ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಯೋಡೇಟಾ ನೋಡಿ ಪ್ರಧಾನಿ ಮಾಡಲಿಲ್ಲ : ಚೀನಾದಲ್ಲಿ ಮೋದಿ

By Prasad
|
Google Oneindia Kannada News

ಶಾಂಘೈ, ಮೇ. 16 : "ಕಳೆದ ವರ್ಷ ದೇಶದ ಜನತೆ ಬಿಜೆಪಿಗೆ ಅಭೂತಪೂರ್ವ ಯಶಸ್ಸು ನೀಡಿದ್ದರು. ಇವತ್ತು ಚೀನಾದಲ್ಲಿ ಭಾರತೀಯ ಜನತೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದೇನೆ. ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ನನ್ನಿಂದ ಯಾವುದೇ ತಪ್ಪಾಗದಂತೆ, ದೇಶಕ್ಕೆ ನಷ್ಟವಾಗದಂತೆ ಆಶೀರ್ವಾದ ಮಾಡಿ" ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಜನತೆಯನ್ನು ಕೇಳಿಕೊಂಡಿದ್ದಾರೆ.

ಭಾರತದ ಆಡಳಿತದ ಚುಕ್ಕಾಣಿ ಹಿಡಿದು ಇಂದಿಗೆ (ಮೇ 16) ಸರಿಯಾಗಿ ಒಂದು ವರ್ಷ ಪೂರೈಸಿರುವ ನರೇಂದ್ರ ಮೋದಿ, ಚೀನಾದಲ್ಲಿರುವ ಭಾರತೀಯ ಸಂಜಾತರನ್ನು ಮಾತಿನ ಮೋಡಿಗೆ ಸಿಲುಕಿಸಿದರು. ಮೋದಿ ಸಭೆಗೆ ಆಗಮಿಸುತ್ತಿದ್ದಂತೆ ಎಲ್ಲೆಲ್ಲೂ 'ಮೋದಿ ಮೋದಿ' ಎಂಬ ಘೋಷ ಪ್ರತಿಧ್ವನಿಸುತ್ತಿತ್ತು.

ಮೂರು ದಿನಗಳ ಚೀನಾ ಪ್ರವಾಸವನ್ನು ಮೋದಿಯವರು ಇಂದು ಪೂರೈಸುತ್ತಿದ್ದು, ಮಾಂಗೋಲಿಯಾಗೆ ತೆರಳಲಿದ್ದಾರೆ. ಮೂರು ದಿನಗಳಲ್ಲಿ ಒಟ್ಟು 21 ಮಹತ್ವದ ಒಪ್ಪಂದಗಳಿಗೆ ಚೀನಾದೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ ನರೇಂದ್ರ ಮೋದಿ ಮಾಡಿದ ಭಾಷಣದುದ್ದಕ್ಕೂ ಚಪ್ಪಾಳೆಗಳ ಸುರಿಮಳೆಯಾಗುತ್ತಲೇ ಇತ್ತು. [ಅಮೆರಿಕದ ಮ್ಯಾಡಿಸನ್ ಸ್ಕ್ವೇರ್ ನಲ್ಲಿ ಮೋದಿ ಭಾಷಣ]

Narendra Modi mesmerizes Indian diaspora in China

ಅವರ ಭಾಷಣದ ಮುಖ್ಯಾಂಶಗಳು ಮುಂದಿವೆ ಓದಿರಿ.

* ಕಾಲ ಎಷ್ಟೊಂದು ವೇಗವಾಗಿ ಓಡುತ್ತಿದೆ. ಚೀನಾದಲ್ಲಿ ಎಷ್ಟೊಂದು ಭಾರತೀಯರು ಅತ್ಯಂತ ಶಾಂತಿಯುತವಾಗಿ ಸುಖದಿಂದ ಸಹಬಾಳ್ವೆ ನಡೆಸುತ್ತಿದ್ದಾರೆ ಎಂಬುದು ನಿಜಕ್ಕೂ ಅಚ್ಚರಿಯ ಸಂಗತಿ. [ಚೀನಾದಲ್ಲೂ ಮೇಕ್ ಇನ್ ಇಂಡಿಯಾ ಮ್ಯಾಜಿಕ್]

* ಸರಿಯಾಗಿ ಒಂದು ವರ್ಷದ ಹಿಂದೆ, ಈ ಎರಡೂವರೆ ಗಂಟೆಗಳ ಅವಧಿಯಲ್ಲಿ ನೀವೆಲ್ಲ ಚಟಪಡಿಸುತ್ತಿದ್ದಿರಿ. ಭಾರತದಲ್ಲಿ ಚುನಾವಣೆಯ ಫಲಿತಾಂಶ ಏನು ಬರುತ್ತದೋ ಎಂದು ನಿರೀಕ್ಷಿಸುತ್ತಿದ್ದಿರಿ.

* ಭಾರತದ ಹೊರಗೆ ಮೋದಿಯನ್ನು ಯಾರು ಬಲ್ಲರು ಎಂದು ಎಲ್ಲರೂ ಕೇಳುತ್ತಿದ್ದರು. ಗುಜರಾತ್ ಜನತೆ ಮಾತ್ರ ಅವರನ್ನು ಬಲ್ಲರು ಎಂದು ಎಲ್ಲರೂ ಹೇಳುತ್ತಿದ್ದರು.

* ಬರೀ ನನ್ನ ಬಯೋಡೇಟಾ ನೋಡಿ ಯಾರೂ ನನ್ನನ್ನು ಪ್ರಧಾನಿ ಮಾಡುತ್ತಿರಲಿಲ್ಲ. ನನ್ನ ಬಗ್ಗೆ ಮಾಡಲಾಗುತ್ತಿದ್ದ ಟೀಕೆಗಳನ್ನು ನಾನೆಂದೂ ಮರೆಯುವುದಿಲ್ಲ, ಮರೆಯಲೂ ಬಿಡುವುದಿಲ್ಲ. ನಾನು ಇಡೀ ದೇಶದ ಜನತೆಗೆ ತಲೆಬಾಗುತ್ತೇನೆ.

* ಅತ್ಯಂತ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದೇನೆ. ದೇಶದ ಅಭಿವೃದ್ದಿಗೆ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇನೆ. ಈ ವರ್ಷದಲ್ಲಿ ಎಂದಾದರೂ ರಜಾ ತೆಗೆದುಕೊಂಡಿದ್ದೇನಾ? ರಜಾ ಮಜಾ ಅನುಭವಿಸಿದ್ದೇನಾ?


* ದೇಶದ ಅಭಿವೃದ್ಧಿಗಾಗಿ ನಾನು ತೆಗೆದುಕೊಂಡಿರುವ ಎಲ್ಲ ಕ್ರಮಗಳು ಯಶಸ್ವಿಯಾಗಲೆಂದು ತಮ್ಮ ಆಶೀರ್ವಾದ ಬೇಡಲು ಇಲ್ಲಿ ಬಂದಿದ್ದೇನೆ. ನನ್ನಿಂದ ಯಾವುದೇ ತಪ್ಪಾಗದಿರಲೆಂದು ಆಶೀರ್ವದಿಸಿ.

* ನನಗೆ ಮಾತಾಡಲು ಇನ್ನೂ ಸಮಯವಿದೆಯಾ? (ಹೌದು ಹೌದು ಒಕ್ಕೊರಲ ಕೂಗು). ನಿಮಗೆಲ್ಲ ನಾಳೆ ಭಾನುವಾರ, ರಜಾ. ನನಗೆ ಯಾವುದೇ ರಜವಿಲ್ಲ. ನಾನು ಮಾಂಗೋಲಿಯಾದಲ್ಲಿರುತ್ತೇನೆ.

* ಚೀನಾದಲ್ಲಿ ಎರಡು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳನ್ನು ನಾನು ಭೇಟಿ ಮಾಡಿದೆ. ಯುವ ಜನತೆಯನ್ನು ಭೇಟಿ ಮಾಡುವ, ವಿದ್ಯಾರ್ಥಿಗಳೊಂದಿಗೆ ಸಂವಾದಿಸುವ ಅವಕಾಶ ಎಲ್ಲರಿಗೂ ಎಲ್ಲಿ ಸಿಗುತ್ತದೆ?

* ಇಡೀ ಜಗತ್ತು ಗ್ಲೋಬಲ್ ವಾರ್ಮಿಂಗ್ ಬಗ್ಗೆ ಮಾತನಾಡುತ್ತಿದೆ. ಇಂಥ ಸಂದರ್ಭ ಬರುವಂತೆ ಮಾಡಿಕೊಂಡವರು ನಾವೇ. ಆದರೆ, ಇಡೀ ಜಗತ್ತಿನಲ್ಲಿ ಭೂಮಿಯನ್ನು ಮಾತೆಯಂತೆ ಪೂಜಿಸುವವರು, ಪ್ರಕೃತಿಯನ್ನು ಆರಾಧಿಸುವವರು ನಾವು ಭಾರತೀಯರು ಮಾತ್ರ. ತಲತಲಾಂತರದಿಂದ ಭೂಮಿಯನ್ನು ಪೂಜಿಸುವಂತೆ ಹೇಳಿಕೊಡಲಾಗಿದೆ.

English summary
Exactly one year after Narendra Modi elected as Prime minister of India, the leader of the nation has mesmerized the Indian diaspora in China by his speech. He said, I have come here to seek the blessings of the people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X