ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂಲಿಯನ್ ಅಸಾಂಜೆಗೆ ಪೌರತ್ವ ನೀಡಿದ ಈಕ್ವೆಡಾರ್

By Sachhidananda Acharya
|
Google Oneindia Kannada News

ಲಂಡನ್, ಜನವರಿ 12: ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸಾಂಜೆಗೆ ಈಕ್ವೆಡಾರ್ ಪೌರತ್ವ ನೀಡಿದೆ. ಇದರಿಂದಾಗಿ ಕಳೆದ ಐದು ವರ್ಷಗಳಿಂದ ಈಕ್ವೆಡಾರ್ ನ ಲಂಡನ್ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆಯುತ್ತಿರುವ ಅಸಾಂಜೆ ಅಧಿಕೃತವಾಗಿ ಈಕ್ವೆಡಾರ್ ಪ್ರಜೆಯಾಗಿದ್ದಾರೆ.

ಡಿಸೆಂಬರ್ ನಲ್ಲಿ ಪೌರತ್ವಕ್ಕಾಗಿ ಅಸಾಂಜೆ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯನ್ನು ಪುರಸ್ಕರಿಸಿರುವುದಾಗಿ ಈಕ್ವೆಡಾರ್ ವಿದೇಶಾಂಗ ಸಚಿವೆ ಮಾರಿಯಾ ಫೆರ್ನಾಂಡ ಎಸ್ಪಿನೋಸಾ ಹೇಳಿದ್ದಾರೆ.

'ನ್ಯಾಚುರಲೈಸೇಷನ್' ಎಂಬ ವಿಭಾಗದಲ್ಲಿ ಅವರಿಗೆ ಪೌರತ್ವ ನೀಲಾಗಿದೆ. ಈಕ್ವೆಡಾರ್ ನಲ್ಲಿ 'ನ್ಯಾಚುರಲೈಸೇಷನ್' ಅಂದರೆ ನಿರಾಶ್ರಿತರಿಗೆ ರಕ್ಷಣೆ ನೀಡುವ ಪೌರತ್ವ ವಿಧಾನವಾಗಿದೆ.

WikiLeaks founder Julian Assange granted citizenship by Ecuador

ಆಸ್ಟ್ರೇಲಿಯಾದಿಂದ ಈಕ್ವೆಡಾರ್

ಆಸ್ಟ್ರೇಲಿಯಾ ಮೂಲದ ಜೂಲಿಯನ್ ಅಸಾಂಜೆ 2012ರಲ್ಲಿ ಸ್ವೀಡನ್ ಗೆ ಹಸ್ತಾಂತರವಾಗುವ ಭಯದಿಂದ ಈಕ್ವೆಡಾರ್ ರಾಯಭಾರಿ ಕಚೇರಿ ಪ್ರವೇಶಿಸಿ ಆಶ್ರಯ ಪಡೆದಿದ್ದರು. ಅವರ ಮೇಲೆ ಸ್ವೀಡನ್ನಿನಲ್ಲಿ ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಯುತ್ತಿತ್ತು.

ಆದರೆ ಅಸಾಂಜೆಗೆ ಸ್ವೀಡನ್ ಗಿಂತ ಹೆಚ್ಚಾಗಿ ಅಮೆರಿಕಾದ ಭಯವಿತ್ತು. ಸೇನೆ ಮತ್ತು ರಾಜತಾಂತ್ರಿಕ ದಾಖಲೆಗಳನ್ನು ವಿಕಿಲೀಕ್ಸ್ ನಲ್ಲಿ ಪ್ರಕಟಿಸಿದ್ದಕ್ಕಾಗಿ ಅಲ್ಲಿ ವಿಚಾರಣೆ ಎದುರಿಸಬೇಕಾಗಿ ಬರಬಹುದು ಎಂಬ ಭಯದಿಂದ ಈಕ್ವೆಡಾರ್ ಆಶ್ರಯ ಪಡೆದುಕೊಂಡಿದ್ದರು.

ಕಳೆದ ವರ್ಷವಷ್ಟೇ ಸ್ವೀಡನ್ ಅಸಾಂಜೆ ಮೇಲಿದ್ದ ಅತ್ಯಾಚಾರ ಪ್ರಕರಣವನ್ನು ಕೈಬಿಟ್ಟಿತ್ತು. ಆದರೆ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರನ್ನು ಬಂಧಿಸುವುದಾಗಿ ಬ್ರಿಟನ್ ಹೇಳಿದ್ದರಿಂದ ಅಸಾಂಜೆ ಇನ್ನೂ ರಾಯಭಾರ ಕಚೇರಿಯಲ್ಲೇ ಆಶ್ರಯ ಪಡೆಯುತ್ತಿದ್ದಾರೆ.

ಈಕ್ವೆಡಾರ್ ತನಗೆ ಪೌರತ್ವ ನೀಡುತ್ತಿದ್ದಂತೆ ಈಕ್ವೆಡಾರ್ ಫುಟ್ಬಾಲ್ ತಂಡದ ಜೆರ್ಸಿ ತೊಟ್ಟ ಚಿತ್ರವನ್ನು ಅಸಾಂಜೆ ಟ್ವೀಟ್ ಮಾಡಿದ್ದಾರೆ.

ಈಕ್ವೆಡಾರ್ ರಾಯಭಾರ ಕಚೇರಿಯಿಂದ ಅಸಾಂಜೆಯನ್ನು ಹೊರತರಲು ಅವರಿಗೆ ರಾಜತಾಂತ್ರಿಕ ಹುದ್ದೆ ನೀಡುವಂತೆ ಬ್ರಿಟನ್ ಗೆ ಈಕ್ವೆಡಾರ್ ಮನವಿ ಮಾಡಿಕೊಂಡಿತ್ತು. ಆದರೆ ಈಕ್ವೆಡಾರ್ ಮನವಿಯನ್ನು ಬ್ರಿಟನ್ ತಿರಸ್ಕರಿಸಿದ್ದು ರಾಯಭಾರ ಕಚೇರಿಯಿಂದ ಹೊರ ಬಂದು ಅಸಾಂಜೆ ವಿಚಾರಣೆ ಎದುರಿಸಬೇಕು ಎಂದು ತಿರುಗೇಟು ನೀಡಿದೆ.

ಹೀಗಾಗಿ ಅಸಾಂಜೆ ಜೀವ ರಕ್ಷಣೆ ಬಗ್ಗೆ ಈಕ್ವೆಡಾರ್ ಕಳವಳಗೊಂಡಿದ್ದು ಅವರಿಗೆ ಜೀವನ ಪರ್ಯಂತ ರಕ್ಷಣೆ ನೀಡುವುದಾಗಿ ಭರವಸೆ ನೀಡಿದೆ. ಜತೆಗೆ ಸಮಸ್ಯೆಯನ್ನು ಬಗೆಹರಿಸಲು ಇರುವ ಬೇರೆ ದಾರಿಗಳ ಬಗ್ಗೆಯೂ ಅದು ಚಿಂತನೆ ನಡೆಸುತ್ತಿದೆ.

English summary
Ecuador has granted citizenship to WikiLeaks founder Julian Assange, who has been holed up in its London embassy for more than five years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X