• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚುನಾವಣೆ ಮತ್ತು ದಂಗೆ: 71 ವರ್ಷದಲ್ಲಿ ಬದಲಾಗದ ಪಾಕ್ ರಾಜಕೀಯ ದಾರಿ

|

ಇಸ್ಲಾಮಾಬಾದ್, ಜುಲೈ 25: ಭಾರತದಿಂದ ವಿಭಜನೆಯಾಗಿ ಪಾಕಿಸ್ತಾನ ಸ್ವಾತಂತ್ರ್ಯ ಪಡೆದ ಕಾಲದಿಂದಲೂ ಅಲ್ಲಿ ಪ್ರಜಾಪ್ರಭುತ್ವದ ಆಡಳಿತ ನಡೆದಿರುವುದು ತೀರಾ ಅಲ್ಪ ಅವಧಿ ಮಾತ್ರ.

ಪಾಕಿಸ್ತಾನದ 71 ವರ್ಷದ ಸ್ವಾತಂತ್ರ್ಯಾನಂತರದ ಅವಧಿಯ ಅರ್ಧಕ್ಕೂ ಹೆಚ್ಚು ಅವಧಿಯಲ್ಲಿ ಸೇನೆಯೇ ಆಡಳಿತ ನಡೆಸಿದೆ.

ಪಾಕಿಸ್ತಾನ ಚುನಾವಣೆ: ಹತ್ತು ಪ್ರಮುಖ ಅಂಶಗಳು

ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರಗಳು ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಹೆಣಗಾಡಿದ ನಿದರ್ಶನಗಳು ಹೆಚ್ಚು. ಸರ್ಕಾರಗಳು ಒಂದೋ ಅಧ್ಯಕ್ಷರಿಂದ ವಜಾಗೊಂಡಿವೆ, ಇಲ್ಲವೇ ಸೇನೆಯ ಮುಖ್ಯಸ್ಥರ ದಂಗೆಯಿಂದ ಪತನಗೊಂಡಿವೆ.

ಇದುವರೆಗಿನ ಚುನಾವಣೆಗಳಲ್ಲಿ ಒಂದು ಬಾರಿ ಮಾತ್ರ ನಾಗರಿಕ ಚುನಾಯಿತ ಸರ್ಕಾರ 5 ವರ್ಷದ ಆಡಳಿತ ಪೂರ್ಣಗೊಳಿಸಿದೆ.

ಪಾಕಿಸ್ತಾನದ ಪ್ರಧಾನಿ ಹುದ್ದೆಯಲ್ಲಿರುವ ನಾಯಕರ ಪರಿಚಯ

ಅದಕ್ಕೂ ಮೊದಲು ಪಾಕಿಸ್ತಾನದ ಸೇನಾ ಸರ್ವಾಧಿಕಾರಿ ಜನರಲ್ ಪರ್ವೇಜ್ ಮುಷರಫ್ ದೇಶದ ಅಧ್ಯಕ್ಷ ಹಾಗೂ ಸೇನಾ ಮುಖ್ಯಸ್ಥನಾಗಿ ಐದು ವರ್ಷ ಆಡಳಿತ ನಡೆಸಿದ್ದೇ ದೀರ್ಘಾವಧಿ ಆಳ್ವಿಕೆ ಎನಿಸಿತ್ತು.

ಪಾಕಿಸ್ತಾನದ ರಾಜಕೀಯ ಆಡಳಿತದ ಇದುವರೆಗಿನ ಸಂಕ್ಷಿಪ್ತ ಇತಿಹಾಸ ಇಲ್ಲಿದೆ.

ಪಾಕಿಸ್ತಾನದ ವಿಭಜನೆ, ಸರ್ಕಾರ ರಚನೆ

ಪಾಕಿಸ್ತಾನದ ವಿಭಜನೆ, ಸರ್ಕಾರ ರಚನೆ

1947ರಲ್ಲಿ ಉಪಖಂಡವು ವಿಭಜನೆಯಾಯಿತು. ಮುಸ್ಲಿಂ ಪಾಕಿಸ್ತಾನ ಮತ್ತು ಹಿಂದೂ ಭಾರತ ಎಂದೇ ಅವುಗಳನ್ನು ಪರಿಗಣಿಸಲಾಯಿತು. ಗವರ್ನರ್ ಜನರಲ್ ಮುಹಮ್ಮದ್ ಆಲಿ ಜಿನ್ನಾ ಮತ್ತು ಪ್ರಧಾನಿ ಲಿಯಾಖತ್ ಅಲಿ ಖಾನ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಸಂಸತ್‌ನಂತೆ ಕಾರ್ಯನಿರ್ವಹಿಸಲು ಹಾಗೂ ಸಂವಿಧಾನವನ್ನು ರಚಿಸಲು ಒಂದು ಶಾಸನಸಭೆಯನ್ನು ರಚಿಸಲಾಯಿತು.

ಜಿನ್ನಾ ಸಾವು, ಸಂವಿಧಾನ ಕರಡು

ಜಿನ್ನಾ ಸಾವು, ಸಂವಿಧಾನ ಕರಡು

ದೀರ್ಘಕಾಲದ ಕ್ಷಯರೋಗದಿಂದ ಬಳಲುತ್ತಿದ್ದ ಮುಹಮ್ಮದ್ ಆಲಿ ಜಿನ್ನಾ 1948ರಲ್ಲಿ ಸಾವನ್ನಪ್ಪಿದರು. ಅವರ ಸ್ಥಾನಕ್ಕೆ ಖವಾಜಾ ನಜಿಮುದ್ದೀನ್ ಆಯ್ಕೆಯಾದರು.

1951ರಲ್ಲಿ ಪ್ರಧಾನಿ ಲಿಯಾಖತ್ ಅಲಿ ಖಾನ್ ರಾವಲ್ಪಿಂಡಿಯಲ್ಲಿ ಸಾರ್ವಜನಿಕ ಸಭೆಯ ವೇಳೆ ಗುಂಡಿನ ದಾಳಿಗೆ ಬಲಿಯಾದರು.

1956ರಲ್ಲಿ ಪಾಕಿಸ್ತಾನದ ಮೊದಲ ಸಂವಿಧಾನ ರಚನೆಯಾಯಿತು. ಪಾಕಿಸ್ತಾನವು ಸ್ವತಂತ್ರ ಇಸ್ಲಾಮಿಕ್ ಗಣರಾಜ್ಯವಾಗಿ ಬದಲಾಯಿತು.

ಮತದಾನದ ದಿನ ಪಾಕಿಸ್ತಾನದಲ್ಲಿ ಸ್ಫೋಟ: 22 ಮಂದಿ ಬಲಿ

ಮೊದಲ ಸೇನಾ ದಂಗೆ

ಮೊದಲ ಸೇನಾ ದಂಗೆ

1958ರಲ್ಲಿ ಅಧ್ಯಕ್ಷ ಇಸ್ಕಂದರ್ ಮಿರ್ಜಾ ಸಂವಿಧಾನವನ್ನು ರದ್ದುಗೊಳಿಸಿ ಮೊದಲ ದಂಗೆ ನಡೆಸಿದರು. ಆದರೆ ಕೆಲವೇ ದಿನಗಳಲ್ಲಿ ಸೇನಾ ಮುಖ್ಯಸ್ಥ ಜನರಲ್ ಅಯ್ಯುಬ್ ಖಾನ್ ಮಿರ್ಜಾ ಅವರ ವಿರುದ್ಧ ದಂಗೆ ನಡೆಸಿ ಅವರನ್ನು ಅಧಿಕಾರದಿಂದ ಕೆಳಕ್ಕಿಳಿಸಿದರು. ತಾವೇ ಅಧ್ಯಕ್ಷ ಎಂದು ಘೋಷಿಸಿಕೊಂಡರು. ದೇಶಕ್ಕೆ ಹೊಸ ಸರ್ಕಾರದ ವ್ಯವಸ್ಥೆ ರಚಿಸಲು ಆಯೋಗವೊಂದನ್ನು ನೇಮಿಸಿದರು.

1962ರಲ್ಲಿ ಅಧ್ಯಕ್ಷೀಯ ಮಾದರಿ ಸರ್ಕಾರ ರಚಿಸುವ ಎರಡನೆಯ ಸಂವಿಧಾನವನ್ನು ಅಸ್ತಿತ್ವಕ್ಕೆ ತರಲಾಯಿತು. 156 ಸದಸ್ಯರ ರಾಷ್ಟ್ರೀಯ ಶಾಸನಸಭೆ ಹಾಗೂ 80 ಸಾವಿರ ಸದಸ್ಯರ ಅಧ್ಯಕ್ಷೀಯ ಚುನಾವಣಾ ಕಾಲೇಜ್ ಅಸ್ತಿತ್ವಕ್ಕೆ ಬಂದಿತು. ಉಭಯ ಸದನಗಳ ಸದಸ್ಯರನ್ನು ಸಮಾನವಾಗಿ ಪೂರ್ವ (ಇಂದಿನ ಬಾಂಗ್ಲಾದೇಶ) ಮತ್ತು ಪಶ್ಚಿಮ ಪಾಕಿಸ್ತಾನ ಎಂದು ವಿಭಜಿಸಲಾಯಿತು.

1970ರಲ್ಲಿ ಸಾರ್ವತ್ರಿಕ ಚುನಾವಣೆ

1970ರಲ್ಲಿ ಸಾರ್ವತ್ರಿಕ ಚುನಾವಣೆ

1965ರಲ್ಲಿ ನಡೆದ ವಿವಾದಾತ್ಮಕ ಚುನಾವಣೆಯಲ್ಲಿ ಅಯ್ಯುಬ್ ಖಾನ್ ಜಿದ್ದಾಜಿದ್ದಿನ ಚುನಾವಣೆಯಲ್ಲಿ ಫಾತಿಮಾ ಜಿನ್ನಾ ಅವರನ್ನು ಸಮೀಪದ ಅಂತರದಲ್ಲಿ ಸೋಲಿಸಿದರು.

1969ರಲ್ಲಿ ತೀವ್ರ ಪ್ರತಿಭಟನೆಗಳ ಬಳಿಕ ಅಯ್ಯುಬ್ ಖಾನ್ ರಾಜೀನಾಮೆ ನೀಡಿದರು. ಅಧಿಕಾರವನ್ನು ಸೇನಾ ಮುಖ್ಯಸ್ಥ ಜನರಲ್ ಯಾಹ್ಯಾ ಖಾನ್‌ಗೆ ಹಸ್ತಾಂತರಿಸಿದರು. ಎಲ್ಲ ಶಾಸನಸಭೆಗಳನ್ನು ರದ್ದುಗೊಳಿಸಿ ಸೇನಾಡಳಿತ ಹೇರಲಾಯಿತು.

1970ರಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಿತು. ಪೂರ್ವ ಪಾಕಿಸ್ತಾನದ ನಾಯಕ ಶೇಖ್ ಮುಜೀಬ್ ಉರ್ ರೆಹಮಾನ್ ಪಕ್ಷವು ದಿಗ್ವಿಜಯ ಸಾಧಿಸಿತು. ಆದರೆ, ಸಾರ್ವತ್ರಿಕ ಚುನಾವಣೆಯ ವಿವಾದ ಯುದ್ಧಕ್ಕೆ ಎಡೆಮಾಡಿಕೊಟ್ಟಿತು. 1971ರಲ್ಲಿ ನಡೆದ ಯುದ್ಧದಲ್ಲಿ ಭಾರತವೂ ಪಾಲ್ಗೊಂಡಿತು. ಪೂರ್ವ ಪಾಕಿಸ್ತಾನದಲ್ಲಿ ಕ್ರೂರ ಸೇನಾಡಳಿತದಿಂದ ಮುಕ್ತಗೊಂಡ ಸ್ವತಂತ್ರ ಬಾಂಗ್ಲಾದೇಶ ರಚನೆಯಾಯಿತು.

ಪ್ರಜಾಪ್ರಭುತ್ವದ ಹೊಸ ಶಕೆ

ಪ್ರಜಾಪ್ರಭುತ್ವದ ಹೊಸ ಶಕೆ

1972ರಲ್ಲಿ ಸೇನಾಡಳಿತ ತೆರವಾಯಿತು. ಜುಲ್ಫೀಕರ್ ಅಲಿ ಭುಟ್ಟೋ ಹೊಸ ಅಧ್ಯಕ್ಷರಾಗಿ ಚುನಾಯಿತರಾದರು. ಪಾಕಿಸ್ತಾನದ ಅಣು ಯೋಜನೆಯನ್ನು ಅವರು ಈ ಸಂದರ್ಭದಲ್ಲಿ ಆರಂಭಿಸಿದರು.

1973ರಲ್ಲಿ ಹೊಸ ಸಂವಿಧಾನ ಅಸ್ತಿತ್ವಕ್ಕೆ ಬಂದಿತು. ಪಾಕಿಸ್ತಾನವು ಸಂಸದೀಯ ಪ್ರಜಾಪ್ರಭುತ್ವ ದೇಶ ಎಂದು ಘೋಷಿಸಲಾಯಿತು. ದೇಶದ ಮುಖ್ಯಸ್ಥರಾಗಿ ಪ್ರಧಾನಿ ಆಡಳಿತ ನಡೆಸಲಿದ್ದಾರೆ ಎಂದು ತೀರ್ಮಾನಿಸಲಾಯಿತು. ಅಧ್ಯಕ್ಷರಾಗಿದ್ದ ಭುಟ್ಟೋ, ಪ್ರಧಾನಿಯಾದರು.

1977ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಭುಟ್ಟೋ ಅವರ ಪಕ್ಷ ಭಾರಿ ಬಹುಮತದ ಗೆಲುವು ಸಾಧಿಸಿತು. ಆದರೆ, ಮತದಾನದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ವಿರೋಧ ಪಕ್ಷಗಳಿಂದ ಗಲಭೆ ಶುರುವಾಯಿತು.

ಜಿಯಾ ಉಲ್ ಹಕ್ ಸೇನಾ ದಂಗೆ

ಜಿಯಾ ಉಲ್ ಹಕ್ ಸೇನಾ ದಂಗೆ

ಭುಟ್ಟೋ ಅವರಿಂದಲೇ ನೇಮಕವಾಗಿ ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಜಿಯಾ ಉಲ್ ಹಕ್, ದಂಗೆ ನಡೆಸಿ ಭುಟ್ಟೋ ಅವರನ್ನು ಪದಚ್ಯುತಗೊಳಿಸಿದರು. ಸಂವಿಧಾನವನ್ನು ಅಮಾನತುಗೊಳಿಸಿ ಸೇನಾಡಳಿತ ಹೇರಿದರು.

1978ರಲ್ಲಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಜಿಲಾ ಉಲ್ ಹಕ್, ಸೇನೆಯ ಮುಖ್ಯಸ್ಥನ ಅಧಿಕಾರವನ್ನೂ ತಮ್ಮಲ್ಲಿಯೇ ಉಳಿಸಿಕೊಂಡರು.

1979ರಲ್ಲಿ ಹತ್ಯೆಯ ಸಂಚಿನ ಆರೋಪದಡಿ ಭುಟ್ಟೋ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಯಿತು. 'ಇಸ್ಲಾಮೀಕರಣ' ನೀತಿಯ ಭಾಗವಾಗಿ ಜಿಯಾ ಉಲ್ ಹಕ್ ವಿವಾದಾತ್ಮಕ ಹುಡೋಡ್ ಸುಗ್ರೀವಾಜ್ಞೆಯನ್ನು ಹೊರಡಿಸಿದರು.

ಚುನಾವಣೆ ಹಾಗೂ ರಾಜಕೀಯ ಚಟುವಟಿಕೆಗಳನ್ನು ರದ್ದುಗೊಳಿಸಿದ ಜಿಯಾ, ತಂತ್ರಜ್ಞರ ಫೆಡರಲ್ ಕೌನ್ಸಿಲ್ ಅನ್ನು ರಚಿಸಿದರು.

1984ರಲ್ಲಿ ತಮ್ಮ ಇಸ್ಲಾಮೀಕರಣ ನೀತಿ ಕುರಿತು ಜನಾಭಿಪ್ರಾಯ ಸಂಗ್ರಹಿಸಿದ ಜಿಯಾ, ಶೇ 95 ಮತಗಳು ತಮ್ಮ ಪರವಾಗಿ ಬಂದಿದೆ ಎಂದು ಘೋಷಿಸಿಕೊಂಡರು.

1985ರಲ್ಲಿ ಸಾರ್ವತ್ರಿಕ ಚುನಾವಣೆ

1985ರಲ್ಲಿ ಸಾರ್ವತ್ರಿಕ ಚುನಾವಣೆ

1985ರಲ್ಲಿ ಸಾರ್ವತ್ರಿಕ ಚುನಾವಣೆ ನಡೆದು, ಸೇನಾಡಳಿತ ತೆರವಾಯಿತು. ಜಿಯಾ ಎಂಟು ವರ್ಷಗಳಲ್ಲಿ ಮಾಡಿದ ನಿಯಮಗಳನ್ನು ಅಂಗೀಕರಿಸಿದ ಹೊಸ ಸರ್ಕಾರ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತು. ಮುಹಮ್ಮದ್ ಖಾನ್ ಜುನೆಜೊ ಪ್ರಧಾನಿಯಾಗಿ ಚುನಾಯಿತರಾದರು.

1988ರಲ್ಲಿ ಗಲಭೆ ನಡೆದು ಜಿಯಾ ಸಂಸತ್ತನ್ನು ಅನೂರ್ಜಿತಗೊಳಿಸಿದರು. ಸಂವಿಧಾನದ ಅಡಿ ಜುನೆಜೊ ಸರ್ಕಾರವನ್ನು ವಜಾಗೊಳಿಸಿದರು. 90 ದಿನಗಳ ಒಳಗೆ ಸಾರ್ವತ್ರಿಕ ಚುನಾವಣೆ ನಡೆಸುವುದಾಗಿ ಭರವಸೆ ನೀಡಿದರು. ಆದರೆ,ಆಗಸ್ಟ್ 17ರಂದು ವಿಮಾನ ಅಪಘಾತದಲ್ಲಿ ಇತರೆ 31 ಮಂದಿ ಜತೆ ಜಿಯಾ ಮರಣ ಹೊಂದಿದರು.

ಮೂರನೇ ಪ್ರಜಾಪ್ರಭುತ್ವ ಯುಗ

ಮೂರನೇ ಪ್ರಜಾಪ್ರಭುತ್ವ ಯುಗ

1988ರಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಿತು. ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಬೆನಜೀರ್ ಭುಟ್ಟೋ ಪ್ರಧಾನಿಯಾಗಿ ಆಯ್ಕೆಯಾದರು.

1990ರಲ್ಲಿ ಅಧ್ಯಕ್ಷ ಗುಲಾಮ್ ಇಶಾಕ್ ಖಾನ್ ರಾಷ್ಟ್ರೀಯ ಅಸೆಂಬ್ಲಿಯನ್ನು ರದ್ದುಗೊಳಿಸಿದರು. ಭ್ರಷ್ಟಾಚಾರ ಮತ್ತು ಅದಕ್ಷತೆ ಆರೋಪದಡಿ ಭುಟ್ಟೋ ಸರ್ಕಾರವನ್ನು ವಜಾಗೊಳಿಸಿದರು. ಹೊಸದಾಗಿ ಚುನಾವಣೆ ನಡೆಯಿತು. ಜಿಯಾ ಗರಡಿಯಲ್ಲಿ ಬೆಳೆದ ಇಸ್ಲಾಮಿ ಜಮ್ಹೂರಿ ಇತ್ತೆಹಾದ್ ಮುಖ್ಯಸ್ಥ ನವಾಜ್ ಷರೀಫ್ ಪ್ರಧಾನಿಯಾಗಿ ಆಯ್ಕೆಯಾದರು.

1991ರಲ್ಲಿ ರಾಷ್ಟ್ರೀಯ ಅಸೆಂಬ್ಲಿಯು ಷರಿಯತ್ ಮಸೂದೆಯನ್ನು ಅಂಗೀಕರಿಸಿತು. ಈ ಮೂಲಕ ಇಸ್ಲಾಮಿಕ್ ಕಾನೂನನ್ನು ಪಾಕಿಸ್ತಾನ ನ್ಯಾಯಾಂಗ ವ್ಯವಸ್ಥೆಯೊಳಗೆ ಅಳವಡಿಸಿತು.

ಕರಾಚಿಯಲ್ಲಿ ನಡೆದ ಹಿಂಸಾಚಾರದ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸಲಾಯಿತು. ಅಲ್ಲಿ ಬಲವಾಗಿದ್ದ ಮುಜಾಹಿರ್ ಖವಾಮಿ ಚಳವಳಿ ಪಕ್ಷದ ಸದಸ್ಯರನ್ನು ಈ ಕಾರ್ಯಾಚರಣೆ ಗುರಿಯಾಗಿರಿಸಿಕೊಂಡಿತ್ತು.

ಷರೀಫ್ ಸರ್ಕಾರ ವಜಾ

ಷರೀಫ್ ಸರ್ಕಾರ ವಜಾ

1993ರಲ್ಲಿ ಅಧ್ಯಕ್ಷ ಇಶಾಕ್ ಖಾನ್ ಭ್ರಷ್ಟಾಚಾರದ ಆರೋಪದಡಿ ಷರೀಫ್ ಸರ್ಕಾರವನ್ನು ವಜಾಗೊಳಿಸಿದರು. ಬಳಿಕ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬೇನಜೀರ್ ಭುಟ್ಟೋ ಮತ್ತೆ ಪ್ರಧಾನಿಯಾಗಿ ಚುನಾಯಿತರಾದರು. ಪಿಪಿಪಿಯ ಫರೂಖ್ ಲೆಘಾರಿ ಅಧ್ಯಕ್ಷರಾಗಿ ಆಯ್ಕೆಯಾದರು.

1996ರಲ್ಲಿ ಲೆಘಾರಿ ಅವರು ಭುಟ್ಟೋ ಸರ್ಕಾರವನ್ನು ವಜಾಗೊಳಿಸಿದರು. 1997ರಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಿತು. ನವಾಜ್ ಷರೀಪ್ ಅವರ ಪಿಎಂಎಲ್-ಎನ್ ಪಕ್ಷ ಗೆಲುವು ಸಾಧಿಸಿ, ಷರೀಫ್ ಪ್ರಧಾನಿಯಾಗಿ ಆಯ್ಕೆಯಾದರು. ಮರು ವರ್ಷ ರಫೀಕ್ ತರಾರ್ ಅಧ್ಯಕ್ಷರಾಗಿ ಆಯ್ಕೆಯಾದರು.

ಮುಷರಫ್ ದಂಗೆ

ಮುಷರಫ್ ದಂಗೆ

1999ರಲ್ಲಿ ಕಾರ್ಗಿಲ್ ಯುದ್ಧದ ಬಳಿಕ ನವಾಜ್ ಷರೀಫ್ ಅವರು ಸೇನಾ ಮುಖ್ಯಸ್ಥ ಜನರಲ್ ಪರ್ವೇಜ್ ಮುಷರಫ್ ಅವರನ್ನು ಹುದ್ದೆಯಿಂದ ತೆಗೆದುಹಾಕಲು ಮುಂದಾದರು. ಆದರೆ, ದಂಗೆ ನಡೆಸಿದ ಮುಷರಫ್, ಷರೀಫ್ ಹಾಗೂ ಇತರೆ ರಾಜಕೀಯ ಮುಖಂಡರನ್ನು ಗೃಹಬಂಧನದಲ್ಲಿ ಇರಿಸಿದರು.

ಮುಷರಫ್ ನಡೆಸಿದ ದಂಗೆಯು ಊರ್ಜಿತವೆಂದು 2000ದಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿತು. ಅಲ್ಲದೆ ಅವರಿಗೆ ಮೂರು ವರ್ಷಗಳ ಆಡಳಿತ ಅಧಿಕಾರ ನೀಡಿತು. ನವಾಜ್ ಷರೀಫ್ ಮತ್ತು ಅವರ ಕುಟುಂಬವನ್ನು ಸೌದಿ ಅರೇಬಿಯಾಕ್ಕೆ ಗಡಿಪಾರು ಮಾಡಲಾಯಿತು.

ಚುನಾವಣೆಯಲ್ಲಿ ಮುಷರಫ್ ಗೆಲುವು

ಚುನಾವಣೆಯಲ್ಲಿ ಮುಷರಫ್ ಗೆಲುವು

2002ರಲ್ಲಿ ನಡೆದ ಜನಮತಾಭಿಪ್ರಾಯದಲ್ಲಿ ಚುನಾವಣೆಯಲ್ಲಿ ಮುಷರಫ್ ಗೆಲುವು ಸಾಧಿಸಿದ್ದಾಗಿ ಘೋಷಿಸಿದರು. ಬಳಿಕ ಸಾರ್ವತ್ರಿಕ ಚುನಾವಣೆಯೂ ನಡೆಯಿತು. ಅದರಲ್ಲಿ ಮುಷರಫ್ ಸ್ಥಾಪಿಸಿದ ಪಿಎಂಎಲ್-ಕ್ಯೂ ಪಕ್ಷ ಹೆಚ್ಚಿನ ಸೀಟುಗಳನ್ನು ಗೆದ್ದುಕೊಂಡಿತು.

2004ರಲ್ಲಿ ಪ್ರಧಾನಿ ಜಫರುಲ್ಲಾ ಖಾನ್ ಅವರನ್ನು ಬದಲಿಸಿ ಮುಷರಫ್, ಶೌಕತ್ ಅಜೀಜ್ ಅವರನ್ನು ನೇಮಿಸಿದರು.

2007ರಲ್ಲಿ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಇಫ್ತೀಕರ್ ಮುಹಮ್ಮದ್ ಚೌಧರಿ ಅವರನ್ನು ಮುಷರಫ್ ವಜಾಗೊಳಿಸಿದರು. ಇದರಿಂದ ದೇಶದಾದ್ಯಂತ ಪ್ರತಿಭಟನೆಗಳು ನಡೆದವು.

ಚೌಧರಿ ಮತ್ತೆ ನ್ಯಾಯಮೂರ್ತಿ ಸ್ಥಾನಕ್ಕೆ ಮರಳಿ, ಮುಷರಫ್ ಆಡಳಿತವನ್ನು ಪ್ರಶ್ನಿಸಿದರು. ಆಗ ಮುಷರಫ್ ತುರ್ತು ಪರಿಸ್ಥಿತಿ ಹೇರಿದರು. ಆದರೆ, ಇದು ಪಾಕಿಸ್ತಾನದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಐದು ವರ್ಷದ ಅಧಿಕಾರಾವಧಿ ಪೂರ್ಣಗೊಳಿಸಿದ ಸರ್ಕಾರ ಎಂಬ ದಾಖಲೆ ಬರೆಯಿತು.

ಸಾರ್ವತ್ರಿಕ ಚುನಾವಣೆಯ ಪ್ರಚಾರಕ್ಕಾಗಿ ದೇಶಕ್ಕೆ ಮರಳಿದ್ದ ಬೇನಜೀರ್ ಭುಟ್ಟೋ, ರಾವಲ್ಪಿಂಡಿಯಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಹತ್ಯೆಯಾದರು.

2008ರ ಸಾರ್ವತ್ರಿಕ ಚುನಾವಣೆ

2008ರ ಸಾರ್ವತ್ರಿಕ ಚುನಾವಣೆ

2008ರ ಸಾರ್ವತ್ರಿಕ ಚುನಾವಣೆಯಲ್ಲಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಬಹುಮತ ಪಡೆದುಕೊಂಡು ಯೂಸುಫ್ ರಾಜಾ ಗಿಲಾನಿ ಪ್ರಧಾನಿಯಾಗಿ ಆಯ್ಕೆಯಾದರು. ಭುಟ್ಟೋ ಪತಿ ಅಸಿಫ್ ಅಲಿ ಜರ್ದಾರಿ ಅಧ್ಯಕ್ಷರಾದರು.

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ವಜಾಗೊಂಡಿದ್ದ ನ್ಯಾಯಮೂರ್ತಿ ಇಫ್ತೀಕರ್ ಮತ್ತು ಅವರ ಸಹೋದ್ಯೋಗಿಗಳು ತಮ್ಮ ಹುದ್ದೆಗಳಿಗೆ ಮರಳಿದರು.

1973ರ ಸಂವಿಧಾನಕ್ಕೆ ಪಾಕಿಸ್ತಾನ ಸರ್ಕಾರ ತಿದ್ದುಪಡಿಗಳನ್ನು ತಂದಿತು. ಜತೆಗೆ ಮುಷರಫ್ ಜಾರಿಗೆ ತಂದಿದ್ದ ಸಂಸತ್ತನ್ನು ಏಕಪಕ್ಷೀಯವಾಗಿ ವಜಾಗೊಳಿಸುವ ಅಧ್ಯಕ್ಷರ ಅಧಿಕಾರವನ್ನು ತೆಗೆದುಹಾಕಿತು.

ಜರ್ದಾರಿ, ಗಿಲಾನಿ ವಿರುದ್ಧ ಆರೋಪ

ಜರ್ದಾರಿ, ಗಿಲಾನಿ ವಿರುದ್ಧ ಆರೋಪ

2012ರಲ್ಲಿ ಅಸಿಫ್ ಅಲಿ ಜರ್ದಾರಿ, ಗಿಲಾನಿ ಪಾಲ್ಗೊಂಡಿದ್ದ ಭ್ರಷ್ಟಾಚಾರ ಪ್ರಕರಣ ವಿವಾದದ ಕಾವು ಪಡೆಯಿತು. ಪಾಕಿಸ್ತಾನದ ಅತಿ ದೀರ್ಘಾವಧಿ ಪ್ರಧಾನಿ ಎನಿಸಿಕೊಂಡ ಗಿಲಾನಿ ರಾಜೀನಾಮೆ ನೀಡಬೇಕಾಯಿತು. ಅವರ ಸ್ಥಾನಕ್ಕೆ ರಾಜಾ ಪರ್ವೇಜ್ ಅಶ್ರಫ್ ಆಯ್ಕೆಯಾದರು.

2013ರಲ್ಲಿ ಪಾಕಿಸ್ತಾನದಲ್ಲಿ ಮೊದಲ ಬಾರಿಗೆ ಐದು ವರ್ಷದ ಆಡಳಿತ ಪೂರ್ಣಗೊಳಿಸಿದ ನಾಗರಿಕ ಸರ್ಕಾರ ಎಂಬ ಹೆಗ್ಗಳಿಜೆಗೆ ಪಿಪಿಪಿ ಪಾತ್ರವಾಯಿತು.

ನವಾಜ್ ಷರೀಫ್ ಸಂಕಷ್ಟ

ನವಾಜ್ ಷರೀಫ್ ಸಂಕಷ್ಟ

2013ರಲ್ಲಿ ನಡೆದ ಚುನಾವಣೆಯಲ್ಲಿ ನವಾಜ್ ಷರೀಪ್ ಸರ್ಕಾರ ಅಸ್ತಿತ್ವಕ್ಕೆ ಬಂದಿತು.

2017ರಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿದ ನವಾಜ್ ಷರೀಫ್ ಅಧಿಕಾರದಿಂದ ಕೆಳಕ್ಕಿಳಿದರು. ಶಾಹಿದ್ ಕಖಾನ್ ಅಬ್ಬಾಸ್ ಪ್ರಧಾನಿಯಾಗಿ ಆಯ್ಕೆಯಾದರು.

ಪನಾಮ ಪೇಪರ್ಸ್ ಹಗರಣದಲ್ಲಿ ಸಿಲುಕಿದ ನವಾಜ್ ಷರೀಫ್, ಕುಟುಂಬದೊಂದಿಗೆ ವಿದೇಶಕ್ಕೆ ಪರಾರಿಯಾದರು. ಭ್ರಷ್ಟಾಚಾರ ಮತ್ತು ವಿವಿಧ ಹಗರಣಗಳಲ್ಲಿ ಷರೀಫ್‌ಗೆ ಹತ್ತು ವರ್ಷ ಜೈಲು ಶಿಕ್ಷೆ ವಿಧಿಸಲಾಯಿತು. ತವರಿಗೆ ಮರಳುತ್ತಿದ್ದಂತೆಯೇ ಷರೀಫ್ ಅವರನ್ನು ಬಂಧಿಸಲಾಯಿತು. ಅದರ ನಡುವೆಯೇ 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಷರೀಫ್ ಸ್ಪರ್ಧಿಸಿದ್ದಾರೆ.

ಷರೀಫ್ ವಿರುದ್ಧ ತೀವ್ರ ಹೋರಾಟ ನಡೆಸಿರುವ ಇಮ್ರಾನ್ ಖಾನ್ ಪ್ರಧಾನಿ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

English summary
pakistan elections 2018: pakistan general elections history, civilian rule and coup by military from 1947.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X