ಸಲಿಂಗಿಗಳ ಮದುವೆಗೆ ಅಸ್ತು ಎಂದ ಸುಪ್ರೀಂಕೋರ್ಟ್
ವಾಷಿಂಗ್ಟನ್, ಜೂ. 27 : ಅಮೆರಿಕದಲ್ಲಿ ಸಲಿಂಗಿಗಳು ತಮ್ಮ-ತಮ್ಮ ನಡುವೆ ವಿವಾಹವಾಗುವ ಎಲ್ಲ ಹಕ್ಕುಗಳನ್ನು ಹೊಂದಿದ್ದಾರೆ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಇದರಿಂದಾಗಿ ಹಲವಾರು ವರ್ಷಗಳಿಂದ ನಡೆಯುತ್ತಿದ್ದ ಸಲಿಂಗಿಗಳ ಹೋರಾಟಕ್ಕೆ ಜಯ ಸಿಕ್ಕಿದೆ.
ಅಮೆರಿಕ ಸುಪ್ರೀಂಕೋರ್ಟ್ ತೀರ್ಪಿನಿಂದಾಗಿ ಸುಮಾರು 2 ದಶಕಗಳಿಂದ ನಡೆಯುತ್ತಿದ್ದ ಕಾನೂನು ಹೋರಾಟಕ್ಕೆ ತೆರೆ ಬಿದ್ದಂತಾಗಿದೆ. ನ್ಯಾಯಾಲಯದ ಈ ತೀರ್ಪಿನ ಮರುಪರಿಶೀಲನೆಗೆ ಮೂರು ವಾರಗಳ ಕಾಲಾವಕಾಶವಿದ್ದು, ನಂತರ ತೀರ್ಪು ಅಧಿಕೃತವಾಗಿ ಜಾರಿಗೆ ಬರಲಿದೆ. [ಸಲಿಂಗಿ ಅಯ್ಯರ್ ಮದ್ವೆಗೆ ಗಂಡು ಬೇಕಿದೆ]
ಅಮೆರಿಕದ 36 ರಾಜ್ಯಗಳಲ್ಲಿ ಸಲಿಂಗ ಅವಕಾಶ ನೀಡಲಾಗಿತ್ತು. ಉಳಿದ 14 ರಾಜ್ಯಗಳಲ್ಲಿ ನಿಷೇಧ ಹೇರಲಾಗಿತ್ತು. ಆದರೆ, ಶುಕ್ರವಾರ ಕೋರ್ಟ್ ನೀಡಿರುವ ತೀರ್ಪಿನಿಂದಾಗಿ ಉಳಿದ ರಾಜ್ಯಗಳ ನಿಷೇಧಗಳೂ ತೆರವಾಗಲಿವೆ. ಇನ್ನು ಮುಂದೆ ಸಲಿಂಗ ವಿವಾಹಕ್ಕೆ ಕಾನೂನು ಮುದ್ರೆ ಬೀಳಲಿದೆ. [ಸಲಿಂಗಕಾಮಿ ಗಂಡನ ಕಿರುಕುಳ, ವೈದ್ಯೆ ಆತ್ಮಹತ್ಯೆ]
ಅಮೆರಿಕದಲ್ಲಿ ಅಂದಾಜು 3,90,000 ಮಂದಿ ಸಲಿಂಗ ವಿವಾಹವಾಗಿದ್ದಾರೆ ಎಂದು ವರದಿಗಳಿವೆ. ಇನ್ನೂ 70,000 ಮಂದಿ ವಿವಾಹದ ಇಚ್ಛೆಯಿದ್ದರೂ ನಿಷೇಧವಿದ್ದ ಕಾರಣ ಅವಕಾಶಕ್ಕಾಗಿ ಕಾದು ಕುಳಿತಿದ್ದರು. ವಿವಾಹವನ್ನು ಕಾನೂನು ಬದ್ಧಗೊಳಿಸುವಂತೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.
ಸುಪ್ರೀಂಕೋರ್ಟ್ ತೀರ್ಪು ಪ್ರಕಟಗೊಂಡ ತಕ್ಷಣ ನ್ಯಾಯಾಲಯದ ಹೊರಗೆ ಸೇರಿದ್ದ ಬೆಂಬಲಿಗರು ಸಂಭ್ರಮಾಚರಣೆ ನಡೆಸಿದರು. ತಮ್ಮ ಹೋರಾಟಕ್ಕೆ ಜಯ ಸಿಕ್ಕಿತು ಎಂದು ಸಂತಸ ವ್ಯಕ್ತಪಡಿಸಿದರು. [ಪಿಟಿಐ ಚಿತ್ರ]