ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ತಲ್ಲಣದ ನಡುವೆ ಜಗತ್ತಿನ ಆರ್ಥಿಕತೆ ಜವಾಬ್ದಾರಿ ಮಹಿಳೆ ಹೆಗಲಿಗೆ

|
Google Oneindia Kannada News

ಕೊರೊನಾ.. ಕೊರೊನಾ.. ಕೊರೊನಾ.. ಹೀಗೆ ಕೊರೊನಾ ಎಂಬ ಮಹಾಮಾರಿ ಜಪದಲ್ಲೇ ಜಗತ್ತು ಜೀವನ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಭಾರತದಲ್ಲಿ ಕೊರೊನಾ ಒಂದಿಷ್ಟು ಕಂಟ್ರೋಲ್‌ಗೆ ಬಂದಿದ್ದರೂ, ಜಗತ್ತಿನ ಇತರ ರಾಷ್ಟ್ರಗಳ ಪರಿಸ್ಥಿತಿ ಭಯಂಕರವಾಗಿದೆ. ಅದರಲ್ಲೂ ಯುರೋಪ್ ಹಾಗೂ ಅಮೆರಿಕದ ಪಾಡು ಕೆಲವೊಂದು ವಿಚಾರದಲ್ಲಿ ಬಡ ರಾಷ್ಟ್ರಗಳಿಗಿಂತ ಕರುಣಾಜನಕವಾಗಿದೆ.

ಆದರೆ ಈ ಹೊತ್ತಲ್ಲೇ 'ವಿಶ್ವ ವ್ಯಾಪಾರ ಸಂಘಟನೆ' (WTO) ಮಹತ್ವದ ನಿರ್ಧಾರ ಕೈಗೊಂಡಿದೆ. ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರಿಗೆ WTO ಸಾರಥ್ಯ ವಹಿಸಲಾಗಿದೆ. ಆಫ್ರಿಕಾ ಮೂಲದ ಅಮೆರಿಕನ್ ಪ್ರಜೆಯಾಗಿರುವ ಎನ್ಗೊಝಿ ಒಕೊಂಜೊ-ಐವೆಲಾ ಅವರ ಹೆಗಲ ಮೇಲೆ ಮಹತ್ವದ ಜವಾಬ್ದಾರಿ ಹೊರಿಸಲಾಗಿದೆ. ಹೀಗೆ ಜಾಗತಿಕ ಮಟ್ಟದ ಬಹುದೊಡ್ಡ ಆರ್ಥಿಕ ಸಂಘಟನೆ (WTO)ಯ 164 ರಾಷ್ಟ್ರಗಳು ಐತಿಹಾಸಿಕ ನಿರ್ಣಯವನ್ನು ಕೈಗೊಂಡಿವೆ.

ಆರ್ಥಿಕ ತಜ್ಞೆಯಾದ ಎನ್ಗೊಝಿ ಒಕೊಂಜೊ-ಐವೆಲಾ ಈಗಾಗಲೇ ಸಾಮರ್ಥ್ಯ ತೋರಿಸಿದ್ದಾರೆ. ಡಬ್ಲ್ಯೂಟಿಒ ಮಹಾನಿರ್ದೇಶಕರ ಸ್ಥಾನಕ್ಕೆ ಎನ್ಗೊಝಿ ಆಯ್ಕೆ ಮಾಡಲು ಟ್ರಂಪ್ ಅಡ್ಡಿಯಾಗಿದ್ದರು ಎನ್ನಲಾಗಿತ್ತು. ಆದರೆ ಅಮೆರಿಕ ಅಧ್ಯಕ್ಷರಾಗಿ ಬೈಡನ್ ಆಗಮನ, ವಿಶ್ವ ವ್ಯಾಪಾರ ಸಂಘಟನೆಯಲ್ಲಿ ಹೊಸ ಯುಗಾರಂಭಕ್ಕೆ ಮುನ್ನುಡಿ ಬರೆದಿದೆ.

ತುಳಿದವರನ್ನೂ ಮೀರಿ ಬೆಳೆದ ‘ಎನ್ಗೊಝಿ’

ತುಳಿದವರನ್ನೂ ಮೀರಿ ಬೆಳೆದ ‘ಎನ್ಗೊಝಿ’

ಹೌದು, ಎನ್ಗೊಝಿ ಒಕೊಂಜೊ-ಐವೆಲಾ ಆಯ್ಕೆ ಜಗತ್ತಿನ ಆರ್ಥಿಕ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಆದರೆ ಈ ಸಂಚಲನಕ್ಕೆ ಎನ್ಗೊಝಿ ಆಫ್ರಿಕಾ ಮೂಲದವರು ಅಥವಾ ಮಹಿಳೆ ಎಂಬುದು ಕಾರಣವಲ್ಲ. ಇದೆಲ್ಲಕ್ಕಿಂತ ಹೆಚ್ಚಾಗಿ ಎನ್ಗೊಝಿ ಅವರಿಗಿರುವ ಆರ್ಥಿಕ ಜ್ಞಾನಕ್ಕೆ ಜಗತ್ತು ತಲೆಬಾಗಿದೆ. ಆಫ್ರಿಕಾದ ನೈಜೀರಿಯಾ ಮೂಲದ ಎನ್ಗೊಝಿ, ಬದುಕಿನಲ್ಲಿ ಹಲವಾರು ಏಳುಬೀಳು ಕಂಡವರು. ನೈಜೀರಿಯಾದ ಹಣಕಾಸು ಸಚಿವರಾಗಿ ಕೆಲವೇ ಸಮಯದಲ್ಲಿ ಬಡವರ ಉದ್ಧಾರ ಮಾಡಿದ್ದವರು. ಆದರೆ ಆಂತರಿಕ ಕಲಹದ ಕಾರಣಕ್ಕೆ ಅವರು ಅಲ್ಲಿನ ಹುದ್ದೆ ತೊರೆಯಬೇಕಾಯಿತು. ಆದರೂ ಮುಂದೆ ಎನ್ಗೊಝಿ ಅವರಿಗೆ ಬಹುದೊಡ್ಡ ಅವಕಾಶಗಳೇ ಒಲಿದು ಬಂದವು.

‘ವಿಶ್ವ ಬ್ಯಾಂಕ್’ನಿಂದ ಬಡವರ ಅಭಿವೃದ್ಧಿ

‘ವಿಶ್ವ ಬ್ಯಾಂಕ್’ನಿಂದ ಬಡವರ ಅಭಿವೃದ್ಧಿ

25 ವರ್ಷಗಳ ಕಾಲ ವಿಶ್ವ ಬ್ಯಾಂಕ್‌ಗಾಗಿ ಕಾರ್ಯನಿರ್ವಹಿಸಿದ್ದ ಎನ್ಗೊಝಿ ಒಕೊಂಜೊ-ಐವೆಲಾ, ಬಡವರ ಕಷ್ಟಕ್ಕೆ ನೆರವಾಗಲು ಪಣ ತೊಟ್ಟಿದ್ದರು. 2008 ಮತ್ತು 2009ರಲ್ಲಿ ಆಫ್ರಿಕಾ ರಾಷ್ಟ್ರಗಳಲ್ಲಿ ಎದುರಾಗಿದ್ದ ಆಹಾರ ಕ್ಷಾಮ ಬಗೆಹರಿಸಲು ಸಾಕಷ್ಟು ಪರಿಶ್ರಮ ವಹಿಸಿದ್ದರು. ಆಫ್ರಿಕಾ ಮಾತ್ರವಲ್ಲ ಭಾರತವೂ ಸೇರಿದಂತೆ ಏಷ್ಯಾದ ಅನೇಕ ರಾಷ್ಟ್ರಗಳು, ಯುರೋಪ್ ಒಕ್ಕೂಟದ ರಾಷ್ಟ್ರಗಳಿಗೆ ಎನ್ಗೊಝಿ ಅವರ ಕ್ರಮಗಳು ಸಾಕಷ್ಟು ಸಹಾಯ ಮಾಡಿದ್ದವು. ಅದರಲ್ಲೂ ವಿಶ್ವ ಆರ್ಥಿಕತೆಯಲ್ಲಿ 2007ರಲ್ಲಿ ಉಂಟಾದ ಮಹಾ ತಲ್ಲಣವನ್ನು ಹಿಡಿತಕ್ಕೆ ತರುವಲ್ಲಿ ಎನ್ಗೊಝಿ ಒಕೊಂಜೊ-ಐವೆಲಾ ಪಾತ್ರ ಶ್ಲಾಘನೀಯ.

ವಿಶ್ವ ವಾಣಿಜ್ಯ ಸಂಸ್ಥೆಯ ಮಹಾನಿರ್ದೇಶಕಿ

ವಿಶ್ವ ವಾಣಿಜ್ಯ ಸಂಸ್ಥೆಯ ಮಹಾನಿರ್ದೇಶಕಿ

ಇದೀಗ ವಿಶ್ವ ವ್ಯಾಪಾರ ಸಂಘಟನೆಗೆ ಮಹಾನಿರ್ದೇಶಕಿಯಾಗಿ ಆಯ್ಕೆಯಾಗಿರುವ ಎನ್ಗೊಝಿ ಎದುರು ದೊಡ್ಡ ದೊಡ್ಡ ಸವಾಲುಗಳಿವೆ. 2007ರ ಆರ್ಥಿಕ ಏರಿಳಿತದ ಬಳಿಕ ಜಗತ್ತು ಕೊರೊನಾ ಕಾರಣಕ್ಕೆ ನಲುಗಿದೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ವಿಶ್ವ ವ್ಯಾಪಾರ ಸಂಘಟನೆಗೆ ಎನ್ಗೊಝಿ ಆಯ್ಕೆ ಉತ್ತಮವಾಗಿದೆ ಎನ್ನುತ್ತಿದ್ದಾರೆ ತಜ್ಞರು. ಆದರೆ ಪರಿಸ್ಥಿತಿ ಅಂದುಕೊಂಡಷ್ಟು ಸುಲಭವಾಗಿಲ್ಲ. ಬಡರಾಷ್ಟ್ರಗಳನ್ನು ಬಿಡಿ, ಸಿರಿವಂತರು ಎನಿಸಿಕೊಂಡಿರುವ ಬಲಾಢ್ಯ ರಾಷ್ಟ್ರಗಳೇ ವಿಲವಿಲ ಒದ್ದಾಡುತ್ತಿವೆ. ಇದು ಸಂಕಷ್ಟದ ಸಮಯ, ಈ ಹೊತ್ತಲ್ಲಿ ಎಲ್ಲ ಪರಿಸ್ಥಿತಿಯನ್ನೂ ಸರಿದೂಗಿಸಿಕೊಂಡು, ಜಗತ್ತಿನ ಆರ್ಥಿಕ ಸ್ಥಿತಿಯನ್ನು ಹಳಿಗೆ ತರುವ ಜವಾಬ್ದಾರಿ ಎನ್ಗೊಝಿ ಹೆಗಲ ಮೇಲಿದೆ.

ಜಗತ್ತಿನ ಆರ್ಥಿಕ ಶಕ್ತಿ ‘ಡಬ್ಲ್ಯೂಟಿಒ’

ಜಗತ್ತಿನ ಆರ್ಥಿಕ ಶಕ್ತಿ ‘ಡಬ್ಲ್ಯೂಟಿಒ’

ವಿಶ್ವ ವ್ಯಾಪಾರ ಸಂಘಟನೆ ಅಥವಾ 'ಡಬ್ಲ್ಯೂಟಿಒ' ಅಸ್ಥಿತ್ವಕ್ಕೆ ಬಂದಿದ್ದು 1995ರಲ್ಲಿ. ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ತನ್ನ ಮುಖ್ಯ ಕಚೇರಿ ಹೊಂದಿರುವ ವಿಶ್ವ ವ್ಯಾಪಾರ ಸಂಘಟನೆ, ಜಗತ್ತಿನ ಆರ್ಥಿಕ ಶಕ್ತಿಯಾಗಿ ಬೆಳೆದು ನಿಂತಿದೆ. ಈ ಹಿಂದೆ ಇದ್ದ ಹಲವು ಗೊಂದಲಗಳಿಗೆ ಡಬ್ಲ್ಯೂಟಿಒ ಅಂತ್ಯ ಹಾಡಿದೆ. ಅದರಲ್ಲೂ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಡಬ್ಲ್ಯೂಟಿಒ ಸಾಕಷ್ಟು ವಿಚಾರದಲ್ಲಿ ನೆರವಾಗಿದೆ. ಅಂತಾರಾಷ್ಟ್ರೀಯ ವ್ಯಾಪಾರದ ನೀತಿ, ನಿಯಮ ಸೇರಿದಂತೆ ಗೊಂದಲಗಳು ಉಂಟಾದ ಸಂದರ್ಭದಲ್ಲಿ ಅದನ್ನು ಬಗೆಹರಿಸುವ ಜವಾಬ್ದಾರಿ ಈ ಸಂಘಟನೆ ಮೇಲಿರುತ್ತದೆ. ಆದರೂ ವಿಶ್ವ ವ್ಯಾಪಾರ ಸಂಘಟನೆ ಅಮೆರಿಕ ಸೇರಿದಂತೆ ವಿಶ್ವದ ಕೆಲ ಶ್ರೀಮಂತ ರಾಷ್ಟ್ರಗಳ ಕೈಗೊಂಬೆ ಎಂಬ ಆರೋಪವಿದೆ. ಆರೋಪ ಮತ್ತು ವಾಸ್ತವಗಳ ನಡುವೆ ಡಬ್ಲ್ಯೂಟಿಒ ಈಗಿನ ಸ್ಥಿತಿಯಲ್ಲಿ ಜಗತ್ತಿಗೆ ಅಗತ್ಯವಾಗಿದೆ.

English summary
African-American & Nigerian Economist Ngozi Okonjo-Iweala selected has chief of World Trade Organization.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X