ಚೀನಾಗೆ ನೇಪಾಳ ಬೈ ಬೈ, ಭಾರತದೊಂದಿಗೆ ಸೈ- ಪ್ರಧಾನಿ ಮೋದಿ ಭೇಟಿ ಮಹತ್ವ
ಕಠ್ಮಂಡು, ಮೇ 17: ಪ್ರಧಾನಿ ನರೇಂದ್ರ ಮೋದಿ ಸೋಮವಾರ ಬುದ್ಧ ಪೂರ್ಣಿಮಾ ದಿನದಂದು ನೇಪಾಳಕ್ಕೆ ಭೇಟಿ ನೀಡಿದ್ದಾರೆ. ನೇಪಾಳ ಪ್ರಧಾನಿ ಶೇರ್ ಬಹಾದೂರ್ ದೇವುಬಾರಿಂದ ಭವ್ಯ ಸ್ವಾಗತ ಸಿಕ್ಕಿದೆ. ಇಬ್ಬರೂ ಕೂಡ ಲುಂಬಿನಿಯಲ್ಲಿರವ ಮಾಯಾ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಲುಂಬಿನಿ ಮಠದ ಪ್ರದೇಶದಲ್ಲಿ ಬೌದ್ಧ ಸಾಂಸ್ಕೃತಿ ಮತ್ತು ಪಾರಂಪರಿಕ ಕೇಂದ್ರವೊಂದಕ್ಕೆ ಪಿಎಂ ಮೋದಿ ಈ ಸಂದರ್ಭದಲ್ಲಿ ಅಡಿಗಲ್ಲು ಹಾಕಿದ್ದಾರೆ. ಬೌದ್ಧ ಧರ್ಮ ಸಂಸ್ಥಾಪಕ ಗೌತಮ ಬುದ್ಧ ಸಿದ್ಧಾರ್ಥನಾಗಿ ಇದೇ ಲುಂಬಿನಿ ಪರದೇಶದಲ್ಲಿ ಜನಿಸಿದ್ದು. ಇದೀಗ ಈ ಐತಿಹಾಸಿಕ ಸ್ಥಳದಲ್ಲಿ ಭಾರತ ಮತ್ತು ನೇಪಾಳ ಪ್ರಧಾನಿಗಳಿಬ್ಬರು ಚೀನಾಗೆ ಹೊಸ ಸಂದೇಶ ರವಾನಿಸಿದಂತಿದೆ.
ಭಾರತ ಮತ್ತು ನೇಪಾಳ ಪ್ರಧಾನಿಗಳು ಭೇಟಿಯಾದರೆ ಚೀನಾ ಯಾಕೆ ತಲೆಕೆಡಿಸಿಕೊಳ್ಳಬೇಕು ಎನಿಸಬಹುದು. ಕಳೆದ ಕೆಲ ವರ್ಷಗಳಿಂದ ಭಾರತದ ಜೊತೆ ನೇಪಾಳ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುತ್ತಿದೆ. ಹಿಂದಿನ ಪ್ರಧಾನಿ ಕೆಪಿ ಶರ್ಮಾ ಓಲಿ ಸರ ನರೇಂದ್ರ ಮೋದಿಕಾರದ ಅವಧಿಯಲ್ಲಿ ಎರಡೂ ದೇಶಗಳ ಸ್ನೇಹಕ್ಕೆ ಆಗಿದ್ದ ಹಾನಿಯನ್ನು ಶೇರ್ ಬಹಾದೂರ್ ದೇವುಬಾ ಅವಧಿಯಲ್ಲಿ ಸರಿಪಡಿಸುವ ಕೆಲಸ ಆಗುತ್ತಿದೆ.
ಬುದ್ಧ ಪೂರ್ಣಿಮೆ ಹಿನ್ನೆಲೆಯಲ್ಲಿ ನೇಪಾಳಕ್ಕೆ ಪ್ರಧಾನಿ ಮೋದಿ ಭೇಟಿ
ಇಷ್ಟೇ ಆಗಿದ್ದರೆ ಚೀನಾ ಯೋಚಿಸುವ ಅಗತ್ಯ ಇರಲಿಲ್ಲ. ಭಾರತದೊಂದಿಗೆ ಸ್ನೇಹ ಸಂಪಾದನೆ ಮಾಡುವ ಜೊತೆ ಜೊತೆಗೆ ಚೀನಾದಿಂದಲೂ ನೇಪಾಳ ದೂರವಾಗುತ್ತಿರುವುದು ಗಮನಾರ್ಹ. ಶ್ರೀಲಂಕಾದ ಆರ್ಥಿಕ ಪರಿಸ್ಥಿತಿ ನೇಪಾಳಕ್ಕೆ ಒಂದು ಪಾಠವಾಗಿದೆ. ನೆರವು ನೀಡುವ ಹೆಸರಿನಲ್ಲಿ ಸಾಲ ನೀಡಿ ಶೂಲಕ್ಕೆ ಸಿಲುಕಿಸುವ ಚೀನಾದ ತಂತ್ರಗಾರಿಕೆಯನ್ನು ನೇಪಾಳ ಸಕಾಲಕ್ಕೆ ಅರ್ಥ ಮಾಡಿಕೊಂಡಿದೆ. ಹೀಗಾಗಿ, ಚೀನಾದ ಪ್ರತಿಷ್ಠಿತ ಮತ್ತು ಮಹತ್ವಾಕಾಂಕ್ಷಿ ಬಿಆರ್ಐ ಯೋಜನೆಯನ್ನು ನೇಪಾಳ ಸ್ಥಗಿತಗೊಳಿಸಿ ಸುಮ್ಮನಾಗಿದೆ. ನೇಪಾಳವನ್ನು ಹಿಡಿದಿಟ್ಟುಕೊಂಡು ಭಾರತವನ್ನು ಹಣಿಯುವ ದುಸ್ಸಾಹಸಕ್ಕೆ ಚೀನಾ ಕೈಹಾಕುವುದು ಕಷ್ಟವಾಗಿದೆ ಎಂದು ತಜ್ಞರು ಹೇಳುತ್ತಾರೆ.
ಕೆಪಿ ಶರ್ಮಾ ಸರಕಾರದ ಯಡವಟ್ಟು:
ಹಿಂದಿನ ಪ್ರಧಾನಿ ಖಡ್ಗಪ್ರಸಾದ್ ಶರ್ಮಾ (ಕೆ ಪಿ ಶರ್ಮಾ ಓಲಿ) ನೇತೃತ್ವದ ಸರಕಾರ ಚೀನಾ ಜೊತೆ ಪರಮಾಪ್ತವಾಗಿತ್ತು. ಅದೇ ಭರದಲ್ಲಿ ಭಾರತವನ್ನು ಅಕ್ಷರಶಃ ಶತ್ರುದೇಶವೆಂಬಂತೆ ಕಾಣುತ್ತಿತ್ತು. 2015ರ ಲಿಪುಲೇಖ ಗಡಿವಿವಾದವನ್ನು ಅನಗತ್ಯವಾಗಿ ಕೆಣಕುವ ಕೆಲಸ ಮಾಡಿತು. ಭಾರತಕ್ಕೆ ಸೇರಿದ ಮೂರು ಪ್ರದೇಶಗಳನ್ನು ಒಳಗೊಂಡ ನೇಪಾಳ ದೇಶದ ನಕ್ಷೆಯನ್ನು ರಚಿಸಿತು. ವಿದೇಶ ವ್ಯವಹಾರ ಪರಿಣಿತರ ಪ್ರಕಾರ, ನೇಪಾಳದ ಪ್ರಧಾನಿ ಚೀನಾದ ಕೈಗೊಂಬೆಯಾಗಿದ್ದರೆನ್ನಲಾಗಿದೆ. ಮೂರು ಬಾರಿ ಪ್ರಧಾನಿಯಾಗಿದ್ದ ಅವರು 2021ರ ಜುಲೈನಲ್ಲಿ ಅಧಿಕಾರ ಕಳೆದುಕೊಂಡರು.

ಇದೀಗ ಶೇರ್ ಬಹಾದೂರ್ ದೇವುವಾ ಪ್ರಧಾನಿ ಆದ ಬಳಿಕ ಭಾರತ ಮತ್ತು ನೇಪಾಳ ನಡುವಿನ ಸ್ನೇಹಕ್ಕೆ ಮತ್ತೆ ಜೀವ ಬಂದಿದೆ. ಅವರು ಪ್ರಧಾನಿ ಆದ ನಂತರ ಭಾರತಕ್ಕೆ ಭೇಟಿ ಕೊಟ್ಟರು. ಪ್ರಧಾನಿಯಾಗಿ ಅವರಿಗೆ ಅದು ಮೊದಲ ವಿದೇಶೀ ಭೇಟಿ. ಇದು ನೇಪಾಳ ಸರಕಾರದ ಹೊಸ ಆದ್ಯತೆ ಏನೆಂಬುದು ಸ್ಪಷ್ಟವಾಗಿದೆ. ಪ್ರಧಾನಿ ನರೇಂದ್ರ ಮೋದಿ ಎರಡನೇ ಬಾರಿ ಅಧಿಕಾರಕ್ಕೆ ಬಂದ ಬಳಿಕ ನೇಪಾಳಕ್ಕೆ ನೀಡಿರುವ ಮೊದಲ ಭೇಟಿ ಇದಾಗಿದೆ. ಇಲ್ಲಿಂದ ಎರಡೂ ದೇಶಗಳ ಮಧ್ಯೆ ಬಾಂಧವ್ಯ ಯಾವ ಮಟ್ಟಕ್ಕೆ ಹೋಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.
(ಒನ್ಇಂಡಿಯಾ ಸುದ್ದಿ)