ಊಹಾಪೋಹ ಅಲ್ಲ; ಚೀನಾ ಅಧ್ಯಕ್ಷ ಜಿನ್ಪಿಂಗ್ರಿಗೆ ಸೆರೆಬ್ರಲ್ ಅನ್ಯೂರಿಸಂ ರೋಗ
ಬೀಜಿಂಗ್, ಮೇ 11: ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಗಂಭೀರ ಆರೋಗ್ಯ ಸಮಸ್ಯೆಯನ್ನು ಹೊಂದಿದ್ದಾರೆ ಎನ್ನುವ ಕುರಿತು ಹರಡಿರುವ ಊಹಾಪೋಹಗಳ ಮಧ್ಯೆ ಅವರಿರು ಸೆರೆಬ್ರಲ್ ಅನ್ಯೂರಿಸಂ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. ಅನೇಕ ಪ್ರಕರಣಗಳಲ್ಲಿ ಈ ಆರೋಗ್ಯ ಸಮಸ್ಯೆ ಉಳ್ಳವರು ಪ್ರಾಣ ಕಳೆದುಕೊಂಡ ಉದಾಹರಣೆಗಳೂ ಇವೆ.
ಮಾಧ್ಯಮ ವರದಿಗಳ ಪ್ರಕಾರ 2021ರ ಕೊನೆಯಲ್ಲಿ ಸೆರೆಬ್ರಲ್ ಅನ್ಯೂರಿಸಂನಿಂದ ಬಳಲುತ್ತಿದ್ದ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಕೋವಿಡ್ -19 ಪ್ರಕರಣಗಳ ಏರಿಕೆಯಿಂದ ಹಿಡಿದು ಬೀಜಿಂಗ್ ಚಳಿಗಾಲ ಒಲಿಂಪಿಕ್ಸ್ವರೆಗೆ ಅವರು ಯಾವುದೇ ವಿದೇಶಿ ನಾಯಕರನ್ನು ಭೇಟಿ ಆಗಿರಲಿಲ್ಲ. ಈ ಕಾರಣಕ್ಕೆ ಕ್ಸಿ ಜಿನ್ ಪಿಂಗ್ ಆರೋಗ್ಯದ ಬಗ್ಗೆ ಹಲವು ಊಹಾಪೋಹಗಳು ಹುಟ್ಟಿಕೊಂಡಿದ್ದವು.
ಮೋದಿ ವಿರುದ್ಧ ಪುಟಿನ್ 'ಛೂ' ಬಾಣ; ರಷ್ಯಾ ಪರವಾಗಿ ಭಾರತಕ್ಕೆ ಬಂತಾ ಚೀನಾ!?
"ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ಶಸ್ತ್ರಚಿಕಿತ್ಸೆಗೆ ಹೋಗುವುದಕ್ಕಿಂತ ಸಾಂಪ್ರದಾಯಿಕ ಚೀನೀ ಔಷಧಿಗಳಿಂದ ಚಿಕಿತ್ಸೆ ಪಡೆದುಕೊಳ್ಳಲು ಆದ್ಯತೆ ನೀಡಿದರು. ಇದು ರಕ್ತನಾಳಗಳನ್ನು ಮೃದುಗೊಳಿಸುತ್ತದೆ ಮತ್ತು ರಕ್ತನಾಳಗಳನ್ನು ಕುಗ್ಗಿಸುತ್ತದೆ" ಎಂದು ಎಎನ್ಐ ವರದಿ ಮಾಡಿದೆ.

ಸೆರೆಬ್ರಲ್ ಅನ್ಯೂರಿಸಂ ಕಾಯಿಲೆ ಬಗ್ಗೆ ಮಾಹಿತಿ
ಸೆರೆಬ್ರಲ್ ಅನ್ಯೂರಿಸ್ಮ್ ಎನ್ನುವುದು ಮೆದುಳಿಗೆ ಸಂಬಂಧಿಸಿದ ಒಂದು ರೀತಿಯ ಕಾಯಿಲೆ ಆಗಿದೆ. ಈ ರೋಗವಿರುವ ವ್ಯಕ್ತಿಯ ಮೆದುಳಿನಲ್ಲಿನ ಅಪಧಮನಿಯ ಮೇಲೆ ದುರ್ಬಲ ಅಥವಾ ತೆಳ್ಳಗಿನ ಗುಳ್ಳೆಗಳು ಆಗುತ್ತವೆ. ಹೀಗೆ ಬಲೂನ್ ರೀತಿಯಲ್ಲಿ ಊದಿಕೊಳ್ಳುವ ಉಬ್ಬುಗಳಲ್ಲಿ ರಕ್ತ ತುಂಬಿಕೊಂಡಿರುತ್ತದೆ. ಉಬ್ಬಿಕೊಳ್ಳುವ ರಕ್ತನಾಳದಿಂದ ನರಗಳು ಅಥವಾ ಮೆದುಳಿನ ಅಂಗಾಂಶಗಳ ಮೇಲೆ ಒತ್ತಡ ಉಂಟಾಗುವ ಅಪಾಯವಿರುತ್ತದೆ. ತದನಂತರದಲ್ಲಿ ಅದು ಸಿಡಿಯಬಹುದು ಅಥವಾ ಛಿದ್ರವಾಗಲಿದ್ದು, ಸುತ್ತಮುತ್ತಲಿನ ಅಂಗಾಂಶಕ್ಕೆ ರಕ್ತ ಚೆಲ್ಲುತ್ತದೆ. ಇಂಥ ಸೋಂಕನ್ನು ವೈದ್ಯಕೀಯ ಭಾಷೆಯಲ್ಲಿ ಸೆರೆಬ್ರಲ್ ಅನ್ಯೂರಿಸ್ಮ್ ಎಂದು ಕರೆಯಲಾಗುತ್ತದೆ.

ಇಟಲಿ, ಫ್ರ್ಯಾನ್ಸ್ ಪ್ರವಾಸದಲ್ಲಿ ಕ್ಸಿ ಜಿನ್ ಪಿಂಗ್
ಕಳೆದ 2019ರಲ್ಲಿ ಇಟಲಿ ಪ್ರವಾಸಕ್ಕೆ ತೆರಳಿದ್ದ ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ನಡೆದಾಡುವಾಗ ಕೊಂಚ ಬದಲಾವಣೆ ಕಂಡು ಬಂದಿತ್ತು. ಅವರು ನಡೆಯುವಾಗ ಕೊಂಚ ಕುಂಟುತ್ತಿದ್ದರು, ಇದು ಅಲ್ಲಿಗೆ ಮುಗಿದಿರಲಿಲ್ಲ. ಫ್ರ್ಯಾನ್ಸ್ ಪ್ರವಾಸಕ್ಕೆ ತೆರಳಿದ ಸಂದರ್ಭದಲ್ಲೂ ಅವರ ಆರೋಗ್ಯ ಸರಿಯಾಗಿರಲಿಲ್ಲ ಎನ್ನುವಂತೆ ಗೋಚರಿಸಿತ್ತು. ಏಕೆಂದರೆ ಸಾಮಾನ್ಯವಾಗಿ ಕುಳಿತುಕೊಳ್ಳುವುದಕ್ಕೂ ಆಸರೆಯೊಂದು ಬೇಕು ಎನ್ನುವಷ್ಟು ಮಟ್ಟಕ್ಕೆ ಆರೋಗ್ಯ ಹದಗೆಟ್ಟಿರುವುದು ಕಂಡು ಬಂದಿತ್ತು.
ಅದೇ ರೀತಿ 2020ರ ಅಕ್ಟೋಬರ್ನಲ್ಲಿ ಶೆನ್ಜೆನ್ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವಾಗ ಅವರ ನೋಟದಲ್ಲಿನ ವಿಳಂಬ, ನಿಧಾನವಾದ ಮಾತುಗಾರಿಕೆ, ಮಾತಿನ ಮಧ್ಯದಲ್ಲಿನ ಕೆಮ್ಮು ಅವರ ಆರೋಗ್ಯದಲ್ಲಿ ಏನೋ ವ್ಯತ್ಯಾಸವಾಗಿದೆ ಎಂಬ ಊಹಾಪೋಹಗಳಿಗೆ ಪುಷ್ಟಿ ನೀಡಿತ್ತು.

ಚೀನಾಗೆ ಒತ್ತಡ, ಚೀನಾ ಅಧ್ಯಕ್ಷರಿಗೆ ಅನಾರೋಗ್ಯ
ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಮತ್ತು ಅನಿಲ ಬೆಲೆ ಏರಿಕೆ ಆಗುತ್ತಿದೆ. ಉಕ್ರೇನ್-ರಷ್ಯಾ ಸಂಘರ್ಷದಿಂದ ಪೂರೈಕೆ ಸರಪಳಿ ಕತ್ತರಿಸಿದೆ. ಶೂನ್ಯ-ಕೋವಿಡ್ ನೀತಿಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಆತುರದಲ್ಲಿ ಚೀನಾದ ಆರ್ಥಿಕತೆ ನೆಲ ಕಚ್ಚಿದೆ. ದೇಶದ ಆರ್ಥಿಕತೆಯಲ್ಲಿನ ಕುಸಿತವು ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅಸ್ವಸ್ಥಗೊಳ್ಳುವಂತೆ ಮಾಡಿದೆ ಎಂದು ವರದಿಗಳು ಹೇಳುತ್ತಿವೆ.

ಚೀನಾದ ಅಧ್ಯಕ್ಷ ಕುರ್ಚಿ ಮೇಲೆ ಕಣ್ಣಿಟ್ಟಿರುವಾಗಲೇ ಅನಾರೋಗ್ಯ
ಕಳೆದ 10 ವರ್ಷದಲ್ಲಿ ಚೀನಾದ ಅಧ್ಯಕ್ಷರಾಗಿ ಕ್ಸಿ ಜಿನ್ ಪಿಂಗ್ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ತಮ್ಮ ಅಧಿಕಾರವಧಿಯಲ್ಲಿ ಚೀನಾವನ್ನು ಹೆಚ್ಚು ಸಮೃದ್ಧ, ಪ್ರಭಾವಶಾಲಿ ಮತ್ತು ಸ್ಥಿರವೆಂದು ಬಿಂಬಿಸಲು ಪ್ರಯತ್ನಿಸಿದ್ದಾರೆ. ಮುಂದಿನ ಅವಧಿಯ ಅಧಿಕಾರದ ಮೇಲೆ ಕಣ್ಣಿಟ್ಟಿರುವ ಸಂದರ್ಭದಲ್ಲಿಯೇ ಈ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿರುವುದು ಮತ್ತಷ್ಟು ಆತಂಕವನ್ನು ಹೆಚ್ಚಿಸಿದೆ.
ಕೆಲವು ತಿಂಗಳ ಹಿಂದೆ ದೈತ್ಯ ತಂತ್ರಜ್ಞಾನ ಸಂಸ್ಥೆಗಳು ಮತ್ತು ಶ್ರೀಮಂತ ಸೆಲೆಬ್ರಿಟಿಗಳ ಮೇಲೆ ದಂಡವನ್ನು ವಿಧಿಸುವ "ಸಾಮಾನ್ಯ ಸಮೃದ್ಧಿ"ಯ ಹೊಸ ಯುಗದ ಮೇಲೆ ಹೆಚ್ಚು ಲಕ್ಷ್ಯ ವಹಿಸಿದ್ದ ಅಧಿಕಾರಿಗಳು ಈಗ ತಮ್ಮ ದಿಕ್ಕು ಬದಲಿಸಿದ್ದಾರೆ. ದೇಶದ ಆರ್ಥಿಕತೆಯಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡು ಅಭಿವೃದ್ಧಿ ಸಾಧಿಸುವತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ಇದರ ಮಧ್ಯೆ ಬೀಜಿಂಗ್ ಮತ್ತು ಶಾಂಘೈನಂತಹ ಚೀನಾದ ಕೆಲವು ಪ್ರಮುಖ ನಗರಗಳು ಏಕಾಏಕಿ ಕೋವಿಡ್-19 ಸಂಖ್ಯೆಗಳ ಏರಿಕೆಯಿಂದಾಗಿ ಬಳಲುತ್ತಿವೆ. ಕಳೆದ ತಿಂಗಳಿಂದ ಲಕ್ಷಗಟ್ಟಲೇ ನಿವಾಸಿಗಳನ್ನು "ಬಲವಂತದ" ಲಾಕ್ಡೌನ್ ಅಡಿಯಲ್ಲಿ ಇರಿಸಲಾಗಿದೆ.