ಚಿತ್ತಾಕರ್ಷಕ ವಿಡಿಯೋ: ಸಿಡ್ನಿಯಲ್ಲಿ ಹೊಸ ವರ್ಷದ ದೃಶ್ಯಕಾವ್ಯ

Posted By:
Subscribe to Oneindia Kannada

ಸಿಡ್ನಿ, ಜನವರಿ 01: ಹೊಸ ವರ್ಷ ತನ್ನ ಮೊದಲ ಹೆಜ್ಜೆ ಇಡುವುದು ಆಸ್ಟ್ರೇಲಿಯದ ಸಿಡ್ನಿಯಲ್ಲಿ. ಭಾರತೀಯ ಕಾಲಮಾನಕ್ಕಿಂತ ಐದೂವರೆ ಗಂಟೆ ಮುಂದಿರುವುದರಿಂದ, ವಿಶ್ವದ ಎಲ್ಲ ದೇಶಗಳಿಗಿಂತ ಮೊದಲು ಸಿಡ್ನಿ ಹೊಸ ವರ್ಷವನ್ನು ಆಚರಿಸಿಕೊಳ್ಳುತ್ತದೆ. ಅದರಲ್ಲೂ ಹೊಸ ವರ್ಷವನ್ನು ಸಿಡ್ನಿ ಬರಮಾಡಿಕೊಳ್ಳುವ ರೀತಿಯಂತೂ ಅತ್ಯಂತ ಆಕರ್ಷಕ.

ಬೆಂಗಳೂರು ಪೊಲೀಸರ ಮುಂಜಾಗ್ರತೆ: ಶಾಂತವಾಗಿ ಶುರುವಾಯ್ತು ಹೊಸವರ್ಷ

ಸಿಡ್ನಿಯ ಹಾರ್ಬರ್ ಬ್ರಿಡ್ಜ್ ಎದುರು ನಡೆವ ಪಟಾಕಿ ಉತ್ಸವದ ಸಂಭ್ರಮಕ್ಕಂತೂ ಎಲ್ಲೆಯಿಲ್ಲ. ಈ ಸಂಭ್ರಮವನ್ನು ಕಣ್ತುಂಬಿಸಿಕೊಳ್ಳುವುದಕ್ಕೆಂದೇ ವಿಶ್ವದ ನಾನಾ ದೇಶಗಳಿಂದ ಆಸ್ಟ್ರೇಲಿಯಕ್ಕೆ ತೆರಳುವವರಿದ್ದಾರೆ. ಈ ಬಾರಿ ಸುಮಾರು 1.6 ದಶಲಕ್ಷ ಜನ ಈ ಸಂಭ್ರಮಕ್ಕೆ ಸಾಕ್ಷಿಯಾಗಿದ್ದಾರೆ. ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಈ ಸಂಭ್ರಮದ ಕ್ಷಣದ ವಿಡಿಯೋಗಳು, ಚಿತ್ತಾಕರ್ಷಕ ಚಿತ್ರಗಳು ಇದೀಗ ಟ್ವಿಟ್ಟರ್ ನಲ್ಲಿ ಹರಿದಾಡುತ್ತಿವೆ.

2017ರ ಇಡೀ ವರ್ಷದ ನೆನಪು ತರುವ ಅತ್ಯುತ್ತಮ ಚಿತ್ರಗಳು

ವಿಶಾಲ ಬಂದರು, ಮೇಲೊಂದು ಚೆಂದದ ಸೇತುವೆ, ಹಿನ್ನೆಲೆಯಲ್ಲಿ ಗಗನಚುಂಬಿ ಕಟ್ಟಡಗಳು... ಈ ಅದ್ಭುತ ದೃಶ್ಯಕಾವ್ಯಕ್ಕೆ ಪುಟವಿಡುವಂಥ ವರ್ಣಮಯ ಪಟಾಕಿ ಉತ್ಸವ. ಹೊಸತನವನ್ನು, ಹೊಸ ಭರವಸೆಯನ್ನು ಹೊತ್ತು ತರುವ ಹೊಸ ವರ್ಷವನ್ನು ಸಿಡ್ನಿಯ ಜನರು ಉನ್ಮಾದದಿಂದ ಸ್ವಾಗತಿಸಿದ ವರ್ಣಮಯ ಚಿತ್ರಗಳು ಇಲ್ಲಿವೆ.

ಈ ಪಟಾಕಿ ಉತ್ಸವ ಎಂದಿಗೂ ಅಮೋಘ

ಸಿಡ್ನಿಯ ಈ ಪಟಾಕಿ ಉತ್ಸವ ಎಂದಿಗೂ ಅಮೋಘವೇ. ಇದಕ್ಕೆ ಬೆಲೆಕಟ್ಟುವುದಕ್ಕೆ ಸಾಧ್ಯವೇ ಇಲ್ಲ ಎಂದು ನತನ್ ಅಮ್ಜಿ ಎಂಬುವವರು ಟ್ವೀಟ್ ಮಾಡಿದ್ದಾರೆ. ಸಿಡ್ನಿ ಪಟಾಕಿ ಉತ್ಸವದ ಮನಮೋಹಕ ವಿಡಿಯೋ ಸಹ ಇದರೊಂದಿಗಿದೆ. ಈ ಅಮೋಘ ಸೌಂದರ್ಯ ನೋದಲು ಎರಡು ಕಣ್ಣು ಸಾಲುವುದಿಲ್ಲ ಅನ್ನಿಸಿದರೆ ಅಚ್ಚರಿಯಿಲ್ಲ!

ಈ ಅಂದಕ್ಕೆ ಸಾಟಿ ಎಲ್ಲಿದೆ..?

ಸಿಡ್ನಿ ಎಂಬ ಶ್ರೀಮಂತ ನಗರಿಗೆ ಹೊಸ ವರ್ಷವನ್ನು ಈ ರೀತಿ ಅದ್ಧೂರಿಯಾಗಿ ಸ್ವಾಗತಿಸುವುದು ಕಷ್ಟವೇನಲ್ಲ. ಆಸ್ಟ್ರೇಲಿಯಾದಲ್ಲಿ ಅತೀ ಹೆಚ್ಚು ಜನಸಂಖ್ಯೆ ಇರುವ ಈ ನಗರದಲ್ಲಿ ಮುಗಿಲುಮುಟ್ಟುವ ಹೊಸ ವರ್ಷಾಚರಣೆಯ ಸಂಭ್ರಮ ಹೇಗಿರುತ್ತದೆಂಬುದನ್ನು ವಿಡಿಯೋ ಸಮೇತ ಟ್ಚಿಟ್ಟರ್ ನಲ್ಲೊಬ್ಬರು ಬಿತ್ತರಿಸಿದ್ದಾರೆ. ಆಕಾಶವನ್ನು ಕೆಂಪು ರಂಗಲ್ಲಿ ಮುಳುಗೇಳಿಸಿ, ಅಂಬರದ ಕೆನ್ನೆಯನ್ನು ನಾಚುವಂತೆ ಮಾಡಿದ ಉತ್ಸವ ಅದು!

ಧರೆಗಿಳಿಯಿತೇ ಸ್ವರ್ಗ?!

ನಾಕವೇನಾದರೂ ಧರೆಗಿಳಿದುಬಿಟ್ಟಿದೆಯೆ ಎಂದು ಗೊಂದಲವಾಗುವ ಮಟ್ಟಿನ ಸುಂದರ ದೃಶ್ಯ ಸಿಡ್ನಿಯಲ್ಲಿ ಮೇಳೈಸುತ್ತದೆ. ಪ್ರೀತಿ ಮತ್ತು ಸಮಾನತೆ ಸಿಡ್ನಿಯ ಹಾರ್ಬರ್ ಬ್ರಿಡ್ಜ್ ನಲ್ಲಿ ನಿನ್ನೆ ರಾತ್ರಿ ನಡೆದ ಸಂಭ್ರಮದ ಆಶಯ. ಈ ವರ್ಷ ಎಲ್ಲರಿಗೂ ಪ್ರೀತಿ, ಶಾಂತಿ, ಸಂತೋಷ, ನೆಮ್ಮದಿ ಸಿಗಲಿ ಎಂಬುದು ನನ್ನ ಹಾರೈಕೆ ಎಂದು ಆರ್ನಿ ಬೆಲ್ಲಾ ಎಂಬುವವರು ಟ್ವೀಟ್ ಮಾಡಿದ್ದಾರೆ.

ವರ್ಣಮಯ ಘಳಿಗೆ

ಹಾರ್ಬರ್ ಬ್ರಿಡ್ಜ್ ನ ಹಿಂದೆ ಸಿಡಿವ ಬಣ್ಣ ಬಣ್ಣದ ಬೆಳಕಿನ ಪಟಾಕಿಗಳ ಚೆಂದ ಸಾಲದೆಂಬಂತೆ ಅವುಗಳ ಪ್ರತಿಬಿಂಬವನ್ನು ತೋರಿಸಿ, ಆ ದೃಶ್ಯವನ್ನು ಮತ್ತಷ್ಟು ಸುಂದರವಾಗಿಸುವ ನೀರು ಬೇರೆ. ಕೆಳಗೆ ನೀರು, ಮೇಲೆ ಆಕಾಶ, ಮಧ್ಯೆಯೊಂದು ಸೇತುವೆ. ಸ್ವರ್ಗಕ್ಕೆ ಕಿಚ್ಚು ಹಚ್ಚೋಕೆ ಇನ್ನೇನು ಬೇಕು?!

ಶಾಂತಿ, ಕರುಣೆಯ ಹೊಸವರ್ಷವಾಗಲಿ!

ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಸಿಡ್ನಿ, ನೀನೆಷ್ಟು ಚೆಂದದ ನಗರ? ಎಂಥ ಅವಿಸ್ಮರಣೀಯ ಹೊಸ ವರ್ಷ! 2018 ಜಗತ್ತಿಗೆ ಶಾಂತಿ ಮತ್ತು ಕರುಣೆಯ ವರ್ಷವಾಗಲಿ ಎಂದು ಹಾರೈಸುತ್ತೇನೆ ಎಂದು ಸಿಡ್ನಿಯ ಸುಂದರ ಚಿತ್ರದೊಂದಿಗೆ ಸರಚ್ಕಾ ಮಾರ್ಟಿನೆಜ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಸುಂದರ ದೃಶ್ಯಕಾವ್ಯ

ಹೊಸ ವರ್ಷದ ಶುಭಾಶಯಗಳು. ನಾನು ಮತ್ತೊಮ್ಮೆ ನತದೃಷ್ಟನಾಗಿದ್ದೇನೆ. ಇದುವರೆಗೂ ಸಿಡ್ನಿಯ ಈ ಪಟಾಕಿ ಉತ್ಸವದ ಸುಂದರ ಚಿತ್ರವನ್ನು ತೆಗೆಯಲು ಸಾಧ್ಯವಾಗಿಲ್ಲ. ಆದರೂ ಕಷ್ಟಪಟ್ಟು ಒಂದು ಚಿತ್ರವನ್ನು ತೆಗೆದಿದ್ದೇನೆ ಎಂದು ತಾವು ತೆಗೆದು ಸುಂದರ ಚಿತ್ರದೊಂದಿಗೆ ಟ್ವೀಟ್ ಮಾಡಿದ್ದಾರೆ ಜೇಮಿ ಶಾಟ್ಜ್.

ವಿಶ್ವದಲ್ಲೇ ಅತ್ಯತ್ತಮ!

ಸಿಡ್ನಿ ಹೊಸ ವರ್ಷ(2018)ವನ್ನು ಸ್ವಾಗತಿಸುವ ರೀತಿ ವಿಶ್ವದಲ್ಲೇ ಅತ್ಯುತ್ತಮವಾದುದು ಎಂದು ವಂಡರ್ ಸ್ಟ್ರಕ್ ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The revellers across the country welcomed 2018, new year with glittering new year eve celebrations. Sydney Harbour Bridge in Australia witnessed the spectaculous view of the world famous fireworks. More than 1.6 million people attended the fireworks.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ