ಎಂಎಚ್370 ಕಣ್ಮರೆ ಪ್ರಕರಣ ದುರಂತ ಅಂತ್ಯ
ಕೌಲಾಲಂಪುರ, ಮಾ. 25 : ಅತ್ಯಂತ ನಿಗೂಢವಾಗಿ ಕಣ್ಮರೆಯಾಗಿದ್ದ ವಿಮಾನದ ಹುಡುಕಾಟಕ್ಕೆ ತೆರೆಬಿದ್ದಿದೆ. ಏನು ಆಗಬಾರದು ಎಂದು ಇಡೀ ಜಗತ್ತು ಜಪಿಸುತ್ತಿತ್ತೋ ಅದು ಘಟಿಸಿಹೋಗಿದೆ. ಐವರು ಭಾರತೀಯರು ಸೇರಿದಂತೆ 239 ಜನರಿದ್ದ, ಮಲೇಷ್ಯಾ ಏರ್ ಲೈನ್ ವಿಮಾನ ಎಂಎಚ್370 ವಿಮಾನ ಹಿಂದೂ ಮಹಾಸಾಗರದಲ್ಲಿ ಮುಳುಗಿರುವುದು ಖಚಿತವಾಗಿದೆ.
"ಕಣ್ಮರೆಯಾಗಿದ್ದ ಎಂಎಚ್370 ವಿಮಾನ ಹಿಂದೂ ಮಹಾಸಾಗರದಲ್ಲಿ ಮುಳುಗಿದೆ ಎಂದು ಅತ್ಯಂತ ದುಃಖದಿಂದ ತಿಳಿಯಬಯಸುತ್ತೇನೆ" ಎಂದು ಮಲೇಷ್ಯಾದ ಪ್ರಧಾನಿ ನಜೀಬ್ ರಜಾಕ್ ಅವರು ಶುಕ್ರವಾರ ಪ್ರಕಟಿಸಿದರು. ಈ ವಿಷಯ ತಿಳಿಯುತ್ತಿದ್ದಂತೆ ಸಾವಿಗೀಡಾದವರ ಸಂಬಂಧಿಕರು ಶೋಕಸಾಗರದಲ್ಲಿ ಮುಳುಗಿದ್ದಾರೆ.
ಯುನೈಟೆಡ್ ಕಿಂಗಡಂನ ವಿಮಾನ ಅಪಘಾತ ತನಿಖಾ ಸಂಸ್ಥೆ ನೀಡಿದ ಸ್ಯಾಟಲೈಟ್ ಮಾಹಿತಿಯ ಆಧಾರದ ಮೇಲೆ ಎಂಎಚ್370 ವಿಮಾನ ಹಿಂದೂ ಮಹಾಸಾಗರದಲ್ಲಿ ಮುಳುಗಿರುವುದು ತಿಳಿದುಬಂದಿದೆ ಎಂದು ನಜೀಬ್ ರಜಾಕ್ ತಿಳಿಸಿದರು. ಈ ಪ್ರಕರಣದ ಹೆಚ್ಚಿನ ವಿವರಗಳನ್ನು ತಿಳಿಸಲು ಮತ್ತೊಂದು ಪತ್ರಿಕಾಗೋಷ್ಠಿಯನ್ನು ಮಂಗಳವಾರ ನಡೆಸಲಾಗುತ್ತಿದೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಕಳೆದ 17 ದಿನಗಳಿಂದ ವಿಮಾನದ ಸುಳಿವಿನ ಬಗ್ಗೆ, ಪ್ರಯಾಣಿಕರ ಸುರಕ್ಷತೆಯ ಬಗ್ಗೆ ತಿಳಿಯಲು ಕಾತುರದಿಂದ ಹೋಟೆಲಿನಲ್ಲಿಯೇ ತಂಗಿದ್ದ ಸಂಬಂಧಿಕರು, ದುರಂತದ ವಿಷಯ ತಿಳಿಯುತ್ತಿದ್ದಂತೆ ದುಃಖದ ಮಡುವಿನಲ್ಲಿ ಮುಳುಗಿದರು. ಕೆಲವರನ್ನು ಸ್ಟ್ರೆಚರ್ ಮೇಲೆ ಆಸ್ಪತ್ರೆಗೆ ಕರೆದುಕೊಂಡುಹೋಗಬೇಕಾಗಿ ಬಂದಿತು. ಓರ್ವ ಮಹಿಳೆ ದುಃಖ ಭರಿಸದೆ ತೀವ್ರವಾಗಿ ಕಂಪಿಸುತ್ತಿದ್ದರೆಂದು ತಿಳಿದುಬಂದಿದೆ.
227 ಪ್ರಯಾಣಿಕರು ಮತ್ತು 12 ಸಿಬ್ಬಂದಿಗಳಿದ್ದ ವಿಮಾನ ಮಾರ್ಚ್ 8ರಂದು, ರಾಡಾರ್ ವ್ಯಾಪ್ತಿಯನ್ನು ಕೂಡ ತಪ್ಪಿಸಿಕೊಂಡು ನಿಗೂಢವಾಗಿ ಕಣ್ಮರೆಯಾಗಿತ್ತು. ಭಾರತವೂ ಸೇರಿದಂತೆ ಎಲ್ಲ ರಾಷ್ಟ್ರಗಳು ಸಮುದ್ರದಲ್ಲಿ ಹುಡುಕಾಟ ನಡೆಸಿದ್ದರೂ ಅದರ ಸುಳಿವು ಕೂಡ ಸಿಕ್ಕಿರಲಿಲ್ಲ. ಹೀಗಾಗಿ ವಿಮಾನವನ್ನು ಭಯೋತ್ಪಾದಕರು ಅಪಹರಿಸಿರಬಹುದು ಊಹಾಪೋಹ ಎದ್ದಿತ್ತು.
ದುಃಖತಪ್ತ ಸಂಬಂಧಿಕರು ಮಲೇಷ್ಯಾ ಸರಕಾರದ ಮೇಲೆ ಈ ದುರಂತಕ್ಕಾಗಿ ಹಿಡಿಶಾಪ ಹಾಕುತ್ತಿದ್ದಾರೆ. ಮಲೇಷ್ಯಾ ಸರಕಾರ, ಮಲೇಷ್ಯಾ ವಿಮಾನಯಾನ ಸಂಸ್ಥೆ, ಮಲೇಷ್ಯಾ ಸೇನೆ ನಿಜವಾದ ಕೊಲೆಗಡುಕರು. ಅವರೆಲ್ಲ ಸೇರಿ ನಮ್ಮ ಬಂಧುಗಳನ್ನು ಕೊಂದುಬಿಟ್ಟರು ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೆಲವರು ಪತ್ರಕರ್ತರ ಮೇಲೆ ಕೂಡ ದಾಳಿಗೆ ಯತ್ನಿಸಿದರು.
ಬೀಜಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಬಿಡುಗಡೆ ಮಾಡಿದ ಪ್ರಯಾಣಿಕರ ಪಟ್ಟಿಯಲ್ಲಿದ್ದ ಸಾವಿಗೀಡಾದ ಭಾರತೀಯರ ಹೆಸರು ಇಂತಿವೆ : ಚಂದ್ರಿಕಾ ಶರ್ಮಾ, ಪ್ರಹ್ಲಾದ್ ಶಿರ್ಸಾತ್, ಚೇತನಾ ವಿನೋದ್ ಕೋಲೆಕಾರ್, ವಿನೋದ್ ಸುರೇಶ್ ಕೋಲೆಕಾರ್ ಮತ್ತು ಸ್ವಾನಂದ್ ವಿನೋದ್ ಕೋಲೆಕಾರ್. [ಭಾರತೀಯರ ವಿವರ]