ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರ ವಿರುದ್ಧ ಹೋರಾಡಲು ಒಂದಾದ ಶತ್ರುಗಳು! ಪಾಕಿಸ್ತಾನ ಹೇಳಿದ್ದೇನು ಗೊತ್ತಾ?

|
Google Oneindia Kannada News

ಕಾಬೂಲ್, ಮೇ 24: ಅಬ್ಬಬ್ಬಾ ಉಗ್ರ ಪಾಪಿಗಳ ಪಾಲಿನ ಸ್ವರ್ಗ, ಮನುಷ್ಯರ ಪಾಲಿಗೆ ಅಕ್ಷರಶಃ ನರಕವಾಗಿರುವ ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ಸುಧಾರಿಸುವ ಲಕ್ಷಣ ಕಾಣುತ್ತಿಲ್ಲ. ಈಗಾಗಲೇ ಅಮೆರಿಕ ಸೇನೆ ಅಲ್ಲಿಂದ ಹಿಂದಕ್ಕೆ ಸರಿಯುತ್ತಿದೆ. ಈ ಕಾರಣಕ್ಕೆ ಉಗ್ರರು ಮತ್ತೆ ಬಾಲ ಬಿಚ್ಚುತ್ತಿದ್ದು, ಅಫ್ಘಾನಿಸ್ತಾನ ಇನ್ನೊಮ್ಮೆ ಉಗ್ರರ ಕೈಯಲ್ಲಿ ಸಿಲುಕಿ ನಲುಗುವ ಸಾಧ್ಯತೆ ದಟ್ಟವಾಗಿದೆ.

ಆದರೆ ಈ ಹೊತ್ತಲ್ಲೇ ತನ್ನ ಆಜನ್ಮವೈರಿ ಅಫ್ಘಾನಿಸ್ತಾನದ ಪರ ಕಾಳಜಿ ತೋರಿಸಿರುವ ಪಾಕಿಸ್ತಾನ, ತನ್ನ ನೆರೆ ರಾಷ್ಟ್ರ ಅಫ್ಘಾನಿಸ್ತಾನದಲ್ಲಿ ಉಗ್ರರನ್ನ ತೊಲಗಿಸಿ ಶಾಂತಿ ನೆಲೆಸುವಂತೆ ಮಾಡಲು ಅಳಿಲು ಸೇವೆ ಸಲ್ಲಿಸುತ್ತಿದೆ. ಅಫ್ಘಾನಿಸ್ತಾನದಲ್ಲಿ ಉಗ್ರರ ವಿರುದ್ಧ ಹೋರಾಡುತ್ತಿರುವ ಅಮೆರಿಕ ಸೇನೆಗೆ ತನ್ನ ಗಡಿಯಲ್ಲಿ ವಿಮಾನ ಹಾರಾಟ ಹೆಚ್ಚಿಸಲು ಪಾಕ್ ಅನುಮತಿ ನೀಡಿದೆ.

ಈ ಮೂಲಕ ಉಗ್ರರ ವಿರುದ್ಧ ಹೋರಾಟದಲ್ಲಿ ತನ್ನ ಬಹುಕಾಲದ ವೈರಿ ಅಫ್ಘಾನಿಸ್ತಾನಕ್ಕೆ ಸಾಥ್ ನೀಡಿದೆ. ಅಮೆರಿಕದ ಸೇನೆಯ ಹಿರಿಯ ಅಧಿಕಾರಿಯೊಬ್ಬರು ಈ ಮಾಹಿತಿ ಸ್ಪಷ್ಟಪಡಿಸಿದ್ದಾರೆ. ‌ಯುದ್ಧದಿಂದ ಕಂಗೆಟ್ಟಿರುವ ನೆರೆ ರಾಷ್ಟ್ರದಲ್ಲಿ ಶಾಂತಿ ನೆಲೆಸುವಂತೆ ಮಾಡೋಕೆ ಪಾಕಿಸ್ತಾನ ಮಹತ್ವದ ಪಾತ್ರ ವಹಿಸುತ್ತಿದೆ ಎಂದಿದ್ದಾರೆ ಅಮೆರಿಕದ ಅಧಿಕಾರಿ.

ಹಾವು-ಮುಂಗಸಿಯಂತೆ ಕಾದಾಟ..!

ಹಾವು-ಮುಂಗಸಿಯಂತೆ ಕಾದಾಟ..!

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಥೇಟ್ ಹಾವು-ಮುಂಗಸಿಯಂತೆ ಕಾದಾಡುತ್ತಾ ಬಂದಿದ್ದವು. ಆದರೆ ಇಂಥ ಮನಸ್ಥಿತಿ ಬದಲಾಗುತ್ತಿದ್ದು, ಅಫ್ಘಾನಿಸ್ತಾನದ ಶಾಂತಿಗೆ ಪಾಕಿಸ್ತಾನ ಅಳಿಲು ಸೇವೆ ಸಲ್ಲಿಸುತ್ತಿದೆ. ಈವರೆಗೂ ಗಡಿ ವಿಚಾರಕ್ಕೆ ಹಾಗೂ ಉಗ್ರರ ವಿಚಾರಕ್ಕೆ ಎರಡೂ ರಾಷ್ಟ್ರಗಳು ಕಿತ್ತಾಡಿದ್ದವು. ಆದರೆ ಈಗ ಪರಿಸ್ಥಿತಿ ಬದಲಾಗಿದ್ದು, ಸ್ನೇಹ ಮೂಡಿದೆ. ಮುಂದೆ ಈ ಸ್ನೇಹ ಬಲಗೊಳ್ಳಬೇಕು, ಉಗ್ರರ ವಿರುದ್ಧದ ಹೋರಾಟದಲ್ಲಿ ಅಫ್ಘಾನಿಸ್ತಾನಕ್ಕೆ ಪಾಕಿಸ್ತಾನ ಇದೇ ರೀತಿ ಬೆಂಬಲ ಕೊಡಬೇಕು ಎನ್ನುತ್ತಿದ್ದಾರೆ ಅಮೆರಿಕದ ಅಧಿಕಾರಿಗಳು.

ಅಮೆರಿಕ ಸೇನೆ ವಾಪಸ್

ಅಮೆರಿಕ ಸೇನೆ ವಾಪಸ್

ಒಂದು ಕಾಲದಲ್ಲಿ ನೆಮ್ಮದಿಯಾಗಿದ್ದ ಅಫ್ಘಾನಿಸ್ತಾನದಲ್ಲಿ ಅಶಾಂತಿ ಸೃಷ್ಟಿಸಿ, ಬಳಿಕ ಅದೇ ದೇಶವನ್ನು ಕಾಯುವ ನೆಪ ಹಾಕಿಕೊಂಡು ಬಂದವರು ಹಲವರು. ಅಮೆರಿಕ ಮೇಲೂ ಇಂಥ ಗಂಭೀರ ಆರೋಪ ಇದೆ. ಅಮೆರಿಕ ಅಫ್ಘಾನ್‌ನಲ್ಲಿ ಶಾಂತಿ ಕಾಪಾಡುತ್ತೇವೆ ಅನ್ನುತ್ತಾ ಹಲವು ದಶಕಗಳ ಕಾಲ ಬಿಡಾರವನ್ನು ಹೂಡಿತ್ತು. ಆದರೆ ಈಗ ಅಫ್ಘಾನಿಸ್ತಾನ ಸಹವಾಸ ಸಾಕಾಗಿ ಹೋಗಿದೆ, ಈ ಕಾರಣಕ್ಕೆ ಅಮೆರಿಕ ಪಡೆಗಳು ಅಫ್ಘಾನಿಸ್ತಾನ ತೊರೆಯುತ್ತಿವೆ. ಮೇ 1 ರಿಂದಲೇ ಅಮೆರಿಕದ ಮಿಲಿಟರಿ ಗಂಟುಮೂಟೆ ಕಟ್ಟುತ್ತಿದೆ. ಈ ಬೆನ್ನಲ್ಲೇ ತಾಲಿಬಾನಿ ಉಗ್ರರು ಮತ್ತಷ್ಟು ಪಾಪ ಕೃತ್ಯದಲ್ಲಿ ತೊಡಗಿದ್ದಾರೆ.

ಅಫ್ಘಾನ್‌ ಜನರಿಗೆ ನೆಮ್ಮದಿಯೇ ಇಲ್ಲ

ಅಫ್ಘಾನ್‌ ಜನರಿಗೆ ನೆಮ್ಮದಿಯೇ ಇಲ್ಲ

ಬ್ರಿಟಿಷರಿಂದ ಅಫ್ಘಾನ್‌ 1919ರಲ್ಲೇ ಸ್ವಾತಂತ್ರ್ಯ ಪಡೆದಿದೆ. ಇದು ಭಾರತಕ್ಕಿಂತ ಮೊದಲಾದರೂ ಅಲ್ಲಿ ಶಾಂತಿ ನೆಲೆಸಿಲ್ಲ. ಸದ್ಯಕ್ಕೆ ಅಫ್ಘಾನ್‌ ಸ್ಥಿತಿ ಹೇಗಿದೆ ಎಂದರೆ, ಧೈರ್ಯವಾಗಿ ಹೊರಗೆ ಹೋಗಲೂ ಸಾಧ್ಯವಿಲ್ಲ. ಯಾವ ಕ್ಷಣದಲ್ಲಿ ಉಗ್ರಪಡೆ ಗುಂಡಿನ ಮಳೆಗರೆಯುತ್ತೋ, ಬಾಂಬ್ ಹಾಕುತ್ತೋ ಎಂಬ ಭಯ. ಅಫ್ಘಾನ್‌ನಲ್ಲಿ ದಿನಕ್ಕೆ ಒಂದಾದರೂ ಹಿಂಸೆ ನಡೆಸದಿದ್ದರೆ ತಾಲಿಬಾನ್ ಉಗ್ರರಿಗೆ ನಿದ್ದೆ ಬರೋದಿಲ್ಲ. ಈಗಾಗಲೇ ಲಕ್ಷಾಂತರ ಜನ ರಕ್ತ ಪಿಪಾಸುಗಳ ದಾಳಿಗೆ ಬಲಿಯಾಗಿದ್ದಾರೆ. ತಾಲಿಬಾನಿಗಳ ಉಪಟಳಕ್ಕೆ ಬ್ರೇಕ್ ಹಾಕಲು ಅಶ್ರಫ್ ಘನಿ ಸರ್ಕಾರ ಪರದಾಡುತ್ತಿದೆ. ಕಂಡ ಕಂಡಲ್ಲಿ ಪಟಾಕಿಗಳಂತೆ ಉಗ್ರರು ಬಾಂಬ್ ಉಡಾಯಿಸುತ್ತಿದ್ದಾರೆ.

ಹೊಟ್ಟೆಗೆ ಅನ್ನವಿಲ್ಲ, ಮಕ್ಕಳಿಗೆ ವಿದ್ಯಾಭ್ಯಾಸವಿಲ್ಲ

ಹೊಟ್ಟೆಗೆ ಅನ್ನವಿಲ್ಲ, ಮಕ್ಕಳಿಗೆ ವಿದ್ಯಾಭ್ಯಾಸವಿಲ್ಲ

ಅಫ್ಘಾನಿಸ್ತಾನದ ಜನರು ಅದೇನು ಪಾಪ ಮಾಡಿದ್ದಾರೋ ಗೊತ್ತಿಲ್ಲ, ಅಲ್ಲಿ ಬದುಕಬೇಕು ಎಂದರೆ ನರಕದರ್ಶನ ಗ್ಯಾರಂಟಿ. ಹೆಜ್ಜೆ ಹೆಜ್ಜೆಗೂ ಆವರಿಸುವ ಭಯ. ಯಾವ ಸಮಯದಲ್ಲಿ ಏನಾಗುತ್ತೋ ಎಂಬ ಆತಂಕ. ನೆಮ್ಮದಿ, ಶಾಂತಿ ಎಂಬುದೇ ಅಫ್ಘಾನಿಸ್ತಾನದ ಜನರಿಗೆ ಮರೆತು ಹೋದಂತಿದೆ. ಇನ್ನು ಅಲ್ಲಿನ ಆರ್ಥಿಕ ಸ್ಥಿತಿ ಕೂಡ ತೀರಾ ಹದಗೆಟ್ಟು ಹೋಗಿದ್ದು, ಹೊಟ್ಟೆಗೆ ಅನ್ನವಿಲ್ಲದೆ ಕೋಟ್ಯಂತರ ಮಂದಿ ನರಳುತ್ತಿದ್ದಾರೆ. ಮಕ್ಕಳಿಗೆ ವಿದ್ಯಾಭ್ಯಾಸವೂ ಸಿಗದ ಪರಿಸ್ಥಿತಿ ಅಫ್ಘಾನಿಸ್ತಾನದಲ್ಲಿ ನಿರ್ಮಾಣವಾಗಿದೆ. ಹೀಗೆ ಅಫ್ಘಾನಿಸ್ತಾನದ ಪರಿಸ್ಥಿತಿ ಸುಧಾರಣೆ ನೆಪ ಮಾಡಿ ಬಂದು ಸೇರಿಕೊಂಡ ಯಾವುದೇ ದೇಶ ಕೂಡ ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸುವಂತೆ ಮಾಡುವಲ್ಲ ಸಕ್ಸಸ್ ಆಗಿಲ್ಲ. ಅದು ಬಿಡಿ ಪ್ರಾಮಾಣಿಕ ಪ್ರಯತ್ನಗಳನ್ನೂ ನಡೆಸುತ್ತಿಲ್ಲ ಎಂಬ ಆರೋಪವಿದೆ.

ಟ್ರಂಪ್ ಸಂಧಾನವೂ ವಿಫಲವಾಗಿತ್ತು..!

ಟ್ರಂಪ್ ಸಂಧಾನವೂ ವಿಫಲವಾಗಿತ್ತು..!

ತಾಲಿಬಾನಿ ನಾಯಕರ ಜೊತೆ ಹಿಂದೆ ಅಮೆರಿಕ ಅಧ್ಯಕ್ಷ ಟ್ರಂಪ್ ಚರ್ಚೆ ನಡೆಸಲು ಮುಂದಾಗಿದ್ದರು. ಅಲ್ಲದೆ ತಾಲಿಬಾನಿಗಳು ಒಳ್ಳೆಯವರು ಎಂದು ಟ್ರಂಪ್ ಹೇಳಿದ್ದರು. ಆದರೆ ಅಫ್ಘಾನ್‌ ಸರ್ಕಾರದ ಮಧ್ಯಸ್ಥಿಕೆ ಇಲ್ಲದೆ ನೇರವಾಗಿ ಉಗ್ರರ ಜೊತೆ ಮಾತುಕತೆ ನಡೆಸಿದ್ದಕ್ಕೆ ಅಮೆರಿಕದ ವಿರುದ್ಧ ಅಶ್ರಫ್ ಘನಿ ಸರ್ಕಾರ ಆಕ್ರೋಶ ವ್ಯಕ್ತಪಡಿಸಿತ್ತು. ಇದೆಲ್ಲಾ ನಡೆದು ಕೆಲವೇ ದಿನಗಳು ಕಳೆಯುವ ಒಳಗಾಗಿ ಅಮೆರಿಕದ ಸೈನಿಕರನ್ನೇ ತಾಲಿಬಾನ್ ಉಗ್ರರು ಕೊಂದು ಹಾಕಿದ್ದರು. ಈ ದಾಳಿ ನಂತರ ಅಮೆರಿಕ ಹಾಗೂ ತಾಲಿಬಾನ್ ನಡುವಿನ ಮಾತುಕತೆಯೇ ಮುರಿದುಬಿದ್ದಿತ್ತು. ಆದರೆ ನಂತರದ ಬೆಳವಣಿಗೆಯಲ್ಲಿ ಸೇನೆ ಹಿಂಪಡೆಯಲು ಅಮೆರಿಕ ಒಪ್ಪಿಗೆ ಸೂಚಿಸಿತ್ತು.

ಪಾರ್ಲಿಮೆಂಟ್ ಮೇಲೆ ದಾಳಿ ನಡೆಸಿದ್ದರು..!

ಪಾರ್ಲಿಮೆಂಟ್ ಮೇಲೆ ದಾಳಿ ನಡೆಸಿದ್ದರು..!

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅದೆಷ್ಟು ಕ್ರೂರವಾಗಿ ವರ್ತಿಸುತ್ತಿದೆ ಎಂದರೆ, ಅಲ್ಲಿನ ಪ್ರಧಾನಿ, ಅಧ್ಯಕ್ಷರು, ಉಪಾಧ್ಯಕ್ಷರಿಗೇ ಸರಿಯಾದ ಭದ್ರತೆ ಸಿಗುತ್ತಿಲ್ಲ. ಕೆಲವು ತಿಂಗಳ ಹಿಂದೆ ತಾಲಿಬಾನ್ ಉಗ್ರರು ಅಫ್ಘಾನಿಸ್ತಾನ ಪಾರ್ಲಿಮೆಂಟ್ ಮೇಲೆ ದಾಳಿಗೆ ಮುಂದಾಗಿದ್ದರು. ಅದೃಷ್ಟವಶಾತ್ ಸೂಸೈಡ್ ಬಾಂಬರ್ ಅಫ್ಘಾನ್ ಸಂಸತ್ ಭವನದಿಂದ ದೂರದಲ್ಲೇ ಬಾಂಬ್ ಬ್ಲಾಸ್ಟ್ ಮಾಡಿದ್ದ. ಇದರಿಂದ ಜನಪ್ರತಿನಿಧಿಗಳ ಜೀವ ಉಳಿದಿತ್ತು. ಆದರೆ ಅಂದಿನ ಸ್ಫೋಟದ ತೀವ್ರತೆಗೆ ಅಫ್ಘಾನಿಸ್ತಾನದ ಪಾರ್ಲಿಮೆಂಟ್ ಕಟ್ಟಡವೇ ನಡುಗಿ ಹೋಗಿತ್ತು. ಗೋಡೆಗಳು ಬಿರುಕುಬಿಡುವಷ್ಟು ತೀವ್ರತೆ ಆ ಸ್ಫೋಟಕ್ಕೆ ಇತ್ತು.

English summary
Pakistan agreed to give permission for more American aircrafts to fly on Pak territory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X