ಆಫ್ರಿಕಾದಲ್ಲಿ ಕೊರೊನಾದಿಂದ ಮೃತಪಟ್ಟ ಬಹುತೇಕ ಮಂದಿಗೆ ಈ ಕಾಯಿಲೆ ಇತ್ತು
ನೈರೋಬಿ, ನವೆಂಬರ್ 11: ಆಫ್ರಿಕಾದಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದ ಬಹುತೇಕ ಮಂದಿ ಮಧುಮೇಹಿಗಳಾಗಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಗುರುವಾರ ಮಾಹಿತಿ ನೀಡಿದೆ. ಕೊರೊನಾ ಸ್ಪಷ್ಟವಾದ ಸಂದೇಶವನ್ನು ತಲುಪಿಸಿದೆ. ಆಫ್ರಿಕಾದಲ್ಲಿ ಮಧುಮೇಹ ರೋಗದ ವಿರುದ್ಧ ಹೋರಾಟವು ಪ್ರಸ್ತುತ ಸಾಂಕ್ರಾಮಿಕದ ಎದುರಿನ ಹೋರಾಟದಷ್ಟೇ ಗಂಭೀರವಾದ್ದಾಗಿದೆ ಎಂದು ಆಫ್ರಿಕಾದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚೀನಾದಲ್ಲಿ ಕೊರೊನಾ ಆಘಾತ: 4 ಮಿಲಿಯನ್ ಜನಸಂಖ್ಯೆ ಇರುವ ನಗರ ಲಾಕ್ಡೌನ್
ಆಫ್ರಿಕಾದ 13 ರಾಷ್ಟ್ರಗಳಲ್ಲಿ ಮಧುಮೇಹ ಇರುವ ಕೊರೊನಾ ರೋಗಿಗಳ ಪೈಕಿ ಸೇ.10.2ರಷ್ಟು ಪ್ರಕರಣಗಳಲ್ಲಿ ಸಾವು ಸಂಭವಿಸಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಆಫ್ರಿಕಾದ ಶೇ.7ರಷ್ಟು ಜನರು ಮಾತ್ರ ಕೋವಿಡ್ ಲಸಿಕೆ ಪೂರ್ಣ ಡೋಸ್ಗಳನ್ನು ಹಾಕಿಸಿಕೊಂಡಿದ್ದಾರೆ, ಜಗತ್ತಿನಾದ್ಯಂತ ಒಟ್ಟು ಶೇ.40ರಷ್ಟು ಮಂದಿ ಕೋವಿಡ್ 19 ಸಂಪೂರ್ಣ ಡೋಸ್ ಲಸಿಕೆ ಪಡೆದಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಗುರುವಾರದವರೆಗೂ ಆಫ್ರಿಕಾದಲ್ಲಿ ಕೋವಿಡ್ 19 ದೃಢಪಟ್ಟ 86 ಪ್ರಕರಣಗಳಿದ್ದು, ಸೋಂಕಿನಿಂದ 2.20 ಲಕ್ಷ ಜನರು ಸಾವಿಗೀಡಾಗಿರುವುದಾಗಿ ರಾಯ್ಟರ್ಸ್ ವರದಿ ಮಾಡಿದೆ.
ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ಪ್ರಕಾರ ಆಫ್ರಿಕಾದ ಮಧುಮೇಹ ರೋಗಿಗಳಲ್ಲಿ ಅಂದಾಜು ಶೇ.70ರಷ್ಟು ಜನರಿಗೆ ಅವರು ಮಧುಮೇಹಿಗಳು ಎಂಬುದು ತಿಳಿದಿಲ್ಲ. 2045ರ ವೇಳೆಗೆ ಆಫ್ರಿಕಾದ ಮಧುಮೇಹಿಗಳ ಸಂಖ್ಯೆ 5.5ಕೋಟಿಗೆ ಹೆಚ್ಚಳವಾಗುವ ಸಾಧ್ಯತೆ ಇದೆ. ಪ್ರಸ್ತುತ 2.4 ಕೋಟಿ ಮಧುಮೇಹಿಗಳಿದ್ದಾರೆ.
ಚೀನಾದಲ್ಲಿ ಕೊರೊನಾ ಸೋಂಕು ಹೆಚ್ಚಳ: ಚೀನಾ ದೇಶದಲ್ಲಿ ಕೊರೊನಾ ಹಾವಳಿ ತೀವ್ರಗೊಂಡಿದೆ. ಚೀನಾ ರಾಜಧಾನಿ ಬೀಜಿಂಗ್ನಲ್ಲಿ ಸೋಂಕಿನ ಅಬ್ಬರ ಹೆಚ್ಚಾದ ಹಿನ್ನೆಲೆಯಲ್ಲಿ ಮಾಲ್ಗಳನ್ನು ಸೀಲ್ ಮಾಡಲಾಗಿದೆ. ಬೀಜಿಂಗ್ ನಗರದ ಹಲವೆಡೆ ಜನವಸತಿ ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದೆ.
ಚೀನಾ ದೇಶದ ಹಲವೆಡೆ ಲಾಕ್ಡೌನ್ ಹೇರಲಾಗಿದ್ದರೂ ಕೊರೊನಾ ಸೋಂಕಿನ ಹರಡುವಿಕೆ ವೇಗವಾಗಿಯೇ ಸಾಗಿದೆ. ಚೀನಾದಾದ್ಯಂತ ಸಾಮೂಹಿಕವಾಗಿ ಕೊರೊನಾ ಪರೀಕ್ಷೆ ಹಾಗೂ ಪ್ರವಾಸ ನಿರ್ಬಂಧಗಳನ್ನೂ ಹೇರಲಾಗಿದೆ. ಹಾಗಿದ್ದರೂ ಕೂಡಾ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ.
ಸದ್ಯ ಚೀನಾದಲ್ಲಿ ದೇಶಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದ್ದು, ದೇಶದ ಒಳಗೆ ವಿಮಾನ ಯಾನ ಹೆಚ್ಚಾದ ಕಾರಣಕ್ಕಾಗಿ ಕೊರೊನಾ ಸೋಂಕು ಅತಿ ವೇಗವಾಗಿ ಹರಡಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಹೀಗಾಗಿ, ದೇಶೀಯ ವಿಮಾನ ಯಾನವನ್ನೂ ಹಲವೆಡೆ ಸ್ಥಗಿತಗೊಳಿಸಲಾಗಿದೆ.
ಚೀನಾದ ಈಶಾನ್ಯ ಭಾಗದಲ್ಲಿ ಇರುವ ಜಿಲಿನ್ ಎಂಬ ಪ್ರಾಂತ್ಯದಿಂದ ರಾಜಧಾನಿ ಬೀಜಿಂಗ್ಗೆ ಬಂದ ಹಲವರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಬೀಜಿಂಗ್ ಕೇಂದ್ರ ಪ್ರದೇಶದಲ್ಲೇ 6 ಹೊಸ ಸೋಂಕಿತರು ಪತ್ತೆಯಾಗಿದ್ದು, ಇಲ್ಲಿನ ಚೆಯಾಂಗ್ ಹಾಗೂ ಹೈದಿನ್ ಎಂಬ ಪ್ರಾಂತ್ಯಗಳಲ್ಲಿ ಕೊರೊನಾರ್ಭಟ ಹೆಚ್ಚಾಗಿದೆ.
ಬೀಜಿಂಗ್ನ ಡಾಂಗ್ಚೆಂಗ್ ಎಂಬಲ್ಲಿ ಇರುವ ರಾಫಲ್ಸ್ ಸಿಟಿ ಮಾಲ್ ಸೇರಿದಂತೆ ಹಲವು ಮಾಲ್ಗಳು, ವಾಣಿಜ್ಯ ಕೇಂದ್ರಗಳನ್ನು ಬುಧವಾರದಿಂದಲೇ ಬಂದ್ ಮಾಡಲಾಗಿದೆ. ಮಾಲ್ಗೆ ಕೊರೊನಾ ಪಾಸಿಟಿವ್ ಇದ್ದ ವ್ಯಕ್ತಿ ಬಂದಿದ್ದ ಹಿನ್ನೆಲೆಯಲ್ಲಿ ಆತನೊಂದಿಗೆ ಪ್ರಾಥಮಿಕ ಸಂಪರ್ಕ ಇರಬಹುದಾದ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗಿದೆ.
ಬೀಜಿಂಗ್ನ ರಾಫಲ್ಸ್ ಸಿಟಿ ಮಾಲ್ನಲ್ಲಿ ಕೊರೊನಾ ಸೋಂಕಿತ ವ್ಯಕ್ತಿ ಇರೋದು ದೃಢಪಟ್ಟ ಕೂಡಲೇ ಅಧಿಕಾರಿಗಳು ಅಲ್ಲಿನ ಎಲ್ಲ ಸಿಬ್ಬಂದಿ ಹಾಗೂ ಗ್ರಾಹಕರನ್ನು ಪರೀಕ್ಷೆಗೆ ಒಳಪಡಿಸಿದ ಬಳಿಕವೇ ಎಲ್ಲರನ್ನೂ ಹೊರಗೆ ಹೋಗಲು ಬಿಟ್ಟರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.