• search
  • Live TV
ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

85ನೇ ಕನ್ನಡ ಸಾಹಿತ್ಯ ಸಮ್ಮೇಳನ; ಕನ್ನಡದ ಬಗ್ಗೆ ಸಮ್ಮೇಳನಾಧ್ಯಕ್ಷರ ಭಾವುಕ ನುಡಿ

By ಕಲಬುರಗಿ ಪ್ರತಿನಿಧಿ
|
Google Oneindia Kannada News

ಕಲಬುರಗಿ, ಫೆಬ್ರವರಿ 05: "ನಮ್ಮ ಪರಿಸರದ ಭಾಷೆ, ನಾವು ಕಲಿಯುವ, ಕಲಿಸುವ ಭಾಷೆಯೇ ಮಾತೃಭಾಷೆಯಾಗಬೇಕು" ಎಂದು ಹಿರಿಯ ಕವಿ, 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಭಾಧ್ಯಕ್ಷರಾದ ಎಚ್.ಎಸ್.ವೆಂಕಟೇಶಮೂರ್ತಿ ಪ್ರತಿಪಾದಿಸಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿನ ಶ್ರೀ ವಿಜಯ ಪ್ರಧಾನ ವೇದಿಕೆಯಲ್ಲಿ ಇಂದು ಆರಂಭಗೊಂಡಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರ ಭಾಷಣ ಮಾಡಿದ ಅವರು, "ಇಡೀ ಕನ್ನಡ ನಾಡಿನ ಉಜ್ವಲ ಶಕ್ತಿಯು ನಮ್ಮ ಕನ್ನಡದ ಭಾಷೆಯಲ್ಲಿದೆ. ಕರ್ನಾಟಕದಲ್ಲಿ ಕನ್ನಡವೇ ಮಾತೃ ಭಾಷೆಯಾಗಬೇಕು. ವ್ಯವಹಾರದ ಭಾಷೆಯಾಗಬೇಕು" ಎಂದರು. ತಮ್ಮ ಭಾಷಣದುದ್ದಕ್ಕೂ ಕನ್ನಡ ನುಡಿಯ ಬಗ್ಗೆ ಅಪಾರ ಪ್ರೇಮ ವ್ಯಕ್ತಪಡಿಸಿದ ಅವರು, "ಕನ್ನಡ ಮತ್ತು ಉರ್ದು ಭಾಷೆ ಮೇಳೈಸಿಕೊಂಡಿರುವ ಕಲಬುರಗಿ ಭಾಷೆಯು ವಿಶೇಷ ಭಾಷೆ, ತತ್ವಪದಕಾರರ ಭಾಷೆ" ಎಂದರು.

"ಕನ್ನಡ ಕೃತಿಗಳು ಬೇರೆ ಭಾಷೆಯಲ್ಲಿ ಪ್ರಕಟವಾಗಲಿ"

ಕನ್ನಡದ ಕೃತಿಗಳು ಬೇರೆ ಬೇರೆ ಭಾಷೆಯಲ್ಲಿ ಪ್ರಕಟವಾಗುವಂತಾಗಬೇಕು. ಕನ್ನಡದ ಭಾಷೆಯ ಉಳಿವಿನ ದೃಷ್ಟಿಯಿಂದ ಕನ್ನಡಿಗರಾದ ನಾವು ಕನ್ನಡದಲ್ಲಿಯೇ ವ್ಯವಹರಿಸುವುದು ಅತೀ ಅವಶ್ಯಕ ಎಂದರು. ಇಂಗ್ಲಿಷ್ ಮಾಧ್ಯಮದಲ್ಲಿ ಓದಿದರೆ ಮಾತ್ರ ನಾನು ಬದುಕಲು ಸಾಧ್ಯ ಎಂದು ತಿಳಿಯುವುದು ಬರೀ ಭ್ರಮೆ. ಐನ್ ಸ್ಟೀನ್ ಅಂಥವರಿಗೆ ಇಂಗ್ಲಿಷ್ ಕೇವಲ ಸಂವಹನದ ಭಾಷೆ. ಕರ್ನಾಟಕದಲ್ಲಿ ಕನ್ನಡ ಭಾಷೆಯನ್ನು ಅನ್ನದ ಭಾಷೆಯಾಗಿ ರೂಪಿಸಬೇಕು. ಪ್ರಾಥಮಿಕ ಕಲಿಕೆಯು ಕನ್ನಡ ಭಾಷೆಯಲ್ಲಿಯೇ ಆಗಬೇಕು. ಪ್ರಾಥಮಿಕ ಶಿಕ್ಷಣದ ಕಲಿಕೆಯು ಕನ್ನಡ ಮಾಧ್ಯಮದಲ್ಲಿಯೇ ಆಗಬೇಕು ಎಂಬುದಕ್ಕೆ ಕಾನೂನು ತೊಡಕುಗಳು ಅಡ್ಡಿಯಾಗುತ್ತಿರುವುದು ಸರಿಯಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಸಮ್ಮೇಳನ: ಸಮ್ಮೇಳನಾಧ್ಯಕ್ಷ ಎಚ್ಎಸ್ವಿಗೆ ಅದ್ದೂರಿ ಸ್ವಾಗತಕನ್ನಡ ಸಾಹಿತ್ಯ ಸಮ್ಮೇಳನ: ಸಮ್ಮೇಳನಾಧ್ಯಕ್ಷ ಎಚ್ಎಸ್ವಿಗೆ ಅದ್ದೂರಿ ಸ್ವಾಗತ

 ಬೇಸರ ವ್ಯಕ್ತಪಡಿಸಿದ ಸಮ್ಮೇಳನಾಧ್ಯಕ್ಷರು

ಬೇಸರ ವ್ಯಕ್ತಪಡಿಸಿದ ಸಮ್ಮೇಳನಾಧ್ಯಕ್ಷರು

ಶಿಕ್ಷಣದ ಸಂಸ್ಥೆಗಳಲ್ಲಿ ಕನ್ನಡ ಭಾಷೆಯನ್ನು ನಿರ್ಲಕ್ಷಿಸಿದರೆ ಮಕ್ಕಳು ತಮ್ಮ ಗ್ರಹಿಕಾ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ. ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುವ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಲೇ ಸಾಗಿದೆ. ದಿನೇದಿನೇ ಮಕ್ಕಳ ನಾಲಿಗೆಯಿಂದ ಕನ್ನಡ ಭಾಷೆಯ ಬೀಜಗಳು ಮಾಯವಾಗುತ್ತಿವೆ ಎಂದು ಅವರು ಇದೇ ವೇಳೆ ಬೇಸರ ವ್ಯಕ್ತಪಡಿಸಿದರು. "ನಮ್ಮ ಪರಿಸರದ ನಾಶ ಎಂದರೆ ಅದು ಇಡೀ ಜೀವ ಜಗತ್ತಿನ ನಾಶ, ಬಡವರ ನಾಶ" ಎಂದ ಅವರು, "ನಮ್ಮ ಗುರಿಯು ಬಡತನದ ನಿರ್ಮೂಲನೆಯಲ್ಲ, ಐಶ್ವರ್ಯದ ಧ್ರುವೀಕರಣವಾಗುವುದು" ಎಂದರು. "ಯಾವ ಭಾಷೆಯೂ ಇನ್ನೊಂದು ಭಾಷೆಯನ್ನು ಅಳಿಸಿ ಹಾಕಬಾರದು. ನಾವು ಕನ್ನಡವನ್ನೇ ಜೀವಿಸಬೇಕು. ಕನ್ನಡದ ಪತ್ರಿಕೆಗಳನ್ನು ಓದಬೇಕು. ಕನ್ನಡದ ಸಿನಿಮಾಗಳನ್ನು ನೋಡಬೇಕು. ಕನ್ನಡ ಯಾವತ್ತೂ ಬೆಳಗುವ ದೀಪವಾಗಬೇಕು" ಎಂದು ಸಲಹೆ ಮಾಡಿದರು.

"ಪುಸ್ತಕ ಪ್ರಕಾಶನ ಹಣ ಮಾಡುವ ಕೆಲಸವಲ್ಲ"

ಪುಸ್ತಕ ಪ್ರಕಾಶನ ಎಂದರೆ ಅದು ಹಣ ಮಾಡುವ ಕೆಲಸ ಅಲ್ಲ ಎಂದು ಎಚ್ಚರಿಸಿದ ಅವರು, ನಾಡಿನಲ್ಲಿ ಹತ್ತಾರು ಪ್ರಕಾಶನಗಳು ಪುಸ್ತಕ ಪ್ರಕಟಣೆಯ ಸಾಹಸವನ್ನು ಮಾಡುತ್ತಿವೆ ಎಂದು ಅವರು ಸಂತೋಷ ವ್ಯಕ್ತಪಡಿಸಿದರು. ಕನ್ನಡದಲ್ಲಿ ಬೇರೆ ಬೇರೆ ವಲಯದ, ಬೇರೆ ಬೇರೆ ಮನೋಧರ್ಮದ ಲೇಖಕರು ಬರವಣಿಗೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ಅವರಲ್ಲಿ ಹೊಸ ವಸ್ತು, ಹೊಸ ಸಂವೇದನೆ, ಹೊಸ ಆಶಯ ಕಾಣುತ್ತಿದೆ. ಆತ್ಮಶೋಧದ ಸಮಾಜಮುಖಿಯ ಹೊಸ ಹೊಸ ಪುಸ್ತಕಗಳು ಹೆಚ್ಚಿನ ರೀತಿಯಲ್ಲಿ ಪ್ರಕಟವಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ತಿಳಿಸಿದರು.

ಸಾಹಿತ್ಯ ಸಮ್ಮೇಳನ; ಕಲಬುರಗಿಯಲ್ಲಿ ಎಲ್ಲೇ ಸಂಚರಿಸಿದರೂ 5 ರು ಬಸ್ ದರಸಾಹಿತ್ಯ ಸಮ್ಮೇಳನ; ಕಲಬುರಗಿಯಲ್ಲಿ ಎಲ್ಲೇ ಸಂಚರಿಸಿದರೂ 5 ರು ಬಸ್ ದರ

"ಕನ್ನಡ ಜಾಗೃತಿ ಮೂಡಿಸುವ ವೇದಿಕೆ ಈ ನುಡಿಜಾತ್ರೆ"

ನುಡಿಜಾತ್ರೆಯ ಈ ವೇದಿಕೆಯು ಕನ್ನಡ ಜಾಗೃತಿ ಮೂಡಿಸುವ ವೇದಿಕೆಯಾಗಿದೆ. ಕನ್ನಡದ ಹೆಸರಲ್ಲಿ ಎಲ್ಲ ಧರ್ಮಿಯರು, ಎಲ್ಲ ಪಂಥೀಯರು, ಎಲ್ಲ ಪಕ್ಷೀಯರು ಒಂದಾಗಿದ್ದಾರೆ. ಈ ನುಡಿ ತೇರಿನ ಕನ್ನಡ ಜಾಗೃತಿಯ ಸಂದೇಶವು ಕನ್ನಡಿಗರ ಮನೆಮನೆಯನ್ನು ತಲುಪಲಿ ಎಂದು ಆಶಯ ವ್ಯಕ್ತಪಡಿಸಿದರು. ಗೆಲ್ಲಲಿ ಕನ್ನಡ, ಬಾಳಲಿ ಕನ್ನಡ ಎಂದು ಸಮ್ಮೇಳನಕ್ಕೆ ಬಂದ ಎಲ್ಲರಿಗೂ ಶುಭಾಶಯಗಳನ್ನು ಕೋರಿದರು. ಸಮಾರಂಭದಲ್ಲಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಉಪಮುಖ್ಯಮಂತ್ರಿಗಳು, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ವಾಗತ ಸಮಿತಿಯ ಅಧ್ಯಕ್ಷರಾದ ಗೋವಿಂದ ಎಂ.ಕಾರಜೋಳ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮನು ಬಳಿಗಾರ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ, ಕನ್ನಡ ಮತ್ತು ಸಂಸ್ಕøತಿ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಟಿ. ರವಿ, ಕಲಬುರಗಿ ಲೋಕಸಭಾ ಸದಸ್ಯ ಡಾ. ಉಮೇಶ ಜಾಧವ ಹಾಗೂ ಇತರರು ಇದ್ದರು.

85 ನೇ ಕನ್ನಡ ಸಾಹಿತ್ಯ ಸಮ್ಮೇಳನ; ಕಳೆಗಟ್ಟಿದ ಕಲಬುರಗಿ85 ನೇ ಕನ್ನಡ ಸಾಹಿತ್ಯ ಸಮ್ಮೇಳನ; ಕಳೆಗಟ್ಟಿದ ಕಲಬುರಗಿ

English summary
"The language of our environment, the language we learn and teach, must be the mother tongue," said writer HS Venkateshmurthy in 85th Kannada Sahitya Sammelana In Kalaburagi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X