ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಡಿಡಿ ಮುಂದೆ ಡಲ್ ಹೊಡೆಯಲಿವೆ ಎಲ್ಲ ಖಾಸಗಿ ಚಾನಲ್'!

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಜೂನ್ 06 : "ಇನ್ನೈದು ವರ್ಷಗಳಲ್ಲಿ ದೂರದರ್ಶನದ ಮುಂದೆ ಖಾಸಗಿ ಚಾನಲ್ಲುಗಳು ಡಲ್ ಹೊಡೆಯುವಂತೆ ಮಾಡುತ್ತೇನೆ" ಎಂದು ಪ್ರಸಾರ ಭಾರತಿಗೆ ಹೊಸದಾಗಿ ಸಿಇಓ ಆಗಿ ನೇಮಕವಾಗಿರುವ ಶಶಿಶೇಖರ್ ವೆಂಪಾಟಿ ಅವರು ಹೇಳಿರುವುದು ಉತ್ಪ್ರೇಕ್ಷೆಯಾಗಿ ಕಂಡರೂ ಅವರಲ್ಲಿನ ಆತ್ಮವಿಶ್ವಾಸಕ್ಕೆ ಈ ಹೇಳಿಕೆ ಕನ್ನಡಿ ಹಿಡಿದಂತಿದೆ.

ಖಾಸಗಿ ಟಿವಿ ಚಾನಲ್ಲುಗಳ ಥಳಕುಬಳುಕಿನ ವ್ಯಾಪಾರ ವಹಿವಾಟಿನಲ್ಲಿ ದೂರದರ್ಶನವೆಂಬ ಹಳೆಹುಲಿ ಮಂಕಾದಂತೆ ಕಂಡುಬಂದಿರುವುದು ದಿಟ. ಅಲ್ಲದೆ, ಸ್ವಾಯತ್ತ ಸರಕಾರಿ ಸಂಸ್ಥೆಯಾಗಿರುವುದರಿಂದ ಕಾರ್ಪೋರೇಟ್ ಸಂಸ್ಕೃತಿಗೆ ಇನ್ನೂ ಒಗ್ಗಿಕೊಂಡಿಲ್ಲ. ಇನ್ನು ಹಲವಾರು ಸಮಸ್ಯೆ, ಸವಾಲುಗಳನ್ನು ಮುಂದಿಟ್ಟುಕೊಂಡು ಶಶಿಶೇಖರ್ ಮೇಲಿನಿಂತೆ ಹೇಳಿದ್ದು ಖಾಸಗಿ ಚಾನಲ್ಲುಗಳಿಗೆ ಎಚ್ಚರಿಕೆಯ ಗಂಟೆಯಂತಿದೆ.

ಶುಕ್ರವಾರ ಪ್ರಸಾರ ಭಾರತಿಗೆ ಶಶಿಶೇಕರ್ ಅವರು ಆಯ್ಕೆಯಾಗುತ್ತಿದ್ದಂತೆ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು, ನಿಮ್ಮ ನೇತೃತ್ವದಲ್ಲಿ ಪ್ರಸಾರ ಭಾರತಿ ಎತ್ತರಕ್ಕೆ ಏರುತ್ತದೆ ಎಂಬ ವಿಶ್ವಾಸವಿದೆ ಎಂದು ಟ್ವೀಟ್ ಮಾಡಿದ್ದರು. [ಪ್ರಸಾರ ಭಾರತಿ ವರ್ಚಸ್ಸು ಬದಲಿಸುವುದೇ ದೊಡ್ಡ ಸವಾಲು: ಶಶಿಶೇಖರ್ ವೆಂಪಾಟಿ]

Will make TV channels look like pale version of Doordarshan : Shashi Shekhar

ದೂರದರ್ಶನ ಮತ್ತು ಆಕಾಶವಾಣಿಗಳೆರಡನ್ನು ಇಂದಿನ ಬೇಡಿಕೆಗಳಿಗೆ ತಕ್ಕಂತೆ ಮಾರ್ಪಾಡುವ ಮಾಡುವ ಸವಾಲಿನೊಂದಿಗೆ ಸಿದ್ಧವಾಗಿರುವ ಶಶಿಶೇಖರ್ ಅವರು, ತಮ್ಮ ಮುಂದಿರುವ ಕಠಿಣ ದಾರಿಯ ಬಗ್ಗೆ ಒನ್ಇಂಡಿಯಾ ಜೊತೆ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಪ್ರಸಾರ ಭಾರತಿಯಲ್ಲಿರುವ ವಿಶ್ವಾಸದ ಕೊರತೆಯ ಬಗ್ಗೆ ಈಗಾಗಲೆ ಹೇಳಿದ್ದೀರಿ. ಇದನ್ನು ಸ್ವಲ್ಪ ವಿವರಿಸುವಿರಾ?

ಆಂತರಿಕವಾಗಿ ಮತ್ತು ಬಹಿರಂಗವಾಗಿ ಪ್ರಸಾರ ಭಾರತಿಯೊಡನೆ ಸಂಪರ್ಕ ಹೊಂದಿರುವ ಎಲ್ಲ ಸಂಸ್ಥೆಗಳಲ್ಲಿ ವಿಶ್ವಾಸ ಮರುಕಳಿಸುವಂತೆ ಮಾಡಬೇಕಾಗಿದೆ. ದೂರದರ್ಶನ ಮತ್ತು ಆಕಾಶವಾಣಿಗಳೆರಡೂ ಒಂದೇ ಕುಟುಂಬದ ಸದಸ್ಯರಂತೆ ಕೆಲಸ ಮಾಡಬೇಕಿದೆ.

ಹಲವಾರು ದಶಕಗಳಿಂದ ಎದುರಿಸಿದ ಸಮಸ್ಯೆಗಳನ್ನು ಪರಿಹರಿಸುವಾಗ ವಿಶ್ವಾಸಕ್ಕೆ ಕುಂದುಂಟಾಗಿದೆ ಮತ್ತು ಇದರಿಂದ ನೈತಿಕ ಸ್ಥೈರ್ಯವೂ ಕುಸಿದಿದೆ. ನಾವು ಇಂದು ತಲೆಬಗ್ಗಿಸಿ ಕೆಲಸ ಮಾಡಿ, ಕಳೆದುಹೊಗಿರುವ ವಿಶ್ವಾಸ ಮರುಕಳಿಸುವಂತೆ, ಮತ್ತೆ ಹೆಮ್ಮೆಯಿಂದ ತಲೆಯೆತ್ತಿ ನಿಲ್ಲುವಂತೆ ಮಾಡಬೇಕಾಗಿದೆ.

ಮಾಲ್ಗುಡಿ ಡೇಸ್ ನಂಥ ಹಳೆಯ ಧಾರಾವಾಹಿಗಳನ್ನು ಮರುಪ್ರಸಾರ ಮಾಡಲಾಗುತ್ತಿದೆ. ವೀಕ್ಷಕರನ್ನು ಸೆಳೆಯಲು ಹಳೆಯದರ ಮೇಲೆಯೇ ನಂಬಿಕೆಯಿಡಬೇಕೆ ಅಥವಾ ಹೊಸದೇನಾದರೂ ಮಾಡಬೇಕೆ?

ದೂರದರ್ಶನ ಹಳೆಯ ನೆನಪುಗಳು ನಿಜಕ್ಕೂ ನಮ್ಮ ಶಕ್ತಿ. ನಶಿಸಿಹೋದ ನಿಷ್ಠಾವಂತಿಕೆ ಮತ್ತೆ ಮರುಕಳಿಸುವಂತಾಗಲು ಇದು ಬೇಕೇಬೇಕು. ಆದರೆ, ವೀಕ್ಷಕರನ್ನು ಆಕರ್ಷಿಸುವುದು ಮಾತ್ರವಲ್ಲ ಅವರು ಉಳಿದುಕೊಳ್ಳುವಂತಾಗಲು ಮಧುರವಾದ ಹಳೆಯ ನೆನಪುಗಳಿಗಿಂತ ವಿಭಿನ್ನವಾದದ್ದನ್ನು ಮಾಡಿಸಿ ತೋರಿಸಬೇಕು. [ದೂರದರ್ಶನದಲ್ಲಿ ಮತ್ತೆ ಮಹಾಭಾರತ, ರಾಮಾಯಣ ಪ್ರಸಾರ]

ಯುವಜನತೆಯ ಕಲ್ಪನಾಲೋಕದಲ್ಲಿ ವಿಹರಿಸಬೇಕು, ಅವರ ಬೇಕುಬೇಡಗಳು, ಅವರನ್ನು ಹಿಡಿದಿಟ್ಟುಕೊಳ್ಳುವಂಥ ಕಾರ್ಯಕ್ರಮ ರೂಪಿಸಬೇಕಾಗಿರುವುದು ಅತ್ಯಗತ್ಯವಾಗಿ ಮಾಡಬೇಕಾದ ಕೆಲಸವಾಗಿದೆ.

ಬಿಬಿಸಿ ಮತ್ತು ಅಲ್ ಜಜೀರಾದಂತೆ ದೂರದರ್ಶನ ಮತ್ತು ಆಕಾಶವಾಣಿ ಜಾಗತಿಕ ಧ್ವನಿಯಾಗಿ ಮಿಂಚಬಲ್ಲವೆ?

ಜಗತ್ತಿನ ಅತೀದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತ ಜಾಗತಿಕ ಧ್ವನಿಯಾಗಿ, ಭಾರತೀಯ ಮೌಲ್ಯಗಳನ್ನು, ಕನಸುಗಳನ್ನು, ಕೋಟ್ಯಂತರ ಜನರ ಆಶೋತ್ತರಗಳನ್ನು ಜಗತ್ತಿಗೆ ಬಿಂಬಿಸುವುದು ಇಂದಿನ ಅಗತ್ಯಗಳಲ್ಲಿ ಒಂದು.

ಇಡೀ ಜಗತ್ತಿಗೆ ಭಾರತದ ಕಥೆ ಗೊತ್ತಾಗಬೇಕು. ಇಲ್ಲಿನ ಸಮೃದ್ಧ ಇತಿಹಾಸ, ವಿಶಿಷ್ಟವಾದ ಸಂಸ್ಕೃತಿಗೆ ಜಗತ್ತಿನ ಜನತೆ ಮಾರುಹೋಗುವಂತಾಗಬೇಕು. 2022ರಲ್ಲಿ ಭಾರತ ಸ್ವಾತಂತ್ರ್ಯ ಪಡೆದು 75 ವರ್ಷಗಳು ಪೂರೈಸಲಿವೆ. ಈ ವಿಶೇಷ ಸಂದರ್ಭದಲ್ಲಿ ಸಾಕಷ್ಟು ಕೆಲಸಗಳು ಆಗಬೇಕಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ದೂರದರ್ಶನ ಮತ್ತು ಆಕಾಶವಾಣಿ ಅಸ್ತಿತ್ವ ಕಂಡುಕೊಂಡಿವೆಯೆ?

ಹೌದು, ಸೋಷಿಯಲ್ ಮೀಡಿಯಾದಲ್ಲಿ ದೂರದರ್ಶನ ಮತ್ತು ಆಕಾಶವಾಣಿ ಇಣುಕುಹಾಕಿವೆ. ಅವನ್ನು ವಿಸ್ತರಿಸಬೇಕು, ಬಳಕೆದಾರರೊಂದಿಗೆ ನಮ್ಮ ಸಂವಹನವನ್ನು ಹೆಚ್ಚಿಸಿಕೊಳ್ಳಬೇಕು. ಸಂವಹನ ಮತ್ತಷ್ಟು ಹೆಚ್ಚಾಗಲು ಕ್ರಿಯಾಶೀಲತೆಯನ್ನು ಕಂಡುಕೊಳ್ಳಬೇಕು. ಇದು ನಮ್ಮ ಅಗ್ರ ಕಾರ್ಯಗಳಲ್ಲೊಂದಾಗಿದೆ.

ಈ ಡಿಜಿಟಲ್ ಯುಗದಲ್ಲಿ ದೂರದರ್ಶನ ಮತ್ತು ಆಕಾಶವಾಣಿಯನ್ನು ಸ್ಪರ್ಧಾತ್ಮಕ ಮಾಡಲು ಏನು ಯೋಜನೆಗಳಿವೆ?

ಪ್ರಸಾರ ಭಾರತಿಯ 2022 ವಿಷನ್ ಅಂಗವಾಗಿ ಡಿಜಿಟಲ್ ನೀಲನಕ್ಷೆಯನ್ನು ಇನ್ನೂ ತಯಾರಿಸಬೇಕಿದೆ.

ಸರಕಾರದಲ್ಲಿಯೂ ದೂರದರ್ಶನ ಮತ್ತು ಆಕಾಶವಾಣಿಗಳು ಪ್ರಮುಖ ಪಾತ್ರ ವಹಿಸಲಿವೆಯೆ?

ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಸಿರುವ ಸ್ವಚ್ಛ ಭಾರತ, ಬೇಟಿ ಬಚಾವೋ ಬೇಟಿ ಪಢಾವೋ, ಮುಂತಾದ ಹಲವಾರು ಮಹತ್ವಾಕಾಂಕ್ಷಿ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಪ್ರಸಾರ ಭಾರತಿ ಈಗಾಗಲೆ ಹಲವಾರು ರೀತಿಯಲ್ಲಿ ಕೆಲಸ ಮಾಡುತ್ತಿದೆ. ಇದನ್ನು ನಾವು ಮುಂದುವರಿಸಿಕೊಂಡು ಹೋಗಲಿದ್ದೇವೆ.

ಪ್ರಸಾರ ಭಾರತಿಗೆ ನಿಜವಾಗಿಯೂ ಗ್ಲಾಮರ್ ಮುಖದ ಅಗತ್ಯವಿದೆಯೆ? ಹೌದಾದರೆ, ಇದು ಪ್ರಸಾರ ಭಾರತಿಗೆ ಸಹಾಯವಾಗಲಿದೆಯೆ ?

ಯಾರದೇ ವೈಯಕ್ತಿಕ ಅಭಿಪ್ರಾಯದ ಬಗ್ಗೆ ನಾನು ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ. ಪ್ರಸಾರ ಭಾರತಿ ಮಂಡಳಿಗೆ ಉಪರಾಷ್ಟ್ರಾಧ್ಯಕ್ಷರ ನೇತೃತ್ವದ ಆಯ್ಕೆ ಸಮಿತಿ ಹಲವಾರು ಹುದ್ದೆಗಳನ್ನು ನೇಮಕ ಮಾಡಿಕೊಳ್ಳುತ್ತದೆ. ನಾವು ಆ ಸಮಿತಿಯ ಜಾಣ್ಮೆ ಮತ್ತು ತೀರ್ಪಗಿ ತಲೆಬಾಗಬೇಕು.

ಇಲ್ಲಿ ಮಂಡಳಿಯಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯ ಅಭಿಪ್ರಾಯಗಳಿಗೆ ಮನ್ನಣೆ ಕೊಡಬೇಕಾಗುತ್ತದೆ. ನಮ್ಮ ಈ ಪರಿವರ್ತನೆಯ ಹಾದಿಯಲ್ಲಿ ಪ್ರತಿಯೊಬ್ಬರೂ ಮುಖ್ಯವಾಗುತ್ತಾರೆ. ಪ್ರತಿಯೊಬ್ಬರ ಅತ್ಯಮೂಲ್ಯವಾದ ಸಲಹೆ, ಮಾರ್ಗದರ್ಶನ ಪಡೆದುಕೊಂಡು ಸಂಸ್ಥೆಯನ್ನು ಕಟ್ಟುತ್ತೇವೆ.

ಡಿಡಿಯನ್ನು ಖಾಸಗಿ ಚಾನಲ್ಲುಗಳು ಎಂದೋ ಹಿಂದೆ ಹಾಕಿವೆ. ಇದನ್ನು ಉತ್ತಮಪಡಿಸಲು ಏನಾದರೂ ಕ್ರಮಗಳನ್ನು ಕೈಗೊಳ್ಳಲಾಗಿದೆಯೆ?

ಈಗಲೂ ಕೂಡ ದೂರದರ್ಶನ ಉಳಿದೆಲ್ಲ ಚಾನಲ್ಲುಗಳಿಗಿಂತ ದೇಶದ ಹೆಚ್ಚಿನ ಜನರನ್ನು ತಲುಪುತ್ತಿದೆ. ಇದೇ ನಮ್ಮ ಶಕ್ತಿ. ಇದನ್ನು ಬಳಸಿಕೊಂಡು ಹೊಸ ತಂತ್ರಜ್ಞಾನ, ಸೃಜನಾತ್ಮಕ ಕಾರ್ಯಕ್ರಮಗಳ ಮೂಲಕ ದೇಶದ ಪ್ರತಿಯೊಬ್ಬರನ್ನು ತಲುಪಬೇಕು.

21ನೇ ಶತಮಾನದ ಮೀಡಿಯಾ ಸಂಸ್ಥೆಯಾಗಲು ಇನ್ನೂ ಎಷ್ಟು ಸಮಯ ಬೇಕು? ನಾವು ಇನ್ನೇನನ್ನು ನಿರೀಕ್ಷಿಸಬಹುದು?

ಪ್ರಸಾರ ಭಾರತಿಯ ಮನಸ್ಥಿತಿ ಮತ್ತು ಸಂಸ್ಕೃತಿಯ ಬದಲಾವಣೆಯಾಗಬೇಕಿದೆ. ಇದು ಸಾಧ್ಯವಾದರೆ ತಂತ್ರಜ್ಞಾನ ಮತ್ತು ವ್ಯವಸ್ಥೆ ಮುಂದಿನ ಕೆಲಸವನ್ನು ಸುಗಮವಾಗಿಸುತ್ತದೆ. ತಮಾಷೆಯಾಗಿ ಹೇಳಬೇಕೆಂದರೆ, ದೂರದರ್ಶನ ಮತ್ತು ಆಕಾಶವಾಣಿಯ ಗತಕಾಲದ ವೈಭವದ ಬಗ್ಗೆ ಸಾಕಷ್ಟು ಮಾತುಗಳು ಕೇಳಿಬರುತ್ತಿವೆ. ಅಂತಹ ಗತಕಾಲದ ವೈಭವ ಮರುಕಳಿಸಿದರೆ ಉಳಿದೆಲ್ಲ ಚಾನಲ್ಲುಗಳು ಡಿಡಿ ಮುಂದೆ ಡಲ್ ಹೊಡೆಯುತ್ತವೆ.

English summary
In an interview with OneIndia, Shashi Shekhar, the new CEO of Prasar Bharti, speaks about the road ahead and adds, "when we are done restoring the glory of DD and AIR by 2022 the rest will look like pale versions of a transformed DD and AIR".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X