• search
  • Live TV
ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಲಬುರಗಿ, ಯಾದಗಿರಿ ಜಿಲ್ಲೆಗಳ ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಸಿಎಂ ತೃಪ್ತಿ

|

ಕಲಬುರಗಿ, ಅಕ್ಟೋಬರ್ 21: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಬುಧವಾರದಂದು ಕಲಬುರಗಿ, ಯಾದಗಿರಿ ಜಿಲ್ಲೆಯ ಕೃಷ್ಣಾ ಮತ್ತು ಭೀಮಾ ನದಿಯ ಅಚ್ಚುಕಟ್ಟು ಪ್ರದೇಶ ಹಾಗೂ ನದಿ ಪಾತ್ರದ ಪ್ರವಾಹ ಪೀಡಿತ ಗ್ರಾಮಗಳು ಹಾಗೂ ಮಳೆ ಬಾಧಿತ ಬೀದರ್ ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು.

ವೈಮಾನಿಕ ಸಮೀಕ್ಷೆ ಮುಗಿಸಿದ ನಂತರ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಕಲಬುರಗಿ, ಯಾದಗಿರಿ ಹಾಗೂ ಮಳೆ ಬಾಧಿತ ಬೀದರ್ರ ಜಿಲ್ಲೆಯಲ್ಲಿ ಮಳೆ ಮತ್ತು ಪ್ರವಾಹದ ಪರಿಸ್ಥಿತಿ ಹಾಗೂ ಜಿಲ್ಲಾಡಳಿತ ತೆಗೆದುಕೊಂಡ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಪ್ರಕೃತಿ ವಿಕೋಪ ನಿರ್ವಹಣೆ ಸಂಬಂಧ ಆಯಾ ಜಿಲ್ಲಾಡಳಿತಗಳು ಕೈಗೊಂಡಿರುವ ಕಾರ್ಯಗಳಿಗೆ ತೃಪ್ತಿ ವ್ಯಕ್ತಪಡಿಸಿದರು.

ಕಲಬುರಗಿ ಜಿಲ್ಲೆಯಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಯಡಿಯೂರಪ್ಪ!

ಸಭೆಯ ಚರ್ಚೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಕಲಬುರಗಿ ಜಿಲ್ಲೆಯಲ್ಲಿ ಮಳೆ ಹಾಗೂ ಪ್ರವಾಹದಿಂದ ಹೆಚ್ಚಿನ ಹಾನಿಯಾಗಿದ್ದು, ಎನ್.ಡಿ.ಅರ್.ಎಫ್ ನಿಯಮಾವಳಿಯಂತೆ ಪರಿಹಾರ ಕಾರ್ಯ ಕೈಗೊಳ್ಳಬೇಕು. ಮನೆಗೆ ನೀರು ನುಗ್ಗಿ ಬಟ್ಟೆ ಮತ್ತು ಪಾತ್ರೆ ಹಾನಿ ಪ್ರಕರಣಗಳಲ್ಲಿ ಸಂತ್ರಸ್ತರಿಗೆ 10 ಸಾವಿರ ರೂ. ಗಳನ್ನು ಒಂದು ವಾರದಲ್ಲಿ ವಿತರಿಸಬೇಕು ಎಂದು ಕಲಬುರಗಿ ಜಿಲ್ಲಾಧಿಕಾರಿ ಅವರಿಗೆ ಸೂಚಿಸಿದರು.

ಟ್ಯಾಂಕರ್ ಗಳ ಮೂಲಕ ನೀರು ಪೂರೈಸಬೇಕು

ಟ್ಯಾಂಕರ್ ಗಳ ಮೂಲಕ ನೀರು ಪೂರೈಸಬೇಕು

ಭೀಮಾ ಪ್ರವಾಹದಿಂದ ಕಲಬುರಗಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಪ್ರಸ್ತುತ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸದ ಸಿಎಂ, ಅವರು ಹಬ್ಬಗಳ ಮಾಹೆ ಇದಾಗಿರುವುದರಿಂದ ಅವಶ್ಯಕತೆವಿದ್ದೆಡೆ ಇನ್ನೂ ಹೆಚ್ಚಿನ ಟ್ಯಾಂಕರ್ ಗಳ ಮೂಲಕ ನೀರು ಪೂರೈಸಬೇಕು. ಕುಡಿಯುವ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ವಿದ್ಯುತ್ ಸಂಪರ್ಕ ಮರು ಜೋಡಿಸಲಾಗಿದೆ

ವಿದ್ಯುತ್ ಸಂಪರ್ಕ ಮರು ಜೋಡಿಸಲಾಗಿದೆ

ಮಳೆಯಿಂದ ಧರೆಗೆ ಉರುಳಿರುವ ಕಂಬಗಳನ್ನು ಪುನರ್ ಸ್ಥಾಪಿಸಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ವಿಶೇಷವಾಗಿ ಕುಡಿಯುವ ನೀರಿನ ಘಟಕಗಳಿಗೆ ಪ್ರಥಮಾದ್ಯತೆ ನೀಡಬೇಕು ಎಂದು ಸಿಎಂ ಅವರು ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಹುಲ ಪಾಂಡ್ವೆ, ಕಲಬುರಗಿ ಜಿಲ್ಲೆಯಲ್ಲಿ 104 ಗ್ರಾಮಗಳಲ್ಲಿ ಪ್ರವಾಹದಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಈಗಾಗಲೇ 101 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಮರು ಜೋಡಿಸಲಾಗಿದೆ. ಉಳಿದ 3 ಸಂಪರ್ಕ ಕಲ್ಪಿಸುವ ಕಾರ್ಯ ಪ್ರಗತಿಯಲ್ಲಿವೆ. ಯಾದಗಿರಿಯಲ್ಲಿ ಹೆಚ್ಚಿನ ಹಾನಿಯಾಗಿಲ್ಲ ಎಂದರು.

ಕಲಬುರಗಿ; ಸೊನ್ನ ಬ್ಯಾರೇಜಿನಿಂದ ಹೊರ ಹರಿವು ಭಾರಿ ಇಳಿಕೆ

ಸಾಂಕ್ರಾಮಿಕ ಸೋಂಕು ಹರಡುವ ಸಾಧ್ಯತೆ

ಸಾಂಕ್ರಾಮಿಕ ಸೋಂಕು ಹರಡುವ ಸಾಧ್ಯತೆ

ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಮಹಾರಾಷ್ಟ್ರದ ಸೋಲ್ಲಾಪುರ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕ ಹೊಂದಿ ಜಿಲ್ಲೆಯ ಜಲಾಶಯಗಳಿಗೆ ಬರುವ ಒಳ ಹರಿವಿನ ಮಾಹಿತಿ ಪಡೆದು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳು ಕೈಗೊಳ್ಳಬೇಕು. ಬೆಳೆ ಹಾನಿಗಳ ಬಗ್ಗೆ ಸಮೀಕ್ಷೆ ಕೈಗೊಂಡು ಪರಿಹಾರ ವಿತರಣೆಗೆ ಕ್ರಮ ವಹಿಸಬೇಕು ಎಂದರು. ಮೂಲಸೌಲಭ್ಯ, ಬಂದರು, ಒಳನಾಡು ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕಪಿಲ್ ಮೋಹನ್ ಅವರು ಮಾತನಾಡಿ, ಪ್ರವಾಹ ತಗ್ಗಿದ ನಂತರ ಸಾಂಕ್ರಾಮಿಕ ಸೋಂಕು ಹರಡುವ ಸಾಧ್ಯತೆವಿರುವುದರಿಂದ ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಈಗಾಗಲೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಕಾಳಜಿ ಕೇಂದ್ರದಲ್ಲಿದ್ದವರ ಕೋವಿಡ್ ಪರೀಕ್ಷೆ ಸಹ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು.

ಕಾಗಿಣಾ ನದಿ ದಂಡೆಯಲ್ಲಿ ಪ್ರವಾಹ

ಕಾಗಿಣಾ ನದಿ ದಂಡೆಯಲ್ಲಿ ಪ್ರವಾಹ

ಕಲಬುರಗಿ ಜಿಲ್ಲಾಧಿಕಾರಿ ವಿ.ವಿ ಜ್ಯೋತ್ಸ್ನಾ ಅವರು ಜಿಲ್ಲೆಯ ಪ್ರವಾಹ ಪರಿಸ್ಥಿತಿ ವಿವರಿಸುತ್ತಾ, ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಳೆ ವಾಡಿಕೆಗಿಂತ ಹತ್ತು ಪಟ್ಟು ಹೆಚ್ಚಳವಾಗಿದೆ. ಭೀಮಾ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ಕಾರಣ ಅಫಜಲಪುರ ತಾಲೂಕಿನ ಸೊನ್ನ ಬ್ಯಾರೇಜಿನಿಂದ 5 ರಿಂದ 8 ಲಕ್ಷಕ್ಕೂ ಹೆಚ್ಚಿನ ಕ್ಯೂಸೆಕ್ ನೀರು ಹರಿಬಿಟ್ಟ ಪರಿಣಾಮ ಭೀಮಾ ನದಿ ದಂಡೆ ಹಾಗೂ ಹಿನ್ನೀರಿನಿಂದ ಕಾಗಿಣಾ ನದಿ ದಂಡೆಯಲ್ಲಿ ಪ್ರವಾಹ ಉಂಟಾಗಿದೆ. ಇದುವರೆಗೆ ಸೊನ್ನ ಬ್ಯಾರೇಜಿನಿಂದ 2.80 ಲಕ್ಷ ಕ್ಯುಸೆಕ್ ಹೆಚ್ಚಿನ ಹೊರ ಹರಿವಾಗಿತ್ತು. ಪ್ರಸ್ತುತ ಹೊರ ಹರಿವು ಇಳಿಮುಖವಾಗಿದ್ದರಿಂದ ಪ್ರವಾಹದ ಆತಂಕ ಸದ್ಯಕ್ಕಿಲ್ಲ ಎಂದರು.

915 ಜಾನುವಾರಗಳ ಜೀವ ಹಾನಿ

915 ಜಾನುವಾರಗಳ ಜೀವ ಹಾನಿ

ಪ್ರವಾಹದ ಹಿನ್ನೆಲೆಯಲ್ಲಿ 9 ಪೂರ್ಣ ಗ್ರಾಮಗಳು ಸೇರಿದಂತೆ 93 ಜಲಾವೃತಗೊಂಡ ಗ್ರಾಮಗಳ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ. 163 ಕಾಳಜಿ ಕೇಂದ್ರ ತೆಗೆದು 6234 ಕುಟುಂಬಗಳ 36,692 ಜನರಿಗೆ ಆಶ್ರಯ ಕಲ್ಪಿಸಿ ಊಟೋಪಚಾರದ ಜೊತೆಗೆ ಅಗತ್ಯ ಮೂಲಸೌಲಭ್ಯಗಳನ್ನು ನೀಡಲಾಗಿದೆ. 65 ಮನೆ ಪೂರ್ಣ, 3628 ಮನೆಗಳು ಭಾಗಶ: ಹಾನಿಯಾಗಿವೆ. ಜಿಲ್ಲೆಯಲ್ಲಿ ಯಾವುದೇ ಮಾನವ ಹಾನಿಯಾಗಿಲ್ಲ, ಆದರೆ ಪಶು-ಪಕ್ಷಿಗಳು ಸೇರಿದಂತೆ 915 ಜಾನುವಾರಗಳ ಜೀವ ಹಾನಿಯಾಗಿದೆ ಎಂದು ಮಾಹಿತಿ ನೀಡಿದರು.

ಕೃಷಿ ಮತ್ತು ತೋಟಗಾರಿಕೆ ಪ್ರದೇಶಕ್ಕೆ ಹಾನಿ

ಕೃಷಿ ಮತ್ತು ತೋಟಗಾರಿಕೆ ಪ್ರದೇಶಕ್ಕೆ ಹಾನಿ

ಗ್ರಾಮಗಳು ನಡುಗಡ್ಡೆಯಾಗಿ ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆಗೆ 98 ಸದಸ್ಯರ ಸೇನಾ ಪಡೆ, 57 ಸದಸ್ಯರ 3 ಎನ್.ಡಿ.ಆರ್.ಎಫ್ ತಂಡಗಳು, 35 ಸದಸ್ಯ ಬಲವುಳ್ಳ ಎಸ್.ಡಿ.ಆರ್.ಎಫ್ ತಂಡ, 80 ಸದಸ್ಯರ ಅಗ್ನಿಶಾಮಕ ದಳದ ತಂಡಗಳು ಹಗಲಿರುಳು ಕಾರ್ಯನಿರ್ವಹಿಸಿ ಸುಮಾರು 2890 ಜನರನ್ನು ರಕ್ಷಿಸಲಾಗಿದೆ. 1,09,995 ಹೆಕ್ಟೇರ್ ಕೃಷಿ ಮತ್ತು ತೋಟಗಾರಿಕೆ ಪ್ರದೇಶ ಹಾನಿಗೆ ಒಳಗಾಗಿದ್ದು, 9971 ಲಕ್ಷ ರೂ. ಅಂದಾಜು ಹಾನಿ ಗುರುತಿಸಿದೆ. ಇದಲ್ಲದೆ ರಸ್ತೆ, ಸೇತುವೆ, ಕೆರೆ, ಕಾಲುವೆಗಳಂತೆ ಒಟ್ಟಾರೆ 36370 ಲಕ್ಷ ರೂ. ಮೊತ್ತದ ಹಾನಿಯಾಗಿದೆ ಎಂದು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು.

33 ಕೋಟಿ ರುಪಾಯಿ ಮೊತ್ತದ ಬೆಳೆ ಹಾನಿ

33 ಕೋಟಿ ರುಪಾಯಿ ಮೊತ್ತದ ಬೆಳೆ ಹಾನಿ

ಯಾದಗಿರಿ ಜಿಲ್ಲಾಧಿಕಾರಿ ಆರ್.ರಾಗಪ್ರಿಯಾ ಮಾತನಾಡಿ, ಯಾದಗಿರಿ ಜಿಲ್ಲೆಯಲ್ಲಿ ಕಳೆದ 7 ದಿನಗಳಲ್ಲಿ ವಾಡಿಕೆಗಿಂತ ಶೇ.72ರಷ್ಟು ಹೆಚ್ಚು ಮಳೆಯಾಗಿದೆ. ಅಕ್ಟೋಬರ್ ನಲ್ಲಿ 12 ಸಾವಿರ ಹೆಕ್ಟೇರ್ ಭೂಮಿಯಲ್ಲಿ ಬೆಳೆ ಹಾನಿಯಾಗಿದ್ದು, ಗುರುಮಠಕಲ್ ಮತ್ತು ಯಾದಗಿರಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಬೆಳೆ ಹಾನಿಯಾಗಿದೆ. ಇದೇ ತಿಂಗಳಲ್ಲಿ 33 ಕೋಟಿ ರುಪಾಯಿ ಮೊತ್ತದ ಬೆಳೆ ಹಾನಿಯಾಗಿದ್ದು, ಎನ್.ಡಿ.ಆರ್.ಎಫ್ ಮಾರ್ಗಸೂಚಿ ಪ್ರಕಾರ ಇದು 15 ಕೋಟಿ ರುಪಾಯಿ ಪರಿಹಾರವಾಗಲಿದೆ.

ಭತ್ತ, ತೊಗರಿ ಹಾಗೂ ಹತ್ತಿ ಬೆಳೆಗಳೇ ಹೆಚ್ಚು ನಷ್ಟ

ಭತ್ತ, ತೊಗರಿ ಹಾಗೂ ಹತ್ತಿ ಬೆಳೆಗಳೇ ಹೆಚ್ಚು ನಷ್ಟ

ಇನ್ನು ಸೆಪ್ಟೆಂಬರ್ ತಿಂಗಳಲ್ಲಿ 24,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಈ ಪೈಕಿ ಯಾದಗಿರಿ ತಾಲ್ಲೂಕಿನಲ್ಲಿ 8000 ಹೆಕ್ಟೇರ್ ಹಾಗೂ ಸುರಪುರ ತಾಲ್ಲೂಕಿನಲ್ಲಿ 5000 ಹೆಕ್ಟೇರ್ ಬೆಳೆ ಹಾನಿಯಾಗಿದೆ. 42 ಕೋಟಿ ರೂ. ಮೌಲ್ಯದ ಬೆಳೆ ನಷ್ಟವಾಗಿದ್ದು, ಎನ್.ಡಿ.ಆರ್.ಎಫ್ ಪ್ರಕಾರ 23 ಕೋಟಿ ರೂ. ಆಗಲಿದೆ. ಈ ಮೊತ್ತವನ್ನು ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಮಳೆಯಿಂದ ಭತ್ತ, ತೊಗರಿ ಹಾಗೂ ಹತ್ತಿ ಬೆಳೆಗಳೇ ಹೆಚ್ಚು ನಷ್ಟವಾಗಿವೆ ಎಂದು ಮಾಹಿತಿ ನೀಡಿದರು.

ತಲಾ 10 ಸಾವಿರ ರೂಪಾಯಿ ಪರಿಹಾರ

ತಲಾ 10 ಸಾವಿರ ರೂಪಾಯಿ ಪರಿಹಾರ

ಭೀಮಾ ನದಿ ಪ್ರವಾಹದಿಂದ ಜಿಲ್ಲೆಯಲ್ಲಿ 13 ಗ್ರಾಮಗಳು ತೊಂದರೆಗೊಳಗಾಗಿದ್ದು, ವಡಗೇರಾ ತಾಲ್ಲೂಕಿನ ನಾಯ್ಕಲ್, ಶಿವನೂರು ಹಾಗೂ ಸೂಗೂರು ಮತ್ತು ಶಹಾಪುರ ತಾಲ್ಲೂಕಿನ ರೋಜಾ (ಎಸ್) ಗ್ರಾಮಗಳು ಜಲಾವೃತವಾಗಿ, 4 ಗ್ರಾಮಗಳ 280 ಜನರನ್ನು ರಕ್ಷಣಾ ತಂಡಗಳ ಮೂಲಕ ರಕ್ಷಿಸಿ ಒಟ್ಟು 703 ಸಂತ್ರಸ್ತರನ್ನು ಸುರಕ್ಷಿತವಾದ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. 3000 ಜನರನ್ನು ಕಾಳಜಿ ಕೇಂದ್ರಕ್ಕೆ ಕರೆತಂದು ಊಟೋಪಚಾರ ಮಾಡಲಾಗಿದೆ ಎಂದು ವಿವರಿಸಿದರು. ಪ್ರವಾಹದಿಂದ ಜಿಲ್ಲೆಯಲ್ಲಿ 17 ಸಾವಿರ ಹೆಕ್ಟೇರ್ ಜಮೀನಿನಲ್ಲಿ ಬೆಳೆ ನಾಶವಾಗಿದೆ. 292 ಮನೆಗಳಿಗೆ ನೀರು ನುಗ್ಗಿದ್ದು, ಎನ್.ಡಿ.ಆರ್.ಎಫ್ ಮಾರ್ಗಸೂಚಿ ಪ್ರಕಾರ ತಲಾ 10 ಸಾವಿರ ರೂಪಾಯಿ ಪರಿಹಾರವನ್ನು ವಿತರಿಸಲಾಗಿದೆ. ಭೀಮಾ ನದಿಯಲ್ಲಿ ಮಂಗಳವಾರ 4 ಲಕ್ಷ ಕ್ಯೂಸೆಕ್ ನೀರು ಹರಿದಿದ್ದು, ಸದ್ಯ ನೀರಿನ ಹರಿಯುವಿಕೆ 2,90,000 ಕ್ಯೂಸೆಕ್ ಗೆ ಇಳಿದಿದ್ದರಿಂದ ಜಿಲ್ಲೆಯಲ್ಲಿ ಅಪಾಯದ ಭೀತಿ ದೂರವಾಗಿದೆ ಎಂದರು.

ಕಾಳಜಿ ಕೇಂದ್ರದಲ್ಲಿ ಸೂಕ್ತ ಊಟೋಪಚಾರದ ವ್ಯವಸ್ಥೆ

ಕಾಳಜಿ ಕೇಂದ್ರದಲ್ಲಿ ಸೂಕ್ತ ಊಟೋಪಚಾರದ ವ್ಯವಸ್ಥೆ

ಬೀದರ್ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಅವರು ಮಾತನಾಡಿ, ನದಿ ಪ್ರವಾಹದಿಂದ ಹಾನಿಯಾಗಿಲ್ಲ. ಆದರೆ ಕಳೆದ ಅಕ್ಟೋಬರ್ 9 ರಿಂದ 15ರ ವರೆಗೆ ಶೇ.500 ರಷ್ಟು ಹೆಚ್ಚಿಗೆ ಸುರಿದ ಮಳೆಯಿಂದಾಗಿ ಜಿಲ್ಲೆಯ 2.49 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆಗಳು ಹಾನಿಯಾಗಿದೆ. ವಿಶೇಷವಾಗಿ 18 ಸಾವಿರ ಹೆಕ್ಟೇರ್ ತೊಗರಿ, 40 ಸಾವಿರ ಹೆಕ್ಟೇರ್ ಸೋಯಾಬಿನ್ ಹಾನಿಯಾದರೆ, ವಿಪರೀತ ಗಾಳಿಯಿಂದ 11 ಸಾವಿರ ಹೆಕ್ಟೇರ್ ಕಬ್ಬು ಹಾಳಾಗಿದೆ. 38.3 ಕೋಟಿ ರೂ. ವೆಚ್ಚದ ಮೂಲಸೌಕರ್ಯಗಳು ಮಳೆಗೆ ತುತ್ತಾಗಿ ದುರಸ್ತಿಗೆ ಬಂದಿದ್ದು, ಜಿಲ್ಲೆಯ 5 ಕಡೆ ಕಾಳಜಿ ಕೇಂದ್ರ ತೆಗೆದು ನಿರಾಶ್ರಿತರಿಗೆ ಆಶ್ರಯ ನೀಡಲಾಗಿದೆ ಎಂದು ಜಿಲ್ಲೆಯಲ್ಲಿ ಮಳೆಯಿಂದಾದ ಹಾನಿಯಾದ ಬಗ್ಗೆ ವಿವರಿಸಿದರು. ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ಮಾತನಾಡಿ, ಪ್ರವಾಹ ಸಂದರ್ಭದಲ್ಲಿ ರಕ್ಷಣಾ ಮತ್ತು ಮುನ್ನೆಚರಿಕೆ ಕ್ರಮಗಳ ಬಗ್ಗೆ ರಾಜ್ಯ ಸರ್ಕಾರ ನೀಡಿರುವ ಎಲ್ಲಾ ನಿರ್ದೇಶನಗಳನ್ನು ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳು ಕಟ್ಟುನಿಟ್ಟಾಗಿ ಪಾಲಿಸಿದ್ದರಿಂದ ಹೆಚ್ಚಿನ ಜೀವ ಹಾನಿ ಸಂಭವಿಸಿಲ್ಲ. ಕಾಳಜಿ ಕೇಂದ್ರದಲ್ಲಿ ಸೂಕ್ತ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.

ರಕ್ಷಣಾ ತಂಡಗಳಿಗೆ ಅಭಿನಂದನೆ

ರಕ್ಷಣಾ ತಂಡಗಳಿಗೆ ಅಭಿನಂದನೆ

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಕಲಬುರಗಿ ಜಿಲ್ಲೆಯ ಪ್ರವಾಹ ಸಂದರ್ಭದಲ್ಲಿ ಹಗಲಿರಳು ಕಾರ್ಯನಿರ್ವಹಿಸಿ ಜನರನ್ನು ರಕ್ಷಿಸಿದ ಅರೆ ಸೇನಾ ಪಡೆಯ ಮೇಜರ್ ಮಾರ್ಟಿನ್ ಅರವಿಂದ್, ಎನ್.ಡಿ.ಆರ್.ಎಫ್ ಟೀಮ್ ಕಮಾಂಡರ್ ಆರ್.ಜೆ ಜಾಧವ್, ಎಸ್.ಡಿ.ಆರ್.ಎಫ್ ಮುಖ್ಯಸ್ಥ ಯೂನುಸ್ ಅಲಿ ಕೌಸರ್ ಹಾಗೂ ಅಗ್ನಿಶಾಮಕ ದಳದ ಮುಖ್ಯಸ್ಥ ಟಿ. ಪರುಶುರಾಮ್ ಅವರನ್ನು ಅಭಿನಂದಿಸಿದರು. ಐ.ಜಿ.ಪಿ. ಮನೀಷ ಖರ್ಬಿಕರ್, ಕಲಬುರಗಿ ನಗರ ಪೊಲೀಸ್ ಆಯುಕ್ತ ಎನ್.ಸತೀಶ್ ಕುಮಾರ, ಎಸ್ಪಿ ಡಾ.ಸಿಮಿ ಮರಿಯಮ್ ಜಾರ್ಜ್, ಜಿಲ್ಲಾ ಪಂಚಾಯತ್ ಸಿಇಒ ಡಾ.ಪಿ.ರಾಜಾ, ಯಾದಗಿರಿ ಜಿಲ್ಲೆಯ ಎಸ್.ಪಿ ರಿಷಿಕೇಶ ಸೋನಾವಡೆ, ಜಿಲ್ಲಾ ಪಂಚಾಯತ್ ಸಿಇಒ ಶಿಲ್ಪಾ ಶರ್ಮಾ, ಬೀದರ್ ಜಿಲ್ಲೆಯ ಎಸ್.ಪಿ ಡಿ.ಎಲ್ ನಾಗೇಶ ಇದ್ದರು.

English summary
CM BS Yediyurappa conducted aerial survey on Wednesday in Kalaburagi, Yadagiri district's Krishna and Bhima river basin areas and in some areas in the rain-affected Bidar district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X