ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೈರೋಬಿ ಭಯೋತ್ಪಾದನೆ: ಎದೆಗುಂದದ ಕನ್ನಡತಿ ಶ್ರೀನಿಧಿ

By Srinath
|
Google Oneindia Kannada News

ನೈರೋಬಿ/ ಬೆಂಗಳೂರು, ಸೆ.24: ನೈರೋಬಿಯ ವೆಸ್ಟ್ ಗೇಟ್ ಶಾಪಿಂಗ್ ಮಾಲ್ ನಲ್ಲಿ ನಡೆದಿರುವ ಭಯೋತ್ಫಾದಕತೆಯಲ್ಲಿ ಸುದೈವವಷಾತ್ ಕನ್ನಡಿಗರಾದ ಶ್ರೀನಿಧಿ ಮತ್ತು ಆಕೆಯ ಅತ್ತೆ ವಿಮಲಾ ರಾಮಮೂರ್ತಿ ರಾವ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಭಯಾನಕ ದಾಳಿಯ ವೇಳೆ ಶನಿವಾರ ಶ್ರೀನಿಧಿ ಮತ್ತು ಅವರ ಅತ್ತೆ ಶಾಪಿಂಗ್ ಮಾಲ್ ನಲ್ಲಿಯೇ ಇದ್ದರು. ಸದ್ಯ ನೈರೋಬಿಯಲ್ಲಿರುವ ಕನ್ನಡತಿ ಶ್ರೀನಿಧಿ ಅವರನ್ನು 'ಒನ್ಇಂಡಿಯಾ' ನೇರವಾಗಿ ಮಾತನಾಡಿಸಿದೆ. ಜೀವಮಾನದಲ್ಲೆಂದೂ ಮರೆಯಲಾರದ ರುದ್ರಸದೃಶ ಘಟನೆಗಳ ಬಗ್ಗೆ ಅವರು ಹೇಳಿದ್ದು ಹೀಗೆ:

When terror struck Westgate mall reopens i will be there says Kannada witness Srinidhi Rao

ಮಾಲ್ ನಲ್ಲಿ ಈ ಹಿಂದೆ ವಸ್ತುವೊಂದನ್ನು ಖರೀದಿಸಿದ್ದೆವು. ಅದು ಸರಿಯಾಗಿಲ್ಲವೆಂದು ಎಕ್ಸ್ ಚೇಂಜ್ ಮಾಡಿಸಿಕೊಳ್ಳೋಣವೆಂದು ವೆಸ್ಟ್ ಗೇಟ್ ಶಾಪಿಂಗ್ ಮಾಲಿಗೆ ವಾಪಸಾಗಿದ್ದೆವು. ನಾಕುಮಠ್ ಪ್ರವೇಶ ದ್ವಾರದ ಬಳಿ ಫಾರಂ ಭರ್ತಿ ಮಾಡುತ್ತಿದ್ದೆವು. ಆಗಲೇ ಗುಂಡಿನ ಮೊರೆತ ಕೇಳಿದ್ದು. ಎಲ್ಲೋ ಸಂಭ್ರಮಾಚರಣೆಗೆ ಪಟಾಕಿ ಸಿಡಿಸುತ್ತಿರಬಹುದು ಅಂತ ಅಂದುಕೊಂಡೆವು.

ಆದರೆ ಜನ ಇದ್ದಕ್ಕಿದ್ದಂತೆ ದಿಕ್ಕಾಪಾಲಾಗಿ ಬಚ್ಚಿಟ್ಟುಕೊಳ್ಳಲಾರಂಭಿಸಿದರು. ನಾವು ಅಲ್ಲೇ ಮರೆಯಲ್ಲಿ ನಿಂತೆವು. ಅದು ಅಗ್ನಿ ದುರಂತದ ವೇಳೆ ನಿರ್ಗಮಿಸಬಹುದಾದ ತುರ್ತು ದ್ವಾರ. ಆದರೆ ಏನು ಮಾಡಲೂ ತೋಚಲಿಲ್ಲ. ಅಲ್ಲೇ ಟ್ರಾಲಿ ಹಿಂದೆ ಬಚ್ಚಿಟ್ಟುಕೊಂಡೆವು. ನಮ್ಮ ಹಿಂದೆಯೇ ಇನ್ನೂ ಒಂದಷ್ಟು ಮಂದಿ ಬಂದು ಅವಿತುಕೊಂಡರು. ಮಕ್ಕಳು, ಹಿರಿಯರಾದಿಯಾಗಿ ಎಲ್ಲರೂ ದೇವರಲ್ಲಿ ಮೊರೆಯಿಟ್ಟೆವು.

ಅದೇ ವೇಳೆ, ಮಾಲ್ ನ ಮಹಿಳಾ ಉದ್ಯೋಗಿಯೊಬ್ಬರು ಗಾಯಗೊಂಡು ರಕ್ತಸಿಕ್ತರಾಗಿ ನಮ್ಮತ್ತ ಪ್ರಾಣ ರಕ್ಷಣೆಗಾಗಿ ಓಡುತ್ತಾ ಬಂದರು. ಬೇರೆ ಯೋಚನೆ ಮಾಡದೆ ನಮ್ಮ ಎದುರಿಗಿದ್ದ ಟ್ರಾಲಿಯಲ್ಲಿ ಅವರನ್ನು ಕೂಡಿಸಿ, ಆಂಬುಲೆನ್ಸ್ ನತ್ತ ಅವರನ್ನು ಕರೆದೊಯ್ಯಲಾಯಿತು. ಆಗ ಮಹಿಳೆಗೆ ಬೆನ್ನಿನಲ್ಲಿ ಗುಂಡೇಟು ತಗುಲಿರುವುದು ಕಂಡುಬಂದಿತು.

ನಮ್ಮೆದುರಿಗಿದ್ದ ಟ್ರಾಲಿ ಮಾಯವಾಗುತ್ತಿದ್ದಂತೆ ಸ್ವಲ್ಪ ದೂರದಲ್ಲಿದ್ದ ಫ್ರಿಡ್ಜ್ ಗಳನ್ನು ನಮ್ಮತ್ತ ಎಳೆದುಕೊಂಡು ಬಚ್ಚಿಟ್ಟುಕೊಂಡೆವು. ಆದರೆ ಗುಂಡಿನ ಸಪ್ಪಳ ಮಾತ್ರ ನಿಲ್ಲಲಿಲ್ಲ. ಆಗಲೇ ಮಾಲ್ ಮ್ಯಾನೇಜರ್ ಸ್ವಲ್ಪ ದೂರದಲ್ಲಿ ಕಾಣಿಸಿಕೊಂಡು ಪೊಲೀಸರು ಮಾಲ್ ಅನ್ನು ಸುತ್ತುವರಿದಿದ್ದು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಧೈರ್ಯವಾಗಿರಿ ಎಂದು ಅಭಯ ನೀಡಿದರು.

ಆದರೆ ಆ ಕ್ಷಣಕ್ಕೆ ನಮಗೆ ಅನ್ನಿಸಿದ್ದು ಆ ದೇವರೂ ನಮ್ಮನ್ನು ಪಾರು ಮಾಡಲಾರ. ಭಯಾನಕ ಸನ್ನಿವೇಶದಲ್ಲಿ ನಾವು ಸಿಕ್ಕಿಹಾಕಿಕೊಂಡಿದ್ದೇವೆ ಎಂಬುದು ನಮಗೆ ಮನದಟ್ಟಾಗಿತ್ತು. ಪರಿಸ್ಥಿತಿ ಅಷ್ಟೊಂದು ಭೀಕರವಾಗಿತ್ತು.

ನಾವಿಬ್ಬರಂತೂ ತೀರಾ ನಿತ್ರಾಣಗೊಂಡಿದ್ದೆವು. ಪರಿಸ್ಥಿತಿ ಹಾಗಿತ್ತು. ಆಗಲೇ ಸುಮಾರು 300 ಮೀಟರ್ ದೂರದಲ್ಲಿ ಕಾರೊಂದು ಹಾದುಹೋಗುತ್ತಿರುವುದು ಕಂಡಿತು. ಅದರಲ್ಲಿರುವವರು ಸಮವಸ್ತ್ರ ಧರಿಸಿದ ರಕ್ಷಣಾ ಪಡೆಯವರು ಎಂದು ಗೊತ್ತಾಯಿತು. ಏ ದೇವರೇ ಕಾರಿನಲ್ಲಿರುವ ಪೊಲೀಸರ ರೂಪದಲ್ಲಿ ನಮ್ಮ ರಕ್ಷಣೆಗೆ ನೀನೇ ಬಂದಿರುವೆ ಬಿಡು ಅಂದುಕೊಂಡು ತಕ್ಷಣ ಕಾರಿನತ್ತ ದೌಡಾಯಿಸಿದೆವು.

ಆದರೆ ಕಾರಿನಲ್ಲಿದ್ದಾತ ನಮ್ಮನ್ನು ಕಾರಿನೊಳಕ್ಕೆ ಹತ್ತಿಸಿಕೊಳ್ಳಲು ಹಿಂಜರಿದ. ಆದರೆ ದಯವಿಟ್ಟು ನಮ್ಮನ್ನು ರಕ್ಷಿಸು. ಇಲ್ಲೇ ಮಾಲ್ ಪಕ್ಕದಲ್ಲೇ ಇರುವ ನಮ್ಮ ಸ್ನೇಹಿತ ಮನೆಯ ಬಳಿ ನಮ್ಮನ್ನು ಬಿಟ್ಟು ಪುಣ್ಯಕಟ್ಟಿಕೋ ಎಂದು ಪ್ರಾರ್ಥಿಸಿದೆವು. ಆತ ನಮ್ಮ ಮನವಿಗೆ ಕರಗಿದ. ಹಾಗೆ ನಾವು ಅಲ್ಲಿಂದ ಪಾರಾದೆವು.

ನನ್ನ ಪತಿ ಸಹ ತಕ್ಷಣ ಆ ಸ್ಥಳಕ್ಕೆ ಬಂದರು. ತಕ್ಷಣ ನಾವೂ ಅವರತ್ತ ಓಡಿಹೋಗಿ ಬಚಾವಾದೆವು. ಸದ್ಯ! ನನ್ನ ಮಗ ಆತನ ಸ್ನೇಹಿತ ಹುಟ್ಟುಹಬ್ಬದ ಪಾರ್ಟಿ ಇದೆಯೆಂದು ನಮ್ಮ ಜತೆ ಬಾರದೆ ಪಾರ್ಟಿಯಲ್ಲಿ ಪಾಲ್ಗೊಳ್ಳಲು ಹೋಗಿದ್ದ.

ಸಾವಿನ ಮನೆಯಿಂದ ಅಕ್ಷರಶಃ ಬಚಾವಾಗಿ ಬಂದ ಶ್ರೀನಿಧಿ ಅವರು ದೇವರಿಗೊಂದು ನಮಸ್ಕಾರ ಹಾಕಿ ಕೀನ್ಯಾದ ಹಾಲಿ ಪರಿಸ್ಥಿತಿ ಬಗ್ಗೆ ಮುಂದೆ ಮಾತನಾಡತೊಡಗಿದರು. ಅಲ್ಲಿ ಶ್ರೀಲಂಕಾದಲ್ಲಿ ಭಾರತದ ಶಾಂತಿ ರಕ್ಷಣಾ ಪಡೆ ನಡೆಸಿದ್ದ ಹೋರಾಟದಂತೆ ಇಲ್ಲೂ ನಡೆದಿದೆ. ಕೀನ್ಯಾ ಗಡಿಯಲ್ಲಿ ಅಸಹಿಷ್ಣತೆಯನ್ನು ಹುಟ್ಟುಹಾಕಲಾಗುತ್ತಿದೆ ಎಂದು ವಿಷಾದಿಸಿದರು.

ಕೀನ್ಯಾ ಸುರಕ್ಷಿತ ಮತ್ತು ಶಾಂತಿ ಬಯಸುವ ರಾಷ್ಟ್ರ. ಸಹಬಾಳ್ವೆ ಮತ್ತು ಸಮರಸವೇ ಜೀವನ ಎಂದು ನಂಬಿರುವವರು ಕೀನ್ಯಾದವರು. ಆದರೂ... ಬಂಡುಕೋರರ ವಿರುದ್ಧದ ಹೋರಾಟಕ್ಕೆ ಕೀನ್ಯಾ ಕೈಜೋಡಿಸಿರುವುದರಿಂದ ಇಂತಹ ಸನ್ನಿವೇಶ ಎದುರಿಸುವಂತಾಗಿದೆ.

ಇಂತಹ ಭಯೋತ್ಪಾದನೆ ಇಂದು ಜಗತ್ತಿನಾದ್ಯಂತ ಹಬ್ಬಿದೆ. ಅಮೆರಿಕ, ಭಾರತದಂತಹ ರಾಷ್ಟ್ರಗಳೇ ಭಯೋತ್ಪಾದಕ ಕೃತ್ಯಗಳಿಗೆ ಗುರಿಯಾಗುತ್ತಿವೆ. ಏನೇ ಆಗಲಿ ಕೀನ್ಯಾ ಪೊಲೀಸರು ನಿಜಕ್ಕೂ ಸಂಕಷ್ಟದಲ್ಲಿ ಜನರ ಕೈಹಿಡಿದಿದ್ದಾರೆ.

ಏನೇ ಆಗಲಿ ಈ ದುಷ್ಕೃತ್ಯಕ್ಕೆಲ್ಲಾ ನಾನು ತಲೆ ಬಾಗುವುದಿಲ್ಲ. ಮತ್ತೆ ಅದೇ ಮಳಿಗೆಗೆ ಹೋಗುತ್ತೇವೆ. ಮತ್ತಷ್ಟು ಧೈರ್ಯದಿಂದ ಇಲ್ಲೇ ಜೀವನ ಸಾಗಿಸುತ್ತೇವೆ' ಎಂದು ಶ್ರೀನಿಧಿ ಹೇಳಿದಾಗ ಅವರ ಮಾತಿನಲ್ಲಿ ಧೈರ್ಯದ ಸೆಲೆ ಪುಟಿಯುತ್ತಿರುವುದು ಗೋಚವಾಯಿತು.

English summary
When terror struck Westgate mall reopens i will be there says Kannada witness Srinidhi Rao. She and her mother-in-law were in the upscale Westgate Shopping Mall in Nairobi when the deadly attacks took place on Saturday. Oneindia contacted Nairobi-based Srinidhi Rao, who witnessed the most horrific incident of her life, to get a first-hand account of what happened that day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X