ಉತ್ತರ ಕೊರಿಯಾದಲ್ಲಿ ಹೆಚ್ಚಾದ ಕೊರೊನಾ: ದೇಶಕ್ಕೆ ದೊಡ್ಡ ಸವಾಲು ಎಂದ ಕಿಮ್
ಪೊಂಗ್ಯಾಂಗ್ (ಉತ್ತರ ಕೊರಿಯಾ), ಮೇ 14: ಉತ್ತರ ಕೊರಿಯಾದಲ್ಲಿ ಕೋವಿಡ್-19 ವೈರಾಣು ಹರಡುವಿಕೆ ತೀವ್ರ ಹೆಚ್ಚಾಗಿದೆ. ಗಣರಾಜ್ಯವಾಗಿ ಸ್ಥಾಪನೆಗೊಂಡ ನಂತರ ಇತಿಹಾಸದಲ್ಲೇ ಅತಿ ದೊಡ್ಡ ಸವಾಲನ್ನು ಉತ್ತರ ಕೊರಿಯಾ ಎದುರಿಸುತ್ತಿದೆ ಎಂದು ನಾಯಕ ಕಿಮ್ ಜಾಂಗ್ ಉನ್ ಹೇಳಿದ್ದಾರೆ ಎಂದು ಅಲ್ಲಿನ ಸರ್ಕಾರಿ ಸುದ್ದಿ ಸಂಸ್ಥೆ ಕೆಸಿಎನ್ಎ ವರದಿ ಮಾಡಿದೆ.
"ಕೊರೊನಾ ವೈರಸ್ ಹರಡದಂತೆ ತಡೆಯುವುದು ಮತ್ತು ಕೊರೊನಾ ವಿರುದ್ಧ ಹೋರಾಡಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಬೇಕು" ಎಂದು ಕಿಮ್ ಹೇಳಿರುವುದಾಗಿ ಕೆಸಿಎನ್ಎ ವರದಿ ಮಾಡಿದೆ.
ಉತ್ತರ ಕೊರಿಯಾದಲ್ಲಿ 17,400 ಹೊಸ ಕೊರೊನಾ ವೈರಸ್ ಪ್ರಕರಣ ವರದಿಯಾಗಿದೆ. ದೇಶದಲ್ಲಿ ಒಟ್ಟು 5,20,000 ಜನರಿಗೆ ಕೊರೊನಾ ಸೋಂಕು ದೃಢವಾಗಿದ್ದು, 2,40,600 ಸೋಂಕಿತರು ಗುಣಮುಖರಾಗಿದ್ದಾರೆ. 2,80,800 ಸೋಂಕಿತರು ಕ್ವಾರಂಟೈನ್ನಲ್ಲಿ ಇರುವುದಾಗಿ ಉತ್ತರ ಕೊರಿಯಾ ತಿಳಿಸಿದೆ.
ಇದುವರೆಗೆ 21 ಕೊರೊನಾ ಸೋಂಕಿತರು ಮೃತಪಟ್ಟಿದ್ದು ಉತ್ತರ ಕೊರಿಯಾದಲ್ಲಿ ಆತಂಕ ಸೃಷ್ಟಿಸಿದೆ. ಶುಕ್ರವಾರ ಕೊರೊನಾ ಸೋಂಕಿನಿಂದ ಓರ್ವ ಮೃತಪಟ್ಟ ವರದಿಯಾದ ನಂತರ 6 ಜನ ಜ್ವರದಿಂದ ಮೃತಪಟ್ಟಿದ್ದಾರೆ ಎಂದು ಕೆಸಿಎನ್ಎ ತಿಳಿಸಿದೆ.
ಬುಧವಾರ ಕೋವಿಡ್-19 ರೂಪಾಂತರಿ ಒಮಿಕ್ರಾನ್ ತಳಿ ಪತ್ತೆಯಾದ ನಂತರ ಉತ್ತರ ಕೊರಿಯಾದಲ್ಲಿ "ತುರ್ತು ಪರಿಸ್ಥಿತಿ" ಘೋಷಿಸಲಾಗಿತ್ತು. ಕೊರೊನಾ ಸೋಂಕು ಹರಡುವುದನ್ನು ತಡೆಯಲು ಕಿಮ್ ಜಾಂಗ್ ಉನ್ ರಾಷ್ಟ್ರವ್ಯಾಪಿ ಲಾಕ್ಡೌನ್ ಘೋಷಣೆ ಮಾಡಿದ್ದರು.
ತುರ್ತು ಸಭೆ ಕರೆದಿದ್ದ ಕಿಮ್
ಕೊರೊನಾ ಸೋಂಕು ಹೆಚ್ಚಾಗುತ್ತಿದ್ದಂತೆ ತುರ್ತು ಸಭೆ ಕರೆದಿದ್ದ ಕಿಮ್ ಜಾಂಗ್ ಉನ್, ಕೊರೊನಾ ವೈರಸ್ ಹರಡದಂತೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಚರ್ಚಿಸಿದ್ದಾರೆ ಎನ್ನಲಾಗಿದೆ. ವೈರಸ್ ಹರಡದಂತೆ ತಡೆಯಲು ಕಠಿಣ ಕ್ರಮ ತೆಗೆದುಕೊಳ್ಳುವುಂತೆ ಅಧಿಕಾರಿಗಳಿಗೆ ಕಿಮ್ ಜಾಂಗ್ ಉನ್ ಸೂಚನೆ ನೀಡಿದ್ದಾರೆ. ಗಡಿಗಳಲ್ಲಿ ತೀವ್ರ ನಿಗಾವಹಿಸುವಂತೆ ತಿಳಿಸಿದ್ದು, ಸಮುದ್ರ, ವಾಯು ಮಾರ್ಗಗಳಿಂದ ಕೂಡ ದೇಶಕ್ಕೆ ಕೊರೊನಾ ವೈರಸ್ ಸೋಂಕಿತರು ಬರದಂತೆ ಕಟ್ಟೆಚ್ಚರ ವಹಿಸಲು ತಿಳಿಸಿದ್ದಾರೆ.

ಜ್ವರದಿಂದ ಬಳಲುತ್ತಿರುವ ರೋಗಿಗಳಿಂದ ಸಂಗ್ರಹಿಸಿರುವ ಮಾದರಿಯಲ್ಲಿ ಒಮಿಕ್ರಾನ್ ವೈರಸ್ಗೆ ಹೋಲಿಕೆಯಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಹೇಳಿದ್ದಾರೆ. ಕೊರನಾ ವೈರಸ್ ಹರಡದಂತೆ ಮತ್ತು ಈಗಿರುವ ವಿಪತ್ತನ್ನು ಎದುರಿಸಲು ಉತ್ತರ ಕೊರಿಯಾ ಪ್ರಯತ್ನಿಸುತ್ತಿದೆ ಎಂದು ಹೇಳಲಾಗಿದೆ.
ತುರ್ತು ಪರಿಸ್ಥಿತಿ
"ಎರಡು ವರ್ಷಗಳಿಂದ ಕೊರೊನಾ ಸೋಂಕು ಹರಡದಂತೆ ಯಶಸ್ವಿಯಾಗಿ ನಿರ್ವಹಣೆ ಮಾಡಿದ್ದು, ಅನಿರೀಕ್ಷಿತವಾಗಿ ಸೋಂಕು ಹೆಚ್ಚಾಗಿರುವುದರಿಂದ ದೇಶದಲ್ಲಿ ಕಷ್ಟಕರವಾದ ತುರ್ತು ಪರಿಸ್ಥಿತಿ ಎದುರಾಗಿದೆ" ಎಂದು ಕಿಮ್ ಜಾಂಗ್ ಉನ್ ಹೇಳಿರುವುದಾಗಿ ಕೆಸಿಎನ್ಎ ವರದಿ ಮಾಡಿದೆ.
ಲಸಿಕೆಯ ಕೊರತೆಯೇ ಉತ್ತರ ಕೊರಿಯಾದಲ್ಲಿ ಸೋಂಕು ಹೆಚ್ಚಾಗಲು ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ದೇಶದಲ್ಲಿ 2.5 ಕೋಟಿ ಮಂದಿ ಇನ್ನೂ ಕೊರೊನಾ ಲಸಿಕೆ ಪಡೆಯದೇ ಇರುವುದು ದಿಢೀರ್ ಸೋಂಕು ಹೆಚ್ಚಾಗಲು ಕಾರಣವಾಗಿದ್ದು, ಸಾವಿನ ಪ್ರಮಾಣವೂ ಹೆಚ್ಚಾಗುವ ಆತಂಕ ವ್ಯಕ್ತಪಡಿಸಿದ್ದಾರೆ.