ಇಸ್ಲಾಮಿಕ್ ಸಹಕಾರ ಸಂಘಟನಾ ಸಭೆ: ಕಾಶ್ಮೀರ ವಿಚಾರ ಪ್ರಸ್ತಾಪಿಸಿದ ಪಾಕ್
ಇಸ್ಲಾಮಾಬಾದ್, ಡಿಸೆಂಬರ್ 21: ಇಸ್ಲಾಮಿಕ್ ಸಹಕಾರ ಸಂಘಟನೆ ಸಭೆಯಲ್ಲಿ ಪಾಕಿಸ್ತಾನವು ಕಾಶ್ಮೀರ ವಿಚಾರವನ್ನು ಪುನಃ ಪ್ರಸ್ತಾಪಿಸಿದೆ. ಇಸ್ಲಾಮಿಕ್ ಶೃಂಗಸಭೆಗಳು ಮತ್ತು ಸಿಎಫ್ಎಂ ಸಭೆಗಳ ಎಲ್ಲಾ ನಿರ್ಣಯಗಳು, ಹಾಗೆಯೇ ಯುನೈಟೆಡ್ ನೇಷನ್ ಮತ್ತು ಅಂತಾರಾಷ್ಟ್ರೀಯ ಭದ್ರತಾ ಮಂಡಳಿಯ ನಿರ್ಣಯಗಳಲ್ಲಿ ಪ್ರತಿಪಾದಿಸಲ್ಪಟ್ಟಿರುವ ಸ್ವಯಂ-ನಿರ್ಣಯದ ಹಕ್ಕಿನ ಬಗ್ಗೆ ಸಹ ಮಾತನಾಡಲಾಗಿದೆ ಎಂದು ಓಐಸಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಪಾಕ್ ಪ್ರಧಾನಿ ಇಮ್ರಾನ್ ಖಾನ್, ಒಐಸಿ ಪ್ರಧಾನ ಕಾರ್ಯದರ್ಶಿ ಹಿಸೈನ್ ಇಬ್ರಾಹಿಂ ತಾಹಾ ಅವರೊಂದಿಗಿನ ಈ ಸಭೆಯಲ್ಲಿ ಕಾಶ್ಮೀರ ವಿಷಯದ ಬಗ್ಗೆ ಚರ್ಚಿಸಿದ್ದು, ಈ ಚರ್ಚೆಯಲ್ಲಿ ಈ ಇಬ್ಬರೂ ಕಾಶ್ಮೀರಿ ಜನರಿಗೆ ತಮ್ಮ ಸ್ವ-ನಿರ್ಣಯ ಮತ್ತು ಹಕ್ಕುಗಳ ಹೋರಾಟದಲ್ಲಿ ಬೆಂಬಲವನ್ನು ಮುಂದುವರೆಸುವ ಬಗ್ಗೆ ಮಾತನಾಡಿದ್ದಾರೆ.
ಉಗ್ರ ಸಂಘಟನೆ TLP ವಿರುದ್ಧದ ನಿಷೇಧ ಹಿಂಪಡೆದ ಪಾಕಿಸ್ತಾನ
ಕಳೆದ ವರ್ಷವೂ, ಓಐಸಿ ನಿರ್ಣಯವು ಜಮ್ಮು ಮತ್ತು ಕಾಶ್ಮೀರವನ್ನು ಉಲ್ಲೇಖಿಸಿದ್ದನ್ನು ಭಾರತವು ಅನ್ಯಾಯ ಎಂದು ಕರೆದು, ಓಐಸಿ ದೇಶದ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಭಾರತ ಕಟ್ಟುನಿಟ್ಟಿನ ಧ್ವನಿಯಲ್ಲಿ ಹೇಳಿತ್ತು. ಭಾರತದ ಅವಿಭಾಜ್ಯ ಅಂಗವಾಗಿರುವ ಕಾಶ್ಮೀರದ ವಿಷಯವನ್ನೂ ಒಳಗೊಂಡಿದೆ. ಸಭೆಯಲ್ಲಿ ಇರಿಸಲಾದ ಸಂಗತಿಗಳು ತಪ್ಪು. ಓಐಸಿ ಭಾರತದ ಆಂತರಿಕ ವಿಷಯಗಳ ಬಗ್ಗೆ ನಿಲುವು ಹೊಂದಿರಬಾರದು ಎಂದು ಭಾರತ ನಿರೀಕ್ಷಿಸಿದೆ.
"ಜಮ್ಮು ಮತ್ತು ಕಾಶ್ಮೀರ ಸಮಸ್ಯೆಯ ಬೆಳವಣಿಗೆಗಳು ಮತ್ತು ಕಾಶ್ಮೀರಿ ಜನರು ತಮ್ಮ ಕಾನೂನುಬದ್ಧ ಹಕ್ಕುಗಳನ್ನು ಪಡೆಯುವ ಹೋರಾಟದಲ್ಲಿ ಓಐಸಿಯ ಪ್ರಯತ್ನಗಳನ್ನು ಬೆಂಬಲಿಸಲು ಚರ್ಚಿಸಲಾಗಿದೆ.
ಇಮ್ರಾನ್ ಖಾನ್ ಮತ್ತು ಒಐಸಿ ಪ್ರಧಾನ ಕಾರ್ಯದರ್ಶಿ ಅಫ್ಘಾನಿಸ್ತಾನದ ಪರಿಸ್ಥಿತಿ ಮತ್ತು ಅಲ್ಲಿನ ಜನರಿಗೆ ನೆರವು ನೀಡುವ ಪ್ರಯತ್ನಗಳ ಬಗ್ಗೆ ಸಭೆಯಲ್ಲಿ ಮಾತನಾಡಿ ಅಫ್ಘಾನಿಸ್ತಾನದಲ್ಲಿ ಭದ್ರತೆ ಮತ್ತು ಸ್ಥಿರತೆಗಾಗಿ ತಕ್ಷಣದ ನೆರವು ನೀಡುವ ಮಹತ್ವದ ಜೊತೆಗೆ ಇಸ್ಲಾಮೋಫೋಬಿಯಾ ಬಗ್ಗೆಯೂ ಮಾತುಕತೆ ನಡೆಸಿದರು.
ಜಗತ್ತಿನಲ್ಲಿ ಹೆಚ್ಚುತ್ತಿರುವ ಇಸ್ಲಾಮೋಫೋಬಿಯಾವನ್ನು ಎದುರಿಸಲು ಓಐಸಿ ಮತ್ತು ಪಾಕಿಸ್ತಾನದ ಪ್ರಯತ್ನಗಳನ್ನು ಎರಡೂ ಕಡೆಯವರು ಪರಿಶೀಲಿಸಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇನ್ನು ಕಳೆದ ಭಾನುವಾರ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ನಲ್ಲಿ ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ಆಯೋಜಿಸಿದ್ದ ಓಐಸಿಯ ಈ 17ನೇ ವಿಶೇಷ ಸಭೆಯಲ್ಲಿ ಒಐಸಿಯ ಒಟ್ಟು 57 ಸದಸ್ಯ ರಾಷ್ಟ್ರಗಳ ಪೈಕಿ 20 ದೇಶಗಳ ವಿದೇಶಾಂಗ ಸಚಿವರು ಭಾಗವಹಿಸಿದ್ದರು. ಓಐಸಿಯಲ್ಲಿ 10 ಉಪ ಮಂತ್ರಿಗಳು ಸಹ ತಮ್ಮ ದೇಶಗಳನ್ನು ಪ್ರತಿನಿಧಿಸಿದ್ದರು.
ಸಾಮಾನ್ಯವಾಗಿ ಓಐಸಿಯಲ್ಲಿ ಕಾಶ್ಮೀರದ ಸಮಸ್ಯೆ ಹೆಚ್ಚಾಗಿ ಪ್ರಸ್ತಾಪವಾಗುತ್ತದೆ. ಕಳೆದ ತಿಂಗಳು ಒಐಸಿ ವಿಶೇಷ ರಾಯಭಾರಿ ಯೂಸೆಫ್ ಎಲ್ಡೋಬ್ ಪಾಕಿಸ್ತಾನಕ್ಕೆ ತೆರಳಿದ್ದಾಗಲೂ ಕಾಶ್ಮೀರದ ವಿಷಯ ಪ್ರಸ್ತಾಪಿಸಿದ್ದರು.
ಪಾಕಿಸ್ತಾನದಲ್ಲಿ ಆಲ್ ಪಾರ್ಟಿಸ್ ಹುರಿಯತ್ ಕಾನ್ಫರೆನ್ಸ್ (ಎಪಿಎಚ್ಸಿ) ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ, ಕಾಶ್ಮೀರದ ಜನರ ಸ್ವ-ನಿರ್ಣಯದ ಹಕ್ಕನ್ನು ಓಐಸಿ ಬೆಂಬಲಿಸುವುದನ್ನು ಮುಂದುವರಿಸುವುದಾಗಿ ಹೇಳಿದ್ದರು.ಅಲ್ಲದೇ ಮುಂದಿನ ಓಐಸಿ ಸಚಿವರ ಸಭೆಯಲ್ಲಿ ಕಾಶ್ಮೀರದ ಪರಿಸ್ಥಿತಿಯ ಕುರಿತು ವರದಿಯನ್ನು ಮಂಡಿಸುವುದಾಗಿ ಎಲ್ಡೋಬ್ ಹೇಳಿದ್ದರು.
ಈ ಹಿಂದೆ, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವಕಾಶ ಸಿಕ್ಕಾಗಲೆಲ್ಲ ಕಾಶ್ಮೀರದ ವಿಚಾರ ಪ್ರಸ್ತಾಪಿಸಿ ಭಾರತದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ. ಹಾಗೇ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (UNGA) ಭಾಷಣ ಮಾಡುವಾಗಲೂ ಕಾಶ್ಮೀರ ದ ವಿಚಾರ ತೆಗೆದಿದ್ದರು.
ಅದಕ್ಕೀಗ ಭಾರತ ಕಟುವಾಗಿ ಪ್ರತಿಕ್ರಿಯೆ ನೀಡಿದೆ. 'ವಾಸ್ತವವಾಗಿ ಬೆಂಕಿ ಇಡುವ ಸ್ವಭಾವ ಹೊಂದಿರುವ ಪಾಕಿಸ್ತಾನ, ಜಗತ್ತಿನೆದುರು ತನ್ನನ್ನು ತಾನು ಬೆಂಕಿ ಶಮನ ಮಾಡುವವನಂತೆ ಬಿಂಬಿಸಿಕೊಳ್ಳುತ್ತಿದೆ'ಎಂದು ಭಾರತದ ಪ್ರತಿನಿಧಿ ಸ್ನೇಹಾ ದುಬೆ ತಿರುಗೇಟು ನೀಡಿದ್ದಾರೆ.
ವಿಶ್ವಸಂಸ್ಥೆಯ 76ನೇ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಇಮ್ರಾನ್ ಖಾನ್ ಭಾಷಣವನ್ನು ವಿರೋಧಿಸಿದ ಅವರು, ಪಾಕ್ ಪ್ರಧಾನಿ ದುರುದ್ದೇಶ ಪೂರಿತವಾಗಿ ಭಾಷಣ ಮಾಡಿದ್ದಾರೆ ಎಂದು ಹೇಳಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಿನ್ನೆ ಮಾತನಾಡಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಜಮ್ಮು-ಕಾಶ್ಮೀರವನ್ನು ಪ್ರಸ್ತಾಪಿಸಿದ್ದರು. 2019ರ ಆಗಸ್ಟ್ 5ರಂದು ಭಾರತ ಸರ್ಕಾರ ಅಲ್ಲಿನ ವಿಶೇಷ ಸ್ಥಾನಮಾನ ತೆಗೆದು, ಜಮ್ಮು-ಕಾಶ್ಮೀರ ಮತ್ತು ಲಡಾಖ್ನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ರೂಪಿಸಿದ್ದರ ಬಗ್ಗೆ ಮಾತನಾಡಿದ್ದರು. ಅಷ್ಟೇ ಅಲ್ಲ, ಕಾಶ್ಮೀರ ಪ್ರತ್ಯೇಕತಾವಾದಿ ಸೈಯದ್ ಅಲಿ ಗೀಲಾನಿಯವರ ಸಾವಿನ ಬಗ್ಗೆಯೂ ಪ್ರಸ್ತಾಪ ಮಾಡಿದ್ದರು.