ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ; ಮಕ್ಕಳ ಕೆಟ್ಟ ವರ್ತನೆಗೆ ಪೋಷಕರಿಗೆ ಶಿಕ್ಷೆ!

|
Google Oneindia Kannada News

ಬೇಜಿಂಗ್‌, ಅಕ್ಟೋಬರ್‌ 19: ಚೀನಾವು ಹೊಸ ಹೊಸ ಕಾನೂನು ರೂಪಿಸುವ ಮೂಲಕವೇ ಸುದ್ದಿ ಆಗುತ್ತಿರುತ್ತದೆ. ಈಗ ಚೀನಾ ಸರ್ಕಾರವು ಮಕ್ಕಳ ಕೆಟ್ಟ ವರ್ತನೆಗೆ ಪೋಷಕರಿಗೆ ಶಿಕ್ಷೆ ವಿಧಿಸುವ ಕಾನೂನನ್ನು ಜಾರಿಗೆ ತರಲು ಮುಂದಾಗಿದೆ. ಚೀನಾದಲ್ಲಿ ಮಕ್ಕಳು ಕೆಟ್ಟದಾಗಿ ವರ್ತನೆ ಮಾಡಿದರೆ ಅಥವಾ ಯಾವುದೇ ಅಪರಾಧವನ್ನು ಮಾಡಿದರೆ ಆ ಮಕ್ಕಳ ಬದಲಾಗಿ ಪೋಷಕರಿಗೆ ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ಚೀನಾದ ಸಂಸತ್ತು ಕಾನೂನು ಒಂದನ್ನು ರೂಪಿಸಿದೆ.

ಚೀನಾದ ಈ ಕುಟುಂಬ ಶಿಕ್ಷಣ ಉತ್ತೇಜನ ಕಾನೂನಿನ ಕರಡು ಪ್ರಕಾರ, ಮಕ್ಕಳು ಯಾವುದೇ ಕೆಟ್ಟ ಅಥವಾ ಕ್ರಿಮಿನಲ್‌ ಕೃತ್ಯವನ್ನು ಮಾಡಿದರೆ, ಪೋಷಕರು ಈ ಕುಟುಂಬ ಶಿಕ್ಷಣ ಉತ್ತೇಜನ ಕಾನೂನಿನಂತೆ ಶಿಕ್ಷೆಗೆ ಒಳಗಾಗಲಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್‌ನ (ಎನ್‌ಪಿಸಿ) ವಕ್ತಾರ ಜಾಂಗ್‌ ಟೈವೇ, "ಹದಿಹರೆಯದವರು ಕೆಟ್ಟದಾಗಿ ವರ್ತನೆ ಮಾಡಲು ಹಲವಾರು ಕಾರಣಗಳು ಇದೆ. ಇದಕ್ಕೆ ಮುಖ್ಯ ಕಾರಣ ಮನೆಯಲ್ಲಿ ಈ ಬಗ್ಗೆ ಶಿಕ್ಷಣದ ಕೊರತೆ," ಎಂದು ಅಭಿಪ್ರಾಯಿಸಿದ್ದಾರೆ.

ಚೀನಾದ ಈ ಕುಟುಂಬ ಶಿಕ್ಷಣ ಉತ್ತೇಜನ ಕಾನೂನು ಕುರಿತು ಈ ವಾರದಲ್ಲಿ ಎನ್‌ಪಿಸಿ ಸ್ಥಾಯಿ ಸಮಿತಿ ಅಧಿವೇಶನದಲ್ಲಿ ಪರಿಶೀಲನೆ ನಡೆಸಲಾಗುತ್ತದೆ. ಈ ಕಾನೂನು ಪೋಷಕರು ಮಕ್ಕಳೊಂದಿಗೆ ಸಮಯ ಕಳೆಯಲು, ಆಟವಾಡಲು, ವ್ಯಾಯಾಮ ಮಾಡಲು ಸಮಯ ಮಾಡಿಕೊಳ್ಳುವಂತೆ ಒತ್ತಾಯ ಮಾಡುತ್ತದೆ.

 China Proposes Law To Punish Parents For Childrens Bad Behaviour

ಚೀನಾವು ಈ ವರ್ಷ ಹಲವಾರು ಕಾನೂನುಗಳನ್ನು ಹೊಸದಾಗಿ ರೂಪಿಸಿಕೊಂಡಿದೆ. ಯುವಕರು ಆನ್‌ಲೈನ್‌ ಆಟದ ಚಟದಲ್ಲಿ ಇರುವುದನ್ನು ಗಮನಿಸಿದ ಚೀನಾ ಸರ್ಕಾರ ಈ ನಿಟ್ಟಿನಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ತರುವ ಕ್ರಮವನ್ನು ಕೈಗೊಂಡಿದೆ ಎಂದು ವರದಿಯು ಹೇಳಿದೆ. ಇನ್ನು ಚೀನಾ ಸರ್ಕಾರ ಈ ಆನ್‌ಲೈನ್‌ ಆಟದ ಚಟವನ್ನು "ಆಧ್ಯಾತ್ಮಿಕ ಅಫೀಮು" ಎಂದು ಕರೆದಿದೆ.

ಇತ್ತೀಚೆಗೆ ಚೀನಾದ ಶಿಕ್ಷಣ ಸಚಿವಾಲಯವು ಅಪ್ರಾಪ್ತರಿಗೆ ಆನ್‌ಲೈನ್‌ ಆಟ ಆಡುವುದಕ್ಕೆ ಸಮಯದ ಮಿತಿಯನ್ನು ನಿಗದಿ ಮಾಡಿದೆ. ಅಪ್ರಾಪ್ತರಿಗೆ ಶುಕ್ರವಾರ, ಶನಿವಾರ ಹಾಗೂ ಭಾನುವಾರ ಮಾತ್ರ ಬರೀ ಒಂದು ಗಂಟೆ ಆನ್‌ಲೈನ್‌ ಆಟವನ್ನು ಆಡಲು ಸರ್ಕಾರವು ಅವಕಾಶ ಮಾಡಿಕೊಡುವ ಮೂಲಕ ಆನ್‌ಲೈನ್‌ ಆಟದ ಚಟದಿಂದ ಮಕ್ಕಳನ್ನು ದೂರ ಮಾಡುವ ಪ್ರಯತ್ನವನ್ನು ಮಾಡಿದೆ.

ಇನ್ನು ಚೀನಾದಲ್ಲಿ ಮಕ್ಕಳಿಗೆ ಅಧಿಕವಾಗಿ ಹೋಮ್‌ವರ್ಕ್ ನೀಡುವುದನ್ನು ಕೂಡಾ ಕಡಿತಗೊಳಿಸಲಾಗಿದೆ. ಮಕ್ಕಳಿಗೆ ಶಾಲೆಯ ನಂತರ ಮತ್ತೆ ಕೆಲವು ವಿಷಯಗಳಲ್ಲಿ ಟ್ಯೂಷನ್‌ ನೀಡುವ ಮೂಲಕ ಒತ್ತಡ ಹೇರುವಂತಿಲ್ಲ ಎಂದು ಚೀನಾ ಸರ್ಕಾರ ಇತ್ತೀಚೆಗೆ ಆದೇಶ ನೀಡಿದೆ. ಇದೇ ಸಂದರ್ಭದಲ್ಲಿ ಚೀನಾವು ಪುರುಷರು, ಪುರುಷರಂತೆಯೇ ವರ್ತಿಸಿ ಸ್ತ್ರೀಯರಂತೆ ವರ್ತನೆ ಮಾಡಬೇಡಿ ಎಂದು ಹೇಳುವ ಮೂಲಕ ಕೆಂಗಣ್ಣಿಗೆ ಗುರಿಯಾಗಿದೆ.

"ಪುರುಷ ಹದಿಹರೆಯದವರ ಸ್ತ್ರೀವಾದವನ್ನು ತಡೆಯುವ ಪ್ರಸ್ತಾಪ" ವನ್ನು ಚೀನಾವು ಮಾಡಿದೆ. ಶಿಕ್ಷಣ ಸಚಿವಾಲಯವು ಸಾಕರ್‌ನಂತಹ ಕ್ಯಾಂಪಸ್ ಕ್ರೀಡೆಗಳನ್ನು ಉತ್ತೇಜಿಸುವಂತೆ ಶಾಲೆಗಳನ್ನು ಒತ್ತಾಯಿಸಿದೆ.

ಇತ್ತೀಚೆಗೆ ಚೀನಾವು ಹೊಸದಾದ ನೀತಿಯನ್ನು ಜಾರಿ ಮಾಡಿದೆ. ಅಲ್ಲಿನ ಜನ ಸಂಖ್ಯೆ ಕಡಿಮೆ ಆಗುತ್ತಿರುವ ಹಿನ್ನೆಲೆ ಚೀನಾ ಸರ್ಕಾರವು ಮದುವೆಯಾಗಲು ಮತ್ತು ಮಕ್ಕಳನ್ನು ಹೊಂದಲು ಪ್ರೋತ್ಸಾಹಿಸುತ್ತಿದೆ. ಇದಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ. ಚೀನಾದ ಯುವತಿಯರು ಹೆಚ್ಚಾಗಿ ಉದ್ಯೋಗಸ್ಥರಾಗಿದ್ದಾರೆ. ಮದುವೆ ಎಂಬ ಬಾಂಧವ್ಯಕ್ಕೆ ಗಂಟು ಬೀಳಲು ಹಿಂಜರಿಯುತ್ತಿದ್ದಾರೆ. ಇದರಿಂದಾಗಿ ಜನನ ಪ್ರಮಾಣ ಕಡಿಮೆ ಆಗುತ್ತಿರುವ ಹಿನ್ನೆಲೆ ಚೀನಾದಲ್ಲಿ ಕಚೇರಿಗಳಿಂದ ಮಹಿಳೆಯರಿಗೆ ರಜೆ ನೀಡಲು ವಿಶೇಷ ವ್ಯವಸ್ಥೆಯನ್ನು ಆರಂಭಿಸಲಾಗಿದೆ.

ಈ ವ್ಯವಸ್ಥೆಯು 2019 ರಲ್ಲಿ ಬೆಳಕಿಗೆ ಬಂದಿದ್ದರೂ ಕೂಡಾ ಆ ಬಳಿಕ ಕೊರೊನಾ ವೈರಸ್‌ ಕಾರಣದಿಂದಾಗಿ ಹೆಚ್ಚಾಗಿ ಸುದ್ದಿ ಆಗಿರಲಿಲ್ಲ. ಈಗಲೂ ಕೂಡಾ ಮಹಿಳೆಯರು ಅನೇಕ ಕಚೇರಿಗಳಲ್ಲಿ ಪ್ರೇಮ ರಜೆಗಾಗಿ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ಇರುವ ಏಕೈಕ ಷರತ್ತು ಎಂದರೆ ಮಹಿಳಾ ಉದ್ಯೋಗಿಯಾಗಿರಬೇಕು ಮತ್ತು ವಯಸ್ಸು ಸುಮಾರು 30 ಇರಬೇಕು.

ಸೆಪ್ಟೆಂಬರ್‌ನಲ್ಲಿ ಚೀನಾವು ಕುಟುಂಬ ಯೋಜನೆ ನೀತಿಗೆ ಸಂಬಂಧಿಸಿದ ಮೂರು ಕಾನೂನುಗಳನ್ನು ರದ್ದುಗೊಳಿಸಿದೆ. ಕುಟುಂಬ ಯೋಜನೆ ಕಾನೂನು, ವಲಸಿಗ ಜನಸಂಖ್ಯೆಯ ಸಾಮಾಜಿಕ ನಿರ್ವಹಣೆ ಹಾಗೂ ಕುಟುಂಬ ಯೋಜನೆಯ ತಾಂತ್ರಿಕ ಸೇವೆಗಳಿಗೆ ಸಂಬಂಧಿಸಿದಂತೆ ಮೂರು ಕಾನೂನುಗಳನ್ನು ರದ್ದುಮಾಡಿದೆ. ದೇಶದ ಜನಸಂಖ್ಯೆ, ಆರ್ಥಿಕ, ಸಾಮಾಜಿಕ ಅಭಿವೃದ್ಧಿ, ಸಮತೋಲಿತ ಜನಸಂಖ್ಯೆಯ ಬೆಳವಣಿಗೆಯನ್ನು ಉತ್ತೇಜಿಸುವ ಸಲುವಾಗಿ ಈ ಮೂರು ಕಾನೂನುಗಳನ್ನು ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ.

ಈ ಎಲ್ಲಾ ನಿಯಮಾವಳಿಗಳನ್ನು ಚೀನಾ ಸರ್ಕಾರ 'ಒಂದು ಮಗು' ನೀತಿ ಅವಧಿಯಲ್ಲಿ ಜಾರಿಗೊಳಿಸಿತ್ತು. ಚೀನಾದ ರಾಷ್ಟ್ರೀಯ ಪೀಪಲ್ಸ್ ಕಾಂಗ್ರೆಸ್ ಸ್ಥಾಯಿ ಸಮಿತಿಯು ಜನಸಂಖ್ಯೆ ಹಾಗೂ ಕುಟುಂಬ ಯೋಜನೆ ಕಾನೂನಿಗೆ ತಿದ್ದುಪಡಿ ಮಾಡಿ, ದಂಪತಿಗೆ ಒಂದು ಮಗು ಬದಲು ಮೂರು ಮಕ್ಕಳನ್ನು ಹೊಂದುವ ಅವಕಾಶ ನೀಡಿತ್ತು. ಈ ಹೊಸ ನೀತಿಗೆ ಬೆಂಬಲವಾಗಿ ಈ ಕಾನೂನುಗಳನ್ನು ಚೀನಾ ರದ್ದುಗೊಳಿಸಿದೆ.

English summary
China's parliament will consider legislation to punish parents if their young children exhibit very bad behaviour or commit crimes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X