ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಥಾ ಆಫರ್: ಚೀನಾದಲ್ಲಿ ಮಕ್ಕಳನ್ನು ಪಡೆಯುವ ದಂಪತಿಗೆ ಬಡ್ಡಿರಹಿತ ಸಾಲ!

|
Google Oneindia Kannada News

ಬೀಜಿಂಗ್, ಜನವರಿ 31: ಚೀನಾದ ಜನಸಂಖ್ಯೆ ಕುಸಿತದಿಂದ ಹಳಿತಪ್ಪುತ್ತಿರುವ ಆರ್ಥಿಕತೆಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಅಧ್ಯಕ್ಷ ಕ್ಸಿ ಜಿಂಗ್ ಪಿಂಗ್ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. 2035ರ ವೇಳೆಗೆ ಆರ್ಥಿಕತೆ ಅನ್ನು ಇಮ್ಮಡಿಗೊಳಿಸುವ ನಿಟ್ಟಿನಲ್ಲಿ ಹೆಚ್ಚು ಮಕ್ಕಳನ್ನು ಪಡೆಯುವುದಕ್ಕೆ ಪ್ರೋತ್ಸಾಹಿಸುವ ಯೋಜನೆ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಮಕ್ಕಳನ್ನು ಪಡೆಯಲು ಹಿಂಜರಿಯುವ ಮಹಿಳೆಯರಿಗೆ ಪ್ರೋತ್ಸಾಹವನ್ನು ನೀಡುವುದಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಬೋನಸ್‌ಗಳಿಂದ ಹಿಡಿದು ಮಕ್ಕಳ ಸಂಖ್ಯೆಯನ್ನು ಅವಲಂಬಿಸಿ ರಿಯಾಯಿತಿ ಜೊತೆಗೆ ವೇತನ ಸಹಿತ ರಜೆಗಳನ್ನು ನೀಡಲಾಗುತ್ತಿದೆ.

ಚೀನಾದಲ್ಲಿ ಸತತ 5ನೇ ವರ್ಷವೂ ಜನನ ಪ್ರಮಾಣ ಕುಸಿತಚೀನಾದಲ್ಲಿ ಸತತ 5ನೇ ವರ್ಷವೂ ಜನನ ಪ್ರಮಾಣ ಕುಸಿತ

ಚೀನಾದಲ್ಲಿ ಕಳೆದ ಮೇ ತಿಂಗಳಿನಿಂದ ಈಚೆಗೆ ಒಂದು ಕುಟುಂಬವು ಮೂರು ಮಕ್ಕಳನ್ನು ಹೊಂದಲು ಅನುಮತಿ ನೀಡಲಾಗಿದೆ. ದಶಕಗಳ ಕಠಿಣ ಕುಟುಂಬ ಯೋಜನೆ ನೀತಿಗಳಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದ್ದು, ಸ್ಥಳೀಯ ಅಧಿಕಾರಿಗಳು ಮತ್ತು ಸಂಸ್ಥೆಗಳು ಮೂರು ಮಕ್ಕಳನ್ನು ಪಡೆಯುವ ಪೋಷಕರಿಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತಿವೆ.

ಚೀನಾದಲ್ಲಿ ಗರ್ಭಿಣಿಯರಿಗೆ 98 ದಿನ ಹೆರಿಗೆ ರಜೆ

ಚೀನಾದಲ್ಲಿ ಗರ್ಭಿಣಿಯರಿಗೆ 98 ದಿನ ಹೆರಿಗೆ ರಜೆ

ಚೀನಾದ ದಬೀನಾಂಗ್ ಗ್ರೂಪ್ ಕಂಪನಿಯು ಗರ್ಭಿಣಿಯರಿಗೆ ವಿಶೇಷ ಸವಲತ್ತುಗಳನ್ನು ನೀಡುತ್ತಿದೆ. ಚೀನಾ ಸರ್ಕಾರವು ಗರ್ಭಿಣಿಯರಿಗೆ 98 ದಿನಗಳ ಹೆರಿಗೆ ರಜೆ ನೀಡುವಂತೆ ಸೂಚಿಸುತ್ತದೆ. ಇದರ ಹೊರತಾಗಿ ಬೀಜಿಂಗ್ ನಲ್ಲಿರುವ ಈ ಕೃಷಿ ತಂತ್ರಜ್ಞಾನ ಸಂಸ್ಥೆಯು ಮಹಿಳೆಯರಿಗೆ ವಿಶೇಷ ಸೌಲಭ್ಯಗಳನ್ನು ನೀಡುತ್ತಿದೆ. ಮಗುವನ್ನು ಪಡೆದ ತಾಯಿಗೆ 9.87 ಲಕ್ಷ ರೂಪಾಯಿ (14,100 ಯುಎಸ್ ಡಾಲರ್) ಹೆಚ್ಚುವರಿ ಆರ್ಥಿಕ ನೆರವಿನ ಜೊತೆಗೆ 12 ತಿಂಗಳವರೆಗೂ ರಜೆ ನೀಡಲಾಗುವುದು. ಪತ್ನಿ ಹೆರಿಗೆ ಸಂದರ್ಭದಲ್ಲಿ ಪುರುಷ ಉದ್ಯೋಗಿಗೆ 9 ದಿನಗಳವರೆಗೂ ರಜೆ ನೀಡಲಾಗುವುದು.

ಸರ್ಕಾರವು ಮಕ್ಕಳ ಜನನವನ್ನು ಪ್ರೋತ್ಸಾಹಿಸುತ್ತಿರುವುದರ ಹಿನ್ನೆಲೆ ಇದೇ ತಿಂಗಳಿನಿಂದ ಈ ನಿಯಮವನ್ನು ಅಳವಡಿಸಿಕೊಳ್ಳಲಾಗುವುದು ಎಂದು ದಬೀನಾಂಗ್ ಗ್ರೂಪ್ ಕಂಪನಿಯ ಅಧ್ಯಕ್ಷ ಚೆನ್ ಜೋಂಗ್ ಹೆಂಗ್ ತಿಳಿಸಿದ್ದಾರೆ.

ಮೊದಲ ಮಗು ಪಡೆದರೆ ಮೂರು ಲಕ್ಷ ರೂಪಾಯಿ ಉಡುಗೊರೆ

ಮೊದಲ ಮಗು ಪಡೆದರೆ ಮೂರು ಲಕ್ಷ ರೂಪಾಯಿ ಉಡುಗೊರೆ

ಚೀನಾದಲ್ಲಿ ಮೊದಲ ಮಗು ಪಡೆದ ತಾಯಿಗೆ ಸುಮಾರು 3,31,800 ರೂಪಾಯಿ(4,740 ಯುಎಸ್ ಡಾಲರ್)ಗಿಂತ ಹೆಚ್ಚು ಹಣವನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ತದನಂತರದಲ್ಲಿ ಎರಡು ಮತ್ತು ಮೂರನೇ ಮಗುವನ್ನು ಪಡೆದವರಿಗೆ ಮೊದಲು ನೀಡಿದ್ದಕ್ಕಿಂತ ಎರಡರಿಂದ ಮೂರು ಪಟ್ಟು ಹೆಚ್ಚು ಹಣವನ್ನು ಉಡುಗೊರೆಯಾಗಿ ನೀಡಲಾಗುತ್ತದೆ ಎಂದು ಕಂಪನಿ ತಿಳಿಸಿದೆ. "ತಾಯಿಯ ಹೆರಿಗೆ ರಜೆಯನ್ನು 1 ರಿಂದ 3 ತಿಂಗಳಿಗೆ ಹೆಚ್ಚಿಸಲಾಗಿದ್ದು, ಅದನ್ನು 12 ತಿಂಗಳವರೆಗೂ ವಿಸ್ತರಿಸುವ ಬಗ್ಗೆ ಆಲೋಚಿಸಲಾಗುತ್ತಿದೆ. ಸರ್ಕಾರದ ನಿರ್ಧಾರದ ನಂತರದಲ್ಲಿ ಕಂಪನಿ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಿದೆ. ದಂಪತಿಗಳು ತಮ್ಮ ವಯಸ್ಸು ಮತ್ತು ಆರೋಗ್ಯ ಸ್ಥಿತಿ ಸ್ಥಿರವಾಗಿ ಇರುವವರೆಗೂ ಮಗುವನ್ನು ಹೊಂದುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ," ಎಂದು ಚೆನ್ ಜೋಂಗ್ ಹೆಂಗ್ ಹೇಳಿದ್ದಾರೆ.

ಚೀನಾದಲ್ಲಿ ಮಕ್ಕಳನ್ನು ಪಡೆಯಲು ಬಡ್ಡಿರಹಿತ ಸಾಲ

ಚೀನಾದಲ್ಲಿ ಮಕ್ಕಳನ್ನು ಪಡೆಯಲು ಬಡ್ಡಿರಹಿತ ಸಾಲ

ಕಳೆದ ಡಿಸೆಂಬರ್ ತಿಂಗಳಿನಲ್ಲಿ ಚೀನಾದ ಉತ್ತರ ಭಾಗದಲ್ಲಿರುವ ಜಿಲಿನ್ ಪ್ರದೇಶದಲ್ಲಿ ಹೊಸತಾಗಿ ಮದುವೆಯಾದ ದಂಪತಿಗೆ ಬಡ್ಡಿರಹಿತ ಸಾಲ ನೀಡುವುದಾಗಿ ಘೋಷಣೆ ಹೊರಡಿಸಲಾಗಿತ್ತು. ದಂಪತಿಯು ಮಕ್ಕಳನ್ನು ಪಡೆಯುವುದಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ 20 ಲಕ್ಷಕ್ಕೂ ಹೆಚ್ಚು ಹಣವನ್ನು ಸಾಲವಾಗಿ ನೀಡಲಾಗುತ್ತದೆ. ಈ ಹಣಕ್ಕೆ ಯಾವುದೇ ರೀತಿ ಬಡ್ಡಿಯನ್ನು ವಿಧಿಸಲಾಗುವುದಿಲ್ಲ.

ಅದೇ ರೀತಿ ಪೂರ್ವ ವಲಯದ ನಾಂಗ್ ತೊಂಗ್ ಪ್ರದೇಶದಲ್ಲಿ ಮೂರು ಮಕ್ಕಳನ್ನು ಹೊಂದಿದ ದಂಪತಿಗೆ 4,410 ರೂಪಾಯಿ ಚದರ ಅಡಿ ಲೆಕ್ಕದಲ್ಲಿ ಸಬ್ಸಿಡಿ ಸಹಿತ ಮನೆಯನ್ನು ನೀಡಲಾಗುತ್ತದೆ. ಝೇಜಿಯಾಂಗ್ ಪ್ರದೇಶದಲ್ಲಿ ಒಂದು ಮಗುವನ್ನು ಪಡೆದ ದಂಪತಿಗೆ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲ ನೀಡಲಾಗುತ್ತದೆ.

ಚೀನಾದಲ್ಲಿ 2005ರಿಂದ ಒಂದು ಮಗುವಿನ ನೀತಿ

ಚೀನಾದಲ್ಲಿ 2005ರಿಂದ ಒಂದು ಮಗುವಿನ ನೀತಿ

ಬೀಜಿಂಗ್ ಕಳೆದ ವರ್ಷ ಪೋಷಕರ ಆರ್ಥಿಕ ಮತ್ತು ಸಾಮಾಜಿಕ ಒತ್ತಡವನ್ನು ಸರಾಗಗೊಳಿಸುವ ಖಾಸಗಿ ಬೋಧನೆಯನ್ನು ನಿಷೇಧಿಸಿತು, ಇದರಿಂದ ಪೋಷಕರು ಮಕ್ಕಳನ್ನು ಬಯಸದಿರಲು ಪ್ರಮುಖ ಕಾರಣ ಎಂದು ಹೇಳಲಾಗುತ್ತಿತ್ತು. ಕಳೆದ 2015ರಿಂದಲೂ ಚೀನಾದಲ್ಲಿ ಒಂದು ಕುಟುಂಬಕ್ಕೆ ಒಂದೇ ಮಗು ಎನ್ನುವ ನೀತಿಯನ್ನು ಜಾರಿಗೊಳಿಸಲಾಗಿದೆ. ಇದು ದೇಶದಲ್ಲಿ ಮಗುವಿನ ಸಂಖ್ಯೆಯಲ್ಲಿನ ಕುಸಿತಕ್ಕೆ ಪ್ರಮುಖ ಕಾರಣ ಎಂದು ಉಲ್ಲೇಖಿಸಲಾಗುತ್ತಿದೆ. ಈ ಹಿಂದೆ ಮಿತಿಮೀರಿ ಬೆಳೆಯುತ್ತಿದ್ದ ಜನಸಂಖ್ಯೆ ನಿಯಂತ್ರಿಸುವ ಉದ್ದೇಶದಿಂದ ಜಾರಿಗೊಳಿಸಿದ ಕಠಿಣ ನಿಯಮವು ಇಂದು ಜಗತ್ತಿನಲ್ಲಿ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿರುವ ರಾಷ್ಟ್ರದ ಅಡಿಪಾಯಕ್ಕೆ ಭಯವನ್ನು ಹುಟ್ಟು ಹಾಕುತ್ತಿದೆ. ಚೀನಾದಲ್ಲಿ ಕೆಲಸ ಮಾಡುವ ವಯಸ್ಸಿನವರಿಗಿಂತ ವೃದ್ಧರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾಮಾಜಿಕ ಸೇವೆ ಹಾಗೂ ಸಾಮಾಜಿಕ ವಲಯದಲ್ಲಿ ಅಸ್ಥಿರತೆಯನ್ನು ಕಾಡುತ್ತಿದೆ.

ಬೀಜಿಂಗ್‌ನಲ್ಲಿ ಮಕ್ಕಳನ್ನು ಪಡೆಯಲು ಮಹಿಳೆಯರ ಹಿಂಜರಿಕೆ

ಬೀಜಿಂಗ್‌ನಲ್ಲಿ ಮಕ್ಕಳನ್ನು ಪಡೆಯಲು ಮಹಿಳೆಯರ ಹಿಂಜರಿಕೆ

ಬೀಜಿಂಗ್‌ನ ಒಂದು ಕುಟುಂಬಕ್ಕೆ ಒಂದೇ ಮಗು ಎಂಬ ನೀತಿಯನ್ನು ತೆರವುಗೊಳಿಸಿದ ನಂತರದಲ್ಲಿಯೂ ಅನೇಕ ಮಹಿಳೆಯರು ಹೆಚ್ಚು ಅಥವಾ ಒಂದೇ ಒಂದು ಮಗುವನ್ನು ಪಡೆಯಲು ನಿರಾಕರಿಸುತ್ತಿದ್ದಾರೆ. ಚೀನಾದಲ್ಲಿ ಕಳೆದ ಐದು ವರ್ಷಗಳಿಂದ ಜನನ ಪ್ರಮಾಣದಲ್ಲಿ ತೀರಾ ಕುಸಿತ ಕಂಡು ಬಂದಿದೆ. 2020ರಲ್ಲಿ ಚೀನಾದ ಜನಸಂಖ್ಯೆ 141.20 ಕೋಟಿಯಷ್ಟಿತ್ತು. ಇದು 2021 ರಲ್ಲಿ ಆ ಸಂಖ್ಯೆ 141.26 ಕೋಟಿಯಷ್ಟು ಮಾತ್ರ ಆಗಿದೆ. ಹೀಗಾಗಿ ಇಡೀ ವರ್ಷದಲ್ಲಿ 4.80 ಲಕ್ಷ ಜನಸಂಖ್ಯೆ ಮಾತ್ರ ಹೆಚ್ಚಳವಾಗಿದೆ ಎಂದು ರಾಷ್ಟ್ರೀಯ ಅಂಕಿಅಂಶ ಬ್ಯೂರೋ(ಎನ್​ಬಿಎಸ್​) ತಿಳಿಸಿದೆ. 2021ರಲ್ಲಿ ಆಗಿರುವ ಜನನ ಪ್ರಮಾಣ 1.06 ಕೋಟಿ. 2020ರಲ್ಲಿ ಅದು 1.20 ಕೋಟಿಯಾಗಿತ್ತು ಎಂದು ಹಾಂಕಾಂಗ್‌ ಮೂಲದ ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌ ವರದಿ ಮಾಡಿದೆ.

ಚೀನಾದಲ್ಲಿ ಜನಸಂಖ್ಯೆ ಕುಸಿತದ ಎಚ್ಚರಿಕೆ ನೀಡಿದ ತಜ್ಞರು

ಚೀನಾದಲ್ಲಿ ಜನಸಂಖ್ಯೆ ಕುಸಿತದ ಎಚ್ಚರಿಕೆ ನೀಡಿದ ತಜ್ಞರು

2022ರಲ್ಲಿ ಚೀನಾದಲ್ಲಿ ಜನನ ಪ್ರಮಾಣ ಮತ್ತಷ್ಟು ಕುಸಿತ ಕಾಣಲಿದೆ. ಜನಸಂಖ್ಯೆಯಲ್ಲಿನ ಕುಸಿತವು ದೇಶದ ಆರ್ಥಿಕತೆಗೆ ಹೊಡೆತ ಕೊಡುವ ಅಪಾಯವಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ದೊಡ್ಡ ಪ್ರಮಾಣದ ಆರ್ಥಿಕ ಯೋಜನೆಗಳ ಮೂಲಕ ಜನಸಂಖ್ಯೆಯಲ್ಲಿ ಸಮತೋಲನ ಕಾಪಾಡಿಕೊಳ್ಳಲು ಸರ್ಕಾರ ಪ್ರಯತ್ನಿಸುತ್ತಿದೆ. ಕಳೆದ 2020 ನವೆಂಬರ್ ತಿಂಗಳಿನಲ್ಲಿ ಮಾತನಾಡಿದ ಕ್ಸಿ ಜಿನ್ ಪಿಂಗ್, 2035ರ ಹೊತ್ತಿಗೆ ಚೀನಾದ ದೇಶೀಯ ಉತ್ಪನ್ನವು ಎರಡು ಪಟ್ಟು ಹೆಚ್ಚಾಗಲಿದೆ, 2031ರವರೆಗೂ ದೇಶದ ಜನಸಂಖ್ಯೆಯು ಕುಸಿಯುವುದಿಲ್ಲ. ದೇಶದ ಜನಸಂಖ್ಯೆಯಲ್ಲಿ ಕುಸಿತ ಕಂಡು ಬಂದರೆ ಆರ್ಥಿಕತೆಗೆ ಹಿನ್ನಡೆ ಆಗುವ ಅಪಾಯದ ಬಗ್ಗೆಯೂ ಹೇಳಿದ್ದರು. ಭವಿಷ್ಯವು ತೀರಾ ಪ್ರಕ್ಷುಬ್ಧವಾಗಿರಲಿದ್ದು, ಎಲ್ಲರೂ ಸೀಟ್ ಬೆಲ್ಟ್ ಹಾಕಿಕೊಂಡಿರಬೇಕು ಎಂಬ ಎಚ್ಚರಿಕೆ ನೀಡಿದ್ದರು.

ಮಕ್ಕಳ ಆರೈಕೆ ಮತ್ತು ಪಾಲನೆಗೆ ಆಸಕ್ತಿ ತೋರಿಸುವುದೇ ವಿರಳ

ಮಕ್ಕಳ ಆರೈಕೆ ಮತ್ತು ಪಾಲನೆಗೆ ಆಸಕ್ತಿ ತೋರಿಸುವುದೇ ವಿರಳ

ಚೀನಾದಲ್ಲಿ ಶ್ರೀಮಂತ ಮತ್ತು ವಿದ್ಯಾವಂತ ಮಹಿಳೆಯರು ಮಕ್ಕಳನ್ನು ಹೊಂದುವುದಕ್ಕೆ ಹಿಂಜರಿಯುತ್ತಾರೆ. ಏಕೆಂದರೆ ಇಂಥ ಮಹಿಳೆಯರು ಮಕ್ಕಳ ಆರೈಪೆ ಪಾಲನೆಯಲ್ಲಿ ಹೆಚ್ಚು ಆಸಕ್ತಿ ತೋರಿಸುವುದಿಲ್ಲ ಎಂದು ತಿಳಿದು ಬಂದಿದೆ. "ಒಂದು ಮಗುವನ್ನೂ ಹೊಂದಲು ನಮಗೆ ಸಮಯವಿಲ್ಲ, ಹಣವಿಲ್ಲ, ಸ್ವಾತಂತ್ರ್ಯವಿಲ್ಲ," ಎಂದು 40 ವರ್ಷ ಹಳೆಯ ವಿಶ್ವವಿದ್ಯಾಲಯದ ಪ್ರಾಧ್ಯಪಕರಾಗಿರುವ ಕವಿತಾ ಯಾಂಗ್(ಹೆಸರು ಬದಲಿಸಲಾಗಿದೆ) ಹೇಳಿಕೊಂಡಿದ್ದಾರೆ. ಮಗುವನ್ನು ಪಡೆಯಲು ಸಮಯ, ಶಕ್ತಿ ಮತ್ತು ಹಣದ ಅವಶ್ಯಕತೆ ಇರುತ್ತದೆ. ಅದನ್ನು ನೀಡುವುದಕ್ಕೆ ತಾವು ಸಿದ್ಧರಿಲ್ಲದ ಕಾರಣ ಮಗುವನ್ನೇ ಹೊಂದದಿರಲು ನಿರ್ಧರಿಸಿರುವುದಾಗಿ ಅವರು ತಿಳಿಸಿದ್ದಾರೆ.

ಚೀನಾದಲ್ಲಿ ಮದುವೆ ಬೇಡ ಎನ್ನುವವರಲ್ಲಿ ಮಹಿಳೆಯರದ್ದೇ ಮೇಲುಗೈ!

ಚೀನಾದಲ್ಲಿ ಮದುವೆ ಬೇಡ ಎನ್ನುವವರಲ್ಲಿ ಮಹಿಳೆಯರದ್ದೇ ಮೇಲುಗೈ!

ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಕಮ್ಯುನಿಷ್ಟ್ ಯೂತ್ ಲೀಗ್ ನಡೆಸಿದ ಸಮೀಕ್ಷೆಯೊಂದರಲ್ಲಿ 18 ರಿಂದ 26 ವರ್ಷದ 2905 ಜನರನ್ನು ಪ್ರಶ್ನೆ ಮಾಡಲಾಯಿತು. ಈ ಪೈಕಿ ಶೇ.44ರಷ್ಟು ಯುವತಿಯರು ತಾವು ಮದುವೆ ಆಗುವುದಕ್ಕೆ ನಿರಾಕರಿಸಿದ್ದಾರೆ. ಮದುವೆಯಾಗದೇ ಹಾಗೆ ಸ್ವತಂತ್ರ್ಯವಾಗಿರಲು ಬಯಲಿದ್ದು, ಶೇ.20ರಷ್ಟು ಪುರುಷರು ಮದುವೆ ಬೇಡ ಎಂದಿದ್ದಾರೆ. ಇಲ್ಲಿ ಮದುವೆಯಿಂದ ಬೇಡ ಎಂದವರ ಪೈಕಿ ಪುರುಷರಿಗಿಂತ ಯುವತಿಯರೇ ಹೆಚ್ಚಾಗಿದ್ದಾರೆ. ಚೀನಾದಲ್ಲಿ ಶೇ.50ರಷ್ಟು ಮಹಿಳೆಯರು ಪದವಿ ಕಾಲೇಜುಗಳಲ್ಲಿ ಶಿಕ್ಷಣ ಪಡೆದುಕೊಂಡಿದ್ದು, ವಿದ್ಯಾವಂತರಾಗಿ ಉದ್ಯೋಗಗಳಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಇದು ವೈಯಕ್ತಿಕ ಬದುಕಿನ ಮೇಲೆ ನಿರಾಸಕ್ತಿ ಮೂಡಿಸುವಂತೆ ಮಾಡಿದೆ. ವಿದ್ಯಾವಂತ ಯುವತಿಯರು ಸ್ವಾತಂತ್ರ್ಯಕ್ಕಾಗಿ ಮದುವೆ ಮತ್ತು ಮಕ್ಕಳು ಎಂದ ಚೌಕಟ್ಟಿನಲ್ಲಿ ಸಿಲುಕುವುದಕ್ಕೆ ಹಿಂಜರಿಯುತ್ತಿರುವುದಾಗಿ ಹಲವರು ತಿಳಿಸಿದ್ದಾರೆ.

English summary
Interest-free loan for a couple getting children in China: More Benefits from Govt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X