• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮ್ಮಾ ನಿನ್ನನ್ನು ಒಂದೇ ಸಾರಿ ತಬ್ಬಿಕೊಳ್ಳಲಾ?

By Prasad
|

"ಅಮ್ಮಾ ನಿನ್ನನ್ನು ಒಂದೇ ಸಾರಿ ತಬ್ಬಿಕೊಳ್ಳಲಾ?" ಎಂದು ತುಸು ಗಲಿಬಿಲಿಗೊಂಡಿದ್ದ ಹನ್ನೊಂದು ವರ್ಷದ ಮಗ ಕೇಳಿದಾಗ ಅಮ್ಮನಿಗೆ ಇಲ್ಲವೆನ್ನಲಾಗಲಿಲ್ಲ. ಅಪ್ಯಾಯತೆಯಿಂದ ಅಮ್ಮ ತನ್ನ ಮಗನನ್ನು ಆಲಂಗಿಸಿಕೊಂಡಿದ್ದಳು. ಅಮ್ಮನ ಕೊರಳಿಗೆ ಸುತ್ತಿದ ಆ ಕೈಗಳನ್ನು ಆತ ಇಡೀ ರಾತ್ರಿ ಬಿಟ್ಟಿರಲಿಲ್ಲ. ಅಮ್ಮನೂ ಆ ಅಪ್ಪುಗೆಯನ್ನು ಸಡಿಲಿಸಿರಲಿಲ್ಲ. ಮರುದಿನ ಏನಾಗುತ್ತದೆಂದು ಅಮ್ಮನಿಗೆ ಕಿಂಚಿತ್ತೂ ತಿಳಿದಿರಲಿಲ್ಲ. ಆದರೆ, ಮಗನಿಗೆ ಗೊತ್ತಿತ್ತಾ?

ವಾರಿಗೆಯ ಹುಡುಗರೊಂದಿಗೆ ಆಟಪಾಟವಾಡುತ್ತ ಕಾಲಕಳೆಯಬೇಕಾಗಿದ್ದ 11 ವರ್ಷದ ಮಿಗೆಲ್ ಪಂಡುವಿನಾಟಾದು ಆ ರೀತಿ ವಿಚಾರ ಮಾಡುವ ವಯಸ್ಸಲ್ಲವೇ ಅಲ್ಲ. ಆತ ಸಾವಿನ ಬಗ್ಗೆ ಪ್ರಶ್ನಿಸುತ್ತಿದ್ದ, ಆತ್ಮಗಳ ಬಗ್ಗೆ, ಸಾವಿನಾಚೆಯ ಲೋಕದ ಬಗ್ಗೆ, ದೇವರ ಬಗ್ಗೆ ಕೇಳುತ್ತಿದ್ದ. ಕೆಲ ದಿನಗಳಿಂದ ಆತ ಮೊದಲಿದ್ದಂತೆ ಇರಲಿಲ್ಲ. ಆಮಸ್ಟರ್‌ಡ್ಯಾಂ ನಿವಾಸಿಯಾದ ಅಮ್ಮ ಸಮೀರಾ ಕಾಲೇರ್‌ಗೆ ಇದೇ ಚಿಂತೆಯಾಗಿತ್ತು.

ಆತ ಪ್ರಶ್ನೆ ಕೇಳುತ್ತಿದ್ದರೂ ಉತ್ತರಿಸುವ ಗೋಜಿಗೆ ಹೋಗದೆ ತನ್ನಿಬ್ಬರು ಮಕ್ಕಳ ಲಗೇಜನ್ನು ಆಕೆ ಪ್ಯಾಕ್ ಮಾಡಿದ್ದಳು. ಮಿಗೆಲ್ ಮತ್ತು ಆತನ 19 ವರ್ಷದ ಅಣ್ಣ ಶಾಕಾ ಮರುದಿನ ಮಲೇಷ್ಯಾ ಏರ್‌ಲೈನ್ಸ್ 17ರ ಮುಖಾಂತರ ಅಜ್ಜಿಯನ್ನು ಭೇಟಿಯಾಗಲೆಂದು ಬಾಲಿಗೆ ತೆರಳುವವರಿದ್ದರು. ಅಜ್ಜಿಯ ಮನೆಗೆ ಹೋಗುವಾಗಲೆಲ್ಲ ಉತ್ಸಾಹದಿಂದಿರುತ್ತಿದ್ದ ಮಿಗೆಲ್ ಅಂದು ವಿಷಣ್ಣವದನನಾಗಿದ್ದ. ಬಾಲಿಯ ಸ್ವರ್ಗಸದೃಶ ಲೋಕ ಆತನಿಗಾಗಿ ಕಾದಿತ್ತು. ಆದರೆ, ಆತ ಮಾತ್ರ ಯಾವುದೋ ಗುಂಗಿನಲ್ಲಿ ಮುಳುಗಿದ್ದ. [ಕ್ಷಿಪಣಿ ದಾಳಿಗೆ ಮಲೇಷಿಯಾ ವಿಮಾನ ಪತನ] [ಎಲ್ಲವೂ ಸಾಂದರ್ಭಿಕ ಚಿತ್ರಗಳು]

ವಯಸ್ಸಿಗೆ ಮೀರಿದ ಚಿಂತನೆಯಲ್ಲಿ ಮುಳುಗಿದ್ದ

ವಯಸ್ಸಿಗೆ ಮೀರಿದ ಚಿಂತನೆಯಲ್ಲಿ ಮುಳುಗಿದ್ದ

ಆತನ ಮನದಲ್ಲಿ ಸುಳಿದಾಡುತ್ತಿದ್ದ ವಿಷಯ ಯಾವುದು ಗೊತ್ತಾ? "ನೀನು ಹೇಗೆ ಸಾಯಲು ಇಷ್ಟಪಡುತ್ತೀ? ಸತ್ತ ನಂತರ ನೆಲದಲ್ಲಿ ಹೂಳಿದ ನನ್ನ ದೇಹ ಏನಾಗುತ್ತದೆ? ನಮ್ಮ ಆತ್ಮಗಳು ದೇವರ ಬಳಿ ಮರಳುವುದರಿಂದ ನಮಗೇನೂ ಅನ್ನಿಸುವುದೇ ಇಲ್ಲವೆ?" ಮುಂತಾದ ಮುಗ್ಧ ಪ್ರಶ್ನೆಗಳನ್ನು ಕೇಳಿದ್ದ. ವಯಸ್ಸಿಗೆ ಮೀರಿದ ಚಿಂತನೆಯಲ್ಲಿ ಮುಳುಗಿದ್ದ. ಆತ ಹಾಗೇಕೆ ಕೇಳಿದ್ದ? ಯಾರ ಬಳಿಯೂ ಆಗ ಉತ್ತರವಿರಲಿಲ್ಲ.

ಹುಚ್ಚು ಹುಡುಗ ಎಂದು ಗಲ್ಲ ತಟ್ಟಿದ್ದಳು ಅಮ್ಮ

ಹುಚ್ಚು ಹುಡುಗ ಎಂದು ಗಲ್ಲ ತಟ್ಟಿದ್ದಳು ಅಮ್ಮ

ಹುಚ್ಚು ಹುಡುಗ ಎಂದು ಗಲ್ಲ ತಟ್ಟಿದ್ದ ಅಮ್ಮ ಜುಲೈ 16ರಂದು ಮಿಗೆಲ್ ಮತ್ತು ಶಾಕಾರನ್ನು ಏರ್ಪೋರ್ಟಿಗೆ ಬಿಟ್ಟು ಬಂದಿದ್ದಳು. ಉಳಿದ 296 ಪ್ರಯಾಣಿಕರೊಂದಿಗೆ ಕೌಲಾಲಂಪುರ ಮಾರ್ಗವಾಗಿ ಮಲೇಷ್ಯಾಗೆ ಅವರಿಬ್ಬರು ಸಹೋದರರು ಪಯಣ ಬೆಳೆಸಿದ್ದರು. 15 ಗಂಟೆಗಳ ಪ್ರಯಾಣವದು. ಮಿಗೆಲ್ ನ ಮತ್ತೊಬ್ಬ ಸಹೋದರ ಮಿಕಾಗೆ ಟಿಕೆಟ್ ಸಿಗದ ಕಾರಣ ಅದರ ಮರುದಿನ ಬಾಲಿಗೆ ಪಯಣಿಸುವವನಿದ್ದ. ತನ್ನ ಸ್ನೇಹಿತೆಯೊಡನೆ ಬಂದಿದ್ದ ಸಮೀರಾ ನಗುನಗುತ್ತಲೇ ಟಾಟಾ ಹೇಳಿದ್ದಳು.

ಅಪಘಾತವಾದ್ರೆ ಏನು ಗತಿ ಎಂದಿದ್ದ ಆತನ ಕಣ್ಣಲ್ಲಿ ಕಂಬನಿ

ಅಪಘಾತವಾದ್ರೆ ಏನು ಗತಿ ಎಂದಿದ್ದ ಆತನ ಕಣ್ಣಲ್ಲಿ ಕಂಬನಿ

ಮಿಗೆಲ್‌ಗೆ ಅದೇನಾಯಿತೋ ಏನೋ, ಹೊರಟವನು ತಿರುಗು ಓಡಿಬಂದು ಮತ್ತೆ ಅಮ್ಮನ ಕೊರಳಿಗೆ ಜೋತುಬಿದ್ದಿದ್ದ. "ಅಮ್ಮ ನಿನ್ನನ್ನು ನಾನು ಮಿಸ್ ಮಾಡ್ಕೊತೇನೆ. ಒಂದು ವೇಳೆ ವಿಮಾನ ಅಪಘಾತವಾದರೆ ಏನು ಗತಿ, ಮುಂದೇನಾಗುತ್ತದೆ?" ಎಂದು ಅಮಾಯಕವಾಗಿ ಕೇಳಿದ್ದ. ಆತನ ಕಣ್ಣಲ್ಲಿ ಕಂಬನಿಯ ಬಿಂದು.

ನೀನೇನು ಚಿಂತಿಸಬೇಡ, ಆತ ನನ್ನ ಬೇಬಿ

ನೀನೇನು ಚಿಂತಿಸಬೇಡ, ಆತ ನನ್ನ ಬೇಬಿ

ಹಾಗೇನು ಆಗಲ್ಲ ಪುಟ್ಟಾ, ಆ ರೀತಿ ಚಿಂತಿಸಬಾರದು. ಏಲ್ಲ ಸರಿಯಾಗಿರುತ್ತದೆ ಎಂದು ಹೇಳಿ, ತಮ್ಮನನ್ನು ಚೆನ್ನಾಗಿ ನೋಡಿಕೊ ಎಂದು ಅಣ್ಣನಿಗೆ ಹೇಳಿದ್ದಳು ಅಮ್ಮ. ನೀನೇನು ಚಿಂತಿಸಬೇಡ, ಆತ ನನ್ನ ಬೇಬಿ ಎಂದು ಶಾಕಾ ಅಮ್ಮನಿಗೆ ಅಭಯಹಸ್ತ ನೀಡಿದ್ದ. ಮಡುಗಟ್ಟಿದ್ದ ದುಃಖದಿಂದಲೇ ಮಿಗೆಲ್ ತಿರುತಿರುಗಿ ನೋಡುತ್ತ ಬೈ ಹೇಳಿದ್ದ.

ವಿಮಾನ ಅಪಘಾತಕ್ಕೀಡಾಗಿದೆ ಎಂದು ಆತ ಕಿರುಚಿದ್ದ

ವಿಮಾನ ಅಪಘಾತಕ್ಕೀಡಾಗಿದೆ ಎಂದು ಆತ ಕಿರುಚಿದ್ದ

ಶಾಕಾ ಮರೆತುಹೋಗಿದ್ದ ಬೂಟಿನ ಸಾಕ್ಸನ್ನು ಕೊಳ್ಳಲೆಂದು ಅಂಗಡಿಗೆ ಹೋಗಿದ್ದಳು ಸಮೀರಾ. ಅಷ್ಟರಲ್ಲಿಯೇ ಸ್ನೇಹಿತರೊಬ್ಬರಿಂದ ಫೋನ್ ಬಂದಿತ್ತು. "ಎಲ್ಲಿದ್ದೀಯಾ ನೀನು?" ಎಂದು ಆತ ಕಿರುಚಿದ್ದ. "ವಿಮಾನ ಅಪಘಾತವಾಗಿದೆ" ಎಂದ ಆತನ ಮಾತು ಕೇಳಿ ಆ ಮಕ್ಕಳ ಅಮ್ಮನಿಗೆ ತಲೆಸುತ್ತು ಬಂದಿರಲಿಲ್ಲ, ಆಕಾಶವೇ ಕಳಚಿಬಿದ್ದಂತಾಗಿತ್ತು.

ದುರಂತದ ಸೂಚನೆ ಆತನಿಗೆ ಮೊದಲೇ ಸಿಕ್ಕಿತ್ತೆ?

ದುರಂತದ ಸೂಚನೆ ಆತನಿಗೆ ಮೊದಲೇ ಸಿಕ್ಕಿತ್ತೆ?

ಇದು ಜುಲೈ 16ರಂದು ಅಪಘಾತಕ್ಕೀಡಾದ ಎಮ್ಎಚ್17 ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಕ್ಕಳಿಬ್ಬರ ಮನಮಿಡಿಯುವ ಕಥೆ. ಏನೋ ಅವಘಡ ಸಂಭವಿಸಲಿದೆ ಎಂದು ಮಿಗೆಲ್‌ಗೆ ಮೊದಲೇ ತಿಳಿದಿತ್ತೆ? ದುರಂತದ ಸೂಚನೆ ಆತನಿಗೆ ಮೊದಲೇ ಸಿಕ್ಕಿತ್ತೆ? ಯಮರಾಯ ಕುಣಿಕೆ ಹಿಡಿದು ನಿಂತಿದ್ದಾನೆ ಎಂದು ಆತನಿಗೆ ಗೋಚರಿಸಿತ್ತೆ? ಈ ವೈಜ್ಞಾನಿಕ ಯುಗದಲ್ಲಿ ಹೀಗೂ ಆಗಲು ಸಾಧ್ಯವೆ?

ಆತನ ಪ್ರಶ್ನೆಗಳಿಗೆ ನಾನು ಉತ್ತರಿಸಬೇಕಿತ್ತು

ಆತನ ಪ್ರಶ್ನೆಗಳಿಗೆ ನಾನು ಉತ್ತರಿಸಬೇಕಿತ್ತು

ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಬಲು ಕಷ್ಟ. ದೇವರನ್ನು, ಅತೀಂದ್ರೀಯ ಶಕ್ತಿಗಳನ್ನು ನಂಬುವವರು ಏನು ಹೇಳುತ್ತಾರೋ ಏನೋ? ಅಮ್ಮನಿಗೆ ಮಾತ್ರ ಬರಸಿಡಿಲು ಬಡಿದಂತಾಗಿದೆ. ಆತನ ಮಾತನ್ನು ನಾನು ಗಂಭೀರವಾಗಿ ಪರಿಗಣಿಸಬೇಕಿತ್ತು, ಆತನ ಪ್ರಶ್ನೆಗಳಿಗೆ ನಾನು ಉತ್ತರಿಸಬೇಕಿತ್ತು ಎಂದು ಆಕೆ ಕಂಬನಿ ಮಿಡಿಯುತ್ತಿದ್ದಾಳೆ.

English summary
That 11-year-old little boy had asked his mother if he can hug her. Mother obliged and wrapped her arms around the son, who was slightly agitated. He would ask questions about death, soul, god etc. Did he sense that he is going to die tomorrow?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X