ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾವಿನಂಚಿನಲ್ಲಿದ್ದ ಅಮ್ಮನಿಗೆ ಮರುಜನ್ಮ ನೀಡಿದ ಮಗು!

By Prasad
|
Google Oneindia Kannada News

ವಾಷಿಂಗ್ಟನ್ ಡಿಸಿ, ಸೆಪ್ಟೆಂಬರ್ 19 : ಮುದ್ದಿನ ಕಂದಮ್ಮನ ಮೊದಲ ಅಳು ಕೇಳುವ ಮೊದಲೇ ಅಮ್ಮ ಕೋಮಾಗೆ ಜಾರಿದ್ದಳು. ಆಕೆಯ ಆರೋಗ್ಯಸ್ಥಿತಿ ಯಾವ ಮಟ್ಟ ಮುಟ್ಟಿತ್ತೆಂದರೆ, ಇನ್ನು ಆಕೆಯನ್ನು ಉಳಿಸಿಕೊಳ್ಳಲು ಸಾಧ್ಯವೇ ಇಲ್ಲ, ಗುಡ್ ಬೈ ಹೇಳದೆ ವಿಧಿಯಿಲ್ಲ ಎಂಬ ಸ್ಥಿತಿ ತಲುಪಿತ್ತು.

ಮನೆಯವರಿರಲಿ ವೈದ್ಯರು ಕೂಡ ಅಸಹಾಯಕತೆಯಿಂದ ಕೈಚೆಲ್ಲಿದ್ದರು. ನರ್ಸಿಂಗ್ ವಿದ್ಯಾರ್ಥಿನಿಯಾಗಿರುವ ಶೆಲ್ಲಿ ಕಾಲಿ(24)ಯ ರಕ್ತದೊತ್ತಡ 60/40 ತಲುಪಿದ್ದರೆ, ಹೃದಯದ ಬಡಿತ ನಿಮಿಷಕ್ಕೆ 180 ಮೀರಿತ್ತು. ತಾತ್ಕಾಲಿಕ ಉಸಿರಾಟಕ್ಕೆಂದು ಸಾಧನ ಅಳವಡಿಸಲಾಗಿತ್ತಾದರೂ, ಆಕೆ ಬದುಕುಳಿಯುವ ಚಾನ್ಸ್ ಕ್ರಮೇಣ ಕ್ಷೀಣಿಸುತ್ತಿತ್ತು.

ಹುಟ್ಟಿದ ಮಗಳಿಗೆ ಅಮ್ಮ ಇಲ್ಲದಂತಾಗುತ್ತದೆಂಬ ಚಿಂತೆಯಲ್ಲಿ ಆಕೆಯ ಗಂಡ ಜೆರೆಮಿ ಕಾಲಿ ಮುಳುಗಿದ್ದರು. ವೈದ್ಯರು ತಮ್ಮೆಲ್ಲ ಪ್ರಯತ್ನಗಳನ್ನು ನಡೆಸುತ್ತಿದ್ದರು. ಏನಪ್ಪ ಮಾಡುವುದು ಅಂತ ನರ್ಸ್‌ಗಳು ಶತಪಥ ಅಡ್ಡಾಡುತ್ತಿದ್ದರು. ಅದ್ಯಾವ ಪ್ರೇರಣೆಯೋ, ಏನು ಕಥೆಯೊ ನರ್ಸೊಬ್ಬಳಿಗೆ 'ಹೀಗೆ ಮಾಡಿದರೆ ಹೇಗೆ' ಎಂಬ ಪ್ಲಾನೊಂದು ಹೊಳೆದಿದೆ. [ಮೈಮೇಲೆ ಮನೆ ಬಿದ್ದಿದ್ರೂ ಮಗುವನ್ನು ಹೊಟ್ಟೆಯಲ್ಲಿ ರಕ್ಷಿಸಿದ ಮಹಾತಾಯಿ!]

Miracle : New born child gives 'birth' to mother

ಒಂದೇ ಗಂಟೆಯ ಹಿಂದೆ ಹುಟ್ಟಿದ ಮಗಳನ್ನು ತಾಯಿಯ ಉಸಿರಿನ ಸಮೀಪ ಇಡುವುದು. ಮಗುವಿನ ವಾಸನೆ ಅಮ್ಮನಿಗೆ ಬಡಿದರೆ, ಅದರ ಅಳು ಆಕೆಯ ಕಿವಿಯನ್ನು ತಲುಪಿದರೆ, ಮಗುವಿನ ನಾಡಿಮಿಡಿತ ಅಮ್ಮನ ಹೃದಯಕ್ಕೆ ತಟ್ಟಿದರೆ, ಕಂದಮ್ಮನ ಸ್ಪರ್ಶ ಹೆತ್ತಮ್ಮನಿಗಾದರೆ ಏನಾದರೂ ಪವಾಡ ಸಂಭವಿಸೀತಾ.... ಅಂತ ಕಟ್ಟಕಡೆಯ ಪ್ರಯತ್ನಕ್ಕೆ ಕೈಇಟ್ಟಿದ್ದಾರೆ.

ಇಷ್ಟೆಲ್ಲ ಮಾಡಿ, ಗಂಡ, ವೈದ್ಯರು, ನರ್ಸುಗಳು ಉಸಿರು ಬಿಗಿಹಿಡಿದುಕೊಂಡು ನೋಡುತ್ತಿದ್ದಾರೆ. ಪುಟಾಣಿ ರೈಲಾನ್ ಗ್ರೇಸ್ ಕಾಲಿ ಮಾತ್ರ ಅಮ್ಮನನ್ನು ಬದುಕಿಸಬಲ್ಲಳು ಎಂಬ ಆಸೆಯಿಂದ ದೇವರನ್ನು ಪ್ರಾರ್ಥಿಸುತ್ತಿದ್ದಾರೆ. ರೈಲಾನ್ ಗ್ರೇಸ್ ಅಳಲಿ ಎಂದು ಕಾದಿದ್ದವರಿಗೆ ನಿರಾಶೆ ಕಾದಿತ್ತು. ಪುಟ್ಟ ಮಗು ಅಮ್ಮನ ಮಡಿಲಲ್ಲಿ ನಿದ್ದೆಗೆ ಜಾರಿತ್ತು. [ಅಮ್ಮಾ ನಿನ್ನನ್ನು ಒಂದೇ ಸಾರಿ ತಬ್ಬಿಕೊಳ್ಳಲಾ?]

ಮಗು ಅಳಲಿ ಅಂತ ಮೆತ್ತಗೆ ಗಿಂಜಿದ್ದಾರೆ, ಕಚಗುಳಿ ಇಟ್ಟಿದ್ದಾರೆ... ಮಗು ಕಡೆಗೂ ಅತ್ತೇಬಿಟ್ಟಿತು. ಯಾರೂ ನಿರೀಕ್ಷಿಸದಿದ್ದ ಪವಾಡ ಕೂಡ ಸಂಭವಿಸಿಬಿಟ್ಟಿತು. ಚಿರನಿದ್ರೆಗೆ ಜಾರಬೇಕಿದ್ದ ಶೆಲ್ಲಿಗೆ ಮಗುವಿನ ಅಳುವಿನಿಂದ ಜಿನುಗಿದ ಆ ಕಣ್ಣೀರು ಅಮೃತ ಸಿಂಚನ ಮಾಡಿತ್ತು, ಸ್ಪರ್ಶ ಮಾಂತ್ರಿಕಸ್ಪರ್ಶ ಮಾಡಿತ್ತು, ಶಕ್ತಿಯೊಂದು ಆಕೆಯಲ್ಲಿ ಸಂಚಾರ ಮಾಡಿತ್ತು.

ಶೆಲ್ಲಿಗೆ ಪ್ರಜ್ಞೆ ಮರಳಿ ಬರಲು ಒಂದು ವಾರ ಕಾಲ ಹಿಡಿಯಿತಾದರೂ, ಸಾವಿನಂಚಿನಲ್ಲಿದ್ದ ಅಮ್ಮನ ಜನುಮಕ್ಕೆ ಮಗಳು ಕಾರಣವಾಗಿದ್ದು ಪವಾಡಸದೃಶವೆ. ಪ್ರಜ್ಞೆ ಬರುತ್ತಿದ್ದಂತೆ ಮಗುವನ್ನು ಅಲ್ಲಿ ಶೆಲ್ಲಿ ಮುದ್ದಾಡಿದ್ದಾಳೆ. ಇದನ್ನು ಕಂಡ ಗಂಡ ಮತ್ತು ಆಸ್ಪತ್ರೆ ಸಿಬ್ಬಂದಿಯ ಸಂತೋಷಕ್ಕೆ ಪಾರವೇ ಇರಲಿಲ್ಲ.

"ಇದು ನಿಜಕ್ಕೂ ವಿಸ್ಮಯಕರ. ನಾನಿಂದು ಕನಸು ಮತ್ತು ವಾಸ್ತವದ ನಡುವೆ ತೇಲಾಡುತ್ತಿದ್ದೇನೆ. ಒಂದು ವಾರದ ನಿದ್ದೆಯಲ್ಲಿ ಏನಾಗಿದೆಯೋ ನನಗೆ ಗೊತ್ತಿಲ್ಲ. ಆದರೆ, ಇದೇ ಮೊದಲ ದಿನ ಎಂದು ನನಗೆ ಭಾಸವಾಗುತ್ತಿದೆ. ನನ್ನ ಮಗಳು ಎಷ್ಟು ಸುಂದರವಾಗಿದ್ದಾಳೆ" ಎಂದು 24 ವರ್ಷದ ಶೆಲ್ಲಿ ಕಾಲಿ ಮಗುವನ್ನು ಮುದ್ದಾಡಿದ್ದಾಳೆ.

English summary
Just born child gives 'birth' to mother. Yes, this miracle has happened in America. The mother had slipped to coma during child birth. Doctors, nurses, husband had given up. But, skin-to-skin method between child and mother saved the mother.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X