• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೇರಳ ಪ್ರವಾಹ: ಹವಾಮಾನ ವೈಪರೀತ್ಯದ ಗಂಡಾಂತರದ ಮುನ್ಸೂಚನೆಯೇ?

|

ಪ್ಯಾರಿಸ್, ಆಗಸ್ಟ್ 25: ಹಿಂದೆಂದೂ ಕಂಡರಿಯದ ಮಳೆ, ಪ್ರವಾಹದ ದುರಂತಗಳಿಗೆ ಕೇರಳ ಮತ್ತು ಕೊಡಗು ಸಾಕ್ಷಿಯಾಗಿವೆ. ವಿಪರೀತ ಮಳೆ, ಭೂಕುಸಿತ, ಇದ್ದಕ್ಕಿದ್ದಂತೆ ಉಲ್ಬಣವಾಗುವ ಪ್ರವಾಹ ಪರಿಸ್ಥಿತಿಯಿಂದ ಜನರು ಕಂಗಾಲಾಗಿದ್ದಾರೆ.

ನೈಸರ್ಗಿಕ ಸಂಪತ್ತು, ಕಣ್ಮನ ತಣಿಸುವ ರಮಣೀಯ ಸೌಂದರ್ಯ ಎಂದು ನಾವೆಲ್ಲರೂ ಹಾಡಿಹೊಗಳುತ್ತಿದ್ದ ಹಸಿರು ಇಂದು ಬರಿ ಕೆಸರಾಗಿ ಕಾಣಿಸುತ್ತಿದೆ.

ಕೇರಳ, ಕೊಡಗು ಪ್ರವಾಹಕ್ಕೆ 'ಸೋಮಾಲಿ ಜೆಟ್‌' ಕಾರಣ: ಸ್ಫೋಟಕ ಮಾಹಿತಿ

ಪ್ರಕೃತಿಯ ಮುನಿಸಿಗೆ ತುತ್ತಾಗಿ ಎಲ್ಲವೂ ಛಿದ್ರವಾಗಿದೆ. ಇದಕ್ಕೆ ಪ್ರಕೃತಿಯೇ ಚಿಕಿತ್ಸೆ ನೀಡಬೇಕೇ ಅಥವಾ ನಾವು ಮನುಷ್ಯರು ಮತ್ತೆ 'ಕಟ್ಟುವ' ಕಾರ್ಯಕ್ಕೆ ಮುಂದಾಗಬೇಕೇ ಎಂಬ ಪ್ರಶ್ನೆಗಳು ನಮ್ಮ ಮುಂದಿವೆ. ಆದರೆ, ನಾವು ಕಟ್ಟಿದ್ದನ್ನು ಮತ್ತು ಪ್ರಕೃತಿ ಸ್ವತಃ ಕಟ್ಟಿಕೊಂಡಿದ್ದನ್ನು ಪ್ರಕೃತಿಯೇ ಕೆಡಗುವ ಪ್ರಕ್ರಿಯೆ ಇನ್ನಷ್ಟು ಹೆಚ್ಚಾಗಲಿದೆಯೇ ಎಂಬ ಆತಂಕವೂ ಮೂಡಿದೆ.

ಹವಾಮಾನ ವೈಪರೀತ್ಯ ಎಂಬ ಮಾರಿ

ಹವಾಮಾನ ವೈಪರೀತ್ಯ ಎಂಬ ಮಾರಿ

ಇದಕ್ಕೆಲ್ಲ ಕಾರಣ ಹವಾಮಾನ ವೈಪರೀತ್ಯ. ಜಾಗತಿಕ ತಾಪಮಾನವು ಹೀಗೆ ಅವ್ಯಾಹತವಾಗಿ ಹೆಚ್ಚುತ್ತಾ ಹೋದಂತೆ ಕೇರಳದ ಪ್ರವಾಹಕ್ಕಿಂತಲೂ ದೊಡ್ಡ ದುರಂತವನ್ನು ಎದುರಿಸಬೇಕಾಗುತ್ತದೆ ಎಂದು ಅಂತಾರಾಷ್ಟ್ರೀಯ ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಅದರಲ್ಲಿಯೂ ಜನಸಂಖ್ಯೆ ವಿಪರೀತವಾಗಿರುವ ಮತ್ತು ನಿಸರ್ಗದ ಮೇಲಿನ ಹಲ್ಲೆಯೂ ಅಷ್ಟೇ ಹೆಚ್ಚಿರುವ ಭಾರತವು ಜಾಗತಿಕ ತಾಪಮಾನ ಏರಿಕೆಗೆ ಉದಾರ ಕೊಡುಗೆ ನೀಡುತ್ತಿದೆ.

ಇದೆಲ್ಲ ಹವಾಮಾನ ವೈಪರೀತ್ಯದ ಪರಿಣಾಮ

ಇದೆಲ್ಲ ಹವಾಮಾನ ವೈಪರೀತ್ಯದ ಪರಿಣಾಮ

ಅತಿಯಾದ ಮಾಲಿನ್ಯದ ಪರಿಣಾಮವಾಗಿಯೇ ನಾವು ನೋಡುತ್ತಿದ್ದ ಹವಾಮಾನ ಕಾಲಾವಧಿಗಳಲ್ಲಿ ಬದಲಾವಣೆಯಾಗುತ್ತಿರುವುದು. ಬೇಸಿಗೆಯಲ್ಲಿ ಇದ್ದಕ್ಕಿದ್ದಂತೆ ಮಳೆ ಸುರಿಯುವುದು, ಅಷ್ಟೇ ಬಿರುಬಿಸಿಲು ಸುಡುವುದು, ಮೈಮರಗಟ್ಟಿಸುವ ಚಳಿ, ಭೋರ್ಗರೆಯುವ ಮಳೆ ಹವಾಮಾನ ತಜ್ಞರ ಲೆಕ್ಕಾಚಾರಗಳನ್ನು ಪದೇ ಪದೇ ತಲೆಕೆಳಗೆ ಮಾಡುತ್ತಿದೆ. ಜಾಗತಿಕ ತಾಪಮಾನ ಏರಿಕೆಯ ಬಿಸಿಯನ್ನು ಅನುಭವಿಸುತ್ತಿರುವ ದೇಶಗಳಲ್ಲಿ ಭಾರತವೇ ಮುಂಚೂಣಿಯಲ್ಲಿದೆ.

ಭಾರತ ಬೇಗ ಎಚ್ಚೆತ್ತುಕೊಂಡು ಪರಿಸರ, ಹವಾಮಾನದ ಉಳಿವಿಗೆ ಸೂಕ್ತ ಕ್ರಮ ತೆಗೆದುಕೊಳ್ಳದೆ ಇದ್ದರೆ ಅದರ ಪರಿಣಾಮಕ್ಕೆ ತೀವ್ರವಾಗಿ ತುತ್ತಾಗಲಿದೆ ಎಂದು ಅಂತಾರಾಷ್ಟ್ರೀಯ ಹವಾಮಾನ ತಜ್ಞರು, ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

ಕೇರಳ, ಕರ್ನಾಟಕದ ಪ್ರವಾಹದ ನೈಜ ಕಾರಣ ಬಹಿರಂಗ

ಕೇರಳವೇ ನಿದರ್ಶನ

ಕೇರಳವೇ ನಿದರ್ಶನ

ಕೇರಳದಲ್ಲಿ ಸುರಿದ ಶತಮಾನದ ಮಳೆ ಲಕ್ಷಾಂತರ ಜನರು ನೆಲೆ ಕಳೆದುಕೊಳ್ಳುವಂತೆ ಮಾಡಿದೆ. ಹೆಚ್ಚಾಗಿ ಕೃಷಿಯನ್ನೇ ಅವಲಂಬಿಸಿರುವ ರಾಜ್ಯ, ವರ್ಷದಲ್ಲಿ ಕಾಣುವ ಮಳೆಯ ಎರಡೂವರೆಪಟ್ಟು ಹೆಚ್ಚು ನೀರನ್ನು ಕೇವಲ ಒಂದು ವಾರದಲ್ಲಿ ಕಂಡಿದೆ.

ಹವಾಮಾನ ವೈಪರೀತ್ಯದ ಪರಿಣಾಮಕ್ಕೆ ಕೇರಳ ಪ್ರವಾಹದಂತಹ ಬೇರೊಂದು ನಿದರ್ಶನ ಬೇಕಿಲ್ಲ ಎನ್ನುತ್ತಾರೆ ಮುಂಬೈ ಸಮೀಪದ ಪಶಾನ್‌ನಲ್ಲಿರುವ ಭಾರತೀಯ ಉಷ್ಣ ಹವಾಮಾನ ಅಧ್ಯಯನ ಸಂಸ್ಥೆಯ ಹವಾಮಾನ ವಿಜ್ಞಾನಿ ರಾಕ್ಸಿ ಮ್ಯಾಥ್ಯೂ ಕೊಲ್.

ಪ್ರಸಕ್ತ ವರ್ಷ ಕೇರಳದ ಎಲ್ಲ 35 ಪ್ರಮುಖ ಜಲಾಶಯಗಳೂ ಆಗಸ್ಟ್ 10ರ ವೇಳೆಗೆ ಮಳೆ ನೀರಿನಿಂದ ಭರ್ತಿಯಾಗಿದ್ದವು. ಹೀಗಾಗಿ 26 ವರ್ಷಗಳಲ್ಲಿಯೇ ಮೊದಲ ಬಾರಿ ಇಡುಕ್ಕಿ ಜಲಾಶಯದ ಗೇಟುಗಳನ್ನು ತೆರೆಯುವ ಸನ್ನಿವೇಶ ಎದುರಾಯಿತು.

ಮೂರು ಪಟ್ಟು ಮಳೆ ಹೆಚ್ಚಳ

ಮೂರು ಪಟ್ಟು ಮಳೆ ಹೆಚ್ಚಳ

1950-2017ರ ಅವಧಿಯಲ್ಲಿ ವ್ಯಾಪಕವಾಗಿ ಸುರಿಯುವ ಮಳೆಯಲ್ಲಿ ಮೂರುಪಟ್ಟು ಹೆಚ್ಚಳವಾಗಿದೆ. ಇದರಿಂದ ಭಾರಿ ಪ್ರಮಾಣದ ಪ್ರವಾಹ ಉಂಟಾಗುತ್ತಿದೆ ಎಂದು ತಮ್ಮ ಅಧ್ಯಯನಗಳು ತಿಳಿಸಿರುವುದಾಗಿ ಅವರು ಹೇಳುತ್ತಾರೆ.

ಈ ಅವಧಿಯಲ್ಲಿ ಭಾರತದಾದ್ಯಂತ ಮುಂಗಾರಿನ ಆರ್ಭಟಕ್ಕೆ ಸುಮಾರು 69 ಸಾವಿರ ಜೀವಗಳು ಬಲಿಯಾಗಿದ್ದರೆ, 17 ಮಿಲಿಯನ್ ಜನರು ಸೂರು ಕಳೆದುಕೊಂಡು ನಿರ್ಗತಿಕರಾಗಿದ್ದಾರೆ ಎಂದು ಕಳೆದ ವರ್ಷ ಪ್ರಕಟವಾದ ನೇಚರ್ ಕಮ್ಯುನಿಕೇಷನ್ಸ್ ನಿಯತಕಾಲಿಕೆಯ ವರದಿ ತಿಳಿಸಿದೆ.

'ಪ್ರಸ್ತುತ ನಾವು ಕೇರಳದಲ್ಲಿ ನೋಡುತ್ತಿರುವ ಪ್ರವಾಹ ಪರಿಸ್ಥಿತಿ ಹವಾಮಾನ ವೈಪರೀತ್ಯದ ದುರಂತದ ಸಾಲಿನ ಮೂಲದ್ದಾಗಿದೆ' ಎನ್ನುತ್ತಾರೆ ಜರ್ಮನಿಯ ಹವಾಮಾನ ಸಂಶೋಧನಾ ಸಂಸ್ಥೆ ಪಾಟ್ಸ್‌ಡ್ಯಾಮ್‌ನ ವಿಜ್ಞಾನಿ ಕಿರಾ ವಿಂಕೆ.

ಭಾರತದ ಭೀಕರ ಪ್ರವಾಹಗಳು, 1 ಲಕ್ಷ ಮಂದಿ ಮೃತರು, 4 ಲಕ್ಷ ಕೋಟಿ ನಷ್ಟ

ಅರಬ್ಬಿ ಸಮುದ್ರದ ಬಿಸಿಗಾಳಿ ಪರಿಣಾಮ

ಅರಬ್ಬಿ ಸಮುದ್ರದ ಬಿಸಿಗಾಳಿ ಪರಿಣಾಮ

ನಾವು ಇದೇ ರೀತಿ ವಾತಾವರಣವನ್ನು ಕಲುಷಿತ ಮಾಡುವುದನ್ನು ಮುಂದುವರಿಸಿದರೆ ಮುಂದೆ ಊಹಿಸಲೂ ಅಸಾಧ್ಯವಾದ ಅಪಾಯ ಎದುರಾಗಲಿದೆ ಎಂದು ಅವರು ಎಚ್ಚರಿಸುತ್ತಾರೆ.

ನೈಸರ್ಗಿಕ ಏರಿಳಿತ ಎಂದು ವಿಜ್ಞಾನಿಗಳು ಕರೆಯುವುದಕ್ಕೂ ಜಾಗತಿಕ ತಾಪಮಾನಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಈ ಎಲ್ಲ ಅನಾಹುತಗಳ ಹಿಂದಿರುವ ಹವಾಮಾನ ಸನ್ನಿವೇಶವನ್ನು ತಿಳಿದಿರುವಂಥದ್ದೇ.

ಅರಬ್ಬಿ ಸಮುದ್ರದಲ್ಲಿನ ತ್ವರಿತಗೊಂಡ ಬಿಸಿ ಹವೆ ಮತ್ತು ಸಮೀಪದ ಭೂರಾಶಿಯು ಮುಂಗಾರು ಮಾರುತಗಳನ್ನು ಮೂರರಿಂದ ನಾಲ್ಕು ದಿನಗಳಲ್ಲಿಯೇ ಸಾಂದ್ರ ಮತ್ತು ತೀವ್ರಗೊಳಿಸಿದವು. ಈ ಅವಧಿಯಲ್ಲಿ ಅರಬ್ಬಿ ಸಮುದ್ರದ ತೇವವು ಭೂಮಿಯ ಮೇಲೆ ಸುರಿಯಿತು ಎನ್ನುತ್ತಾರೆ ಕೊಲ್.

ದಕ್ಷಿಣ ಏಷ್ಯಾದ 'ಹಾಟ್‌ಸ್ಪಾಟ್‌'

ದಕ್ಷಿಣ ಏಷ್ಯಾದ 'ಹಾಟ್‌ಸ್ಪಾಟ್‌'

ಕಳೆದೊಂದು ದಶಕದಿಂದ ಹವಾಮಾನ ವೈಪರೀತ್ಯದಿಂದಾಗಿ ಭೂರಾಶಿಯ ಉಷ್ಣತೆಯು ಕೇಂದ್ರ ಹಾಗೂ ದಕ್ಷಿಣ ಭಾರತದಲ್ಲಿ ಮುಂಗಾರು ಮಳೆಯ ಹೆಚ್ಚಳಕ್ಕೆ ಎಡೆಮಾಡಿಕೊಟ್ಟಿದೆ ಎಂದು ರಷ್ಯಾ ವಿಜ್ಞಾನ ಅಕಾಡೆಮಿಯ ಪ್ರೊಫೆಸರ್ ಹಾಗೂ ಮಾನ್ಸೂನ್ ತಜ್ಞರಾದ ಎಲೆನಾ ಸುರೊವ್ಯಕ್ಟಿನಾ.

ಕೈಗಾರಿಕೋತ್ತರ ಮಟ್ಟದಲ್ಲಿ ಭೂಮಿಯ ಮೇಲ್ಮೈನ ಒಟ್ಟಾರೆ ತಾಪಮಾನ ಸರಾಸರಿ ಕೇವಲ ಒಂದು ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾಗಿದ್ದಕ್ಕೇ ಈ ಬದಲಾವಣೆಗಳು ಉಂಟಾಗಿವೆ ಎಂದು ಅಧ್ಯಯನಗಳು ಹೇಳಿವೆ.

ನಾಸಾ ವಿಡಿಯೋದಲ್ಲಿ ದೇವರ ನಾಡು ಕೇರಳದ ಪ್ರವಾಹ

ಭಾರತಕ್ಕೆ ಕಾದಿದೆ ಅಪಾಯ

ಭಾರತಕ್ಕೆ ಕಾದಿದೆ ಅಪಾಯ

ಪ್ರಸ್ತುತದ ಸನ್ನಿವೇಶದಲ್ಲಿ ಭಾರತದ ವಾರ್ಷಿಕ ತಾಪಮಾನವು ಶತಮಾನದ ಮಧ್ಯಭಾಗಕ್ಕೆ ಹೋಲಿಸಿದರೆ ಸರಾಸರಿ 1.5 ಡಿಗ್ರಿ ಸೆಲ್ಸಿಯಸ್‌ನಿಂದ 3 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗುತ್ತದೆ ಎಂದು 'ದಕ್ಷಿಣ ಏಷ್ಯಾದ ಹಾಟ್‌ಸ್ಪಾಟ್' ಎಂಬ ಶೀರ್ಷಿಕೆಯ ವಿಶ್ವಬ್ಯಾಂಕ್ ವರದಿ ಹೇಳುತ್ತದೆ.

ಸೂಕ್ತವಾದ ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳದೆ ಇದ್ದರೆ ಬದಲಾಗುತ್ತಿರುವ ಮಳೆ ಕಾಲಾವಧಿಗಳು ಹಾಗೂ ಹೆಚ್ಚುತ್ತಿರುವ ಉಷ್ಣಾಂಶ ಭಾರತದ ಜಿಡಿಪಿ ಮೇಲೆ ಶೇ 2.8ರಷ್ಟು ಹೊಡೆತ ನೀಡಲಿವೆ. ಅಲ್ಲದೆ, 2050ರ ವೇಳೆಗೆ ಭಾರತದಲ್ಲಿನ ಜನಸಂಖ್ಯೆಯ ಅರ್ಧದಷ್ಟು ಭಾಗದ ಜೀವನ ಗುಣಮಟ್ಟ ಕುಸಿಯಲಿದೆ ಎಂಬ ಕಳವಳಕಾರಿ ಮಾಹಿತಿಯನ್ನು ಅದು ನೀಡಿದೆ.

ಪ್ಯಾರಿಸ್‌ನಲ್ಲಿ ನಡೆದ ಜಾಗತಿಕ ತಾಪಮಾನ ಕುರಿತ ಸಮ್ಮೇಳನದಲ್ಲಿ 196 ದೇಶಗಳು ಜಾಗತಿಕ ತಾಪಮಾನವನ್ನು 2 ಡಿಗ್ರಿ ಸೆಲ್ಸಿಯಸ್‌ನಿಂದ 1.5 ಡಿಗ್ರಿ ಸೆಲ್ಸಿಯಸ್‌ಗೆ ತಗ್ಗಿಸುವ ಬಗ್ಗೆ ಒಪ್ಪಂದ ಮಾಡಿಕೊಂಡಿದ್ದವು.

ಆದರೆ, ಕೆಲವು ಸ್ವಯಂಪ್ರೇರಿತ ದೇಶಗಳು ಹಸಿರುಮನೆ ಅನಿಲ ಪರಿಣಾಮವನ್ನು ಕುಗ್ಗಿಸಲು ಶಪಥ ಮಾಡಿವೆ. ಅದು ಸಾಧ್ಯವಾದರೂ ಉಷ್ಣಾಂಶವು 3 ಡಿಗ್ರಿ ಸೆಲ್ಸಿಯಸ್‌ ಹೆಚ್ಚಳವಾಗಲಿದೆ.

ಜನಸಂಖ್ಯಾ ಸ್ಫೋಟದ್ದೂ ಪಾತ್ರವಿದೆ

ಜನಸಂಖ್ಯಾ ಸ್ಫೋಟದ್ದೂ ಪಾತ್ರವಿದೆ

ಪ್ರವಾಹ ಮಾತ್ರವೇ ಭಾರತದ ಹೆಚ್ಚುತ್ತಿರುವ ಸಮಸ್ಯೆಯಲ್ಲ. ಶರವೇಗದಲ್ಲಿ ಬೆಳೆಯುತ್ತಿರುವ ಜನಸಂಖ್ಯೆ ಜಾಗತಿಕ ತಾಪಮಾನದ ಪರಿಣಾಮವನ್ನು ಎದುರಿಸಲಿದೆ.

ಭಾರತದಲ್ಲಿನ ಹವಾಮಾನ ವೈಪರೀತ್ಯದಿಂದಾಗಿ ಮಳೆಗಾಲದ ಅವಧಿಯಲ್ಲಿ ವಿಪರೀತ ಥಂಡಿಯನ್ನು ಮತ್ತು ಬಿಸಿಲಿನಲ್ಲಿ ಅತಿಯಾದ ಒಣಹವೆಯನ್ನು ಕಾಣುವಂತಾಗುತ್ತದೆ ಎಂದು ವಿಂಕಿ ಅಭಿಪ್ರಾಯಪಡುತ್ತಾರೆ.

ವಾಡಿಕೆಯ ಮಾದರಿಗಿಂತ ಊಹಿಸಲು ಸಾಧ್ಯವಾಗದಂತೆ ಈಗಾಗಲೇ ಮುಂಗಾರು ಅತಿಯಾಗಿ ಸುರಿದಿರುವುದನ್ನು ನಾವು ನೋಡುತ್ತಿದ್ದೇವೆ ಎಂದು ಅವರು ಹೇಳುತ್ತಾರೆ.

ಪ್ರವಾಹಕ್ಕೆ ತಮಿಳುನಾಡು ಕಾರಣ ಎಂದು ಆರೋಪಿಸಿದ ಕೇರಳ

ವಾಸಯೋಗ್ಯವಲ್ಲದ ಪ್ರದೇಶಗಳ ಸೃಷ್ಟಿ

ವಾಸಯೋಗ್ಯವಲ್ಲದ ಪ್ರದೇಶಗಳ ಸೃಷ್ಟಿ

ಮಾನವನಿರ್ಮಿತ ಇಂಗಾಲದ ಉಗುಳುವಿಕೆ ಹೀಗೆಯೇ ಮುಂದುವರಿದರೆ ಈ ಶತಮಾನದ ಅಂತ್ಯದ ವೇಳೆಗೆ ಉಷ್ಣತೆ ಮತ್ತು ಬಿಸಿಗಾಳಿ ಅವಧಿಯಲ್ಲಿನ ಆರ್ದ್ರತೆಗಳ ಅಪಾಯಕಾರಿ ಸಂಯೋಜನೆಯಿಂದಾಗಿ ಭಾರತದ ಈಶಾನ್ಯ ಭಾಗದ ಕೆಲವು ಪ್ರದೇಶಗಳಲ್ಲಿ ಅಕ್ಷರಶಃ ವಾಸಕ್ಕೆ ಅಯೋಗ್ಯವಾದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಇತ್ತೀಚಿನ ಸಂಶೋಧನೆಯೊಂದು ಬಹಿರಂಗಪಡಿಸಿದೆ.

ಮಂಜುಗಡ್ಡೆಯ ಕರಗುವಿಕೆಯಿಂದ ಮತ್ತು ಕಡಲ ನೀರಿನ ವಿಸ್ತರಣೆಯಿಂದ ಸಮುದ್ರ ಮಟ್ಟ ಏರಿಕೆಯಾಗುತ್ತಿರುವ ಕರಾವಳಿ ನಗರಗಳಲ್ಲಿ ಜೀವಿಸುವುದು ದುರ್ಬರವಾಗುತ್ತಿದೆ. ಒಂದೆಡೆ ಅತಿಯಾದ ಅಭಿವೃದ್ಧಿಯ ಪರಿಣಾಮ ತಟ್ಟುತ್ತಿದ್ದರೆ, ಇನ್ನೊಂದೆಡೆ ಜಲಮೂಲಗಳ ಕಣ್ಮರೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ.

ಪ್ರವಾಹ ಎನ್ನುವುದೇ ಸಹಜವಾಗಲಿದೆ!

ಪ್ರವಾಹ ಎನ್ನುವುದೇ ಸಹಜವಾಗಲಿದೆ!

ಹವಾಮಾನ ವೈಪರೀತ್ಯವನ್ನು ನಿಯಂತ್ರಿಸಲು ಯಾವುದೇ ಕ್ರಮ ತೆಗೆದುಕೊಳ್ಳದೆ ಇದ್ದರೆ ಭಾರತದಲ್ಲಿನ ಭೀಕರ ಪ್ರವಾಹ ಘಟನೆಗಳು ಇನ್ನಷ್ಟು ಹೆಚ್ಚಾಗಿ, ಅದು ಸರ್ವೇ ಸಾಮಾನ್ಯ ಎನ್ನುವ ಸ್ಥಿತಿ ಎದುರಾಗಲಿದೆ ಎಂದು ವಿಪತ್ತು ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಕ್ರಿಶ್ಚಿಯನ್ ಏಡ್ ಸಂಸ್ಥೆ ಎಚ್ಚರಿಕೆ ನೀಡಿದೆ.

ಕೇರಳದಲ್ಲಿ ಸಂತ್ರಸ್ತರಿಗಾಗಿ ನೂರಾರು ಪರಿಹಾರ ಕೇಂದ್ರಗಳನ್ನು ಸ್ಥಾಪಿಸುತ್ತಿರುವ ಸಂಸ್ಥೆಯ ಡಾ. ಕಾಟ್ ಕ್ರಾಮೆರ್, ಹಸಿರುಮನೆ ಅನಿಲ ಉಗುಳುವಿಕೆಯನ್ನು ತಗ್ಗಿಸಲು ಹೆಚ್ಚು ಗಮನ ಹರಿಸಬೇಕು ಎಂಬುದಕ್ಕೆ ಇದು ಎಚ್ಚರಿಕೆಯ ಗಂಟೆಯಾಗಿದೆ ಎಂದು ಹೇಳಿದ್ದಾರೆ.

ಜಾಗತಿಕ ತಾಪಮಾನ ಹೀಗೆಯೇ ಮುಂದುವರಿದರೆ ಕೇರಳದಲ್ಲಿ ನಾವು ನೋಡುತ್ತಿರುವಂತೆಯೇ ಭಾರತ ಹಾಗೂ ದಕ್ಷಿಣ ಏಷ್ಯಾದ ವಿವಿಧೆಡೆ ಇಂತಹ ಇನ್ನಷ್ಟು ದುರಂತಗಳನ್ನು ನಾವು ನೋಡಲಿದ್ದೇವೆ. ಹವಾಮಾನ ವೈಪರೀತ್ಯದ ಪರಿಣಾಮವಾಗಿ ಭಾರತದಲ್ಲಿ ಚಳಿಗಾಲದ ಮಳೆ ಪ್ರಮಾಣ ಕಡಿಮೆಯಾಗಲಿದೆ ಎಂದು ಅಧ್ಯಯನಗಳು ಹೇಳಿವೆ. ಬೇಸಿಗೆಯಲ್ಲಿ ಕ್ಷಾಮ ಹೆಚ್ಚಿದರೆ ಮಳೆಗಾಲದಲ್ಲಿ ವಿಪರೀತ ಮಳೆ ಸುರಿದು ಪ್ರವಾಹ ಉಂಟಾಗಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

English summary
Floods in Kerala warned that worse is to come if global warming continues unabated particularly in India, global scientists said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more