ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶ್ಮೀರ ವಿಮೋಚನೆ ಬಗ್ಗೆ ತಾಲಿಬಾನ್‌ಗೆ ಅಲ್ ಖೈದಾ 'ಉಗ್ರ' ಸಂದೇಶ!

|
Google Oneindia Kannada News

ಕಾಬೂಲ್, ಸಪ್ಚೆಂಬರ್ 1: ಅಫ್ಘಾನಿಸ್ತಾನದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ತಾಲಿಬಾನ್ ಉಗ್ರ ಸಂಘಟನೆಗೆ ಅಲ್ ಖೈದಾ ಉಗ್ರ ಸಂಘಟನೆಯು ಶುಭಾಷಯ ಕೋರಿದ್ದು, ಕಾಶ್ಮೀರ ವಿಮೋಚನೆಗೆ ಕೈಜೋಡಿಸುವಂತೆ ಕರೆ ನೀಡಿದೆ.

"ಅಫ್ಘಾನಿಸ್ತಾನದಿಂದ ಆಗಸ್ಟ್ 31ರಂದು ಯುನೈಟೆಡ್ ಸ್ಟೇಟ್ಸ್ ತನ್ನ ಸೇನೆಯನ್ನು ವಾಪಸ್ ಕರೆಸಿಕೊಂಡ ಮರುದಿನ ಈ ಬಗ್ಗೆ ಅಲ್ ಖೈದಾ ಹೇಳಿಕೆ ಪ್ರಕಟಿಸಿದೆ. ಮುಸ್ಲಿಂ ವಿರೋಧಿಗಳ ಕೈಯಲ್ಲಿರುವ ಲೆವಂತ್, ಸೋಮಾಲಿಯಾ, ಯೆಮೆನ್ ಮತ್ತು ಕಾಶ್ಮೀರ ವಿಮೋಚನೆ ಮಾಡಬೇಕಿದೆ. ಓ ದೇವರೇ, ಜಗತ್ತಿನಾದ್ಯಂತ ಮುಸ್ಲಿಂ ಕೈದಿಗಳಿಗೆ ಸ್ವಾತಂತ್ರ್ಯವನ್ನು ದಯಪಾಲಿಸು," ಎಂದು ಅಲ್ ಖೈದಾ ತನ್ನ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.

ಅಫ್ಘಾನಿಸ್ತಾನದಿಂದ ಸೇನೆ ಹಿಂತೆಗೆದುಕೊಂಡರೆ ಅಮೆರಿಕಾಗೆ ಲಾಭವೇ? ಅಫ್ಘಾನಿಸ್ತಾನದಿಂದ ಸೇನೆ ಹಿಂತೆಗೆದುಕೊಂಡರೆ ಅಮೆರಿಕಾಗೆ ಲಾಭವೇ?

ಯುಎಸ್ ಸೇನೆ ಅಫ್ಘಾನ್ ತೊರೆದು ಹೋಗುತ್ತಿದ್ದಂತೆ ತಾಲಿಬಾನ್ ಉಗ್ರ ಸಂಘಟನೆಯು ಸಂಪೂರ್ಣ ಸ್ವಾತಂತ್ರ್ಯದ ಬಗ್ಗೆ ಅಧಿಕೃತವಾಗಿ ಘೋಷಿಸಿತು. ಇದರ ಬೆನ್ನಲ್ಲೇ ಪ್ರಕಟಣೆ ಹೊರಡಿಸಿದ ಅಲ್ ಖೈದಾ, ತಾಲಿಬಾನಿಗಳಿಗೆ ಅಭಿನಂದನೆ ಸಲ್ಲಿಸಿತು. ಕಾಶ್ಮೀರದ ಜೊತೆಗೆ ಪ್ಯಾಲೆಸ್ಟೈನ್, ಲೆವಂತ್, ಸೊಮಾಲಿಯಾ ಮತ್ತು ಯೆಮೆನ್ ವಿಮೋಚನೆ ಬಗ್ಗೆ ಹೇಳಿದೆ.

ಅಫ್ಘಾನ್ ನೆಲದಲ್ಲಿ 20 ವರ್ಷಗಳ ಯುದ್ಧವನ್ನು ಅಂತ್ಯ

ಅಫ್ಘಾನ್ ನೆಲದಲ್ಲಿ 20 ವರ್ಷಗಳ ಯುದ್ಧವನ್ನು ಅಂತ್ಯ

ಆಗಸ್ಟ್ 30ರ ಮಧ್ಯರಾತ್ರಿ 12 ಗಂಟೆಗೆ ಗಡಿಯಾರದ ಮುಳ್ಳು ಸ್ತಬ್ಧವಾಯಿತ್ತು. ಕಾಬೂಲ್ ನಗರದ ಹಮೀದ್ ಕರ್ಜಾಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯುಎಸ್ ಸೇನಾ ಸಿಬ್ಬಂದಿಯನ್ನು ಹೊತ್ತ C-17 ವಿಮಾನವು ಅಮೆರಿಕಾಗೆ ಹಾರಿತು. ಆ ಮೂಲಕ ಅಫ್ಘಾನಿಸ್ತಾನದಲ್ಲಿ 20 ವರ್ಷಗಳಿಂದ ನಡೆಯುತ್ತಿದ್ದ ಸುದೀರ್ಘ ಯುದ್ಧ ಅಂತ್ಯವಾಯಿತು. ಎರಡು ದಶಕಗಳ ಕಾಲ ಯುನೈಟೆಡ್ ಸ್ಟೇಟ್ಸ್ ಸೇನೆ ಭದ್ರತೆ ನಡುವೆ ಸುಭದ್ರವಾಗಿದ್ದ ಅಫ್ಘಾನಿಸ್ತಾನ ತಾಲಿಬಾನ್ ಕೈವಶವಾಗಿದೆ. ಕಳೆದ ಆಗಸ್ಟ್ 15ರಂದು ರಾಜಧಾನಿ ಕಾಬೂಲ್‌ಗೆ ಲಗ್ಗೆ ಇಡುವ ಮೂಲಕ ಇಡೀ ದೇಶವನ್ನು ಹಿಡಿತಕ್ಕೆ ತೆಗೆದುಕೊಂಡ ತಾಲಿಬಾನಿಗಳು ತಮ್ಮದೇ ಸರ್ಕಾರದ ಅಸ್ತಿತ್ವಕ್ಕೆ ಸಿದ್ಧರಾಗುತ್ತಿದ್ದಾರೆ.

ಭಯೋತ್ಪಾದನೆ ಬಗ್ಗೆ ತಾಲಿಬಾನಿಗೆ ಎಚ್ಚರಿಕೆ ನೀಡಿರುವ ವಿಶ್ವಸಂಸ್ಥೆ

ಭಯೋತ್ಪಾದನೆ ಬಗ್ಗೆ ತಾಲಿಬಾನಿಗೆ ಎಚ್ಚರಿಕೆ ನೀಡಿರುವ ವಿಶ್ವಸಂಸ್ಥೆ

ಕಳೆದ ಆಗಸ್ಟ್ 15ರಂದು ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ನೆಲವನ್ನು ವಶಕ್ಕೆ ಪಡೆದುಕೊಂಡ ತಾಲಿಬಾನ್ ಸಂಘಟನೆಯು ತನ್ನ ಮಾತಿಗೆ ಬದ್ಧವಾಗಿ ನಡೆದುಕೊಳ್ಳಬೇಕು. ಅಫ್ಘಾನ್ ನೆಲದಲ್ಲಿ ನಿಂತುಕೊಂಡು ಬೇರೆ ಯಾವುದೇ ರಾಷ್ಟ್ರಕ್ಕೆ ಬೆದರಿಕೆಯೊಡ್ಡುವಂತಿಲ್ಲ ಅಥವಾ ಭಯೋತ್ಪಾದನಾ ಚಟುವಟಿಕೆ ನಡೆಸುವಂತಿಲ್ಲ, ಉಗ್ರವಾದಕ್ಕೆ ಕುಮ್ಮಕ್ಕು ನೀಡುವಂತಿಲ್ಲ. ಜಾಗತಿಕ ಸಮುದಾಯವು ತಾಲಿಬಾನ್ ತಾನು ಮೊದಲು ಆಡಿರುವ ಮಾತುಗಳಿಗೆ ಬದ್ಧವಾಗಿ ನಡೆದುಕೊಳ್ಳಬೇಕು ಎಂಬುದನ್ನು ನಿರೀಕ್ಷಿಸುತ್ತದೆ. ಅಫ್ಘಾನಿಸ್ತಾನದಲ್ಲಿ ಇರುವ ವಿದೇಶಿಯರ ಸ್ಥಳಾಂತರ ಮತ್ತು ದೇಶ ತೊರೆಯಲು ಇಚ್ಛಿಸುವವರ ಸುರಕ್ಷಿತ ಸ್ಥಳಾಂತರಕ್ಕೆ ಅವಕಾಶ ನೀಡಬೇಕು ಎಂಬ ಷರತ್ತು ವಿಧಿಸಲಾಗಿದೆ.

ದೇಶವನ್ನು ಉದ್ದೇಶಿಸಿ ಮಾತನಾಡಿದ ಜೋ ಬೈಡನ್

ದೇಶವನ್ನು ಉದ್ದೇಶಿಸಿ ಮಾತನಾಡಿದ ಜೋ ಬೈಡನ್

ಅಫ್ಘಾನಿಸ್ತಾನದ ನೆಲದಿಂದ ಅಮೆರಿಕಾ ಸೇನೆ ವಾಪಸ್ ಕರೆಸಿಕೊಂಡ ತಮ್ಮ ನಿರ್ಧಾರವನ್ನು ಯುಎಸ್ ಅಧ್ಯಕ್ಷ ಜೋ ಬೈಡನ್ ಸಮರ್ಥಿಸಿಕೊಂಡಿದ್ದಾರೆ. ರಾಷ್ಚ್ರವನ್ನು ಉದ್ದೇಶಿಸಿ ಮಾತನಾಡಿದ ಅವರು, 20 ವರ್ಷಗಳ ಕಾಲ ನಡೆಸಿದ ಯುದ್ಧ ಕೊನೆಗಾಣಿಸಿರುವುದು ಸೂಕ್ತ ಸಮಯದಲ್ಲಿ ತೆಗೆದುಕೊಂಡ ಸರಿಯಾದ ನಿರ್ಧಾರವಾಗಿದೆ. ಯುಎಸ್ ಪ್ರಜೆಗಳ ಹಿತದೃಷ್ಟಿಯಿಂದ ನೋಡುವುದಾದರೆ ಯುದ್ಧವನ್ನು ಮುಂದುವರಿಸುವುದಕ್ಕೆ ಇನ್ನು ಯಾವುದೇ ಕಾರಣಗಳು ಉಳಿದುಕೊಂಡಿಲ್ಲ ಎಂದು ಹೇಳಿದ್ದಾರೆ.

ಅಫ್ಘಾನಿಸ್ತಾನದ ಮಟ್ಟಿಗೆ ಭಯೋತ್ಪಾದನೆ ಮತ್ತು ಉಗ್ರರು ಸೀಮಿತವಾಗಿಲ್ಲ

ಅಫ್ಘಾನಿಸ್ತಾನದ ಮಟ್ಟಿಗೆ ಭಯೋತ್ಪಾದನೆ ಮತ್ತು ಉಗ್ರರು ಸೀಮಿತವಾಗಿಲ್ಲ

ಅಫ್ಘಾನಿಸ್ತಾನದಿಂದ ಆಚೆಗೂ ಭಯೋತ್ಪಾದಕರು ಜಗತ್ತಿಗೆ ಬೆದರಿಕೆಯೊಡ್ಡುತ್ತಿದ್ದಾರೆ. ನಾವು ಸೋಮಾಲಿಯಾದ ಅಲ್-ಶಬಾದ್, ಸಿರಿಯಾ ಮತ್ತು ಅರೆಬೀಯನ್ ಪೆನಿನ್ಸುಲಾದ ಅಲ್-ಖೈದಾ ಸಂಘಟನೆಗಳಿಂದ ಬೆದರಿಕೆಯನ್ನು ಎದುರಿಸುತ್ತಿದ್ದೇವೆ. ಐಸಿಸ್ ಸಂಘಟನೆಯು ಸಿರಿಯಾ ಮತ್ತು ಇರಾಕ್ ರಾಷ್ಟ್ರಗಳಲ್ಲಿ ಪ್ರಬಲವಾಗಿದ್ದು, ಆಫ್ರಿಕಾ ಮತ್ತು ಏಷ್ಯಾದಲ್ಲೂ ಅಂಗಸಂಸ್ಥೆಗಳನ್ನು ಹೊಂದಿವೆ ಎಂದು ಬೈಡನ್ ಹೇಳಿದ್ದಾರೆ.

ನಾಳೆಯ ಬಗ್ಗೆ ಆಲೋಚಿಸುತ್ತಿರುವ ಅಮೆರಿಕಾ

ನಾಳೆಯ ಬಗ್ಗೆ ಆಲೋಚಿಸುತ್ತಿರುವ ಅಮೆರಿಕಾ

"ಅಮೆರಿಕನ್ನರ ರಕ್ಷಣೆ ಮತ್ತು ಸುರಕ್ಷತೆಯು ಅಧ್ಯಕ್ಷರ ಮೂಲಭೂತ ಬಾಧ್ಯತೆ ಆಗಿರಬೇಕು ಎಂದು ನಾನು ನಂಬುತ್ತೇನೆ. ನಾವು 2001ರ ಸೇಡಿನ ಬಗ್ಗೆ ಚಿಂತಿಸಬೇಕಿಲ್ಲ, ಬದಲಿಗೆ 2021 ಮತ್ತು ನಾಳೆಯ ಬಗ್ಗೆ ಆಲೋಚಿಸಬೇಕಿದೆ. ಅಫ್ಘಾನಿಸ್ತಾನದ ವಿಷಯದಲ್ಲಿ ನಾನು ತೆಗೆದುಕೊಂಡ ನಿರ್ಧಾರದ ಹಿಂದೆ ಈ ನೀತಿ ಅಡಗಿದೆ. ಸಾವಿರಾರು ಅಮೆರಿಕನ್ ಯೋಧರ ನಿಯೋಜನೆಯನ್ನು ಮುಂದುವರಿಸುವ ಮೂಲಕ ಮತ್ತು ಅಫ್ಘಾನಿಸ್ತಾನದಲ್ಲಿ ವರ್ಷಕ್ಕೆ ಶತಕೋಟಿ ಡಾಲರ್ ಖರ್ಚು ಮಾಡುವ ಮೂಲಕ ಅಮೆರಿಕದ ಸುರಕ್ಷತೆ ಮತ್ತು ಭದ್ರತೆಯನ್ನು ಹೆಚ್ಚಿಸಲಾಗುತ್ತದೆ ಎಂದು ನಾನು ನಂಬುವುದಿಲ್ಲ. ಆದರೆ ಭಯೋತ್ಪಾದಕರ ದುಷ್ಟ ಹಾಗೂ ವಿನಾಶಕಾರಿ ಪ್ರವೃತ್ತಿ ಮುಂದುವರಿಯುತ್ತದೆ ಎಂದು ನನಗೆ ಗೊತ್ತಿದೆ. ಆದರೆ ಅದನ್ನು ಬದಲಾಯಿಸಲಾಗಿದ್ದು, ಇತರೆ ದೇಶಗಳಿಗೆ ವಿಸ್ತರಿಸಲಾಗಿದೆ. ನಮ್ಮ ಕಾರ್ಯತಂತ್ರವು ಬದಲಾಗಿದೆ. ಅದಾಗ್ಯೂ, ಅಫ್ಘಾನಿಸ್ತಾನ ಅಥವಾ ಬೇರೆ ಯಾವುದೇ ದೇಶದಲ್ಲಿ ಭಯೋತ್ಪಾದಕರ ವಿರುದ್ಧದ ನಮ್ಮ ಹೋರಾಟವನ್ನು ಯುನೈಟೆಡ್ ಸ್ಟೇಟ್ಸ್ ನಿರ್ವಹಿಸುತ್ತದೆ," ಎಂದು ಜೋ ಬೈಡನ್ ಹೇಳಿದ್ದಾರೆ.

English summary
Kashmir Should Also Be ‘Liberated From Enemies Of Islam: Al-Qaeda Send Its Message To Taliban.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X