ಜಗತ್ತಿನಾದ್ಯಂತ ಆತಂಕ ಶುರು! ಚೀನಾ ಸಮುದ್ರದಲ್ಲಿ ಅಮೆರಿಕದ ಯುದ್ಧ ನೌಕೆ..!
ದಕ್ಷಿಣ ಚೀನಾ ಸಮುದ್ರ ಕಾದ ಕಾವಲಿಯಾಗಿದೆ. ನೋಡ ನೋಡುತ್ತಿದ್ದಂತೆ ದಕ್ಷಿಣ ಚೀನಾ ಸಮುದ್ರ ತುಂಬಾ ಬರೀ ಯುದ್ಧ ನೌಕೆಗಳೇ ಆರ್ಭಟಿಸುತ್ತಿವೆ. ಅದರಲ್ಲೂ ಫಿಲಿಪೈನ್ಸ್ ಸಮೀಪ ಚೀನಾ ದೋಣಿಗಳು ಕಂಡ ಬಳಿಕ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ವಿವಾದಿತ ಜಾಗದಲ್ಲಿ ಚೀನಾ ದೋಣಿಗಳು ಎಂಟ್ರಿಕೊಟ್ಟು ಅಬ್ಬರಿಸಿದ್ದವು. ಈ ಘಟನೆ ನಂತರ ಖುದ್ದು ಫಿಲಿಪೈನ್ಸ್ ಅಧ್ಯಕ್ಷರಿಂದಲೂ ವಾರ್ನಿಂಗ್ ಬಂದಿತ್ತು.
ವಿಟ್ಸನ್ ರೀಫ್ ಪ್ರದೇಶದ ಬಳಿ ಚೀನಾ ಹಡಗು ಕಂಡ ಬಳಿಕ ಅಮೆರಿಕ ಕೂಡ ಅಲರ್ಟ್ ಆಗಿದ್ದು, ಯುದ್ಧ ವಿಮಾನ ಸಾಗಿಸುವ ಸಾಮರ್ಥ್ಯದ ನೌಕೆಗಳನ್ನ ನಿಯೋಜನೆ ಮಾಡಿದೆ. ಫಿಲಿಪೈನ್ಸ್ನ 'ಎಕ್ಸ್ಕ್ಲೂಸಿವ್ ಎಕಾನಾಮಿಕ್ ಝೋನ್'ನ ಬಳಿ 200ಕ್ಕೂ ಹೆಚ್ಚು ಚೀನಾ ಮೀನುಗಾರಿಕಾ ದೋಣಿಗಳು ಬಂದಿವೆ ಎಂದು ಆರೋಪ ಮಾಡಲಾಗಿತ್ತು.
ಚೀನಾ v/s ಅಮೆರಿಕ ನಡುವೆ ಭೀಕರ ಯುದ್ಧಕ್ಕೆ ಸಿದ್ಧವಾಯ್ತಾ ವೇದಿಕೆ?
ಇಷ್ಟೆಲ್ಲಾ ಘಟನೆಗಳು ದಕ್ಷಿಣ ಚೀನಾ ಸಮುದ್ರದಲ್ಲೇ ನಡೆಯುತ್ತಿರುವುದು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಅದರಲ್ಲೂ ದಕ್ಷಿಣ ಚೀನಾ ಸಮುದ್ರ ವಿಚಾರದಲ್ಲಿ ಚೀನಾ ವಿರುದ್ಧ ಹಲ್ಲು ಮಸೆಯುತ್ತಿರುವ ಅಮೆರಿಕ, ಘಟನೆಯನ್ನು ಸೂಕ್ಷ್ಮವಾಗಿ ಪರಿಗಣಿಸಿ ಯುದ್ಧನೌಕೆ ರವಾನಿಸಿದೆ. ಚೀನಾ ಕೂಡ ತಾನು ಕಮ್ಮಿಯಿಲ್ಲ ಎಂಬಂತೆ ಯುದ್ಧ ನೌಕೆ ರವಾನಿಸಿದೆ.
ಏಷ್ಯಾ ಖಂಡದಲ್ಲಿ ಯುದ್ಧದ ಭೀತಿ..?
ಅಮೆರಿಕ ಹಾಗೂ ಚೀನಾ ಜಿದ್ದಿಗೆ ಬಿದ್ದವರಂತೆ ಯುದ್ಧ ನೌಕೆಗಳನ್ನ ನಿಯೋಜನೆ ಮಾಡುತ್ತಿರುವುದು ಪರಿಸ್ಥಿತಿಗೆ ಮತ್ತಷ್ಟು ಕಾವು ನೀಡಿದೆ. ಹೀಗಾಗಿ ಏಷ್ಯಾದಲ್ಲಿ ಈಗ ಯುದ್ಧ ಭೀತಿ ಆವರಿಸಿದೆ. ಎರಡೂ ರಾಷ್ಟ್ರಗಳ ನೌಕಾದಳ ಬಲಿಷ್ಠವಾಗಿದೆ. ಹೀಗೆ ಬಲಿಷ್ಠ ನೌಕಾಪಡೆಗಳ ನಡುವೆ ತಿಕ್ಕಾಟ ಆರಂಭವಾಗಿರೋದು ಆತಂಕ ಹೆಚ್ಚಿಸಿದೆ. ಆದ್ರೆ ಚೀನಾ ಮಾತ್ರ ಕಾದು ನೋಡುವ ತಂತ್ರ ಅನುಸರಿಸುತ್ತಿದೆ. ಇನ್ನು ಅಮೆರಿಕ ದಕ್ಷಿಣ ಚೀನಾ ಸಮುದ್ರದಲ್ಲಿ ತನ್ನ ತಾಕತ್ತು ಪ್ರದರ್ಶಿಸಲು ಮುಂದಾಗುತ್ತಿದೆ. ಎರಡೂ ರಾಷ್ಟ್ರಗಳ ನಡುವೆ ಈ ವಿಚಾರವಾಗಿ ಈವರೆಗೆ ಯಾವುದೇ ಮಾತುಕತೆ ಅಥವಾ ಸಭೆಗಳು ನಡೆದಿಲ್ಲ.
ಟ್ರಿಲಿಯನ್ ಡಾಲರ್ ಜಾಗಕ್ಕೆ ವಾರ್..?
ದಕ್ಷಿಣ ಚೀನಾ ಸಮುದ್ರದಲ್ಲಿ ಹಿಡಿತ ಸಾಧಿಸುವ ಚೀನಾ ಪ್ರಯತ್ನ ಇಂದು, ನಿನ್ನೆಯದಲ್ಲ. ಸುಮಾರು 3-4 ದಶಕಗಳಿಂದಲೂ ಈ ಜಾಗಕ್ಕಾಗಿ ರಕ್ತ ರಹಿತ ಬಡಿದಾಟ ನಡೆಯುತ್ತಲೇ ಇದೆ. ಅಮೆರಿಕ ಚೀನಾ ವಿರುದ್ಧ ಈ ವಿಚಾರದಲ್ಲಿ ಜಾಗತಿಕ ಮಟ್ಟದಲ್ಲಿ ಕತ್ತಿ ಮಸೆಯುತ್ತಲೇ ಇದೆ. ಇಷ್ಟಕ್ಕೆಲ್ಲಾ ಕಾರಣವಾಗಿರುವುದು ದಕ್ಷಿಣ ಚೀನಾ ಸಮುದ್ರದಲ್ಲಿ ಅವಿತಿರುವ ಸಂಪತ್ತು. ಸುಮಾರು 3.5 ಮಿಲಿಯನ್ ಸ್ಕ್ವೇರ್ ಕಿಲೋ ಮೀಟರ್ ಅಂದರೆ ಭಾರತ ಹೊಂದಿರುವ ಭೂಭಾಗಕ್ಕಿಂತಲೂ ದೊಡ್ಡದಾದ ಪ್ರದೇಶ ದಕ್ಷಿಣ ಚೀನಾ ಜಲಗಡಿಗೆ ಇದೆ. ಭಾರಿ ಪ್ರಮಾಣದ ನೈಸರ್ಗಿತ ಸಂಪನ್ಮೂಲ ಹಾಗೂ ವ್ಯವಹಾರ ನಡೆಸುವ ಜಾಗ ಇದಾಗಿದೆ.
ಅಮೆರಿಕ ಯುದ್ಧನೌಕೆಯನ್ನು ಓಡಿಸಿದ ಚೀನಾ: ಜೋ ಬೈಡನ್ಗೆ ಮೊದಲ ಬಿಸಿ
400 ಯುದ್ಧ ನೌಕೆಗಳ ಟಾರ್ಗೆಟ್..!
ಚೀನಾ ಸರ್ಕಾರ ನೌಕಾ ಬಲ ಹೆಚ್ಚಿಸಲು ಮತ್ತಷ್ಟು ಆದ್ಯತೆ ನೀಡುತ್ತಿದ್ದು, ಮುಂದಿನ 4 ವರ್ಷಗಳ ಅವಧಿಯಲ್ಲಿ ಈಗಿರುವ 360 ಯುದ್ಧ ನೌಕೆಗಳನ್ನು 400ಕ್ಕೆ ಏರಿಸುವ ಗುರಿ ಹೊಂದಲಾಗಿದೆ. ಇದು ತನ್ನ ಜಲ ಗಡಿಯಲ್ಲಿನ ಭದ್ರತೆ ಹಾಗೂ ಶತ್ರು ಪಡೆಗಳಿಗೆ ದೊಡ್ಡ ಸಂದೇಶವಾಗಲಿದೆ ಎಂಬುದು ಚೀನಾ ಲೆಕ್ಕಾಚಾರ. ಈಗಾಗಲೇ ಭೂ ಸೇನೆ ಹಾಗೂ ವಾಯು ಸೇನೆಗಳಲ್ಲೂ ಬಲ ಪ್ರದರ್ಶನ ಮಾಡಿರುವ ಚೀನಿ ಸೇನೆ, ಸಮದ್ರದ ಮೇಲೂ ಹಿಡಿತ ಸಾಧಿಸುವ ಮುನ್ಸೂಚನೆ ನೀಡಿದೆ. ಪ್ರಮುಖವಾಗಿ ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾ ಪ್ರತಿಪಾದಿಸುವ ಹಕ್ಕು ಸ್ವಾಮ್ಯ ಇದರಿಂದ ಮತ್ತಷ್ಟು ಗಟ್ಟಿಯಾಗಲಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಿಯರ ಪ್ರಾಬಲ್ಯವನ್ನು ತಗ್ಗಿಸಲು ಅಮೆರಿಕ ನೇತೃತ್ವದಲ್ಲಿ 'ಕ್ವಾಡ್' ಒಕ್ಕೂಟ ಪ್ರಯತ್ನಿಸುತ್ತಿದೆ.
ಎಷ್ಟಿದೆ ಗೊತ್ತಾ ಸಂಪತ್ತಿನ ಪ್ರಮಾಣ..?
ಅಮೆರಿಕದ ಸರ್ಕಾರಿ ಸಂಸ್ಥೆ ನೀಡಿರುವ ಮಾಹಿತಿಯಂತೆ ದಕ್ಷಿಣ ಚೀನಾ ಸಮುದ್ರದಲ್ಲಿ 190 ಟ್ರಿಲಿಯನ್ ಕ್ಯೂಬಿಕ್ ಅಡಿ ನೈಸರ್ಗಿಕ ಅನಿಲ ಅಡಗಿದೆ. ಇಷ್ಟು ಗ್ಯಾಸ್ ಸಿಕ್ಕರೆ ಹತ್ತಾರು ವರ್ಷ ಚೀನಾ ಯಾರ ಬಳಿಯೂ ನ್ಯಾಚ್ಯುರಲ್ ಗ್ಯಾಸ್ಗೆ ಕೈಚಾಚುವ ಅವಶ್ಯಕತೆ ಇರೋದಿಲ್ಲ. ಹಾಗೇ 11 ಬಿಲಿಯನ್ ಬ್ಯಾರೆಲ್ ಪೆಟ್ರೋಲ್, ಡೀಸೆಲ್ ಸಂಯುಕ್ತ ಇಲ್ಲಿ ಅಡಗಿದೆ. ಇಷ್ಟೇ ಆಗಿದ್ದರೆ ಚೀನಾ ಅಷ್ಟೊಂದು ತಲೆಕೆಡಿಸಿಕೊಳ್ಳುವ ಸಾಧ್ಯತೆ ಕಡಿಮೆ ಇರುತ್ತಿತ್ತೇನೋ. ಆದರೆ ಇದೆಲ್ಲವನ್ನೂ ಮೀರಿಸುವ ಖಜಾನೆ ದಕ್ಷಿಣ ಚೀನಾ ಸಮುದ್ರದಲ್ಲಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಅಮೂಲ್ಯ ಅದಿರುಗಳಿವೆ. ಚಿನ್ನ ಸೇರಿದಂತೆ ಟಿನ್, ಕ್ರೋಮೈಟ್, ಮ್ಯಾಗ್ನಟೈಟ್, ಜಿರ್ಕಾನ್ ಮತ್ತಿತರ ಅದಿರುಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ಇಷ್ಟು ಪ್ರಮಾಣದ ಸಂಪತ್ತನ್ನು ಬಿಟ್ಟುಕೊಡಲು ಚೀನಾ ಬಿಲ್ಕುಲ್ ಸಿದ್ಧವಿಲ್ಲ.
5.3 ಟ್ರಿಲಿಯನ್ ಡಾಲರ್ ವಹಿವಾಟು..!
ಆಶ್ಚರ್ಯವಾದರೂ ಇದು ನಂಬಲೇಬೇಕಾದ ವಿಚಾರ. ದಕ್ಷಿಣ ಚೀನಾ ಸಮುದ್ರ ತೈಲ ಹಾಗೂ ಅದಿರುಗಳನ್ನು ಮಾತ್ರ ಹೊಂದಿಲ್ಲ. ಸಂಪದ್ಭರಿತ ವ್ಯಾಪಾರವನ್ನೂ ನಡೆಸುತ್ತಾ ಬಂದಿದೆ. ಸೌತ್ ಚೀನಾ ಸಮುದ್ರ ಮಾರ್ಗವಾಗಿ ಪ್ರತಿವರ್ಷವೂ ಸುಮಾರು 5.3 ಟ್ರಿಲಿಯನ್ ಮೊತ್ತದ ವ್ಯಾಪಾರ, ವಹಿವಾಟು ನಡೆಯುತ್ತಿದೆ. ಇದು ಜಗತ್ತಿನಲ್ಲಿ ಜಲ ಮಾರ್ಗದ ಮೂಲಕ ನಡೆಯುವ ವ್ಯಾಪಾರದ 3ನೇ ಒಂದು ಭಾಗವಾಗಿದೆ. ಭಾರತವು ಕೂಡ ಪ್ರತಿವರ್ಷ 200 ಬಿಲಿಯನ್ ಡಾಲರ್ ಮೊತ್ತದ ವಹಿವಾಟನ್ನ ದಕ್ಷಿಣಚೀನಾ ಸಮುದ್ರ ಮಾರ್ಗದ ಮೂಲಕ ನಡೆಸುತ್ತದೆ. ಅಮೆರಿಕ, ಜಪಾನ್, ಚೀನಾ, ಕೊರಿಯಾ, ಆಸ್ಟ್ರೇಲಿಯಾ ಹೀಗೆ ಹತ್ತಾರು ದೇಶಗಳು ಇದೇ ಮಾರ್ಗ ಬಳಸಿ ವ್ಯಾಪಾರ ನಡೆಸುತ್ತಿವೆ. ಇದೇ ಕಾರಣಕ್ಕೆ ದಕ್ಷಿಣ ಚೀನಾ ಸಮುದ್ರ ಸಂಘರ್ಷದ ತಾಣವಾಗಿ ಮಾರ್ಪಟ್ಟಿದೆ.