ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ವೈರಸ್‌ ದಾಳಿಯ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು..!

|
Google Oneindia Kannada News

ಕೊರೊನಾ ವೈರಸ್ ಜಗತ್ತಿನ ಜೀವ ಹಿಂಡುತ್ತಿರುವಾಗಲೇ ವಿಜ್ಞಾನಿಗಳು ಮತ್ತೊಂದು ವಾರ್ನಿಂಗ್ ಕೊಟ್ಟಿದ್ದಾರೆ. ಅಮೆಜಾನ್ ಮಳೆ ಕಾಡು ಹೊತ್ತಿ ಉರಿಯುತ್ತಿರುವ ಪರಿಣಾಮ ಮುಂದಿನ ದಿನಗಳಲ್ಲಿ ಭೂಮಿ ಮೇಲೆ ಇತ್ತಷ್ಟು ವೈರಸ್‌ಗಳು ಜನ್ಮತಾಳುವ ಎಚ್ಚರಿಕೆ ನೀಡಲಾಗಿದೆ. ಅದರಲ್ಲೂ ಪ್ರಮುಖವಾಗಿ ಡೆಂಘಿ ಮತ್ತು ಝಿಕಾ ವೈರಸ್ ಇಡೀ ಜಗತ್ತನ್ನು ಆವರಿಸುವ ಎಚ್ಚರಿಕೆ ನೀಡಲಾಗಿದೆ. 2019ಕ್ಕೆ ಹೋಲಿಕೆ ಮಾಡಿದರೆ 2020ರಲ್ಲಿ ಅಮೆಜಾನ್‌ ಮೇಲಿನ ದೌರ್ಜನ್ಯ ಹೆಚ್ಚಾಗಿದೆ. 2020ರಲ್ಲಿ ಶೇಕಡ 60ಕ್ಕೂ ಹೆಚ್ಚು ಭಾಗ ಕಾಡನ್ನು ನಾಶ ಮಾಡಲಾಗಿದೆ.

ಈ ಪರಿಸ್ಥಿತಿಯನ್ನು ಅವಲೋಕಿಸಿದರೆ ಭೂಮಿ ಮೇಲೆ ತಾಪಮಾನ ಭಾರಿ ಏರಿಳಿತ ಕಾಣಲಿದೆ. ಇದರಿಂದ ವೈರಸ್ ಹುಟ್ಟಲು ಅನುಕೂಲಕರ ವಾತಾವರಣ ನಿರ್ಮಾಣವಾಗಲಿದೆ. ಇಂತಹ ವಾತಾವರಣದಿಂದ ಡೆಡ್ಲಿ ವೈರಸ್‌ಗಳ ಸಮೂಹ ಸೃಷ್ಟಿಯಾಗಬಹುದು ಎಂದು ಎಚ್ಚರಿಸಲಾಗಿದೆ. ಈ ಹಿಂದೆ ಕೂಡ ಅಮೆಜಾನ್ ಕಾಡು ನಾಶದಿಂದ ಮಾನವನ ಮೇಲೆ ಉಂಟಾಗಬಹುದಾದ ಆರೋಗ್ಯ ಸಮಸ್ಯೆಗಳ ಬಗ್ಗೆ ವಿಜ್ಞಾನಿಗಳು ಎಚ್ಚರಿಸಿದ್ದರು. ಈಗ ಮತ್ತೆ ವಾರ್ನಿಂಗ್ ಕೊಟ್ಟಿರುವ ವಿಜ್ಞಾನಿಗಳು, ಇದು ಮಾನವನ ವಿನಾಶಕ್ಕೆ ಮೊದಲ ಪ್ರಯತ್ನವಾಗಲಿದೆ ಎಂದಿದ್ದಾರೆ.

2019 ರಲ್ಲಿ ಹೊತ್ತಿ ಉರಿದಿತ್ತು ಅಮೆಜಾನ್

2019 ರಲ್ಲಿ ಹೊತ್ತಿ ಉರಿದಿತ್ತು ಅಮೆಜಾನ್

ಜಸ್ಟ್ ಒಂದೇ ಒಂದು ವರ್ಷ, ಆ ಒಂದೇ ವರ್ಷದಲ್ಲಿ ಅಮೆಜಾನ್ ಮಳೆಕಾಡು ಭಾಗಶಃ ನಾಶವಾಗಿದೆ. 2019 ಅಮೆಜಾನ್ ಪಾಲಿಗೆ ಕರಾಳ ವರ್ಷ. ಸುಮಾರು 5-6 ತಿಂಗಳು ಧಗಧಗನೆ ಹೊತ್ತಿ ಉರಿದ ಕಾಡು, ಲಕ್ಷಾಂತರ ಎಕರೆ ಸುಟ್ಟು ಭಸ್ಮವಾಗಿತ್ತು. ಲೆಕ್ಕವಿಲ್ಲದಷ್ಟು ಪ್ರಬೇಧದ ಸಸ್ಯಗಳು, ಪ್ರಾಣಿ ಸಂಕುಲ ಹೀಗೆ ಇಡೀ ಅಮೆಜಾನ್ ಇತಿಹಾಸದಲ್ಲಿ ಕಂಡು ಕೇಳರಿಯದ ಘೋರ ಪರಿಸ್ಥಿತಿ ಎದುರಾಗಿತ್ತು. ಆದರೆ ಇದನ್ನೆಲ್ಲಾ ದಾಟಿಕೊಂಡು ಮತ್ತೆ ಜೀವಕಳೆ ತುಂಬಿಕೊಂಡ ಅಮೆಜಾನ್ ಮೇಲೆ ಇನ್ನೊಮ್ಮೆ ಕಾಡುಗಳ್ಳರ ಕಣ್ಣು ಬಿದ್ದಿದೆ.

ಸರಿಯಾಗಿ ಬೇಸಿಗೆಯ ಹೊತ್ತಿಗೆ ಅಮೆಜಾನ್ ಕಾಡಿನ ಸುತ್ತಮುತ್ತ ಬೆಂಕಿ ಕಾಣಿಸಿಕೊಳ್ಳುತ್ತದೆ. ಬೆಂಕಿಯನ್ನು ಮಾಫಿಯಾ ಡಾನ್‌ಗಳೇ ಹಚ್ಚಿಸುತ್ತಾರೆ (ನಮ್ಮಲ್ಲಿ ಕಳೆ ಗಿಡಕ್ಕೆ ಬೆಂಕಿ ಹಚ್ಚುವಂತೆ). ಹೀಗೆ ಬೆಂಕಿ ಹೊತ್ತಿಕೊಂಡು, ಕಾಡಿಗೂ ಹಬ್ಬುತ್ತದೆ. ಕೆನ್ನಾಲಿಗೆ ದೊಡ್ಡದಾಗಿ ನೋಡ ನೋಡುತ್ತಿದ್ದಂತೆ ಸಾವಿರಾರು ಎಕರೆ ಕಾಡು ಭಸ್ಮವಾಗುತ್ತದೆ. ಕಷ್ಟವೇ ಇಲ್ಲದೆ ಸಾವಿರಾರು ಎಕರೆ ಕಾಡನ್ನು ನಾಶ ಮಾಡುವ ಭೂ ಮಾಫಿಯಾ, ಗ್ಯಾಂಗ್ ಆ ಜಾಗದಲ್ಲಿ ಬಿಡಾರ ಹೂಡುತ್ತದೆ.

ಭೂಮಿಯ ಗಾಳಿಚೀಲಕ್ಕೆ ಬೆಂಕಿ..!

ಭೂಮಿಯ ಗಾಳಿಚೀಲಕ್ಕೆ ಬೆಂಕಿ..!

ಭೂಮಿಯ ಗಾಳಿಚೀಲ ಅಮೆಜಾನ್ ಮೇಲೆ ದೌರ್ಜನ್ಯ ವಿಪರೀತವಾಗಿದೆ. ಸೋಯಾಬೀನ್ ಹಾಗೂ ಬೀಫ್ ಎಕ್ಸ್‌ಪೋರ್ಟ್ ಉದ್ಯಮದ ಚಂಡಮಾರುತಕ್ಕೆ ಸಿಲುಕಿರುವ ಅಮೆಜಾನ್ ನಾಶವಾಗುತ್ತಿದೆ. ಕಾಡಿನ ಶೇಕಡ 20ರಷ್ಟು ಭಾಗ ಹಾಳಾಗಿ ಹೋಗಿದೆ. ಕಾಡುಗಳ್ಳರು ಮತ್ತು ಕೃಷಿ ಕಾರಣ ನೀಡಿ ಕಾಡನ್ನು ಕಡಿಯುತ್ತಿರುವವರು ಹಾಗೂ ಬೀಫ್ ರಫ್ತು ಮಾಫಿಯಾ ನಿತ್ಯಹರಿದ್ವರ್ಣ ಕಾಡನ್ನ ನಾಶ ಮಾಡುತ್ತಿದೆ. ಗ್ಲೋಬಲ್ ವಾರ್ಮಿಂಗ್ ಕೂಪದಲ್ಲಿ ನರಳುತ್ತಿರುವ ಪ್ರಪಂಚಕ್ಕೆ ಇದು ಆಘಾತ ನೀಡಿದೆ. ಅಮೆಜಾನ್ ಕಾಡಿನ ಸುತ್ತಮುತ್ತ ಬೆಳೆಯುವ ಕೃಷಿ ಪದಾರ್ಥ ಹಾಗೂ ಬೀಫ್ ಉದ್ಯಮ ಯುರೋಪ್ ರಾಷ್ಟ್ರಗಳ ಮೇಲೆ ಅವಲಂಬಿತವಾಗಿದೆ. ಹೀಗೆ ಯುರೋಪ್‌ಗೆ ರಫ್ತು ಮಾಡುವ ಶೇ. 20ರಷ್ಟು ಸೋಯಾ, ಶೇ. 17ರಷ್ಟು ಬೀಫ್ ಅಕ್ರಮ ವಹಿವಾಟಾಗಿದೆ.

ನೂರಾರು ಕೋಟಿ ಎಕರೆ ಅರಣ್ಯ..!

ನೂರಾರು ಕೋಟಿ ಎಕರೆ ಅರಣ್ಯ..!

ಅಮೆಜಾನ್ ಗಾತ್ರದ ಅರಣ್ಯ ಜಗತ್ತಿನ ಯಾವ ಭಾಗದಲ್ಲೂ ಕಾಣಲು ಸಾಧ್ಯವಿಲ್ಲ. ಅಲ್ಲಿನ ವಾತಾವರಣವೂ ಈ ರೀತಿ ಕಾಡು ಹಬ್ಬಿಕೊಳ್ಳಲು ಸಹಕಾರಿಯಾಗಿದೆ. ಸುಮಾರು 5.5 ಮಿಲಿಯನ್ ಸ್ಕ್ವೇರ್ ಕಿಲೋಮೀಟರ್‌ನಷ್ಟು ಅರಣ್ಯ ಪ್ರದೇಶವನ್ನ ಅಮೆಜಾನ್ ಹೊಂದಿದೆ. ಎಕರೆ ಲೆಕ್ಕದಲ್ಲಿ ಹೇಳುವದಾದರೆ ಸುಮಾರು 130 ಕೋಟಿ ಎಕರೆಗೂ ಹೆಚ್ಚಿನ ಪ್ರದೇಶ. ಇಷ್ಟು ಪ್ರಮಾಣದ ಕಾಡಿನಲ್ಲಿ ಬಹುಪಾಲು ಅರಣ್ಯ ಹರಡಿರುವುದು ಬ್ರೆಜಿಲ್‌ನಲ್ಲಿ. ಎಡಬಿಡದೆ ಸುರಿಯುವ ಮಳೆ, ಸದಾ ತುಂಬಿ ಹರಿಯುವ ಅಮೆಜಾನ್ ನದಿಯ ಸುತ್ತಮುತ್ತಲೂ ದಟ್ಟವಾದ ಮರ-ಗಿಡ ಬೆಳೆದು ನಿಂತಿವೆ. ಜೌಗು ಪ್ರದೇಶವಾಗಿರುವ ಈ ಕಾಡು ಊಹೆಗೆ ನಿಲುಕದಷ್ಟು ಅರಣ್ಯ ಸಂಪತ್ತು ಹೊಂದಿದೆ. ಅಧ್ಯಯನವೊಂದರ ಪ್ರಕಾರ ಅಮೆಜಾನ್‌ನ 1 ಹೆಕ್ಟೇರ್ ಪ್ರದೇಶದಲ್ಲಿ 750 ಜಾತಿಯ ಮರಗಳು ಹಾಗೂ 1500ಕ್ಕೂ ಹೆಚ್ಚು ಜಾತಿಯ ಗಿಡಗಳನ್ನ ಕಾಣಬಹುದು. 1 ಹೆಕ್ಟೆರ್ ಅಂದರೆ ಸುಮಾರು 2.47 ಎಕರೆ ಪ್ರದೇಶದಲ್ಲೇ ಇಷ್ಟೊಂದು ಅರಣ್ಯ ಸಂಪತ್ತು ಅಡಗಿದೆ ಎಂದರೆ, 5.5 ಮಿಲಿಯನ್ ಸ್ಕ್ವೇರ್ ಕಿಲೋಮೀಟರ್‌ ಜಾಗದಲ್ಲಿ ಇನ್ನೆಂತಹ ಸಂಪತ್ತು ಇರಬೇಡ ಊಹಿಸಿ.

ಕಾಡುಗಳ್ಳರಿಗೆ ಸ್ವರ್ಗ..!

ಕಾಡುಗಳ್ಳರಿಗೆ ಸ್ವರ್ಗ..!

ಅಮೆಜಾನ್‌ನಲ್ಲಿ ಅದರಲ್ಲೂ ಬ್ರೆಜಿಲ್‌ನಲ್ಲಿ ಹರಡಿರುವ ಅಮೆಜಾನ್ ಅರಣ್ಯದಲ್ಲಿ ಅಡಗಿರುವ ಸಂಪತ್ತಿನ ಮೇಲೆ ಸ್ಮಗ್ಲರ್ಸ್ ಹಾಗೂ ಕಾಡುಗಳ್ಳರು ಕಣ್ಣಿಟ್ಟಿದ್ದಾರೆ. ಒಂದ್ಕಡೆ ಕೃಷಿಕರು ಕಾಡು ಕಡಿದು ವ್ಯವಸಾಯ ಮಾಡಿದರೆ, ಸ್ಮಗ್ಲರ್‌ಗಳು ಇದೇ ಕಾಡಲ್ಲಿ ಗಾಂಜಾ, ಕೊಕೇನ್‌ ರೀತಿ ಮಾದಕ ವಸ್ತುಗಳನ್ನ ಬೆಳೆಯುತ್ತಿದ್ದಾರೆ. ಇಲ್ಲಿ ಸಿಗುವ ಅಪಾರ ಪ್ರಮಾಣದ ಸಂಪತ್ತು ದೋಚುತ್ತಿದ್ದಾರೆ. ಇಷ್ಟೇ ಅಲ್ಲ ಅಮೆಜಾನ್‌ನಲ್ಲಿ ಬಹುಪಾಲು ಗಣಿಗಾರಿಕೆಗಳು ಸ್ಮಗ್ಲರ್ಸ್ ಹಿಡಿತದಲ್ಲೇ ಇವೆ. ಕಳ್ಳದಾರಿ ಮೂಲಕ ಇಲ್ಲಿ ದೋಚಿದ ಅರಣ್ಯ ಸಂಪತ್ತನ್ನು ಕಾಡುಗಳ್ಳರು ನೆರೆಯ ಅಮೆರಿಕ ಸೇರಿದಂತೆ ದೂರದ ಯೂರೋಪ್‌ಗೂ ಕದ್ದು ಸಾಗಿಸುತ್ತಿದ್ದಾರೆ. ಹೀಗಾಗಿ ಅಮೆಜಾನ್ ಪಾತ್ರದಲ್ಲಿ ಕತ್ತಲಾದರೆ ಸಾಕು ಜೆಸಿಬಿ, ಗರಗಸ, ಟ್ರಕ್‌ಗಳ ಆರ್ಭಟ ಜೋರಾಗಿರುತ್ತೆ. ಬ್ರೆಜಿಲ್‌ನ ಸ್ಥಳೀಯ ಆಡಳಿತಗಳು ಸ್ಮಗ್ಲರ್ಸ್ ಬೆನ್ನಿಗೇ ನಿಂತಿವೆ. ಅಧಿಕಾರಿಗಳ ಕಥೆ ಕೇಳೋದೆ ಬೇಡ, ಅಷ್ಟರಮಟ್ಟಿಗೆ ಕಾಡುಗಳ್ಳರ ಹಾವಳಿ ಇದೆ. ಪೆರು, ಕೊಲಂಬಿಯಾ, ಬೊಲಿವಿಯಾ ಹಾಗೂ ವೆನಿಜುವೆಲಾ ದೇಶಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ.

ಲಾಭಕ್ಕಾಗಿ ಬಂಡವಾಳಿಗರ ಫೈಟಿಂಗ್..!

ಲಾಭಕ್ಕಾಗಿ ಬಂಡವಾಳಿಗರ ಫೈಟಿಂಗ್..!

ಅರಣ್ಯ ಸಂಪತ್ತು ಇರುವ ಕಡೆ ಕೈಗಾರಿಕೆಗೆ ಬೇಕಾದ ಕಚ್ಚಾವಸ್ತುಗಳು ಸುಲಭವಾಗಿ ಸಿಗುತ್ತವೆ. ಇದೇ ಕಾರಣಕ್ಕೆ ಅಮೆಜಾನ್ ನಾಡು ಬ್ರೆಜಿಲ್‌ನಲ್ಲಿ ಹೂಡಿಕೆ ಮಾಡಲು ಜಗತ್ತಿನ ದೊಡ್ಡ ದೊಡ್ಡ ಉದ್ಯಮಿಗಳು ತುದಿಗಾಲಲ್ಲಿ ನಿಂತಿರುತ್ತಾರೆ. ಈಗಾಗಲೇ ಲಕ್ಷಾಂತರ ಕೋಟಿ ಬಂಡವಾಳ ಇದೇ ಕಾಡನ್ನು ನಂಬಿ ಹರಿದುಬಂದಿದೆ. ಬ್ರೆಜಿಲ್ ಸದ್ಯದ ಮಟ್ಟಿಗೆ ಬಂಡವಾಳಿಗರ ಸ್ವರ್ಗ ಕೂಡ. ಇನ್ನು ಇಲ್ಲಿ ಅಡಗಿರುವ ಅಪಾರ ಗಣಿ ಸಂಪತ್ತು ದೋಚುವ ಹುನ್ನಾರ ಶ್ರೀಮಂತ ರಾಷ್ಟ್ರಗಳದ್ದು. ಹೀಗಾಗಿಯೇ ಅಮೆಜಾನ್‌ನಲ್ಲಿ ಗಣಿಗಾರಿಕೆಗೆ ವಿಶ್ವದ ಬಲಿಷ್ಠ ರಾಷ್ಟ್ರಗಳು ಅತ್ಯುತ್ಸಾಹ ತೋರುತ್ತಿವೆ. ಇದರ ಪರಿಣಾಮವೇ ದಟ್ಟ ಅರಣ್ಯ ನಾಶವಾಗಿ, ಬೆಂಗಾಡು ರೂಪುಗೊಳ್ಳುತ್ತಿದೆ. ಇಲ್ಲಿ ಪ್ರಮುಖವಾಗಿ ಟಿಂಬರ್ ಉದ್ಯಮ, ಫಾರ್ಮಸಿ, ಗಣಿಗಾರಿಕೆಗಳ ಮೇಲೆ ಉದ್ಯಮಿಗಳು ಕಣ್ಣು ನೆಟ್ಟಿದ್ದಾರೆ. ಅಲ್ಲದೆ ಅಪಾರ ಪ್ರಮಾಣದ ಔಷಧಿ ಸಸ್ಯಗಳನ್ನು ಕೂಡ ದೋಚುತ್ತಿದ್ದಾರೆ.

ಮೂಲ ನಿವಾಸಿಗಳ ಜೀವಕ್ಕೆ ಕುತ್ತು

ಮೂಲ ನಿವಾಸಿಗಳ ಜೀವಕ್ಕೆ ಕುತ್ತು

ಅಮೆಜಾನ್ ಅರಣ್ಯ ಸಸ್ಯ ಸಂಕುಲ ಹಾಗೂ ಪ್ರಾಣಿಗಳಿಗೆ ಮಾತ್ರ ಜಾಗ ನೀಡಿಲ್ಲ. ಇಲ್ಲಿ ಸಾವಿರಾರು ಕಾಡು ಜನಾಂಗಗಳು ವಾಸ ಇವೆ. ಇವರೆಲ್ಲಾ ಇಲ್ಲಿನ ಮೂಲ ನಿವಾಸಿಗಳು. ಆದರೆ ಆಧುನಿಕ ಜಗತ್ತಿನಲ್ಲಿ ಇವರಿಗೂ ಇಲ್ಲಿ ಸ್ಥಾನವೇ ಇಲ್ಲದಂತಾಗಿದೆ. ಸ್ಮಗ್ಲರ್ಸ್ ಹಾಗೂ ಕಾಡುಗಳ್ಳರ ಕೈಯಲ್ಲಿ ಸಿಲುಕಿ ಸಾವಿರಾರು ಕಾಡು ಜನರು ಪ್ರಾಣಬಿಟ್ಟಿದ್ದಾರೆ. ಹಲವರು ಕಾಡನ್ನೇ ತೊರೆದು ನಾಡು ಸೇರಿದ್ದಾರೆ. ಇನ್ನೂ ಆಧುನಿಕ ಜಗತ್ತಿನ ಜೊತೆಗೆ ಸಂಪರ್ಕವನ್ನೇ ಹೊಂದದ ಕೆಲವು ಜನಾಂಗಗಳು ಅಲ್ಲೇ ನರಳಿ ನರಳಿ ಪ್ರಾಣಬಿಡುವ ಸ್ಥಿತಿ ಇದೆ. ಆದರೆ ಇದ್ಯಾವುದೂ ಬ್ರೆಜಿಲ್ ಸರ್ಕಾರಕ್ಕೆ ಕಾಣುತ್ತಿಲ್ಲ. ಇದೇ ರೀತಿ ಅಮೆಜಾನ್ ಹರಡಿರುವ ಪೆರು, ಕೊಲಂಬಿಯಾ, ಬೊಲಿವಿಯಾ, ವೆನಿಜುವೆಲಾ ದೇಶಗಳಲ್ಲೂ ಮುಗ್ಧ ಕಾಡುಜನರ ಮಾರಣಹೋಮ ನಡೆಯುತ್ತಿದೆ.

ಒಂದೇ ವರ್ಷದಲ್ಲಿ 22 ಲಕ್ಷ ಎಕರೆ ಕಾಡು ಭಸ್ಮ

ಒಂದೇ ವರ್ಷದಲ್ಲಿ 22 ಲಕ್ಷ ಎಕರೆ ಕಾಡು ಭಸ್ಮ

ಇಲ್ಲಿ ಕೃಷಿ ಮಾಡುವ ನೆಪದಲ್ಲಿ ಕಾಡಿನ ಮೇಲೆ ಎಂತಹ ದೌರ್ಜನ್ಯ ನಡೆಯುತ್ತಿದೆ ಎಂದರೆ, 2019ರಲ್ಲಿ ಅಮೆಜಾನ್ ಕಾಡಿನಲ್ಲಿ ಬೆಂಕಿ ಹೊತ್ತಿತ್ತು. ಒಂದೆರಡು ಭಾಗದಲ್ಲಿ ಹಬ್ಬಿದ್ದ ಬೆಂಕಿಯನ್ನು ನಂದಿಸಲು ಬ್ರೆಜಿಲ್, ಬೊಲಿವಿಯಾ, ಪೆರು, ಕೊಲಂಬಿಯಾ ಸರ್ಕಾರಗಳು ಸರ್ಕಸ್ ಮಾಡುತ್ತಿದ್ದವು. ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಮಾಫಿಯಾ ಡಾನ್‌ಗಳು, ಒಣಗಿ ನಿಂತಿದ್ದ ಅಮೆಜಾನ್‌ನ ಹಲವು ಭಾಗಗಳಿಗೆ ಬೆಂಕಿ ಇಟ್ಟಿದ್ದರು. ಪರಿಣಾಮ ಅಮೆಜಾನ್ ಅರಣ್ಯದಲ್ಲಿ ಸುಮಾರು 40 ಸಾವಿರ ಕಡೆ ಬೆಂಕಿ ಕಾಣಿಸಿಕೊಂಡಿತ್ತು. ಈ ಕೃತ್ಯಕ್ಕೆ ಬಲಿಯಾಗಿದ್ದು 22 ಲಕ್ಷ ಎಕರೆಯಷ್ಟು ಅರಣ್ಯ ಪ್ರದೇಶ. ಇಷ್ಟು ಕಾಡು ಭಸ್ಮವಾಗುವುದರ ಜೊತೆಗೆ ಲಕ್ಷಾಂತರ ಪ್ರಾಣಿಗಳು ಹಾಗೂ ಕಾಡು ಜನರು ಕೂಡ ಅಗ್ನಿಗೆ ಆಹುತಿಯಾಗಿದ್ದರು.

40 ವರ್ಷದಲ್ಲಿ ಕಾಡು ಫಿನಿಷ್..?

40 ವರ್ಷದಲ್ಲಿ ಕಾಡು ಫಿನಿಷ್..?

ಒಟ್ನಲ್ಲಿ ಅಮೆಜಾನ್ ನಾಶವಾಗಿ ಹೋಗುತ್ತಿದೆ. ಇಡೀ ಭೂಮಿಗೆ ಶೇಕಡ 20ರಷ್ಟು ಆಕ್ಸಿಜೆನ್ ನೀಡುವ, ಸದಾ ಹಸಿರಾಗಿರುವ ನಿತ್ಯಹರಿದ್ವರ್ಣ ಕಾಡು ಅವಸಾನದತ್ತ ಸಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಇನ್ನು 40 ವರ್ಷಗಳಲ್ಲಿ ಅಮೆಜಾನ್ ಕಾಡು ಸಂಪೂರ್ಣ ನಾಶವಾಗಲಿದೆ ಅಂತಾ ತಜ್ಞರು ಹೇಳುತ್ತಿದ್ದಾರೆ. ಜಾಗತಿಕವಾಗಿ ಬ್ರೆಜಿಲ್ ಮೇಲೆ ಒತ್ತಡಗಳು ಇದ್ದರೂ, ಅಮೆಜಾನ್ ಕಾಡಿನ ರಕ್ಷಣೆಗೆ ಅಮೆಜಾನ್ ಸರ್ಕಾರ ಕಠಿಣ ಕ್ರಮಗಳನ್ನ ಕೈಗೊಳ್ಳುತ್ತಿಲ್ಲ. ಹೀಗಾಗಿ ಲಕ್ಷಾಂತರ ವರ್ಷಗಳಿಂದ ಭೂಮಿಯ ಮೇಲಿರುವ ಅಪರೂಪದ ಕಾಡು ಇನ್ನೇನು ಕೆಲವೇ ವರ್ಷಗಳಲ್ಲಿ ಮರೆಯಾಗುವುದರಲ್ಲಿಅನುಮಾನವಿಲ್ಲ.

English summary
Scientists have issued another warning about new viruses. Scientists Said that effects of the Amazon wildfire, glob can face more pandemic situation in future.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X