ಅರ್ಮೇನಿಯ v/s ಅಜೆರ್ಬೈಜಾನ್: 3 ಸಾವಿರ ಸೈನಿಕರ ಸಾವು
ಅರ್ಮೇನಿಯ ಹಾಗೂ ಅಜೆರ್ಬೈಜಾನ್ ನಡುವೆ ಭೀಕರ ಕಾಳಗ ಏರ್ಪಟ್ಟಿದ್ದು, ಯುದ್ಧ ಆರಂಭವಾಗಿ 6 ದಿನ ಕಳೆದಿದೆ. ಈ 6 ದಿನಗಳಲ್ಲಿ ಅಜೆರ್ಬೈಜಾನ್ ಸೇನೆಯ ಬರೋಬ್ಬರಿ 3 ಸಾವಿರ ಸೈನಿಕರು ಅರ್ಮೇನಿಯ ಸೇನೆ ದಾಳಿಗೆ ಬಲಿಯಾಗಿದ್ದಾರೆ. ಎರಡೂ ದೇಶಗಳ ನಡುವೆ ಸಂಧಾನ ನಡೆಸಲು ವಿಶ್ವ ಸಮುದಾಯ ಶತಪ್ರಯತ್ನ ಮುಂದುವರಿಸಿದ್ದು, ಇದ್ಯಾವುದೂ ವರ್ಕೌಟ್ ಆಗುತ್ತಿಲ್ಲ. ಪಟ್ಟು ಬಿಡದೆ ಎರಡೂ ದೇಶಗಳು ಜಿದ್ದಿಗೆ ಬಿದ್ದು ದಾಳಿ-ಪ್ರತಿದಾಳಿ ಮುಂದುವರಿಸಿವೆ.
ಅರ್ಮೇನಿಯ ನಡೆಸಿದ ದಾಳಿಯಲ್ಲಿ ತನ್ನ ಸೇನೆಯ 3 ಸಾವಿರ ಸೈನಿಕರು ಮೃತಪಟ್ಟಿದ್ದಾರೆಂದು ಅಜೆರ್ಬೈಜಾನ್ ಹೇಳಿಕೊಂಡಿದೆ. ಆದರೂ ಅಜೆರ್ಬೈಜಾನ್ ಸದ್ಯಕ್ಕೆ ಯುದ್ಧದಿಂದ ಹಿಂದೆ ಸರಿಯಲು ಮುಂದಾಗಿಲ್ಲ. ಬದಲಾಗಿ ಪ್ರತಿಕಾರದ ಮಾತುಗಳನ್ನಾಡಿದೆ. 3 ಸಾವಿರ ಸೈನಿಕರ ತಲೆ ಉರುಳಿಸಿದ ಅರ್ಮೇನಿಯ ವಿರುದ್ಧ ಬಲವಾದ ದಾಳಿಗೆ ಸ್ಕೆಚ್ ಹಾಕಿ ಕುಳಿತಿದೆ. ನಗೊರ್ನೊ-ಕರಬಾಖ್ ಪ್ರದೇಶಕ್ಕಾಗಿ ಈ ಎರಡೂ ದೇಶಗಳ ಮಧ್ಯೆ ಯುದ್ಧ ಆರಂಭವಾಗಿತ್ತು. ದಿಢೀರ್ ಎರಡೂ ದೇಶಗಳ ಗಡಿಯಲ್ಲಿ ದಾಳಿ-ಪ್ರತಿದಾಳಿ ನಡೆದು ಯುದ್ಧ ಉಗ್ರ ಸ್ವರೂಪ ಪಡೆದಿತ್ತು. ಕಳೆದ 6 ದಿನಗಳಿಂದ ಯುರೋಪ್-ಏಷ್ಯಾ ಗಡಿ ಧಗಧಗಿಸುತ್ತಿದೆ.
3ನೇ ಯುದ್ಧಕ್ಕೆ ಸರ್ವ ತಯಾರಿ, ಏಷ್ಯಾ-ಯುರೋಪ್ ಗಢಗಢ..!

ಲೆಕ್ಕವಿಲ್ಲದಷ್ಟು ನಾಗರಿಕರು ಕೂಡ ಬಲಿ
ಜಗತ್ತಿನ ಎದುರು ಸಿಂಪತಿ ಗಿಟ್ಟಿಸಿಕೊಳ್ಳಲು ಅಜೆರ್ಬೈಜಾನ್ ಕೇವಲ ಸೈನಿಕರ ಸಾವಿನ ಸಂಖ್ಯೆಯನ್ನು ಹೇಳಿದೆ. ಆದರೆ ಯುದ್ಧ ನಡೆಯುತ್ತಿರುವ ಪ್ರದೇಶದಲ್ಲಿ ಮೃತಪಟ್ಟಿರುವ ನಾಗರಿಕರ ಸಂಖ್ಯೆ ಲೆಕ್ಕಕ್ಕೇ ಇಲ್ಲದಂತಾಗಿದೆ. ಸೈನಿಕರಿಗಿಂತ ಹೆಚ್ಚಾಗಿ ನಾಗರಿಕರೇ ಈ ಬಡಿದಾಟಕ್ಕೆ ಬಲಿಯಾಗಿದ್ದು, ಮೃತದೇಹಗಳನ್ನು ಅಲ್ಲಿಂದ ಹೊರಗೆ ತರುವುದಕ್ಕೂ ಆಗುತ್ತಿಲ್ಲ. ತಟಸ್ಥ ಪ್ರದೇಶದಲ್ಲಿ ಮೃತದೇಹಗಳ ರಾಶಿ ಬಿದ್ದಿರುವುದರಿಂದ, ದೇಹಗಳು ಅಲ್ಲೇ ಕೊಳೆಯತ್ತಿವೆ. ಮಕ್ಕಳನ್ನು ಕಳೆದುಕೊಂಡ ಪೋಷಕರು, ಅಪ್ಪ-ಅಮ್ಮನನ್ನು ಕಳೆದುಕೊಂಡ ಮಕ್ಕಳ ಪರಿಸ್ಥಿತಿ ಎದಂತಹವರ ಕಣ್ಣಲ್ಲೂ ನೀರು ತರಿಸುವಂತಿದೆ. ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಬಡಿದಾಟದಲ್ಲಿ ಸಾವಿರಾರು ನಾಗರಿಕರು ಜೀವ ಬಿಟ್ಟಿದ್ದಾರೆ.

ಯುದ್ಧಕ್ಕೆ ಕಾರಣ ಏನು..?
ನಗೊರ್ನೊ-ಕರಬಾಖ್ ಸಾಕಷ್ಟು ಆದಾಯ ತಂದುಕೊಡಬಲ್ಲ ಪ್ರದೇಶಗಳು. 4,400 ಚ.ಕಿ.ಮೀ ವಿಸ್ತೀರ್ಣದ ಭೂಮಿಗೆ ಭಾರಿ ಬೇಡಿಕೆ ಇದೆ. ಹೀಗಾಗಿ ಈ ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸಲು ಎರಡೂ ದೇಶಗಳು ಕಚ್ಚಾಡುತ್ತಿವೆ. ಈ ಹಿಂದೆ ಅಂದರೆ 1994ರಲ್ಲೂ ಇದೇ ವಿಚಾರಕ್ಕೆ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಬಡಿದಾಡಿಕೊಂಡಿವೆ. ಆದರೆ ನಂತರ ನಡೆದ ಸಂಧಾನದಲ್ಲಿ ತಕ್ಷಣಕ್ಕೆ ಯುದ್ಧ ನಿಂತಿದ್ದರೂ ದಶಕಗಳ ಕಾಲ ಬೂದಿ ಮುಚ್ಚಿದ ಕೆಂಡದಂತೆ ಇತ್ತು ಪರಿಸ್ಥಿತಿ. ಈಗ ಆ ಕೆಂಡ ಮತ್ತೆ ಬೆಂಕಿಯಾಗಿ, ಜ್ವಾಲೆಯ ರೂಪ ಪಡೆದಿದೆ. ಎರಡೂ ದೇಶಗಳ ನಾಯಕರ ದುರಾಸೆಗೆ ನೂರಾರು ಅಮಾಯಕ ಜೀವಗಳು ಬಲಿಯಾಗುತ್ತಿವೆ. ಸದ್ಯದ ವರದಿಗಳ ಪ್ರಕಾರ ಈಗಾಗಲೇ 100ಕ್ಕೂ ಹೆಚ್ಚು ನಾಗರಿಕರು ಯುದ್ಧದ ಕೆನ್ನಾಲಿಗೆಗೆ ಬಲಿಯಾಗಿ ಹೋಗಿದ್ದಾರೆ.
ಅರ್ಮೇನಿಯಾ- ಅಜರ್ ಬೈಜಾನ್ ನಡುವೆ ಯುದ್ಧ ಸ್ಫೋಟ

ಜಾಗತಿಕ ತೈಲ ಮಾರುಕಟ್ಟೆಗೂ ಕಂಟಕ
ಈಗಾಗಲೇ ಕೊರೊನಾ ಕಾಟಕ್ಕೆ ಬೇಸತ್ತಿರುವ ತೈಲ ಮಾರುಕಟ್ಟೆಗೆ ಮತ್ತೊಂದು ಸವಾಲು ಎದುರಾಗಿದೆ. ಈಗ ನಗೊರ್ನೊ ಹಾಗೂ ಕರಬಾಖ್ ವಿಚಾರವಾಗಿ ಭುಗಿಲೆದ್ದಿರುವ ಯುದ್ಧ ದಕ್ಷಿಣ ಕಾಕಸಸ್ ಪ್ರದೇಶದಲ್ಲಿ ಅಸ್ಥಿರತೆ ಮೂಡುವಂತೆ ಮಾಡಿದೆ. ದಕ್ಷಿಣ ಕಾಕಸಸ್ ಜಾಗತಿಕ ತೈಲ ಮಾರುಕಟ್ಟೆಗೆ ತೈಲ ಮತ್ತು ಅನಿಲ ಸಾಗಿಸೋದಕ್ಕೆ ಕಾರಿಡಾರ್ ಆಗಿದೆ. ದಕ್ಷಿಣ ಕಾಕಸಸ್ ಸುತ್ತಮುತ್ತಲ ಪ್ರದೇಶದಲ್ಲಿ ಯುದ್ಧ ನಡೆಯುತ್ತಿರುವಾಗ ಇಲ್ಲಿ ಸ್ಥಿರತೆ ನೆಲೆಸುವುದು, ಶಾಂತಿಯುತ ವ್ಯಾಪಾರ ನಡೆಯುವುದು ಕಷ್ಟಕರ. ಇದು ಜಾಗತಿಕ ತೈಲ ಮಾರುಕಟ್ಟೆಗೆ ಮತ್ತೆ ಕಂಟಕ ಎದುರಾಗುವ ಮುನ್ಸೂಚನೆ ನೀಡಿದೆ.

‘ಬನ್ನಿ ಮಾತಾಡೋಣ’ ಅಂತು ರಷ್ಯಾ..!
ನಿಮಗೆ ತಿಳಿದಿರಲಿ ಇಡೀ ಜಗತ್ತಿನ ಯಾವ ದೇಶವೂ ಹೊಂದಿರಲಾರದಷ್ಟು ಭೂಪ್ರದೇಶ ಸೋವಿಯತ್ನ ಪಾಲಾಗಿತ್ತು. ಸುಮಾರು 22 ಮಿಲಿಯನ್ ಸ್ಕ್ವೇರ್ ಕಿಲೋಮೀಟರ್ ಅಂದರೆ 2 ಅಮೆರಿಕ ಅಥವಾ 2 ಕೆನಡಾ ದೇಶಗಳಷ್ಟು ಅಥವಾ ಅದಕ್ಕಿಂತಲೂ ಹೆಚ್ಚಿನ ಭೂಮಿಯನ್ನು ಆಗ ಸೋವಿಯತ್ ಯೂನಿಯನ್ ಹೊಂದಿತ್ತು. ಅಂದು ಸೋವಿಯತ್ ಭಾಗವಾಗಿದ್ದ ಅರ್ಮೇನಿಯ ಮತ್ತು ಅಜೆರ್ಬೈಜಾನ್ ರಾಜ್ಯ ಅಥವಾ ಸೋವಿಯತ್ನ ಪ್ರಾಂತೀಯ ಸ್ಥಾನಮಾನ ಪಡೆದಿದ್ದವು. 1991ರಲ್ಲಿ ಸೋವಿಯತ್ ವಿಭಜನೆ ಆದಾಗ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ದೂರಾದವು. ಬಳಿಕ ಎರಡೂ ರಾಷ್ಟ್ರಗಳು ತುಂಡು ಭೂಮಿಗೆ ಕಚ್ಚಾಡುತ್ತಿವೆ. ಹೀಗಾಗಿ ರಷ್ಯಾ ಅಧ್ಯಕ್ಷ ಪುಟಿನ್ ಎರಡೂ ದೇಶಗಳ ನಾಯಕರಿಗೆ ಕರೆ ಮಾಡಿದ್ದು, ಸಂಧಾನಕ್ಕೆ ಬನ್ನಿ ಎಂದು ತಿಳಿಸಿದ್ದಾರೆ.

‘ಜಗಳ ಬೇಡ ಪ್ಲೀಸ್’ ಎಂದ ವಿಶ್ವಸಂಸ್ಥೆ
ಕೊರೊನಾ ಕಾಡುತ್ತಿದೆ, ಆರ್ಥಿಕತೆ ಅಲ್ಲಾಡಿ ಹೋಗಿದೆ. ಹೀಗಿರುವಾಗ 3ನೇ ಮಹಾಯುದ್ಧದ ಮಾತುಗಳು ಜಗತ್ತನ್ನು ತಲ್ಲಣಗೊಳಿಸಿವೆ. ಅರ್ಮೇನಿಯ ಹಾಗೂ ಅಜೆರ್ಬೈಜಾನ್ ನಡುವೆ ಯುದ್ಧ ಆರಂಭವಾಗುತ್ತಿದ್ದಂತೆ, ವಿಶ್ವಸಂಸ್ಥೆ ಮುಖ್ಯಸ್ಥ ಅಂಟೋನಿಯೋ ಗುಟೆರೆಸ್ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ಶೀಘ್ರ ಗಡಿ ಭಾಗದಲ್ಲಿ ಉದ್ವಿಗ್ನತೆ ಶಮನಗೊಳಿಸಿ ಎಂದು ಎರಡೂ ದೇಶಗಳಿಗೆ ಸಲಹೆ ನೀಡಿದ್ದಾರೆ. ಹಾಗೇ ರಾಜತಾಂತ್ರಿಕ ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥ ಸಾಧ್ಯ, ಇಂತಹ ಸಂದರ್ಭದಲ್ಲಿ ಹಿಂಸೆ ಮಾರ್ಗವಲ್ಲ ಎಂದಿದ್ದಾರೆ. ಇಷ್ಟೆಲ್ಲದರ ಮಧ್ಯೆ ಜಾಗತಿಕ ಸಮುದಾಯದ ಮನವಿಗೆ ಅರ್ಮೇನಿಯ, ಅಜೆರ್ಬೈಜಾನ್ ಬೆಲೆ ನೀಡುತ್ತವಾ, ಇಲ್ಲ ರೊಚ್ಚಿಗೆದ್ದಿರುವ ಎರಡೂ ರಾಷ್ಟ್ರಗಳು ಬಡಿದಾಟ ಮುಂದುವರಿಸುತ್ತವಾ ಕಾದು ನೋಡಬೇಕಿದೆ.