ಭಾರಿ ಮಳೆ, ಭೂ ಕುಸಿತ, ಪ್ರವಾಹಕ್ಕೆ ಸಿಲುಕಿ 44 ಮಂದಿ ಸಾವು
ಇಂಡೋನೇಷಿಯಾ, ಏಪ್ರಿಲ್ 4: ಇಂಡೋನೇಷಿಯಾದ ಪೂರ್ವ ಭಾಗದಲ್ಲಿ ಭಾನುವಾರ ಬೆಳಗ್ಗೆ ಸುರಿದ ಭಾರಿ ಮಳೆಯಿಂದಾಗಿ ಹಲವೆಡೆ ಭೂ ಕುಸಿತ ಉಂಟಾಗಿದೆ. ಜೊತೆಗೆ , ಪ್ರವಾಹಕ್ಕೆ ಸಿಲುಕಿ ಸರಿ ಸುಮಾರು 44ಕ್ಕೂ ಅಧಿಕ ಮಂದಿ ಮೃತಪಟ್ಟಿರುವ ವರದಿ ಬಂದಿದೆ.
ಪೂರ್ವ ಫ್ಲೋರೆನ್ಸ್ ರೆಜೆನ್ಸಿ ಪ್ರಾಂತ್ಯದಲ್ಲಿ ಸುಮಾರು 44 ಮಂದಿ ಮೃತಪಟ್ಟಿದ್ದು, 9 ಮಂದಿಗೆ ತೀವ್ರ ಗಾಯಗಳಾಗಳಿವೆ, ಹಲವಾರು ಮಂದಿ ಇನ್ನೂ ಮಣ್ಣಿನಡಿಯಲ್ಲಿ ಸಿಲುಕಿದ್ದಾರೆ. ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಮಣ್ಣಿನಡಿಯಲ್ಲಿ ಸಿಲುಕಿರುವ ರಕ್ಷಣೆಗೆ ಭಾರಿ ಮಳೆ ಅಡ್ಡಿಯಾಗಿದೆ.
ಈಸ್ಟರ್ ಹಬ್ಬದ ಸಂಭ್ರಮಕ್ಕೆ ಸೂತಕ
ಭಾನುವಾರದಂದು ಈ ಪ್ರಾಂತ್ಯದ ಫ್ಲೊರೆಸ್ ದ್ವೀಪದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಕ್ರೈಸ್ತರು ಈಸ್ಟರ್ ಹಬ್ಬ ಆಚರಣೆಯಲ್ಲಿ ತೊಡಗಿಕೊಂಡಿದ್ದರು. ಸಣ್ಣದಾಗಿ ಆರಂಭವಾದ ಮಳೆ ನಂತರ ಭಾರಿ ಜೋರಾಗಿ ಸುರಿಯಲಾರಂಭಿಸಿತು, ಮಳೆ ಜೊತೆಗೆ ತ್ವರಿತ ಗತಿಯ ಪ್ರವಾಹಕ್ಕೆ ಸಿಲುಕಿ ಭೂ ಕುಸಿತ ಹೆಚ್ಚಾಗತೊಡಗಿತು. ಸೇತುವೆ, ರಸ್ತೆಗಳು ನಾಶವಾಗಿದ್ದು, ದ್ವೀಪ ಹಲವು ಭಾಗಗಳಲ್ಲಿನ ಪರಿಸ್ಥಿತಿ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ವಕ್ತಾರ ರಾದ್ತಿಯಾ ಜಾತಿ ಹೇಳಿದ್ದಾರೆ.
ಅದೋನರಾ ದ್ವೀಪದಿಂದ ಹರಿದು ಬಂದ ಪ್ರವಾಹದ ನೀರು, ಆಳೆತ್ತರದ ಸಮುದ್ರದ ಅಲೆ, ಭಾರಿ ಮಳೆ ಎಲ್ಲವೂ ರಕ್ಷಣಾ ಕಾರ್ಯಕ್ಕೆ ಪ್ರತಿಕೂಲ ಹವಾಮಾನ ಉಂಟು ಮಾಡಿದೆ, ಇನ್ನೂ ಒಂದು ವಾರಗಳ ಕಾಲ ಇದೇ ರೀತಿ ಹವಾಮಾನ ವೈಪರಿತ್ಯ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸತತವಾಗಿ 10 ಗಂಟೆಗಳ ಕಾಲ ಸುರಿದ ಮಳೆಯಿಂದ 10,000ಕ್ಕೂ ಅಧಿಕ ಮಳೆಗಳು ಕುಸಿದಿದ್ದು, ಇನ್ನೂ ಅನೇಕ ಮನೆಗಳು ಭಾಗಶಃ ಜಖಂಗೊಂಡಿವೆ. ಜನವರಿ ತಿಂಗಳಲ್ಲಿ ಜಾವಾ ದ್ವೀಪದಲ್ಲಿ ಕಂಡು ಬಂದ ಪ್ರವಾಹದಿಂದ 40 ಮಂದಿ ಮೃತಪಟ್ಟಿದ್ದರು.