ಹನಿಟ್ರ್ಯಾಪ್: ಪಾಕ್ ಮಾಯಾಂಗನೆಯ ಬಲೆಗೆ ಬಿದ್ದ ಯೋಧ, ಬಂಧನ
ಜೈಪುರ ಮೇ 22: ಪಾಕಿಸ್ತಾನದ ಗುಪ್ತಚರ ಇಲಾಖೆಗಾಗಿ ಕೆಲಸ ಮಾಡುವ ಮಹಿಳಾ ಏಜೆಂಟ್‌ನ ಹನಿಟ್ರ್ಯಾಪ್ ಬಲೆಗೆ ಬಿದ್ದು ಭಾರತೀಯ ಸೇನೆಯ ಗೌಪ್ಯ ಮಾಹಿತಿಗಳನ್ನು ಹಂಚಿಕೊಂಡ ಆರೋಪದ ಮೇಲೆ ಭಾರತೀಯ ಸೇನೆಯ ಯೋಧನನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ.
ಪ್ರದೀಪ್ ಕುಮಾರ್ ಬಂಧಿತ ಭಾರತೀಯ ಸೇನೆಯ ಯೋಧ. "ಪ್ರದೀಪ್ ಕುಮಾರ್ ಜೋಧಪುರದಲ್ಲಿರುವ ಭಾರತೀಯ ಸೇನೆಯ ಅತಿ ಸೂಕ್ಷ್ಮ ರೆಜಿಮೆಂಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪಾಕಿಸ್ತಾನದ ಗುಪ್ತಚರ ಇಲಾಖೆಗಾಗಿ ಕೆಲಸ ಮಾಡುವ ಮಹಿಳಾ ಏಜೆಂಟ್‌ಗೆ ಅಲ್ಲಿನ ಗೌಪ್ಯ ಮಾಹಿತಿಯನ್ನು ಹಂಚಿಕೊಂಡ ಆರೋಪದ ಮೇಲೆ ಬಂಧಿಸಲಾಗಿದೆ'' ಎಂದು ರಾಜಸ್ಥಾನ ಪೊಲೀಸ್ ಇಲಾಖೆಯ ಗುಪ್ತಚರ ವಿಭಾಗದ ಡಿಜಿ ಉಮೇಶ್ ಮಿಶ್ರ ಮಾಹಿತಿ ನೀಡಿದ್ದಾರೆ.
ಜೋಧಪುರದ ಭಾರತೀಯ ಸೇನೆಯ ಅತಿ ಸೂಕ್ಮ್ಮ ರೆಜಿಮೆಂಟ್‌ಗೆ ಪ್ರದೀಪ್ ಕುಮಾರ್ ನಿಯೋಜಿಸಲಾಗಿತ್ತು. ಆತ ಸಾಮಾಜಿಕ ಜಾಲತಾಣದ ಮೂಲಕ ಪಾಕಿಸ್ತಾನ ಮಹಿಳಾ ಏಜೆಂಟ್‌ಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಹಾಗೂ ವ್ಯೂಹಾತ್ಮಕವಾಗಿ ಪ್ರಮುಖವಾಗಿರುವ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದ ಎಂಬುದು ಆರೋಪ.
ಮೇ 18ರಂದು ಪ್ರದೀಪ್ ಕುಮಾರ್‌ನನ್ನು ವಶಕ್ಕೆ ಪಡೆದು, ವಿಚಾರಣೆ ಆರಂಭಿಸಲಾಯಿತು ಎಂದು ಪೊಲೀಸ್ ಅಧಿಕಾರಿ ತಿಳಿಸಿದರು. ಆರು-ಏಳು ತಿಂಗಳ ಹಿಂದೆ ಮೊದಲ ಬಾರಿಗೆ ಪಾಕಿಸ್ತಾನ ಮಹಿಳಾ ಏಜೆಂಟ್‌ನಿಂದ ಪ್ರದೀಪ್ ಕುಮಾರ್ ಮೊಬೈಲ್ ಪೋನ್‌ಗೆ ಕರೆ ಬಂದಿತ್ತು. ನಂತರ ಇಬ್ಬರು ವಾಟ್ಸ್ ಆಪ್‌ನಲ್ಲಿ ಚಾಟ್, ವಾಯ್ಸ್ ಕಾಲ್ ಮತ್ತು ವಿಡಿಯೋ ಕರೆಗಳ ಮೂಲಕ ನಿರಂತರ ಸಂಪರ್ಕದಲ್ಲಿದ್ದರು.
ಮಹಿಳೆ ತಾನು ಮಧ್ಯಪ್ರದೇಶದ ಗ್ವಾಲಿಯರ್‌ನ ನಿವಾಸಿ ಹೆಸರು ಚದ್ದಂ ಎಂದು ಪರಿಚಯಿಸಿಕೊಂಡಿದ್ದಳು. ಪರಿಚಿತರಾದ ಬಳಿಕ ಆತ್ಮೀಯವಾಗಿ ಮಾತನಾಡಿ ತನನ್ನು ಮದುವೆಯಾಗಬೇಕಾದರೆ ಭಾರತೀಯ ಸೇನೆಗೆ ಸೇರಿದ್ದ ಗೌಪ್ಯ ದಾಖಲೆಗಳನ್ನು ತನ್ನೊಂದಿಗೆ ಹಂಚಿಕೊಳ್ಳಬೇಕೆಂದು ಹೇಳಿದ್ದಳು.
ಅವಳ ಬಲೆಗೆ ಬಿದ್ದ ಈತ ಕಳ್ಳತನದಿಂದ ತನ್ನ ಕಚೇರಿಯಲ್ಲಿದ್ದ ಭಾರತೀಯ ಸೇನೆಗೆ ಸೇರಿದ ಗೌಪ್ಯ ದಾಖಲೆಗಳ ಫೋಟೊ ತೆಗೆದು, ಅದನ್ನು ಮಹಿಳಾ ಏಜೆಂಟ್‌ಗೆ ಕಳುಹಿಸಿದ್ದ ಎಂದು ಪೊಲೀಸರು ವಿವರಿಸಿದರು.
ವಿಚಾರಣೆ ನಂತರ ಆತನ ವಿರುದ್ಧದ ಆರೋಪಗಳು ಖಾತ್ರಿಯಾದ ಹಿನ್ನಲೆಯಲ್ಲಿ 1923ರ ಅಧಿಕೃತ ರಹಸ್ಯ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ಪ್ರದೀಪ್ ಕುಮಾರ್ ಬಂಧಿಸಲಾಗಿದೆ ಎಂದು ಎಎನ್ಐ ವರದಿ ಮಾಡಿದೆ.
