ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಕೊರೊನಾ’ ಕಣ್ಣೀರ ಕಥೆ: ಮಕ್ಕಳ ಜೀವ, ಜೀವನ ಕಸಿಯುತ್ತಿದೆ ಡೆಡ್ಲಿ ವೈರಸ್..!

|
Google Oneindia Kannada News

ಜಗತ್ತನ್ನು ಬೇರೆ ಯಾವುದೇ ರೋಗ ಕಾಡದಷ್ಟು ಆಳವಾಗಿ ಕಾಡಿದ್ದು ಇದೇ ಕೊರೊನಾ ವೈರಸ್. ಕೊರೊನಾ ಕಾಟಕ್ಕೆ ಪ್ರಪಂಚವೇ ಬೆಚ್ಚಿಬಿದ್ದಿದೆ. ಒಂದು ಕಡೆ ಕೋಟ್ಯಂತರ ಜನರು ಕೊರೊನಾ ಸೋಂಕಿನಿಂದ ನರಳಿ ನರಳಿ ಜೀವ ಉಳಿಸಿಕೊಂಡಿದ್ದರೆ, ಹತ್ತಾರು ಲಕ್ಷ ಜನರು 'ಕೊರೊನಾ' ಸೋಂಕಿಗೆ ಬಲಿಯಾಗಿದ್ದಾರೆ. ಆದರೆ ವಿಷಯ ಇದಲ್ಲ, ಅತ್ತ ಕೊರೊನಾ ಅಬ್ಬರಿಸುವಾಗಲೇ ಇತ್ತ ಸದ್ದಿಲ್ಲದೆ ಮಕ್ಕಳ ಭವಿಷ್ಯ ಮುಗಿದು ಹೋಗುತ್ತಿದೆ. ಮಕ್ಕಳು ತಾವು ಮಾಡದ ತಪ್ಪಿಗೆ ಬಲಿಪಶುವಾಗಿ ಭವಿಷ್ಯವನ್ನೇ ಕಳೆದುಕೊಳ್ಳುತ್ತಿದ್ದಾರೆ.

ಬಾಲಕಾರ್ಮಿಕರ ಬಗ್ಗೆ ವಿಶ್ವಸಂಸ್ಥೆ ಹಾಗೂ ವಿಶ್ವ ಕಾರ್ಮಿಕ ಸಂಘಟನೆ ನಡೆಸಿದ ಸಂಶೋಧನೆ ಬೆಚ್ಚಿ ಬೀಳಿಸಿದೆ. ಕಳೆದ 4 ವರ್ಷದಲ್ಲಿ ಬರೋಬ್ಬರಿ 80 ಲಕ್ಷ ಮಕ್ಕಳು ಬಾಲಕಾರ್ಮಿಕ ಪದ್ಧತಿಗೆ ಬಲಿಯಾಗಿದ್ದಾರೆ. ಆಟವಾಡಿ ನಲಿಯಬೇಕಿದ್ದವರು ನರಳಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

2020ರವರೆಗೂ ಜಗತ್ತಿನಾದ್ಯಂತ ಒಟ್ಟು 16 ಕೋಟಿ ಬಾಲಕಾರ್ಮಿಕರು ಇದ್ದರೆ, ಕೇವಲ ಕಳೆದ 4 ವರ್ಷದ ಅವಧಿಯಲ್ಲಿ 80 ಲಕ್ಷ ಬಾಲಕಾರ್ಮಿಕರು ಹೊಸದಾಗಿ ಸೇರ್ಪಡೆಯಾಗಿದ್ದಾರೆ. 20 ವರ್ಷದಲ್ಲೇ ಈ ಪರಿಸ್ಥಿತಿ ಭಯಾನಕ ಅಂತಿದ್ದಾರೆ ತಜ್ಞರು. ಅದರಲ್ಲೂ ಕೊರೊನಾ ಅಪ್ಪಳಿಸಿದ ಬಳಿಕ, ಅಂದ್ರೆ 2020ರ ನಂತರ ಸುಮಾರು 80 ಲಕ್ಷ ಮಕ್ಕಳು ಬಾಲಕಾರ್ಮಿಕ ಪದ್ಧತಿಯ ಕೂಪಕ್ಕೆ ಬಿದ್ದು ನರಳುತ್ತಿದ್ದಾರೆ.

16 ಕೋಟಿ ಮಕ್ಕಳ ನರಳಾಟ

16 ಕೋಟಿ ಮಕ್ಕಳ ನರಳಾಟ

ಪುಟ್ಟ ಪುಟ್ಟ ಪಾದಗಳನ್ನಿಟ್ಟು, ಹೆಜ್ಜೆ ಹಾಕುವುದನ್ನು ಕಲಿಯಬೇಕಾದ ವಯಸ್ಸಲ್ಲಿ ಭಾರ ಹೊರುವ ಪರಿಸ್ಥಿತಿ. ತನ್ನ ಸುತ್ತಲಿನ ಪರಿಸರ ನೋಡಿ ತಿಳಿಯಬೇಕಾದ ಸಮಯದಲ್ಲಿ ಬೆವರು ಹರಿಸಬೇಕಾದ ಅನಿವಾರ್ಯತೆ. ಅಬ್ಬಬ್ಬಾ ಈ ಪರಿಸ್ಥಿತಿ ಶತ್ರುವಿಗೂ ಬೇಡ. ಆದರೆ ಇಂತಹ ಸ್ಥಿತಿಯನ್ನ 16 ಕೋಟಿ ಮಕ್ಕಳು ಅನುಭವಿಸುತ್ತಿದ್ದಾರೆ. ಅಲ್ಲಿ ನೋವಿಗೆ ಬೆಲೆ ಇಲ್ಲ, ಕಣ್ಣೀರಿಗೆ ಕರಗುವ ಮನುಷ್ಯರೇ ಬದುಕಿಲ್ಲ. 16 ಕೋಟಿ ಬಾಲಕಾರ್ಮಿಕರ ಪೈಕಿ, 6.3 ಕೋಟಿ ಅಂದ್ರೆ 6 ಕೋಟಿ 30 ಲಕ್ಷ ಬಾಲಕಿಯರು ಹಾಗೂ 9 ಕೋಟಿ 70 ಲಕ್ಷ ಬಾಲಕಾರ್ಮಿಕರು ರಕ್ತವನ್ನೇ ಬಸಿದು ಬದುಕುತ್ತಿದ್ದಾರೆ. ಅದರಲ್ಲೂ ಕೊರೊನಾ ಕಂಟಕ ಹೆಚ್ಚಾದ ಹಿನ್ನೆಲೆ ಬಾಲಕಾರ್ಮಿಕರ ಸಂಖ್ಯೆ ಕೂಡ ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವುದು ಆತಂಕ ಹುಟ್ಟಿಸಿದೆ.

ಆಫ್ರಿಕಾದಲ್ಲಿ ಭಯಾನಕ ಸ್ಥಿತಿ..!

ಆಫ್ರಿಕಾದಲ್ಲಿ ಭಯಾನಕ ಸ್ಥಿತಿ..!

ಅಲ್ಲೆಲ್ಲೋ ಒಂದು ಮಗು ಶಾಲೆಗೆ ಹೋಗುತ್ತಿದ್ದರೆ, ಮತ್ತೆಲ್ಲೋ ಒಂದು ಮಗು ಅದನ್ನ ನೋಡುತ್ತಾ ನಿಂತಿರುತ್ತೆ. ಕೈಯಲ್ಲಿ ಕಾಸಿಲ್ಲ, ಅಪ್ಪ-ಅಮ್ಮನಿಗೆ ವಿದ್ಯೆ ಕೊಡಿಸುವ ಅರಿವು ಇಲ್ಲ. ಇಂತಹ ದೃಶ್ಯ ಕಂಡರೆ ಕರುಳು ಚುರುಕ್ ಅನ್ನುತ್ತೆ ಅಲ್ವಾ? ಆದ್ರೆ ಆಫ್ರಿಕಾ ರಾಷ್ಟ್ರಗಳಲ್ಲಿ ಇಂತಹ ಪರಿಸ್ಥಿತಿ ಮಾಮೂಲಾಗಿದೆ. ಅಲ್ಲಿನ ಬಹುತೇಕ ಮಕ್ಕಳಿಗೆ ಶಿಕ್ಷಣವೇ ಮರೀಚಿಕೆಯಾಗಿದೆ. ಆಫ್ರಿಕಾ ರಾಷ್ಟ್ರಗಳಲ್ಲಿ ಬಡತನ ಕಿತ್ತು, ಕಿತ್ತು ತಿನ್ನುತ್ತಿದೆ. ಇಂತಹ ಸಂದರ್ಭದಲ್ಲಿ ಹಣ ಇದ್ದವರು ಪರಿಸ್ಥಿತಿಯ ಲಾಭ ಪಡೆಯುತ್ತಿದ್ದಾರೆ. ಅಮಾಯಕ ಮಕ್ಕಳನ್ನು ಪಾಪ ಕೂಪಕ್ಕೆ ತಳ್ಳುತ್ತಿದ್ದಾರೆ. ಹಸಿವು, ಬಡತನವೇ ಈ ದರಿದ್ರ ಪದ್ಧತಿಯನ್ನ ಇನ್ನೂ ಜೀವಂತವಾಗಿ ಉಳಿಸಿದೆ. ಆಫ್ರಿಕಾ ಮಾತ್ರವಲ್ಲ ಏಷ್ಯಾ ಸೇರಿದಂತೆ ದಕ್ಷಿಣ ಅಮೆರಿಕದಲ್ಲೂ ಇದೇ ಪರಿಸ್ಥಿತಿ ಇದೆ.

ಮಕ್ಕಳಿಗೆ ತೋಟವೆಂಬ ನರಕ..!

ಮಕ್ಕಳಿಗೆ ತೋಟವೆಂಬ ನರಕ..!

ಜಗತ್ತಿನಲ್ಲಿ ಅತಿಹೆಚ್ಚು ಮಕ್ಕಳು 'ಚಾಕೊಲೇಟ್' ಫ್ಯಾಕ್ಟರಿಗಳಿಗಾಗಿ ದುಡಿಯುತ್ತಿದ್ದಾರೆ ಎಂಬ ಆರೋಪವಿದೆ. 'ಚಾಕೊಲೇಟ್' ತಯಾರಿಕೆಗೆ ಪ್ರಮುಖ ಪದಾರ್ಥ 'ಕೋಕೋ' ಬೀಜ ಬೆಳೆಯುವ ತೋಟದಲ್ಲೇ ಅತ್ಯಧಿಕ ಬಾಲಕಾರ್ಮಿಕರು ದುಡಿಯುತ್ತಿದ್ದಾರೆ. ಆಫ್ರಿಕಾ ಸೇರಿದಂತೆ ದಕ್ಷಿಣ ಅಮೆರಿಕದ ರಾಷ್ಟ್ರಗಳಲ್ಲಿ ಕಿತ್ತು ತಿನ್ನುವ ಬಡತನದ ನಡುವೆ ಮಕ್ಕಳು ಪೋಷಕರ ಮಾತುಕೇಳಿ ದುಡಿಯಬೇಕಾದ ಅನಿವಾರ್ಯತೆ ಇದೆ. ಮತ್ತೊಂದ್ಕಡೆ ಕಾಫಿ ತೋಟ, ಕೃಷಿ ಸೇರಿದಂತೆ ಕಟ್ಟಡ ನಿರ್ಮಾಣ ಮತ್ತು ಮೈನಿಂಗ್‌ನಲ್ಲೂ ಅತಿಹೆಚ್ಚು ಬಾಲಕಾರ್ಮಿಕರು ನರಳಾಡುತ್ತಿದ್ದಾರೆ. ಈ ಪರಿಸ್ಥಿತಿ ಹೀಗೆ ಮುಂದುವರಿದರೆ 2025ರ ವೇಳೆಗೆ ಬಾಲಕಾರ್ಮಿಕರ ಸಂಖ್ಯೆ 20 ಕೋಟಿ ತಲುಪಬಹುದು.

ಏನೂ ಮಾಡಲಾಗದ ಪರಿಸ್ಥಿತಿ..!

ಏನೂ ಮಾಡಲಾಗದ ಪರಿಸ್ಥಿತಿ..!

ಇದನ್ನೆಲ್ಲಾ ಕಂಡರೂ ಆಧುನಿಕ ಜಗತ್ತು ಉಸಿರು ನುಂಗಿ ಸುಮ್ಮನಾಗುವ ಪರಿಸ್ಥಿತಿ ಇದೆ. ಅದರಲ್ಲೂ ಶ್ರೀಮಂತ ರಾಷ್ಟ್ರಗಳ ಹೇಳಿಕೆಗಳು ಬರೀ 'ಡೈಲಾಗ್' ಆಗುತ್ತಿದೆ. ಬಡ ರಾಷ್ಟ್ರಗಳಲ್ಲಿ ಇದನ್ನೇ ಬಂಡವಾಳ ಮಾಡಿಕೊಳ್ಳುವ ಕೆಲ ಕಿರಾತಕರು, ಮಕ್ಕಳನ್ನೇ ದುಡಿಸಿ ತಾವು ಶ್ರೀಮಂತರಾಗುತ್ತಿದ್ದಾರೆ. ಆದ್ರೆ ದೊಡ್ಡ ದೊಡ್ಡ ರಾಷ್ಟ್ರಗಳು ಇದನ್ನ ಕಂಡೂ, ಕಾಣದಂತೆ ಸುಮ್ಮನಾಗಿವೆ. ಏನೂ ಅರಿಯದ ಪುಟ್ಟ ಪುಟ್ಟ ಕೈಗಳು ಮಣ ಭಾರದ ವಸ್ತುಗಳನ್ನ, ತುತ್ತು ಅನ್ನಕ್ಕಾಗಿ ಅನಿವಾರ್ಯವಾಗಿ ಎತ್ತಬೇಕಾದ ದುಃಸ್ಥಿತಿ ಎದುರಾಗಿದೆ. ಈಗಲಾದ್ರೂ ಬಲಾಢ್ಯ ರಾಷ್ಟ್ರಗಳು ಅನಿಷ್ಠ ಪದ್ಧತಿಗೆ ಅಂತ್ಯ ಹಾಡಲಿವೆಯಾ ಅನ್ನೋದನ್ನ ಕಾದು ನೋಡಬೇಕು.

English summary
Child labours are increasing all over the world after Corona pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X