ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ತಂಟೆಗೆ ಬಂದ್ರೆ ಸರಿ ಇರಲ್ಲ..! ಚೀನಾ ಕಣ್ಣು ಮಲೇಷಿಯಾ ಮೇಲೆ..?

|
Google Oneindia Kannada News

ಚೀನಾ ವಿರುದ್ಧ ಏಷ್ಯಾದ ಬಹುತೇಕ ರಾಷ್ಟ್ರಗಳು ರೊಚ್ಚಿಗೆದ್ದಿವೆ. ಅದ್ರಲ್ಲೂ ದಕ್ಷಿಣ ಚೀನಾ ಸಮುದ್ರ ಆಸುಪಾಸು ಹರಡಿಕೊಂಡಿರುವ ದೇಶಗಳು ಚೀನಾ ಕಂಡರೆ ಕೆಂಡವಾಗುತ್ತಿವೆ. ಮಲೇಷಿಯಾ ಕೂಡ ಇಂತಹದ್ದೇ ಆಕ್ರೋಶ ಹೊರಹಾಕಿದೆ. ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ, ಮಲೇಷಿಯಾಗೆ ಸೇರಬೇಕಾದ ಜಲಗಡಿಯ ಮೇಲೆ ಯಾವುದೇ ಅನುಮತಿ ಪಡೆಯದೆ ಚೀನಾ ಮಿಲಿಟರಿ ವಿಮಾನವನ್ನ ಹಾರಿಸಿದೆ ಎಂಬ ಆರೋಪ ಕೇಳಿಬಂದಿದೆ.

ಇದು ಮಲೇಷಿಯಾ ಸರ್ಕಾರ ಹಾಗೂ ಮಲೇಷಿಯಾ ಸೇನೆಯನ್ನ ರೊಚ್ಚಿಗೆಬ್ಬಿಸಿದೆ. ಮಲೇಷಿಯಾದ ಪೂರ್ವ ಕರಾವಳಿಯಲ್ಲಿ ಚೀನಾ ಸೇನೆಗೆ ಸೇರಿದ್ದ 16 ವಿಮಾನಗಳು ಹಾದು ಹೋಗಿವೆ. ಸುಮಾರು 27 ಸಾವಿರ ಅಡಿಯ ಮೇಲೆ, ಮಲೇಷಿಯಾದಿಂದ 110 ಕಿಲೋ ಮೀಟರ್ ಅಂತರದಲ್ಲಿ ವಿಮಾನಗಳು ಹಾರಿ ಹೋಗಿವೆ.

ಇನ್ನು ಈ 16 ವಿಮಾನಗಳಲ್ಲಿ ಚೀನಾ ಸೇನೆಯ ಸರಕು ಸಾಗಾಣಿಕೆ ವಿಮಾನ ಕೂಡ ಸೇರಿತ್ತು ಎನ್ನಲಾಗಿದೆ. ಚೀನಾ ಸೇನೆ ವಿಮಾನವನ್ನೇನೊ ಹಾರಿಸಿದೆ, ಆದರೆ ಹಾರಾಟ ನಡೆಸುವಾಗ ಮಲೇಷಿಯಾದ ಅನುಮತಿ ಪಡೆದಿರಲಿಲ್ಲವಂತೆ. ಈ ವಿಷಯ ಗೊತ್ತಾಗುತ್ತಿದ್ದಂತೆ ಚೀನಾ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದೆ ಮಲೇಷಿಯಾ ಮಿಲಿಟರಿ.

 ಚೀನಾ ಜಲಗಡಿ

ಚೀನಾ ಜಲಗಡಿ

ಹೀಗೆ ಏಪ್ರಿಲ್‌ನಲ್ಲೂ ಚೀನಾ ಜಲಗಡಿ ಉಲ್ಲಂಘನೆ ಮಾಡಿದ್ದ ಆರೋಪ ಕೇಳಿಬಂದಿತ್ತು. ತನ್ನ 'ಎಕ್ಸ್‌ಕ್ಲೂಸಿವ್ ಎಕಾನಾಮಿಕ್ ಝೋನ್' ಸಮೀಪವೇ 200ಕ್ಕೂ ಹೆಚ್ಚು ಚೀನಿ ಮೀನುಗಾರಿಕಾ ದೋಣಿಗಳು ಬಂದಿವೆ ಎಂದು ಫಿಲಿಪೈನ್ಸ್‌ ರೊಚ್ಚಿಗೆದ್ದಿತ್ತು. ಫಿಲಿಪೈನ್ಸ್‌ ಅಧ್ಯಕ್ಷರಿಂದಲೂ ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿತ್ತು, ರೊಡ್ರಿಗೋ ಡುಟರ್ಟೆ ಈ ಬಗ್ಗೆ ಅಸಮಾಧಾನ ಹೊರಹಾಕಿ ನಿಮ್ಮ ದೋಣಿಗಳನ್ನು ಪಾಪಸ್ ಕರೆಸಿಕೊಳ್ಳಿ ಎಂದು ಚೀನಾಗೆ ವಾರ್ನಿಂಗ್ ನೀಡಿದ್ದರು. ಇಷ್ಟಾದರೂ ವಿವಾದ ತಣ್ಣಗಾಗೇ ಇಲ್ಲ, ಚೀನಾ ಸೇನಾ ವಿಮಾನಗಳು ಮಲೇಷಿಯಾ ಜಲಗಡಿ ಮೇಲೆ ಹಾರಾಟ ನಡೆಸಿರುವ ಆರೋಪ ಕೇಳಿಬಂದಿದೆ.

ನೈಸರ್ಗಿ ಸಂಪನ್ಮೂಲ

ನೈಸರ್ಗಿ ಸಂಪನ್ಮೂಲ

ಅಂದಹಾಗೆ ದಕ್ಷಿಣ ಚೀನಾ ಸಮುದ್ರದಲ್ಲಿ ಊಹೆಗೂ ಸಿಗದಷ್ಟು ನೈಸರ್ಗಿ ಸಂಪನ್ಮೂಲವಿದ್ದು, ಇದೇ ಕಾರಣಕ್ಕೆ ಅನುಮಾನಸ್ಪದ ಚಟುವಟಿಕೆಗಳು ನಡೆಯುತ್ತಿವೆ ಎಂಬ ಆರೋಪವಿದೆ. 2 ತಿಂಗಳ ಹಿಂದಷ್ಟೇ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಸೇನೆ ಬೃಹತ್ ರಂಧ್ರ ಕೊರೆದಿದೆ ಎಂದು ಆರೋಪ ಮಾಡಲಾಗಿತ್ತು. 'ಸೀ ಬುಲ್-II' ಬಳಸಿ ದಕ್ಷಿಣ ಚೀನಾ ಸಮುದ್ರದಲ್ಲಿ ಸಂಶೋಧನೆ ನಡೆಸುತ್ತಿರುವ ಗುಮಾನಿ ವ್ಯಕ್ತವಾಗಿತ್ತು. 2,060 ಮೀಟರ್ ಅಂದ್ರೆ 6,760 ಅಡಿ ಆಳದಲ್ಲಿ 231 ಮೀಟರ್ ರಂಧ್ರ ಕೊರೆದಿದ್ದಾರೆ ಎನ್ನಲಾಗಿತ್ತು. ಇಂತಹ ಆರೋಪಗಳ ಹಸಿಹಸಿಯಾಗಿ ಇರುವಾಗಲೇ ಚೀನಾ ಸೇನೆ ನೆರೆ ರಾಷ್ಟ್ರಗಳ ಜಲಗಡಿ ಉಲ್ಲಂಘನೆ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಇದು ಉರಿಯುವ ಬೆಂಕಿಗೆ ತುಪ್ಪ ಸುರಿದಿದೆ.

ನಾಯಕರಿಗೆ ಸ್ಪಷ್ಟ ಸಂದೇಶ

ನಾಯಕರಿಗೆ ಸ್ಪಷ್ಟ ಸಂದೇಶ

ದಕ್ಷಿಣ ಚೀನಾ ಸಮುದ್ರದಲ್ಲಿ ಇತ್ತೀಚೆಗೆ ಅಮೆರಿಕದ ನೌಕಾಪಡೆ ಗಸ್ತು ತಿರುವುದನ್ನು ಹೆಚ್ಚಿಸಿದೆ ಎನ್ನಲಾಗುತ್ತಿದೆ. ಈ ಕಾರಣಕ್ಕೆ ಚೀನಾ ದಕ್ಷಿಣ ಚೀನಾ ಸಮುದ್ರದಲ್ಲಿ ಬೃಹತ್ ರಂಧ್ರ ಕೊರೆದು ಅಧ್ಯಯನ ನಡೆಸುವ ಮೂಲಕ ಅಮೆರಿಕದ ನಾಯಕರಿಗೆ ಸ್ಪಷ್ಟ ಸಂದೇಶ ರವಾನಿಸುತ್ತಿದೆ. ಮತ್ತೊಂದ್ಕಡೆ ಅಮೆರಿಕ ಪರಿಸ್ಥಿತಿಯನ್ನ ತನ್ನ ಲಾಭಕ್ಕೆ ಬಳಸಿಕೊಳ್ಳುತ್ತಿದೆ ಅಂತಲೂ ತಜ್ಞರು ಆರೋಪಿಸುತ್ತಿದ್ದಾರೆ. ಆದ್ರೆ ಚೀನಾ ಮಾತ್ರ ಅಮೆರಿಕದ ಬೆದರಿಕೆ ಅಥವಾ ಎಚ್ಚರಿಕೆಗೆ ಬಗ್ಗದೆ ದಕ್ಷಿಣ ಚೀನಾ ಸಮುದ್ರ ನಮ್ಮದು ಎನ್ನುತ್ತಿದೆ. ಇದು ಆತಂಕವನ್ನ ಮತ್ತಷ್ಟು ಹೆಚ್ಚುಮಾಡಿದೆ.

ದಕ್ಷಿಣ ಚೀನಾ ಸಮುದ್ರದಲ್ಲಿ ಹಿಡಿತ

ದಕ್ಷಿಣ ಚೀನಾ ಸಮುದ್ರದಲ್ಲಿ ಹಿಡಿತ

ದಕ್ಷಿಣ ಚೀನಾ ಸಮುದ್ರದಲ್ಲಿ ಹಿಡಿತ ಸಾಧಿಸುವ ಚೀನಾ ಪ್ರಯತ್ನ ಇಂದು, ನಿನ್ನೆಯದಲ್ಲ. ಸುಮಾರು 3-4 ದಶಕಗಳಿಂದಲೂ ಈ ಜಾಗಕ್ಕಾಗಿ ರಕ್ತ ರಹಿತ ಬಡಿದಾಟ ನಡೆಯುತ್ತಲೇ ಇದೆ. ಅಮೆರಿಕ ಚೀನಾ ವಿರುದ್ಧ ಈ ವಿಚಾರದಲ್ಲಿ ಜಾಗತಿಕ ಮಟ್ಟದಲ್ಲಿ ಕತ್ತಿ ಮಸೆಯುತ್ತಲೇ ಇದೆ. ಇಷ್ಟಕ್ಕೆಲ್ಲಾ ಕಾರಣವಾಗಿರುವುದು ದಕ್ಷಿಣ ಚೀನಾ ಸಮುದ್ರದಲ್ಲಿ ಅವಿತಿರುವ ಸಂಪತ್ತು. ಸುಮಾರು 3.5 ಮಿಲಿಯನ್ ಸ್ಕ್ವೇರ್ ಕಿಲೋ ಮೀಟರ್ ಅಂದರೆ ಭಾರತ ಹೊಂದಿರುವ ಭೂಭಾಗಕ್ಕಿಂತಲೂ ದೊಡ್ಡದಾದ ಪ್ರದೇಶ ದಕ್ಷಿಣ ಚೀನಾ ಜಲಗಡಿಗೆ ಇದೆ. ಭಾರಿ ಪ್ರಮಾಣದ ನೈಸರ್ಗಿತ ಸಂಪನ್ಮೂಲ ಹಾಗೂ ವ್ಯವಹಾರ ನಡೆಸುವ ಜಾಗ ಇದಾಗಿದೆ.

ಚೀನಾ ಸರ್ಕಾರ ನೌಕಾ ಬಲ

ಚೀನಾ ಸರ್ಕಾರ ನೌಕಾ ಬಲ

ಚೀನಾ ಸರ್ಕಾರ ನೌಕಾ ಬಲ ಹೆಚ್ಚಿಸಲು ಮತ್ತಷ್ಟು ಆದ್ಯತೆ ನೀಡುತ್ತಿದ್ದು, ಮುಂದಿನ 4 ವರ್ಷಗಳ ಅವಧಿಯಲ್ಲಿ ಈಗಿರುವ 360 ಯುದ್ಧ ನೌಕೆಗಳನ್ನು 400ಕ್ಕೆ ಏರಿಸುವ ಗುರಿ ಹೊಂದಲಾಗಿದೆ. ಇದು ತನ್ನ ಜಲ ಗಡಿಯಲ್ಲಿನ ಭದ್ರತೆ ಹಾಗೂ ಶತ್ರು ಪಡೆಗಳಿಗೆ ದೊಡ್ಡ ಸಂದೇಶವಾಗಲಿದೆ ಎಂಬುದು ಚೀನಾ ಲೆಕ್ಕಾಚಾರ. ಈಗಾಗಲೇ ಭೂ ಸೇನೆ ಹಾಗೂ ವಾಯು ಸೇನೆಗಳಲ್ಲೂ ಬಲ ಪ್ರದರ್ಶನ ಮಾಡಿರುವ ಚೀನಿ ಸೇನೆ, ಸಮದ್ರದ ಮೇಲೂ ಹಿಡಿತ ಸಾಧಿಸುವ ಮುನ್ಸೂಚನೆ ನೀಡಿದೆ. ಪ್ರಮುಖವಾಗಿ ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾ ಪ್ರತಿಪಾದಿಸುವ ಹಕ್ಕು ಸ್ವಾಮ್ಯ ಇದರಿಂದ ಮತ್ತಷ್ಟು ಗಟ್ಟಿಯಾಗಲಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಿಯರ ಪ್ರಾಬಲ್ಯವನ್ನು ತಗ್ಗಿಸಲು ಅಮೆರಿಕ ನೇತೃತ್ವದಲ್ಲಿ 'ಕ್ವಾಡ್' ಒಕ್ಕೂಟ ಪ್ರಯತ್ನಿಸುತ್ತಿದೆ.

ನೈಸರ್ಗಿಕ ಅನಿಲ ಅಡಗಿದೆ

ನೈಸರ್ಗಿಕ ಅನಿಲ ಅಡಗಿದೆ

ಅಮೆರಿಕದ ಸರ್ಕಾರಿ ಸಂಸ್ಥೆ ನೀಡಿರುವ ಮಾಹಿತಿಯಂತೆ ದಕ್ಷಿಣ ಚೀನಾ ಸಮುದ್ರದಲ್ಲಿ 190 ಟ್ರಿಲಿಯನ್ ಕ್ಯೂಬಿಕ್ ಅಡಿ ನೈಸರ್ಗಿಕ ಅನಿಲ ಅಡಗಿದೆ. ಇಷ್ಟು ಗ್ಯಾಸ್ ಸಿಕ್ಕರೆ ಹತ್ತಾರು ವರ್ಷ ಚೀನಾ ಯಾರ ಬಳಿಯೂ ನ್ಯಾಚ್ಯುರಲ್ ಗ್ಯಾಸ್‌ಗೆ ಕೈಚಾಚುವ ಅವಶ್ಯಕತೆ ಇರೋದಿಲ್ಲ. ಹಾಗೇ 11 ಬಿಲಿಯನ್ ಬ್ಯಾರೆಲ್‌ ಪೆಟ್ರೋಲ್, ಡೀಸೆಲ್ ಸಂಯುಕ್ತ ಇಲ್ಲಿ ಅಡಗಿದೆ. ಇಷ್ಟೇ ಆಗಿದ್ದರೆ ಚೀನಾ ಅಷ್ಟೊಂದು ತಲೆಕೆಡಿಸಿಕೊಳ್ಳುವ ಸಾಧ್ಯತೆ ಕಡಿಮೆ ಇರುತ್ತಿತ್ತೇನೋ. ಆದರೆ ಇದೆಲ್ಲವನ್ನೂ ಮೀರಿಸುವ ಖಜಾನೆ ದಕ್ಷಿಣ ಚೀನಾ ಸಮುದ್ರದಲ್ಲಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಅಮೂಲ್ಯ ಅದಿರುಗಳಿವೆ. ಚಿನ್ನ ಸೇರಿದಂತೆ ಟಿನ್, ಕ್ರೋಮೈಟ್, ಮ್ಯಾಗ್ನಟೈಟ್, ಜಿರ್ಕಾನ್ ಮತ್ತಿತರ ಅದಿರುಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ಇಷ್ಟು ಪ್ರಮಾಣದ ಸಂಪತ್ತನ್ನು ಬಿಟ್ಟುಕೊಡಲು ಚೀನಾ ಬಿಲ್‌ಕುಲ್ ಸಿದ್ಧವಿಲ್ಲ.

ದಕ್ಷಿಣ ಚೀನಾ ಸಮುದ್ರ ತೈಲ ಹಾಗೂ ಅದಿರು

ದಕ್ಷಿಣ ಚೀನಾ ಸಮುದ್ರ ತೈಲ ಹಾಗೂ ಅದಿರು

ಆಶ್ಚರ್ಯವಾದರೂ ಇದು ನಂಬಲೇಬೇಕಾದ ವಿಚಾರ. ದಕ್ಷಿಣ ಚೀನಾ ಸಮುದ್ರ ತೈಲ ಹಾಗೂ ಅದಿರುಗಳನ್ನು ಮಾತ್ರ ಹೊಂದಿಲ್ಲ. ಸಂಪದ್ಭರಿತ ವ್ಯಾಪಾರವನ್ನೂ ನಡೆಸುತ್ತಾ ಬಂದಿದೆ. ಸೌತ್ ಚೀನಾ ಸಮುದ್ರ ಮಾರ್ಗವಾಗಿ ಪ್ರತಿವರ್ಷವೂ ಸುಮಾರು 5.3 ಟ್ರಿಲಿಯನ್ ಮೊತ್ತದ ವ್ಯಾಪಾರ, ವಹಿವಾಟು ನಡೆಯುತ್ತಿದೆ. ಇದು ಜಗತ್ತಿನಲ್ಲಿ ಜಲ ಮಾರ್ಗದ ಮೂಲಕ ನಡೆಯುವ ವ್ಯಾಪಾರದ 3ನೇ ಒಂದು ಭಾಗವಾಗಿದೆ. ಭಾರತವು ಕೂಡ ಪ್ರತಿವರ್ಷ 200 ಬಿಲಿಯನ್ ಡಾಲರ್ ಮೊತ್ತದ ವಹಿವಾಟನ್ನ ದಕ್ಷಿಣಚೀನಾ ಸಮುದ್ರ ಮಾರ್ಗದ ಮೂಲಕ ನಡೆಸುತ್ತದೆ. ಅಮೆರಿಕ, ಜಪಾನ್, ಚೀನಾ, ಕೊರಿಯಾ, ಆಸ್ಟ್ರೇಲಿಯಾ ಹೀಗೆ ಹತ್ತಾರು ದೇಶಗಳು ಇದೇ ಮಾರ್ಗ ಬಳಸಿ ವ್ಯಾಪಾರ ನಡೆಸುತ್ತಿವೆ. ಇದೇ ಕಾರಣಕ್ಕೆ ದಕ್ಷಿಣ ಚೀನಾ ಸಮುದ್ರ ಸಂಘರ್ಷದ ತಾಣವಾಗಿ ಮಾರ್ಪಟ್ಟಿದೆ.

English summary
Malaysia alleged that China military planes are flying over the disputed area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X