುತ್ತಿರುವ ದೊಡ್ಡ ಸವಾಲು.

ಆರಂಭದಲ್ಲಿ ಅತಿವೃಷ್ಟಿ

ಆರಂಭದಲ್ಲಿ ಅತಿವೃಷ್ಟಿ

ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆಯೆ ಬಿಜೆಪಿ ಸರ್ಕಾರವನ್ನು ಸ್ವಾಗತಿಸಿದ್ದು ಅತಿವೃಷ್ಟಿ ಹಾಗೂ ನೆರೆ ಪರಿಸ್ಥಿತಿ. ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಡದೇ ಇದ್ದುದರಿಂದ ಏಕಾಂಗಿಯಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅತಿವೃಷ್ಟಿ ಹಾಗೂ ನೆರೆ ಪರಿಸ್ಥಿತಿಯನ್ನು ನಿಭಾಯಿಸಬೇಕಾಯಿತು.

2019, ಆಗಸ್ಟ್‌ ನಲ್ಲಿ ಅತಿವೃಷ್ಟಿಯಿಂದ ಉತ್ತರ ಕರ್ನಾಟಕ ಭಾಗ ಸೇರಿದಂತೆ ರಾಜ್ಯದ ಇತರ ಪ್ರದೇಶಗಳ ಹಲವು ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಯಿತು. ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಬ್ಬರೆ ಪ್ರವಾಹ ಸ್ಥಿತಿ ಅವಲೋಕನ, ಸಭೆಗಳನ್ನು ನಡೆಸಬೇಕಾಯ್ತು. ಅದರಿಂದಾಗಿ ರಾಜ್ಯದ ಜನರು ಸಂಕಷ್ಟಕ್ಕೆ ಸಿಲುಕುವಂತಾಗಿತ್ತು.

ಅತಿವೃಷ್ಟಿ ಹಾನಿ

ಅತಿವೃಷ್ಟಿ ಹಾನಿ

ಹಿಂದೆಂದೂ ಕಾಣದ ಪ್ರವಾಹಕ್ಕೆ ರಾಜ್ಯದ 22 ಜಿಲ್ಲೆಗಳು ತುತ್ತಾಗಿದ್ದವು. ಸುಮಾರು 7.19 ಲಕ್ಷ ಹೆಕ್ಟೇರ್ ಬೆಳೆ ಪ್ರವಾಹಕ್ಕೆ ಕೊಚ್ಚಿ ಹೋಗಿತ್ತು. ಸುಮಾರು 4.5 ಲಕ್ಷ ರೈತರು ಬೆಳೆ ನಷ್ಟ ಅನುಭವಿಸಿದರು. ರಾಜ್ಯದಲ್ಲಿ ನರೆ ಹಾಗೂ ಅತಿವೃಷ್ಟಿಯಿಂದ 80 ಮಂದಿ ಸಾವನ್ನಪ್ಪಿದ್ದರು. ಜೊತೆಗೆ ಸುಮಾರು 4 ಲಕ್ಷ ಮನೆಗಳು ನಾಶವಾಗಿದ್ದವು. ಈ‌ ಮಹಾ ಮಳೆಯಿಂದ ಉಂಟಾದ ಪ್ರವಾಹವನ್ನು ನಿಭಾಯಿಸುವ ಅಗ್ನಿಪರೀಕ್ಷೆಯನ್ನು ಸಿಎಂ ಯಡಿಯೂರಪ್ಪ ಒಬ್ಬರೆ ಎದುರಿಸಬೇಕಾಯಿತು.

ಸಂಪುಟ ವಿಸ್ತರಣೆ ಆಗದೆ ಇದ್ದುದರಿಂದ ಎಲ್ಲವನ್ನೂ ನಿಭಾಯಿಸುವುದು ಸಿಎಂ ಯಡಿಯೂರಪ್ಪ ಅವರಿಗೆ ಸವಾಲಾಗಿತ್ತು. ಆದರೆ ಸಂಕಷ್ಟ ಅನುಭವಿಸಿದ್ದು ಮಾತ್ರ ರಾಜ್ಯದ ಜನತೆ. ಸಕಾಲದಲ್ಲಿ ಪರಿಹಾರ, ಸರ್ಕಾರದ ಸಹಾಯ ಸಿಗದೇ ಸತ್ತವರೆಷ್ಟೊ ಜನರು. ಕೇಂದ್ರದ ತಾರತಮ್ಯ ನೀತಿಯಿಂದ ಜನರ ರಕ್ಷಣೆ ಮಾಡುವುದು ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗಿರಲಿಲ್ಲ. ಕೊನೆಗೆ ಜನಾಕ್ರೋಶಕ್ಕೆ ಮಣಿದ ಕೇಂದ್ರ ಸರ್ಕಾರ ಸ್ಪಂದಿಸಿತ್ತು.

ನೆರೆ ಪರಿಹಾರ

ನೆರೆ ಪರಿಹಾರ

ರಾಜ್ಯ ಭೀಕರ ಅತಿವೃಷ್ಟಿಗೆ ಸುಮಾರು 38,000 ಕೋಟಿ ರೂ. ಬೃಹತ್ ಪ್ರಮಾಣದ ನಷ್ಟ ಅನುಭವಿಸಿತ್ತು. ಇಷ್ಟು ದೊಡ್ಡ ಪ್ರಮಾಣದ ನಷ್ಟ ಅನುಭವಿಸಿದರೂ ಕೇಂದ್ರದ ಗಮನಕ್ಕೆ ತರುವಲ್ಲಿ ರಾಜ್ಯ ಬಿಜೆಪಿ ಸರ್ಕಾರ ವಿಫಲವಾಗಿತ್ತು. ಜೊತೆಗೆ ಕೇಂದ್ರದ ಮಲತಾಯಿ ಧೋರಣೆ ಕುರಿತು ರಾಜ್ಯದಲ್ಲಿ ಪ್ರತಿಭಟನೆಗಳು, ವಿರೋಧ ಪಕ್ಷಗಳ ನಾಯಕರ ಆಕ್ರೋಶ ಕೂಡ ವ್ಯಕ್ತವಾಗಿತ್ತು. ಆದರೆ ಅದ್ಯಾವುದು ಜನರಿಗೆ ಪರಿಹಾರ ತಂದು ಕೊಡಲಿಲ್ಲ.

ರಾಜ್ಯ ಬಿಜೆಪಿ ಸರ್ಕಾರದ ಮನವಿಗಳಿಗೆ ಕೇಂದ್ರ ಸರ್ಕಾರ ಗಮನ ಕೊಡಲಿಲ್ಲ. ಇದರಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ರಾಜ್ಯ ಬಿಜೆಪಿ ನಾಯಕರು ತೀವ್ರ ಮುಜುಗರ ಅನುಭವಿಸುವಂತಾಗಿತ್ತು. ರಾಜ್ಯ ಸರ್ಕಾರದ ಹಲವು ಮನವಿಗಳ ಬಳಿಕ ಕೇಂದ್ರ ಸರ್ಕಾರ ಮೊದಲ ಕಂತಿನಲ್ಲಿ 1200 ಕೋಟಿ ರೂ. ಬಿಡುಗಡೆ ಮಾಡಿತು. 38,000 ಕೋಟಿ ರೂ. ಪರಿಹಾರ ಕೇಳಿದ್ದ ರಾಜ್ಯಕ್ಕೆ ಕೇಂದ್ರ ನೀಡಿದ ಅಲ್ಪ ಪರಿಹಾರ ರಾಜ್ಯ ಸರ್ಕಾರವನ್ನು ಮತ್ತೊಮ್ಮೆ ಮುಜುಗರಕ್ಕೆ ಸಿಲುಕಿಸಿತು.

ಬಹಿರಂಗ ಒತ್ತಾಯ

ಬಹಿರಂಗ ಒತ್ತಾಯ

ಕೇಂದ್ರ ಸರ್ಕಾರದ ಭೇಟಿ, ಮನವಿಗಳ ನಂತರ ಬಹಿರಂಗವಾಗಿಯೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರಧಾನಿ ಮೋದಿ ಅವರನ್ನು ಪರಿಹಾರಕ್ಕೆ ಒತ್ತಾಯಿಸಿದರು. ಇದು ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರವಿದ್ದಾಗ ನಡೆದ ಅತಿ ಅಪರೂಪದ ಘಟನೆ.

ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತುಮಕೂರಿಗೆ ಬಂದಿದ್ದಾಗ, ವೇದಿಕೆ ಮೇಲೆ ಸಿಎಂ ಯಡಿಯೂರಪ್ಪ ಅವು ನೆರೆ ಪರಿಹಾರಕ್ಕೆ ನೀಡುವಂತೆ ಬಹಿರಂಗ ಒತ್ತಾಯ ಮಾಡಿದ್ದರು. ಅದು ಬಿಜೆಪಿ ಹೈಕಮಾಂಡ್ ಕಣ್ಣು ಕೆಂಪಾಗಿಸಿತ್ತು. ಆದರೂ ಬಳಿಕ ಕೇಂದ್ರ ಸರ್ಕಾರ ಮತ್ತೆ 1,869.85 ಕೋಟಿ ರೂ. ಪರಿಹಾರ ಹಣ ಬಿಡುಗಡೆ ಮಾಡಿತು.

ಒಟ್ಟು ಸುಮಾರು 38,000 ಕೋಟಿ ರೂ. ಪರಿಹಾರ ಹಣ ಕೇಳಿದ್ದ ರಾಜ್ಯಕ್ಕೆ ಸಿಕ್ಕಿದ್ದು ಮಾತ್ರ ಅತಿ ಕಡಿಮೆ. ಬಿಜೆಪಿಯೇತರ ಸರ್ಕಾರಗಳಿದ್ದು ರಾಜ್ಯಗಳಿಗೆ ಹೆಚ್ಚಿನ ಪರಿಹಾರವನ್ನು ಕೇಂದ್ರ ಬಿಜೆಪಿ ಸರ್ಕಾರ ಬಿಡುಗಡೆ ಮಾಡಿತ್ತು.

15 ಕ್ಷೇತ್ರಗಳಿಗೆ ಉಪಚುನಾವಣೆ

15 ಕ್ಷೇತ್ರಗಳಿಗೆ ಉಪಚುನಾವಣೆ

ಅನರ್ಹರಾಗಿದ್ದ 17 ಶಾಸಕರ ತೀವ್ರ ಒತ್ತಡ ರಾಜ್ಯ ಬಿಜೆಪಿ ಸರ್ಕಾರಕ್ಕೆ ತಲೆನೋವಾಗಿತ್ತು. ಜೊತೆಗೆ ಬಿಜೆಪಿ ಸರ್ಕಾರದ ಭವಿಷ್ಯ ಕೂಡ ಅನರ್ಹ ಶಾಸಕರ ಕುರಿತು ಸುಪ್ರೀಂಕೋರ್ಟ್‌ ತೀರ್ಪಿನ ಮೇಲೆ ನಿಂತಿತ್ತು. ಕೊನೆಗೆ ಚುನಾವಣೆ ಘೋಷಣೆಯಾದಾಗ ಯಡಿಯೂರಪ್ಪ ನಿಟ್ಟುಸಿರು ಬಿಟ್ಟಿದ್ದರು.

ಕಾಂಗ್ರೆಸ್-ಜೆಡಿಎಸ್ ರೆಬೆಲ್ ಶಾಸಕರ ರಾಜೀನಾಮೆಯಿಂದ ಅಸ್ತಿತ್ವಕ್ಕೆ ಬಂದಿದ್ದ ಬಿಜೆಪಿ ಸರ್ಕಾರದ ಅಳಿವು ಉಳಿವಿನ ಭವಿಷ್ಯ ನಿರ್ಧರಿಸಿದ್ದು ಉಪಚುನಾವಣೆ. 15 ಕ್ಷೇತ್ರಗಳಲ್ಲಿ ಅನರ್ಹ ಶಾಸಕರನ್ನು ಗೆಲ್ಲಿಸಿ, ಸರ್ಕಾರವನ್ನು ಉಳಿಸಿಕೊಳ್ಳುವ ಅಗ್ನಿಪರೀಕ್ಷೆ ಬಿಜೆಪಿ ಮುಂದಿತ್ತು.

ಕಳೆದ ಡಿಸೆಂಬರ್‌ 2019ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ 15ರಲ್ಲಿ 12 ಸ್ಥಾನವನ್ನು ಗೆದ್ದು ನಿಟ್ಟುಸಿರು ಬಿಟ್ಟಿತು. ಯಡಿಯೂರಪ್ಪ ಸರ್ಕಾರಕ್ಕೆ ತ್ಯಾಗ ಮಾಡಿದ ಅನರ್ಹ ಶಾಸಕರನ್ನು ಗೆಲ್ಲಿಸುವ ಅನಿವಾರ್ಯತೆಯೂ ಇತ್ತು.

ವಿಸ್ತರಣೆ ಕಸರತ್ತು

ವಿಸ್ತರಣೆ ಕಸರತ್ತು

ಉಪ ಚುನಾವಣೆಯಲ್ಲಿ ಬಿಜೆಪಿ ಸರಳ ಬಹುಮತ ಪಡೆದರೂ ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್ ಅನುಮತಿ ಕೊಟ್ಟಿರಲಿಲ್ಲ. ಹೀಗಾಗಿ ಅನರ್ಹತೆ ಕಳೆದು ಅರ್ಹ ಶಾಸಕರಾಗಿದ್ದವರ ಒತ್ತಡ ಹೆಚ್ಚಾಗಿತ್ತು.

ಬಿಜೆಪಿ ಸರ್ಕಾರ ಬರಲು ಕಾರಣಕರ್ತರಾದ ನೂತನ ಶಾಸಕರಿಗೆ ಸಚಿವ ಸ್ಥಾನ ನೀಡುವ ಅನಿವಾರ್ಯತೆ ಸರ್ಕಾರದ್ದಾಗಿತ್ತು.‌ ಆದರೆ ಹೈ ಕಮಾಂಡ್ ಸಂಪುಟ ವಿಸ್ತರಣೆಗೆ ಮೀನಾಮೇಷ‌ ನೋಡಿರುವುದು ಬಿಜೆಪಿ ಸರ್ಕಾರವನ್ನು ಮತ್ತೆ ಸಂಕಷ್ಟಕ್ಕೀಡು ಮಾಡಿತ್ತು.‌ ಎರಡು ತಿಂಗಳು ಸಂಪುಟ ವಿಸ್ತರಣೆಯಾಗದಿರುವುದು ಅರ್ಹ ಶಾಸಕರ ಸಹನೆಯನ್ನೂ ಕೆಡಿಸಿತ್ತು. ಬಳಿಕ ಹೈ ಕಮಾಂಡ್ ಫೆಬ್ರವರಿಯಲ್ಲಿ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ನೀಡಿದ ಬಳಿಕ ಮುಖ್ಯಮಂತ್ರಿಗಳು ನಿಟ್ಟುಸಿರು ಬಿಡುವಂತಾಯಿತು.

ಮೂಲ ಬಿಜೆಪಿಗರ ಬಂಡಾಯ

ಮೂಲ ಬಿಜೆಪಿಗರ ಬಂಡಾಯ

ಸಂಪುಟ ವಿಸ್ತರಣೆ ಆಗುತ್ತಿದ್ದಂತೆಯೆ ಮೂಲ ಬಿಜೆಪಿ ನಾಯಕರ ಬಂಡಾಯ ಶುರುವಾಗಿತ್ತು. ಆಂತರಿಕ ಭಿನ್ನಾಭಿಪ್ರಾಯದಿಂದ ಬಿಜೆಪಿ ಸರ್ಕಾರ ಬೀಳುತ್ತದೆ ಎಂಬಂತಹ ಸ್ಥಿತಿ ನಿರ್ಮಾಣವಾಗಿತ್ತು. ಅದೇ ಸಮಯದಲ್ಲಿ ನಾಯಕತ್ವ ಬದಲಾವಣೆ ಮಾತುಗಳು ಕೇಳಿಬಂದವು.

ಸಚಿವ ಸ್ಥಾನ ಸಿಗದೇ ಅತೃಪ್ತಿಗೊಂಡಿರುವ ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ ಸಿಎಂ ಯಡಿಯೂರಪ್ಪ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದರು. ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಬಸನಗೌಡ ಯತ್ನಾಳ್ ಸೇರಿದಂತೆ 10ಕ್ಕೂ ಹೆಚ್ಚು ಅತೃಪ್ತರು ಸಿಎಂ ವಿರುದ್ಧ ತಿರುಗಿ ಬಿದ್ದಿದ್ದು ಸರ್ಕಾರಕ್ಕೆ ನುಂಗಲಾರದ ತುತ್ತಾಗಿತ್ತು. ಭಿನ್ನಮತೀಯ ಚಟುವಟಿಕೆಯನ್ನು ತಣಿಸಲು ಸಿಎಂ ಯಡಿಯೂರಪ್ಪ ನಾನಾ ಕಸರತ್ತು ನಡೆಸುತ್ತಿರುವ ಸಂದರ್ಭದಲ್ಲಿಯೆ ಕೊರೊನಾ ವೈರಸ್‌ ಮಹಾಮರಿ ಒಕ್ಕರಿಸಿದ್ದು, ಅತೃಪ್ತಿ ಬೂದಿ ಮುಚ್ಚಿದ ಕೆಂಡದಂತಿದೆ.

ಕೋವಿಡ್, ಲಾಕ್‌ಡೌನ್

ಕೋವಿಡ್, ಲಾಕ್‌ಡೌನ್

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಕೆಡವಿ ಅಧಿಕಾರ ಅನುಭವಿಸುವ ಉತ್ಸಾಹದಲ್ಲಿದ್ದ ಬಿಜೆಪಿ ನಾಯಕರಿಗೆ ಎದುರಾಗಿರುವ ಮತ್ತೊಂದು ಸವಾಲು ಕೊರೊನಾ ವೈರಸ್ ಮಹಾಮಾರಿ. ಆರಂಭದಲ್ಲಿ ಜನಪರವಾಗಿ ಲಾಕ್‌ಡೌನ್ ಮಾಡಿದ್ದ ಸರ್ಕಾರ ಇದೀಗ ಆರ್ಥಿಕ ಸಂಪನ್ಮೂಲ ಕ್ರೋಢೀಕರಣದ ನೆಪದಲ್ಲಿ ಇಡೀ ರಾಜ್ಯಾದ್ಯಂತ ಲಾಕ್‌ಡೌನ್ ಹಿಂದಕ್ಕೆ ಪಡೆದಿದೆ.

ಕೊರೊನಾ ಕಾರಣಕ್ಕೆ ಹೇರಿಸಿದ ಲಾಕ್‌ಡೌನ್ ನಿಂದ ರಾಜ್ಯದ ಬೊಕ್ಕಸ ಖಾಲಿಯಾಗಿದೆ. ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರಾಜ್ಯ ಸರ್ಕಾರ ತನ್ನ ಸೀಮಿತ ಸಂಪನ್ಮೂಲವನ್ನು ಕೊರೊನಾ ನಿಯಂತ್ರಣಕ್ಕೆ ವಿನಿಯೋಗಿಸುತ್ತಿದೆ. ಸಾವಿರಾರು ಸಂಖ್ಯೆಯ ಕೊರೊನಾ ಸೋಂಕಿತರಿಗೆ ಚಿಕಿತ್ಸೆ, ಆಸ್ಪತ್ರೆ ವ್ಯವಸ್ಥೆ, ವೈದ್ಯಕೀಯ ವ್ಯವಸ್ಥೆಗಳನ್ನು ಒದಗಿಸುವುದು ಸರ್ಕಾರಕ್ಕೆ ಸದ್ಯ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಮಹಾಮಾರಿ ತಂದೊಡ್ಡಿರುವ ಅಗ್ನಿಪರೀಕ್ಷೆಯಲ್ಲಿ ಯಡಿಯೂರಪ್ಪ ಸರ್ಕಾರ ಹೇಗೆ ಗೆಲುವು ಸಾಧಿಸುತ್ತೆ ಅನ್ನೋದು ಎಲ್ಲರ ಪ್ರಶ್ನೆಯಾಗಿದೆ.

ವೆಂಟಿಲೇಟರ್‌ ಖರೀದಿ ಹಗರಣ

ವೆಂಟಿಲೇಟರ್‌ ಖರೀದಿ ಹಗರಣ

ಕೋವಿಡ್-19 ಸಂಕಷ್ಟ ಕಾಲದ ವೈದ್ಯಕೀಯ ವಸ್ತುಗಳ ಖರೀದಿಯಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಹಗರಣವಾಗಿದೆ ಎಂದು ವಿರೋಧ ಪಕ್ಷಗಳ ನಾಯಕರು ಆರೋಪ ಮಾಡಿದ್ದಾರೆ. ಈ ಕುರಿತು ದಾಖಲೆಗಳನ್ನು ಬಿಡುಗಡೆ ಮಾಡಿರುವ ಸಿದ್ದರಾಮಯ್ಯ ಅವರು, ಲೆಕ್ಕಕೊಡಿ ಅಭಿಯಾನ ಆರಂಭಿಸಿದ್ದಾರೆ.

ಜೊತೆಗೆ ಸ್ಯಾನಿಟೈಸರ್, ಪಿಪಿಇ ಕಿಟ್ ಸೇರಿದಂತೆ ವೈದ್ಯಕೀಯ ಸಲಕರಣೆಗಳಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಹಗರಣ ಕೇಳಿ ಬರುತ್ತಿರುವುದು ವಿಪರ್ಯಾಸ. ಜೊತೆಗೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆಗಳಲ್ಲಿ ಕೋವಿಡ್ ಸೋಂಕಿಗೆ ಚಿಕಿತ್ಸೆ ಸಿಗದೆ ಬೀದಿ ಬೀದಿಗಳಲ್ಲಿ ಜನರು ಸಾಯುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳು ರಾಜ್ಯ ಬಿಜೆಪಿ ಸರ್ಕಾರದ ಆದೇಶಗಳಿಗೆ ಕ್ಯಾರೆ ಎನ್ನುತ್ತಿಲ್ಲ. ಹೀಗಾಗಿ ಹಿಂದಿನ ಎಲ್ಲ ಸವಾಲುಗಳಿಗಿಂತ ಈಗ ಬಹುದೊಡ್ಡ ಸವಾಲನ್ನು ಸರ್ಕಾರ ಎದುರಿಸುತ್ತಿದೆ.

English summary
The BJP government, which came into existence after the fall of the alliance government, has been filling a year. The BJP government came into existence in the state with 17 MLAs resigning from their respective posts, but there are still many challenges to be raised by Chief Minister BS. Yeddyurappa confronted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X