ರಾಜಸ್ಥಾನ ಸ್ಥಳೀಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಗ್ರಸ್ಥಾನ
ಜೈಪುರ್, ಜನವರಿ.31: ರಾಜಸ್ಥಾನದ ಸ್ಥಳೀಯ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ವಿಜಯ ಪತಾಕೆ ಹಾರಿಸಿದ್ದಾರೆ. 1197 ಸ್ಥಾನಗಳಲ್ಲಿ ಜಯಭೇರಿ ಬಾರಿಸಿರುವ ಕಾಂಗ್ರೆಸ್ ಬಹುದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಭಾರತೀಯ ಜನತಾ ಪಕ್ಷವು ಎರಡನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ.
ರಾಜ್ಯದ 20 ಜಿಲ್ಲೆಗಳಲ್ಲಿ ನಡೆದ 3034 ವಾರ್ಡ್ ಗಳ ಚುನಾವಣೆಯಲ್ಲಿ 1197 ಕಾಂಗ್ರೆಸ್ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. 1140 ಕಡೆಗಳಲ್ಲಿ ಬಿಜೆಪಿಯ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಉಳಿದಂತೆ ಬಿಎಸ್ ಪಿ 1, ಸಿಪಿಐ(ಎಂ) 1, ಎನ್ ಸಿಪಿ 46, ಆರ್ಎಲ್ ಪಿ 13 ಹಾಗೂ 634 ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ.
ರಾಜಸ್ಥಾನ ಚುನಾವಣೆ : ಪಕ್ಷೇತರ ಅಭ್ಯರ್ಥಿ ವಿರುದ್ಧ ಸೋತ ಸಚಿವ!
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಆಡಳಿತ ಪಕ್ಷದ ಪರವಾಗಿ ಮತದಾರರು ತಮ್ಮ ಹಕ್ಕು ಚಲಾಯಿಸಿರುವುದು ಸ್ಥಳೀಯ ಚುನಾವಣೆಗಳಲ್ಲಿ ಸರ್ವೇ ಸಾಮಾನ್ಯವಾಗಿ ಕಂಡು ಬರುತ್ತದೆ. ರಾಜಸ್ಥಾನದಲ್ಲಿ ಕೂಡ ಆಡಳಿತ ಪಕ್ಷವೇ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಇತಿಹಾಸ ಮರುಕಳಿಸಿದೆ.
ರಾಜಸ್ಥಾನದ ಯಾವ ಜಿಲ್ಲೆಗಳಲ್ಲಿ ಸ್ಥಳೀಯ ಚುನಾವಣೆ:
ರಾಜಸ್ಥಾನದ 20 ಜಿಲ್ಲೆಗಳಲ್ಲಿ ಸ್ಥಳೀಯ ಚುನಾವಣೆ ನಡೆಯಿತು. ಅಜ್ಮಿರ್, ಬನಸ್ವಾರ್, ಬಿಕನೇರ್, ಭಿಲ್ವಾರ್, ಭಂಡಿ, ಪ್ರತಾಪ್ ಘರ್, ಚಿತ್ತೋರ್ ಘರ್, ಚುರು, ದುಂಗಾರ್ ಪುರ್, ಹನುಮಾನ್ ಘರ್, ಜೈಸಲ್ಮೇರ್, ಜಾಲೋರ್, ಝಾಲ್ವಾರ್, ಝುಂಝುನು, ನಗೌರ್, ಪಾಲಿ, ರಾಜಸಮಂದ್, ಸಿಕಾರ್, ತೊಂಕ್, ಉದಯ್ ಪುರ್ ಜಿಲ್ಲೆಗಳಲ್ಲಿ ಸ್ಥಳೀಯ ಚುನಾವಣೆ ನಡೆಸಲಾಗಿತ್ತು.