ಇಮ್ರಾನ್ ಖಾನ್ 10 ತಿಂಗಳ ದಾಂಪತ್ಯಕ್ಕೆ ಬ್ರೇಕ್
ಇಸ್ಲಾಮಾಬಾದ್, ಅ.30: ಪಾಕಿಸ್ತಾನದ ಪ್ರಮುಖ ವಿರೋಧ ಪಕ್ಷ ತೆಹ್ರಿಕ್-ಇ-ಇನ್ಸಾಫ್ ಪಕ್ಷದ ಮುಖ್ಯಸ್ಥ ಇಮ್ರಾನ್ ಹಾಗೂ ಪಾಕಿಸ್ತಾನದ ಟಿವಿ ನಿರೂಪಕಿ ರೇಹಾಮ್ ಖಾನ್ ಅವರ 10 ತಿಂಗಳ ದಾಂಪತ್ಯ ಮುರಿದು ಬಿದ್ದಿದೆ.
63 ವರ್ಷದ ಪಾಕಿಸ್ತಾನದ ಮಾಜಿ ಕ್ರಿಕೆಟ್ ನಾಯಕ ಮತ್ತು ಹಾಲಿ ವಿರೋಧ ಪಕ್ಷದ ನಾಯಕ ಇಮ್ರಾನ್ ಖಾನ್ ಅವರ ಮದುವೆ ಮುರಿದ ಸುದ್ದಿ ಕಳೆದ 6 ತಿಂಗಳಿನಿಂದ ಓಡಾಡುತ್ತಿತ್ತು. ಈಗ ಸುದ್ದಿ ನಿಜವಾಗಿದೆ ಎಂದು ಡಾನ್ ವರದಿ ಮಾಡಿದೆ.[ಇಮ್ರಾನ್ ಖಾನ್ಗೆ ಮತ್ತೆ ಶಾದಿಭಾಗ್ಯ]
ಕಳೆದ ಕೆಲ ತಿಂಗಳ ಹಿಂದೆ ಈ ಬಗ್ಗೆ ಸುದ್ದಿ ಹರಡಿದ್ದಾಗ, ಟ್ವೀಟ್ ಮಾಡಿ ಮಾಧ್ಯಮಗಳನ್ನು ಇಮ್ರಾನ್ ಖಾನ್ ತರಾಟೆಗೆ ತೆಗೆದುಕೊಂಡಿದ್ದರು. ಅದರೆ, ಈಗ ಯಾವ ಕಾರಣಕ್ಕೆ ಇಬ್ಬರು ಬೇರೆಯಾಗುತ್ತಿದ್ದಾರೆ ಎಂಬುದು ಕೂಡಾ ಸೋರಿಕೆಯಾಗಿದೆ.
ಪಿಟಿಐ ಚೇರ್ಮನ್ ಇಮ್ರಾನ್ ಅವರ ಆಪ್ತವರ್ಗದ ಪ್ರಕಾರ, ರೇಹಾಮ್ ಅವರು ರಾಜಕೀಯ ಪ್ರವೇಶಕ್ಕೆ ಮುಂದಾಗಿದ್ದರು. ಅದರೆ, ಇದು ಇಮ್ರಾನ್ ಗೆ ಇಷ್ಟವಿಲ್ಲದ ಕಾರಣ ಇಬ್ಬರ ದಾಂಪತ್ಯ ಮುರಿದು ಬಿದ್ದಿದೆ.
ನವೆಂಬರ್ 1952ರಲ್ಲಿ ಲಾಹೋರ್ ನಲ್ಲಿ ಜನಿಸಿದ ಇಮ್ರಾನ್ ಖಾನ್, ಮೇ 1995ರಲ್ಲಿ ಪ್ಯಾರಿಸ್ ನಲ್ಲಿ ಜೆಮಿನಾ ಗೋಲ್ಡ್ ಸ್ಮಿತ್ ಅವರನ್ನು ಮದುವೆಯಾಗಿದ್ದರು.
ಇಮ್ರಾನ್ ಮತ್ತು ಜೆಮಿನಾ ಅವರಿಗೆ ಸುಲೇಮಾನ್ ಮತ್ತು ಖಾಸಿಂ ಎನ್ನುವ ಇಬ್ಬರು ಮಕ್ಕಳಿದ್ದಾರೆ. ಕೌಟುಂಬಿಕ ಭಿನ್ನಾಭಿಪ್ರಾಯದಿಂದ ಇಮ್ರಾನ್ - ಜೆಮಿನಾ 2009ರಲ್ಲಿ ತಲಾಖ್ ಪಡೆದುಕೊಂಡಿದ್ದರು.
ಮೊದಲ ಮದುವೆಯಿಂದ ಮೂರು ಮಕ್ಕಳ ತಾಯಿಯಾಗಿರುವ ಬ್ರಿಟಿಷ್ ಮೂಲದ ಪತ್ರಕರ್ತೆ ರೇಹಾಮ್ ಅವರು ಈಗ ಲಂಡನ್ನಿಗೆ ತೆರಳಿದ್ದಾರೆ. ತೆರಳುವುದಕ್ಕೂ ಮುನ್ನ ಟ್ವೀಟ್ ಮಾಡಿ ಇಮ್ರಾನ್ ಜೊತೆ ದಾಂಪತ್ಯ ಮುರಿದುಕೊಳ್ಳುತ್ತಿರುವುದಾಗಿ ಘೋಷಿಸಿದ್ದಾರೆ.